ಅಮ್ಮ ಕೋಲು ತಗೊಂಡ್ರೆ, ಅಜ್ಜಿ ಬೆನ್ನಿಗೆ ನಿಲ್ಲೋಳು…
Team Udayavani, Sep 17, 2019, 5:44 AM IST
ಬಟ್ಟೇನ ಈ ಮಟ್ಟಕ್ಕೆ ಕೊಳೆ ಮಾಡ್ಕೊಂಡು ಬಂದಿದೀಯಲ್ಲ, ನಾಳೆ ಸ್ಕೂಲ್‌ಗೆ ಯಾವ ಡ್ರೆಸ್‌ನಲ್ಲಿ ಹೋಗ್ತೀಯಾ? ನಾಲ್ಕು ಬಿಟ್ರೆ ನಿಂಗೆ ಶಿಸ್ತು ಬರೋದು ಎಂದು ರೇಗುತ್ತಾ ಅಮ್ಮ ಕೋಲು ಹುಡುಕುತ್ತಿದ್ದಳು. ಆಗಲೇ, ಇದ್ದಕ್ಕಿದ್ದಂತೆ ಅಜ್ಜಿಯ ಪ್ರವೇಶವಾಗುತ್ತಿತ್ತು…
ಹೇಳಿಕೇಳಿ ನಾವು ಮಲೆನಾಡಿನವರು. ಅಲ್ಲೊಂದು ಇಲ್ಲೊಂದು ಮನೆ. ಜೊತೆಗೆ ಒಂದಷ್ಟು ಫ್ರೆಂಡ್ಸ್. ಸ್ಕೂಲ್ ಎರಡು ಕಿ.ಮೀ ಇದ್ದರೂ ಹೊರಡುತ್ತಿದ್ದದ್ದೇ ಒಂಭತ್ತು ಗಂಟೆಗೆ. ಅಮ್ಮ ಕೊಟ್ಟ ಊಟದ ಡಬ್ಬಿಯನ್ನು ಬ್ಯಾಗ್ ಒಳಗೆ ಇಟ್ಟು. ಕೊಟ್ಟ ರೊಟ್ಟಿ ಬೆಣ್ಣೆಯನ್ನು ರೋಲ್ ಮಾಡಿ, ಕಾಫಿ ಎಲೆಯ ಮೇಲೆ ಇಟ್ಕೊಂಡು ತಿನ್ನುತ್ತಿದ್ದೆವು. ಸ್ಕೂಲ್‌ಗೆ ತಡ ಆಯ್ತು ಅಂತ ಮನೆಯಿಂದಾನೆ ಓಡ್ಕೊಂಡು ದಾರಿಯಲ್ಲಿ ಫ್ರೆಂಡ್ಸ್‌ನ ಸೇರಿಕೊಂಡು, ಹಾದಿಬದಿಯಲ್ಲಿ ಸಿಗುವ ಚಟ್ಟೆ ಹಣ್ಣು, ನೇರಳೆ ಎಲ್ಲದರ ಮೇಲೆ ಒಂದು ಕಣ್ಣಾಡಿಸಿ, ಒಂದಷ್ಟು ಕುಯ್ದು ಜಾಮಿಟ್ರಿ ಬಾಕ್ಸ್ ಸೇರಿಸಿದಾಗಲೇ ಸ್ವಲ್ಪ ಸಮಾಧಾನ.
ಹಾಗೂ ಹೀಗೂ ಸ್ಕೂಲ್ ತಲುಪಿದಾಗ, ಕೋಲು ಹಿಡಿದು ಕಣ್ಣು ಕೆಂಪಗೆ ಮಾಡ್ಕೊಂಡು ನಿಂತಿರುತ್ತಿದ್ದ ಆ ಪೀಟಿ ಮಾಸ್ಟರ್‌ರನ್ನು ನೋಡಿದಾಗ ಜೀವ ಬಾಯಿಗೆ ಬಂದಂತಾಗುತ್ತಿತ್ತು.
“ಯಾಕೆ ಲೇಟು? ಬೇಗ ಬರೋಕೆ ಆಗಲ್ವ? ನಿಂತಿರಿ ಒಂಟಿ ಕಾಲಲ್ಲಿ’ ಅಂತ ಗದರಿಸಿ ಒಳ ನಡೆಯುತ್ತಿದ್ದ ಮಾಸ್ಟರ್ ಅನ್ನು ತಡೆದು, “ಹೋಗ್ಲಿ ಬಿಡಿ ಸಾರ್. ಮಕ್ಕಳು ದೂರದಿಂದ ಬಂದಿದ್ದಾರೆ ‘ ಎಂದು ಸಮಜಾಯಿಷಿ ಕೊಟ್ಟು ನಮ್ಮನ್ನೆಲ್ಲ ಒಳಗೆ ಕಳುಹಿಸುತ್ತಿದ್ದ ನಮ್ಮ ಕನ್ನಡ ಟೀಚರ್ ಮಿಲಿಯನ್ ಡಿಸೋಜ ಅಂದ್ರೆ, ಎಲ್ಲರಿಗೂ ಅಚ್ಚುಮೆಚ್ಚು.
ಕ್ಲಾಸ್ ಒಳಗೆ ಪಾಠ ಕೇಳ್ತಿದ್ರೂ ಯಾವಾಗ ಊಟದ ಬೆಲ್ಲು ಹೊಡೆಯುತ್ತೆ, ಯಾವಾಗ ಅಮ್ಮ ಕೊಟ್ಟಿರುವ ಮೊಸರನ್ನ ತಿಂತಿನೋ ಅಂತ ಮನಸ್ಸು ಚಡಪಡಿಸೋದು. ಮಧ್ಯಾಹ್ನದ ಬೆಲ್ಲು ಹೊಡೆದೊಡನೆ ಸ್ಕೂಲ್ ಆಚೆ ಇದ್ದ ಬೋರ್ವೆಲ್‌ನಲ್ಲಿ ಕೈ ತೊಳೆದುಕೊಂಡು ಎಲ್ಲರೂ ಗುಂಪು ಗುಂಪಾಗಿ ಕೂತ್ಕೊಂಡು ಊಟಾನ ಹಂಚಿಕೊಂಡು ತಿಂತಾ ಇದ್ರೇ…ಅದು ಸ್ಕೂಲ್ ಅನ್ನೋದನ್ನೇ ಮರೆತು ಬಿಡ್ತಿದ್ವಿ.
ಊಟದ ನಂತರ ಬೋರ್ವೆಲ್ ಹತ್ತಿರ ಹಾರನ್ ಮಾಡ್ತಾ ನಮಗೆಂದೇ ಕಾಯ್ತ ಇರ್ತಿದ್ದ ಐಸ್ಕ್ಯಾಂಡಿ ಸಾಬ್ರುನಾ ಮರೆಯೋದುಂಟೆ.
ದುಡ್ಡಿರೋರು ತಗೊಂಡು ತಿಂತಾ ಇದ್ರೆ, ನಾವೆಲ್ಲ ಜಾಮಿಟ್ರಿ ಒಳಗೆ ಇರಿಸಿದ್ದ ಚಟ್ಟೆ ಹಣ್ಣು, ನೇರಳೆಹಣ್ಣು ತಿನ್ನುತ್ತಾ, ನಾಲಿಗೆಯನ್ನು ಹೊರಚಾಚಿ ಯಾರ ನಾಲಿಗೆ ಎಷ್ಟು ಕಲರ್ ಆಗಿದೆ ಎಂದು ತೋರಿಸುತ್ತ ನಗ್ತಾ ಇದ್ದದ್ದು ಇಂದಿಗೂ ಕಣ್ಣ ಮುಂದೆ ಹಾದು ಹೋದಂತಾಗುತ್ತದೆ.
ಇನ್ನು ಮಳೆಗಾಲದಲ್ಲಿ ನಮ್ಮ ಚೇಷ್ಟೆಗಳು ಅಸಾಧ್ಯ ಬಿಡಿ, ಆ ಪ್ಲಾಸ್ಟಿಕ್ ರೈನ್ ಕೋಟ್ ಹಾಕಿಕೊಳ್ಳೋಕೆ ಏನೋ ಒಂಥರ ಹಿಂಸೆ, ಬಿಚ್ಚಿ ಕೈಯಲ್ಲಿ ಇಟ್ಕೊಂಡು ದಾರಿಯಲ್ಲಿ, ಗುಂಡಿಗಳಲ್ಲಿ ನಿಂತ ನೀರಲ್ಲಿ ನೆಗೆದು ಒಬ್ಬರಿಗೊಬ್ಬರು ನೀರೆರೆಚಿಕೊಂಡು ಮನೆ ಸೇರುವುದರೊಳಗೆ ಸಾಕು ಸಾಕಾಗ್ತಿತ್ತು.
ಮನೆಗೆ ಬಂದಾಗ ಅಮ್ಮ “ಏನಿದು? ಬಟ್ಟೇನ ಇಷ್ಟು ಗಲೀಜು ಮಾಡ್ಕೊಂಡು ಬಂದಿದೀಯಲ್ಲ, ನಾಳೆ ಏನು ಹಾಕ್ಕೊಂಡ್ ಹೋಗ್ತಿಯ’ ಅಂತ ಹೊಡೆಯಲು ಕೋಲು ಹುಡುಕುವ ಅಷ್ಟರಲ್ಲಿ, ಅಜ್ಜಿ ಬಂದು, ಮೆಲ್ಲನೆ ಒಳಗೆ ಕರ್ಕೊಂಡು ಹೋಗಿ, ತಲೆ ಎಲ್ಲಾ ಒರೆಸಿ, ಕಾಫಿ ಜೊತೆಗೆ… ಬೆಳಗ್ಗೆ ಉಳಿದ ರೊಟ್ಟಿಯನ್ನು ಬಿಸಿ ಮಾಡಿ ಕೊಟ್ಟಾಗ…. ಏನೋ ಒಂಥರ ಖುಷಿ. ನಂತರ ಸ್ವಲ್ಪ ಹೊತ್ತು ಓದಿ, ಬರೆದು ಅಜ್ಜಿಯ ಕೈಯಲ್ಲಿ ತುತ್ತನ್ನು ತಿಂದು, ಅವಳ ಮಡಿಲಲ್ಲಿ ತಲೆಯಿಟ್ಟು, ಅವಳು ಹೇಳುವ ಒಂದಾನೊಂದು ಕಾಲದ ಕತೆಯನ್ನು ಕೇಳುತ ನಿದ್ರೆಗೆ ಜಾರುತಿದ್ದದ್ದು… ಅವೆಲ್ಲ ಇಂದಿಗೂ ಸವಿ ಸವಿ ನೆನಪು.
ಶಿಲ್ಪಮೋಹನ್, ಬೆಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.