ಶಾಲೆಗಳ ಗೋಳು
Team Udayavani, Sep 16, 2019, 5:30 AM IST
ನಂದನವನ ಶಾಲೆಯಲ್ಲಿ ಉಳಿದ ಒಂದೇ ಕಟ್ಟಡ.
ಈ ಬಾರಿಯ ಗಾಳಿ-ಮಳೆಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಶಾಲೆಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ. ನೆರೆ ಪರಿಹಾರದಲ್ಲಿ ಕೇಂದ್ರದ ಹಣ ಬಾರದೇ ಶಾಲೆಗಳ ದುರಸ್ತಿಗೆ ಅನುದಾನ ಕೊಡುವುದು ಕಷ್ಟ ಎಂದು ಸ್ವತಃ ಶಿಕ್ಷಣ ಸಚಿವರೇ ಹೇಳಿದ್ದು ಹೆತ್ತವರನ್ನು ಆತಂಕಕ್ಕೆ ಈಡು ಮಾಡಿದೆ. ಶಾಲೆ ದುರಸ್ತಿಯಾಗದೆ ಮಕ್ಕಳು, ಶಿಕ್ಷಕರು ಜೀವಭಯದಲ್ಲಿ ಪಠ್ಯ ಚಟುವಟಿಕೆ ನಿರತರಾಗುವ ಸನ್ನಿವೇಶ ಒದಗಿಬಂದಿದೆ. ಈ ಕುರಿತು “ಉದಯವಾಣಿ’ ಕಲೆ ಹಾಕಿದ ಮಾಹಿತಿ.
ಕುಂದಾಪುರ: ಈ ಬಾರಿಯ ಗಾಳಿ ಮಳೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಸಾಕಷ್ಟು ಹಾನಿ ಮಾಡಿದೆ. ಶಾಲೆಗಳಿಗೆ ರಜೆ ಸಾರುವಷ್ಟು ಪ್ರಮಾಣದಲ್ಲಿ ಮಳೆಯಾಗಿದೆ. ಶಾಲೆಗಳಿಗೆ ರಜೆ ಸಾರುವ ಕುರಿತು ವ್ಯಂಗ್ಯೋಕ್ತಿಗಳಿದ್ದರೂ ಸರಕಾರಿ ಶಾಲೆಗಳ ಸ್ಥಿತಿಗತಿ ನೋಡಿದಾಗ ರಜೆಯ ಅವಶ್ಯ ಎಷ್ಟಿದೆ ಎನ್ನುವುದು ವೇದ್ಯವಾಗುತ್ತದೆ. ಉಭಯ ತಾಲೂಕುಗಳಲ್ಲಿ ಗಾಳಿ -ಮಳೆಗೆ ಹಾನಿಗೊಳಗಾದ ಶಾಲೆಗಳ ಸಂಖ್ಯೆಯೇ 80 ದಾಟಿದೆ.
ಇಂತಹ ಶಾಲೆಗಳಲ್ಲಿ ಪಾಠ ಮಾಡುತ್ತಿರುವಾಗ ಆಕಾಶ ಕಪ್ಪಿಟ್ಟರೆ ಶಿಕ್ಷಕರ, ಮಕ್ಕಳ, ಹೆತ್ತವರ ಹೃದಯ ಬಡಿತ ಏರುತ್ತದೆ. ಮಳೆ ಜತೆ ಗಾಳಿಯೂ ಬಂದರೆ ಜೀವ ಕೈಯಲ್ಲಿ ಹಿಡಿಯಬೇಕಾಗುತ್ತದೆ ಎನ್ನುತ್ತಾರೆ ಶಿಕ್ಷಕರು.
ಹಾನಿ ಮೇಲೆ ಹಾನಿ
ಕುಂದಾಪುರ ಶೈಕ್ಷಣಿಕ ವಲಯದಲ್ಲಿ 14ಕ್ಕೂ ಹೆಚ್ಚು ಶಾಲೆಗಳಿಗೆ ಹಾನಿಯಾಗಿದೆ. ಗೋಪಾಡಿ ಪಡು ಕಿರಿಯ ಪ್ರಾಥಮಿಕ ಶಾಲೆಯ ಗೋಡೆ ಬಿರುಕುಬಿಟ್ಟಿದ್ದು 2 ಕೋಣೆಗಳಿಗೆ ಹಾನಿಯಾಗಿದೆ. ಇಲ್ಲಿ 24 ಮಕ್ಕಳು ಕಲಿಯುತ್ತಿದ್ದು ಪಕ್ಕದಲ್ಲೇ ಅಂಗನವಾಡಿ ಕೇಂದ್ರವೂ ಕಾರ್ಯನಿರ್ವಹಿಸುತ್ತಿದೆ.
ಅಮಾಸೆಬೈಲು ಸರಕಾರಿ ಪ್ರೌಢಶಾಲೆಯ ಕಟ್ಟಡದ ಮಾಡಿನ ಶೇ.30ರಷ್ಟು ರೀಪು, ಪಕ್ಕಾಸು ಗೆದ್ದಲು ಪಾಲಾಗಿವೆ. ಕಟ್ಟಡದ ಮಾಡು ತುರ್ತು ದುರಸ್ತಿಯಾಗದಿದ್ದರೆ ಆಕಾಶ ನೋಡಬೇಕಾದ ಮಾಡು ಭೂಮಿಯಲ್ಲಿದ್ದೀತು. ಇಲ್ಲಿಗೆ ತುರ್ತಾಗಿ ಎರಡು ಕೊಠಡಿಗಳು ಬೇಕಾಗಿವೆ.
ಕಾಳಾವರ ಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ವಕ್ವಾಡಿಯಲ್ಲಿ ಮಾಡು, ಕಿಟಿಕಿ, ಬಾಗಿಲು ಸಂಪೂರ್ಣ ನಾದು ರಸ್ತಿಯಲ್ಲಿದ್ದು ಕುಸಿದು ಬೀಳುವ ಸ್ಥಿತಿಯಲ್ಲಿದೆ.
ತೆಕ್ಕಟ್ಟೆ ಸಮೀಪದ ಹೆಸ್ಕಾತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರೋಬ್ಬರಿ 206 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯ ಹಳೆ ಕಟ್ಟಡದ ಗೋಡೆ, ಕಿಟಕಿ, ಬಾಗಿಲು ಹಾನಿಗೊಳಲಾಗಿದೆ. ತರಗತಿ ನಡೆಸಲಾಗದೆ ಬೇರೆ ತರಗತಿಗೆ ಸ್ಥಳಾಂತರ ಮಾಡಲಾಗಿದೆ. ಇಲ್ಲಿ ಹೊಸ ಕೊಠಡಿ ಮಂಜೂರು ಮಾಡಿ ಹಳೆ ಕಟ್ಟಡ ತೆರವು ಮಾಡುವ ಅವಶ್ಯ ತುರ್ತಾಗಿದೆ.
ತೆಕ್ಕಟ್ಟೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಮೆಯಲ್ಲಿ 60 ವರ್ಷ ಹಳೆಯದಾದ ಕಟ್ಟಡ ಇದೆ. ಇದರ ಮಾಡಿಗೆ ಅಳವಡಿಸಿದ ರೀಪು, ವಾಲ್‌ಪ್ಲೇಟ್, ಪಕ್ಕಾಸು ಮುರಿದು ಬೀಳುವ ಹಂತದಲ್ಲಿದೆ. ಮಣ್ಣಿನ ಗೋಡೆಯ ಕಟ್ಟಡ ಅಪಾಯವನ್ನು ಆಹ್ವಾನಿಸುತ್ತಿದೆ. ಮಕ್ಕಳಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಶಾಲಾ ಸಭಾಂಗಣ ಹಾಗೂ ಶಾಲಾ ಕಚೇರಿ ಕಟ್ಟಡದಲ್ಲಿ ತರಗತಿ ನಡೆಸಲಾಗುತ್ತಿದೆ. ದುರಸ್ತಿಯೋ ಹೊಸ ಕಟ್ಟಡವೋ ಆಗಲೇಬೇಕಿದೆ. 3 ಕೊಠಡಿಗಳ ದುರಸ್ತಿಯಾಗದಿದ್ದರೆ ಅಪಾಯ ಸಂಭವಿಸದಿರದು. ಇಲ್ಲಿ 1ರಿಂದ 8 ತರಗತಿಗಳಿದ್ದು ಒಟ್ಟು 86 ಮಕ್ಕಳು ಕಲಿಯುತ್ತಿದ್ದಾರೆ.
ಮಾಡು ಸಿಕ್ಕದಲ್ಲ, ಮಾಡಿನ ರೀಪು ಸಿಕ್ಕದಲ್ಲ
ಸಿದ್ದಾಪುರ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ 1 ಕೊಠಡಿ ಭಾಗಶಃ ಹಾನಿಯಾಗಿದೆ. ಮಾಡು ನಾದುರಸ್ತಿಯಲ್ಲಿದ್ದು ಪಕ್ಕಾಸು, ರೀಪು ಗೆದ್ದಲು ಪಾಲಾಗಿದೆ. ನೆಲದ ಗಾರೆ ಎಂದೋ ಕಿತ್ತು ಹೋಗಿದೆ. ದುರಸ್ತಿ ಮಾಡಿದರಷ್ಟೇ ಬಾಳಿಕೆ ಬರುತ್ತದೆ ಎಂಬ ಸ್ಥಿತಿಯಲ್ಲಿದೆ. 40 ವರ್ಷ ಹಿಂದಿನ ಈ ಕಟ್ಟಡದಲ್ಲಿ 2 ಕೋಣೆ ಸಂಪೂರ್ಣ ಶಿಥಿಲವಾಗಿವೆೆ.
ಅಮಾಸೆಬೈಲು ಕ್ಲಸ್ಟರ್‌ಗೆ ಸೇರಿದ ಮಚ್ಚಟ್ಟು ಹೊಳೆಬಾಗಿಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಕೊಠಡಿಗಳಿದ್ದು ಬೀಳುವ ಹಂತದಲ್ಲಿವೆೆ. 60 ವರ್ಷಗಳಷ್ಟು ಹಳೆಯ ಈ ಕಟ್ಟಡದಲ್ಲಿ ಇರುವುದೇ ಎರಡು ಕೋಣೆ. 1960ರಲ್ಲಿ ಶಾಲೆ ಆರಂಭವಾಗುವಾಗ ಕಟ್ಟಿದ ಎರಡು ಕೊಠಡಿಗಳೇ ಇಂದಿಗೂ ಆಧಾರ. ಮಣ್ಣು ಕಲ್ಲಿನ ಗೋಡೆಯಲ್ಲಿ ಗೆದ್ದಲುಗಳ ಆವಾಸಸ್ಥಾನವಾಗಿದೆ. ಪಕ್ಕಾಸು ರೀಪು ಹಾನಯಾಗಿದೆ. ಕಾಡಿನ ಸಮೀಪ ಇರುವ ಈ ಶಾಲೆಯ ನೆಲದ ಅಡಿಯಲ್ಲಿ ಮರದ ಬೇರು, ಗೋಡೆಯಲ್ಲೂ ಬೇರುಗಳು ಬಂದು ಪ್ರಾಚೀನ ಕಾಲದ ಪಳೆಯುಳಿಕೆ ಕಟ್ಟಡದಂತಿದೆ.
ಸಿದ್ದಾಪುರದ ಸರಕಾರಿ ಪ್ರೌಢಶಾಲೆಯಲ್ಲಿ 1965ರ ಕಟ್ಟಡ 6 ಕೊಠಡಿಗಳಿವೆ. ಮೇಲ್ಛಾವಣಿ ಹಾನಿಗೀಡಾಗಿದೆ. ಕೊಠಡಿಗಳು ದುರಸ್ತಿಯನ್ನು ಬೇಡುತ್ತಿವೆ. ಇದರಿಂದಾಗಿಯೇ ಉಪಯೋಗ ಶೂನ್ಯವಾಗಲಿದೆ. ಅಷ್ಟೂ ಕೊಠಡಿಗಳ ದುರಸ್ತಿ ಮಾಡಲೇಬೇಕಾಗಿದೆ.
2 ಕೊಠಡಿಗಳು ಹೊಸದಾಗಬೇಕಿದೆ
ಬಳ್ಕೂರು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 2 ಕೊಠಡಿಗಳು ಪೂರ್ಣ ನಾದುರಸ್ತಿಯಲ್ಲಿದ್ದು ಕೆಡವಿಹಾಕಿ ಹೊಸದರ ರಚನೆಯಾಗಬೇಕಿದೆ. ಕಂಡ್ಲೂರು ರಾಮ್‌ಸನ್ ಸರಕಾರಿ ಪ್ರೌಢಶಾಲೆ ಅಕ್ಷರ ದಾಸೋಹ ಅಡುಗೆಕೋಣೆ ಭಾಗಶಃ ಮಳೆಗೆ ಕುಸಿದಿದೆ. ಅಡುಗೆ ಸಿಬಂದಿ ಭಯದಿಂದಲೇ ಕೆಲಸ ಮಾಡುತ್ತಿದ್ದಾರೆ.
ಕುಂದಾಪುರ ವಲಯದಲ್ಲಿ ಒಟ್ಟು 225 ಶಾಲೆಗಳಿದ್ದು 20 ಸರಕಾರಿ ಪ್ರೌಢ ಶಾಲೆ, 1 ವಸತಿ ಶಾಲೆ, 7 ಅನುದಾನಿತ ಪ್ರೌಢ ಶಾಲೆ, 15 ಅನುದಾನ ರಹಿತ ಪ್ರೌಢ ಶಾಲೆಗಳೆಂದು ಒಟ್ಟು 43 ಪ್ರೌಢಶಾಲೆಗಳಿವೆ. ಉಳಿದವು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳು. ಬೈಂದೂರು ವಲಯದಲ್ಲಿ 16 ಸರಕಾರಿ, 5 ಅನುದಾನಿತ ಹಾಗೂ 11 ಅನುದಾನ ರಹಿತ ಸೇರಿ ಒಟ್ಟು 32 ಪ್ರೌಢಶಾಲೆಗಳಿವೆ.
ಅನಾಹುತ ಕಾದಿದೆ
ಹಾಲಾಡಿ 28ರ ಹಾಲಾಡಿ ಸ. ಹಿ.ಪ್ರಾ. ಶಾಲೆಯಲ್ಲಿ 2 ಕೊಠಡಿಗಳು ಮಳೆ ಬಂದಾಗ ನೀರು ಪೂರ್ತಿ ಕೊಠಡಿಯಲ್ಲಿರುತ್ತದೆ. ಮಾಡು ದುರಸ್ತಿ ಮಾಡದಿದ್ದರೆ ಏನಾದರೊಂದು ಅನಾಹುತ ಆಗುವ ಸಾಧ್ಯತೆ ಇದೆ.
ಬೈಂದೂರು ವಲಯ
65 ಶಾಲೆಗಳಿಗೆ ಹಾನಿ, 3.52 ಕೋ.ರೂ. ನಷ್ಟ
ಕುಂದಾಪುರ: ಬೈಂದೂರು ವಲಯದಲ್ಲಿ ಈ ಬಾರಿಯ ಮಳೆಗೆ ಒಟ್ಟು 62 ಶಾಲೆ, 1 ಪ್ರೌಢಶಾಲೆ ಹಾಗೂ 2 ಪ.ಪೂ. ಕಾಲೇಜಿನ ಕಟ್ಟಡಗಳಿಗೆ ಹಾನಿಯಾಗಿದೆ. ಬೈಂದೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅಂದಾಜಿನ ಪ್ರಕಾರ ಒಟ್ಟು 3.52 ಕೋ.ರೂ. ನಷ್ಟ ಉಂಟಾಗಿದೆ.
2 ಹೊಸ ಕಟ್ಟಡ
ಅರೆಹೊಳೆಯ ಸರಕಾರಿ ಹಿ.ಪ್ರಾ. ಶಾಲೆಯ ಹಳೆಯ ಕಟ್ಟಡಕ್ಕೆ ಮಳೆಯಿಂದಾಗಿ ಹೆಚ್ಚಿನ ಹಾನಿಯಾಗಿದೆ. ಇಲ್ಲಿ ಒಟ್ಟು 116 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೊಸ ಕಟ್ಟಡಕ್ಕಾಗಿ 50 ಲಕ್ಷ ರೂ. ಬೇಡಿಕೆ ಸಲ್ಲಿಸಲಾಗಿದೆ. ನಂದನವನದ ಸರಕಾರಿ ಕಿ.ಪ್ರಾ. ಶಾಲೆಯ ಕಟ್ಟಡಕ್ಕೂ ಹೆಚ್ಚಿನ ಹಾನಿಯಾಗಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಅಂದಾಜು 20 ಲಕ್ಷ ರೂ.ಗೆ ಶಿಫಾರಸು ಮಾಡಲಾಗಿದೆ.
4 ಶಾಲೆ ಕಟ್ಟಡ ದುರಸ್ತಿ
ಕಾಸರಕೋಡು ಹಿ.ಪ್ರಾ. ಶಾಲೆ, ಶಿರೂರು ಮಾದರಿ ಹಿ.ಪ್ರಾ. ಶಾಲೆಗೆ, ಮೊಗೇರಿ ಹಿ.ಪ್ರಾ. ಶಾಲೆ ಹಾಗೂ ಅಮ್ಮನವರ ತೋಪುÉ ಕಿ.ಪ್ರಾ. ಶಾಲೆಯ ಕಟ್ಟಡಕ್ಕೆ ಭಾರೀ ಮಳೆಯಿಂದಾಗಿ ಹಾನಿಯಾಗಿದೆ. ದುರಸ್ತಿಗಾಗಿ ತಲಾ 5 ಲಕ್ಷ ರೂ. ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಇದರೊಂದಿಗೆ ದೊಂಬೆ ಹಿ.ಪ್ರಾ. ಶಾಲೆಯ ಶೌಚಾಲಯಕ್ಕೂ ಹಾನಿಯಾಗಿದ್ದು, ದುರಸ್ತಿಗೆ 1 ಲಕ್ಷ ರೂ. ಅಗತ್ಯವಿದೆ.
57 ಶಾಲೆ: ಮಾಡಿಗೆ ಹಾನಿ
ಬೈಂದೂರು ವಲಯದ ಒಟ್ಟು 57 ಶಾಲೆ ಹಾಗೂ ಕಾಲೇಜುಗಳ ಮಾಡಿಗೆ ಮಳೆಯಿಂದಾಗಿ ಹಾನಿಯಾಗಿದೆ. ಮಡಿಕಲ್ ಹಿ.ಪ್ರಾ. ಶಾಲೆಯ ಸ್ಲಾಪ್‌ಗ್ೂ ಹಾನಿಯಾಗಿದೆ. ಈ ಎಲ್ಲ ಶಾಲೆಗಳ ಮಾಡು ದುರಸ್ತಿಗೆ ಅಂದಾಜು ಒಟ್ಟು 26.10 ಕೋ.ರೂ. ಗೆ ಬೇಡಿಕೆ ಸಲ್ಲಿಸಲಾಗಿದೆ.
ಆ. 10ರಂದು ಸುರಿದ ಭಾರೀ ಗಾಳಿ ಮಳೆಯಿಂದಾಗಿ ನಂದನವನ ಶಾಲೆಯ ಕಟ್ಟಡ ಕುಸಿದು ಮೂರು ಕೊಠಡಿಗಳು ನೆಲಸಮವಾಗಿವೆ. ರಾತ್ರಿ ಹೊತ್ತಿನಲ್ಲಿ ಕಟ್ಟಡ ಕುಸಿದ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿತ್ತು. ವಿದ್ಯಾರ್ಥಿಗಳು ಇದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದರು.
ಅಡುಗೆ ಕೋಣೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣ
ಗಾಳೆ-ಮಳೆಯಿಂದ ಧರೆಗುರುಳಿದ ನಂದನವನ ಕಿ.ಪ್ರಾ. ಶಾಲಾ ಕಟ್ಟಡ
ಉಪ್ಪುಂದ: ಗಾಳಿ-ಮಳೆಗೆ ಕೆರ್ಗಾಲು ಗ್ರಾ.ಪಂ. ವ್ಯಾಪ್ತಿಯ ನಂದನವನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡಗಳು ಆ.10ರಂದು ರಾತ್ರಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಧರೆಶಾಯಿಯಾಗಿದ್ದು ಇನ್ನು ಪರ್ಯಾಯ ಕಟ್ಟಡ ನಿರ್ಮಾಣಕ್ಕೆ ಮುಂದಾಗದೆ ಇರುವುದುರಿಂದ ವಿದ್ಯಾರ್ಥಿಗಳು ಸಮಸ್ಯೆಗಳ ನಡುವೆಯೇ ವಿದ್ಯಾರ್ಜನೆ ಮಾಡಬೇಕಾದ ಪರಿಸ್ಥಿತಿ.
1914ರಲ್ಲಿ ಸ್ಥಾಪನೆಯಾದ ಈ ಶಾಲೆಯು ಶತಮಾನ ಪೂರೈಸಿದ ಹೆಗ್ಗಳಿಕೆ ಹೊಂದಿದೆ. ಪ್ರಸ್ತುತ ಎಲ್‌ಕೆಜಿಯಿಂದ 5ನೇ ತರಗತಿಯ ವರೆಗೆ ಶಿಕ್ಷಣ ನೀಡಲಾಗುತ್ತಿದೆ. 25 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆ. 10ರಂದು ಸುರಿದ ಮಳೆಯಿಂದಾಗಿ ಕಟ್ಟಡ ಕುಸಿದು ಬಿದ್ದು ಮೂರು ಕೊಠಡಿಗಳು ನೆಲಸಮವಾಗಿದೆ. ರಾತ್ರಿ ಹೊತ್ತಿನಲ್ಲಿ ಕಟ್ಟಡ ಕುಸಿದ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ವಿದ್ಯಾರ್ಥಿಗಳು ಇದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದರು.
ಪ್ರಸ್ತುತ ಸ್ಥಿತಿಗತಿ
ಇದೀಗ ಒಂದೇ ಕೊಠಡಿ ಮಾತ್ರ ಇದ್ದು 1ರಿಂದ 5ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಅದರಲ್ಲಿಯೇ ಕುಳಿತುಕೊಳ್ಳಬೇಕು. ಅಲ್ಲದೆ ಶಿಕ್ಷಕರ ಕೊಠಡಿ, ಶಾಲಾ ದಾಖಲಾತಿ ಎಲ್ಲದಕ್ಕೂ ಇರುವುದೊಂದೇ ಕೊಠಡಿ. 1ರಿಂದ 3ನೇ ತರಗತಿಯವರೆಗೆ ನಲಿಕಲಿ ಪದ್ಧತಿಯಂತೆ ಒಂದೇ ತರಗತಿಯಲ್ಲಿ ಪಾಠ ಮಾಡಲು ಅಡ್ಡಿ ಇಲ್ಲ.
ಅಡುಗೆ ಕೋಣೆಯಲ್ಲಿ ಪಾಠ
4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳನ್ನು ಎಲ್ಲ ವಿದ್ಯಾರ್ಥಿಗಳ ಜತೆಗೆ ಪಾಠ ಮಾಡಲು ಸಾಧ್ಯವಿಲ್ಲ. ಆದರಿಂದ ಅಡುಗೆಕೋಣೆಯಲ್ಲಿ ಕುರಿಸಿಕೊಂಡು ಪಾಠ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ. ಸುಮಾರು 20 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಅಡುಗೆ ಕೋಣೆಯು ಮಳೆಗೆ ಸೋರುತ್ತಿದೆ. ಮಳೆ ಬಂದಾಗ ನೀರು ಒಳಗೆ ಬರುತ್ತದೆ. ಇದನ್ನು ಸ್ವತ್ಛಗೊಳಿಸಿದ ಮೇಲೆ ಇಲ್ಲಿಯೇ ಪಾಠ ಪ್ರವಚನ ಮುಂದುವರಿಸಬೇಕು. ಜತೆಗೆ ಅಡುಗೆ ತಯಾರಿಸಲಾಗುತ್ತಿದೆ.
ಶಿಕ್ಷಣ ಇಲಾಖೆಯ ನಿಧಾನ ಗತಿಯ ಕಾರ್ಯವೈಖರಿಗೆ ಹೆತ್ತವರು ಆಕ್ರೋಶ ವ್ಯಕ್ತಪಡಿಸುತ್ತಾರೆ. 4ಮತ್ತು 5ನೇ ತರಗತಿ ಮಕ್ಕಳಿಗೆ ಶೀಘ್ರ ಕೊಠಡಿ ನಿರ್ಮಾಣದ ಅಗತ್ಯತೆ ಇದೆ.
ಗ್ರಾ.ಪಂ. ಸ್ಪಂದನೆ ಇಲ್ಲ
ಶಾಲೆಯ ಶೌಚಾಲಯದಲ್ಲಿ ಮಣ್ಣು ತುಂಬಿದೆ. ಬಾಗಿಲು, ಮಹಡಿ, ಗೋಡೆಗಳ ಸ್ಥಿತಿ ದೇವರಿಗೆ ಪ್ರೀತಿ. ಸೂಕ್ತ ಮೂಲಸೌಕರ್ಯವಿಲ್ಲದೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ಶಾಲಾ ಅಭಿವೃದ್ಧಿಗೆ ಸಹಕರಿಸುವಂತೆ ಹಲವಾರು ಬಾರೀ ಸ್ಥಳೀಯಾಡಳಿತಕ್ಕೆ ಮನವಿ ಮಾಡಿದ್ದಕ್ಕೆ ಸಿಕ್ಕಿರುವುದು ಇದುವರೆಗೆ ಬರೀ ಭರವಸೆ ಮಾತ್ರ. ಕನಿಷ್ಠಪಕ್ಷ ಶೌಚಾಲಯದ ನಿರ್ಮಾದ ವ್ಯವಸ್ಥೆಗೂ ಅನುದಾನ ನೀಡದ ಕೆರ್ಗಾಲು ಗ್ರಾ.ಪಂ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ತಮ್ಮ ಗ್ರಾಮದ ಶಾಲೆಯ ಮೇಲಿನ ಕಾಳಜಿಯನ್ನು ಕಾಣಬಹುದಾಗಿದೆ.
ಕಾಮಗಾರಿ ಇನ್ನೂ ಆರಂಭಿಸಿಲ್ಲ
ಕಟ್ಟಡ ಕುಸಿದ ಸಂದರ್ಭ ಎಲ್ಲ ಜನ ಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಲಾ ಎಸ್‌ಡಿಎಂಸಿ ಅವರಿಗೆ, ಹೆತ್ತವರಿಗೆ ಶೀಘ್ರ ನೂತನ ಕಟ್ಟಡ ನಿರ್ಮಾಣದ ಭರವಸೆ ನೀಡಿ ಒಂದು ತಿಂಗಳಾದರೂ ಸಹ ಕಾಮಗಾರಿ ಆರಂಭವಾಗುವ ಯಾವುದೇ ಮುನ್ಸೂಚನೆ ಇಲ್ಲ.
ಪರ್ಯಾಯ ಕೊಠಡಿಯ ಕೊರತೆ ಇರುವುದರಿಂದ ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತುಕೊಂಡು ಜನಪ್ರತಿನಿಧಿಗಳು, ಅಧಿಕಾರಿಗಳು ತುರ್ತು ನಮ್ಮ ಶಾಲೆಯ ಕಡೆಗೆ ಗಮನಹರಿಸಬೇಕು.
– ಶಾರದಾ, ಎಸ್‌ಡಿಎಂಸಿ ಅಧ್ಯಕ್ಷೆ
ಮಾಹಿತಿ: ಲಕ್ಷ್ಮೀ ಮಚ್ಚಿನ, ಪ್ರಶಾಂತ್ ಪಾದೆ, ಕೃಷ್ಣ ಬಿಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.