ಪರವಾನಗಿ ಮೇಳದಲ್ಲಿ 9600 ಅರ್ಜಿ ಸಲ್ಲಿಕೆ
Team Udayavani, Sep 17, 2019, 3:00 AM IST
ಹೊಸಕೋಟೆ: ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ವಾಹನ ಸವಾರರಿಗೆ ಚಾಲನಾ ಪರವಾನಗಿ (ಎಲ್‌ಎಲ್, ಡಿಎಲ್), ವಿಮೆ ಮೇಳದಲ್ಲಿ 9600 ಅರ್ಜಿಗಳು ಸಲ್ಲಿಕೆಯಾಗಿವೆ. ಬೆಳಿಗ್ಗೆಯಿಂದಲೇ ಕ್ರೀಡಾಂಗಣದಲ್ಲಿ ಸಹಸ್ರಾರು ಜನರು ಅರ್ಜಿ ಸಲ್ಲಿಸಲು ಸಾಲಾಗಿ ನಿಂತಿದ್ದರು. ಅವ್ಯವಸ್ಥೆಯಾಗುವ ಸಾಧ್ಯತೆಯನ್ನು ಗಮನಿಸಿದ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು 5 ಕೌಂಟರ್‌ಗಳಲ್ಲಿ ಅರ್ಜಿ ಸ್ವೀಕರಿಸಲು ವ್ಯವಸ್ಥೆ ಮಾಡಿದರು.
ಅಲೆದಾಟ: ಸಲ್ಲಿಸಬೇಕಾದ ಅರ್ಜಿಯ ನಮೂನೆಯು ಇಂಗ್ಲೀಷ್‌ನಲ್ಲಿದ್ದ ಕಾರಣ ಬಹಳಷ್ಟು ಗ್ರಾಮೀಣ ಪ್ರದೇಶದ ಜನರು ಭರ್ತಿ ಮಾಡಲು ಸ್ಥಳದಲ್ಲಿದ್ದ ಇತರರನ್ನು ಅವಲಂಬಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳ ಪ್ರತಿ ಪಡೆಯಲು ನಗರದ ಕ್ರೀಡಾಂಗಣದ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳಲ್ಲಿ ಹೆಚ್ಚಿನ ಜನರು ಕಂಡುಬಂದರು.
ಮಧ್ಯವರ್ತಿಗಳಿಂದ ಗೊಂದಲ: ಮೇಳದಲ್ಲಿ ಸಲ್ಲಿಸಿರುವ ಬಹುತೇಕ ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆಯಿದ್ದು, ತಮಗೆ ಹಣ ನೀಡಿದಲ್ಲಿ ಶೀಘ್ರದಲ್ಲಿಯೇ ಪರವಾನಗಿ ಮಾಡಿಸಿಕೊಡಲಾಗುವುದು ಎಂದು ಮಧ್ಯವರ್ತಿಗಳು ವಾಹನ ಚಾಲಕರಲ್ಲಿ ಗೊಂದಲ ನಿರ್ಮಿಸುತ್ತಿದ್ದರು. ಸ್ಥಳದಲ್ಲಿ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ನಾಳೆಯಿಂದಲೇ ಹೆಲ್ಮೆಟ್ ಕಡ್ಡಾಯಗೊಳ್ಳಲಿದೆ ಎಂದು ಹೇಳುವ ಮೂಲಕ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬುದು ಬಹುತೇಕ ವಾಹನ ಚಾಲಕರ ಅಭಿಪ್ರಾಯವಾಗಿತ್ತು.
ನಿರಾಸೆ: ಅರ್ಜಿ ಪರಿಶೀಲಿಸಿ ಮೊಬೈಲ್ ಮೂಲಕ ಪರೀಕ್ಷೆಗೆ ಹಾಜರಾಗಬೇಕಾದ ದಿನಾಂಕವನ್ನು ತಿಳಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದರು. ಅರ್ಜಿ ಸಲ್ಲಿಸಿದ ಕೂಡಲೇ ಪರಿಶೀಲಿಸಿ ಸ್ಥಳದಲ್ಲಿಯೇ ಪರವಾನಗಿ ಪಡೆಯಬಹುದೆಂಬ ಆಶಾಭಾವನೆಯಿಂದ ಕೆಲವರು ಕಚೇರಿ, ಕಾರ್ಖಾನೆಗಳಿಗೆ ರಜೆ ಹಾಕಿ ಬಂದಿದ್ದು ವ್ಯರ್ಥವಾಯಿತು ಎಂದು ನಿರಾಶರಾದರು.
ವಾಹನ ಪರವಾನಗಿಯಷ್ಟೇ ಅಲ್ಲದೆ ವಿಮೆ ನೋಂದಣಿಗೂ ಸಹ ಅವಕಾಶ ಕಲ್ಪಿಸಿದ್ದು 3-4 ಸಂಸ್ಥೆಯ ಪ್ರತಿನಿಧಿಗಳು ಸ್ಥಳದಲ್ಲಿಯೇ ನೋಂದಣಿ ಮಾಡಿ ವಿಮೆಯ ಪಾಲಿಸಿಯನ್ನು ಅಂಚೆ ಮೂಲಕ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು. ಜನರನ್ನು ನಿಯಂತ್ರಿಸಲು ತಾಲೂಕಿನ ಇತರೆ ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ಸಹ ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಕಳ್ಳರ ಕೈಚಳಕ: ಕ್ರೀಡಾಂಗಣದ ಮುಂಭಾಗ ನಿಲುಗಡೆ ಮಾಡಿ ಅರ್ಜಿ ಸಲ್ಲಿಸಲು ತೆರಳಿದ್ದ ನಂದಗುಡಿಯ ಎನ್.ಆರ್.ವೇಣುಗೋಪಾಲ್ ಎಂಬುವರ ದ್ವಿಚಕ್ರ ವಾಹನವನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಮೇಳದ ಭದ್ರತೆಗೆ ನೇಮಕಗೊಂಡಿದ್ದ ಪೊಲೀಸರು ಕ್ರೀಡಾಂಗಣದ ಒಳಗಡೆ ಮಾತ್ರ ಇದ್ದ ಕಾರಣ ದುಷ್ಕರ್ಮಿಗಳಿಗೆ ತಮ್ಮ ಕೈಚಳಕ ತೋರಿಸಲು ಸಾಧ್ಯವಾಗಿದೆ.
ವಾಹನ ಸವಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಮೇಳ ಆಯೋಜಿಸಿದ್ದು, ಉತ್ತಮ ಸ್ಪಂದನೆ ದೊರೆತಿದೆ. 9000 ಪುರುಷರು, 600 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. 15 ದಿನಗಳ ನಂತರ ತಾಲೂಕಿನಾದ್ಯಂತ ಪೊಲೀಸರು ವಾಹನಗಳ ತಪಾಸಣೆ ತೀವ್ರಗೊಳಿಸಿ ಅಗತ್ಯ ದಾಖಲೆ ಹಾಜರುಪಡಿಸಲು ವಿಫಲವಾದಲ್ಲಿ ದಂಡ ವಿಧಿಸುವುದು ಅನಿವಾರ್ಯ ತಾಲೂಕು ಪೊಲೀಸ್ ಉಪಾಧೀಕ್ಷಕ ಎನ್.ಬಿ. ಸಕ್ರಿ ಹೇಳಿದರು.
ಕೇವಲ ಪ್ರಚಾರಕ್ಕೆ ಸೀಮಿತಗೊಂಡಿದ್ದ ಮೇಳದಲ್ಲಿ ಅಗತ್ಯವಾದ ಅರ್ಜಿ ನಮೂನೆಗಳನ್ನು ಪಡೆಯಲು ಪರದಾಡಬೇಕಾಯಿತು. ಮೇಳದಲ್ಲಿ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳ ಬಗ್ಗೆ ಮೊದಲೇ ಸೂಚಿಸಿದ್ದಲ್ಲಿ, ಜೆರಾಕ್ಸ್‌ಗಾಗಿ ಅಲೆದಾಡಿ ವೃಥಾ ಕಾಲಹರಣ ಮಾಡುವುದು ನಿವಾರಣೆಯಾಗುತ್ತಿತ್ತು.
-ರಾಮಕೃಷ್ಣ, ವಾಹನ ಚಾಲಕ, ಅರೆಹಳ್ಳಿ
ಸಾರ್ವಜನಿಕರಿಗೆ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಮೇಳದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ಹಾಜರುಪಡಿಸಬೇಕಾದ ದಾಖಲೆಗಳ ಬಗ್ಗೆ ತಿಳಿಸಲಾಗಿತ್ತು. ಸೂಕ್ತ ಪೂರ್ವಸಿದ್ಧತೆ ಮಾಡಿಕೊಳ್ಳದೆ ಮೇಳಕ್ಕೆ ಬಂದಿದ್ದರಿಂದ ಚಾಲಕರು ಕಷ್ಟ ಅನುಭವಿಸಬೇಕಾಗಿದೆ.
-ನಾರಾಯಣಸ್ವಾಮಿ, ಎಎಸ್‌ಐ, ಅನುಗೊಂಡನಹಳ್ಳಿ ಠಾಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.