ಬ್ಯಾಕ್ ಟು ಬ್ಯಾಕ್ ಉಪೇಂದ್ರ
Team Udayavani, Sep 20, 2019, 5:44 AM IST
“ಐ ಲವ್ ಯು’ ಚಿತ್ರದ ಗೆಲುವಿನ ಬೆನ್ನಲ್ಲೇ ಉಪೇಂದ್ರ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ ಅಧಿಕೃತವಾಗಿ ಐದು ಸಿನಿಮಾಗಳು ಅನೌನ್ಸ್ ಆಗಿದ್ದು, ವರ್ಷಪೂರ್ತಿ ಬಿಝಿಯಾಗಲಿದ್ದಾರೆ.
“ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ…’
-ಈ ಹಿಂದೆ ನಟ ಕಮ್ ನಿರ್ದೇಶಕ ಉಪೇಂದ್ರ ಹೀಗೆ ಹೇಳಿ ಸುಮ್ಮನಾಗಿದ್ದರು. ಸಂದರ್ಭ; ರಾಜಕೀಯಕ್ಕೆ ಎಂಟ್ರಿಯಾಗಿ, ಇನ್ನೇನು ಹೊಸ ಪಕ್ಷವನ್ನು ಗಟ್ಟಿಯಾಗಿ ಕಟ್ಟುವ ಕನಸು ಕಾಣುವ ಹೊತ್ತಲ್ಲೇ, ಒಂದಷ್ಟು ಎಡವಟ್ಟಾಗಿ ಆ ಕ್ಷಣದಿಂದಲೇ ರಾಜಕೀಯದಿಂದ ಪುನಃ ಸಿನಿಮಾ ಕಡೆ ವಾಲುವಾಗ ಹೇಳಿದ ಮಾತಿದು. ಉಪೇಂದ್ರ ಇನ್ನೇನು ಸಿನಿಮಾಗೆ ಗುಡ್ ಬೈ ಹೇಳಿ, ಸಂಪೂರ್ಣ ರಾಜಕೀಯಕ್ಕೆ ಇಳಿಯುತ್ತಾರೆ ಅಂದುಕೊಂಡವರಿಗೆ ಕ್ಲೈಮ್ಯಾಕ್ಸ್‌ನಲ್ಲೊಂದು ಟ್ವಿಸ್ಟ್ ಇಟ್ಟರು. ಪುನಃ ಸಿನಿಮಾದತ್ತ ಮುಖ ಮಾಡಿದರು. “ಐ ಲವ್ ಯು’ ಅಂತ ಮತ್ತೆ ಕ್ಯಾಮೆರಾ ಮುಂದೆ ಬಂದು ನಿಂತರು. “ಐ ಲವ್ ಯು’ ಕೂಡಾ ಹಿಟ್ ಆಯಿತು. ಆ ನಂತರ ಉಪೇಂದ್ರ ಅವರನ್ನು ಹುಡುಕಿ ಸಾಲು ಸಾಲು ಸಿನಿಮಾಗಳು ಬಂದಿದ್ದು ಮಾತ್ರ ಸುಳ್ಳಲ್ಲ. ಈಗ ಬ್ಯಾಕ್ ಟು ಬ್ಯಾಕ್ ಉಪೇಂದ್ರ ಸಿನಿಮಾಗಳಲ್ಲಿ ಬಿಝಿಯಾಗುತ್ತಿದ್ದಾರೆ. ಯಾರೆಲ್ಲಾ ಉಪೇಂದ್ರ ಸಿನಿಮಾ ಹಿಂದಿದ್ದಾರೆ, ಯಾವೆಲ್ಲಾ ಸಿನಿಮಾ ಒಪ್ಪಿದ್ದಾರೆ ಎಂಬ ಕುರಿತು ಒಂದು ರೌಂಡಪ್.
ಉಪೇಂದ್ರ ರಾಜಕೀಯದಿಂದ ಯು ಟರ್ನ್ ಮಾಡಿದ ಬೆನ್ನಲ್ಲೇ ಅವರು “ಐ ಲವ್ ಯು’ ಚಿತ್ರ ಮೂಲಕ ಜೋರು ಸುದ್ದಿಯಾದರು. ಅದು ಶತದಿನ ಆಚರಿಸಿದ್ದೂ ಆಯ್ತು. ಆ ಸಿನ್ಮಾ ಒಪ್ಪಿಕೊಂಡ ಬೆನ್ನಲ್ಲೇ ಉಪೇಂದ್ರ ಅವರನ್ನು ಹುಡುಕಿ ಬಂದ ಚಿತ್ರಗಳನ್ನೆ ಲೆಕ್ಕ ಹಾಕಿದರೆ, ಸಂಖ್ಯೆ ಆರು ಮೀರುತ್ತೆ. ಇವು ಅಧಿಕೃತವಾಗಿ ಘೋಷಣೆಯಾಗಿರುವ ಚಿತ್ರಗಳ ಸಂಖ್ಯೆ. ಇನ್ನೂ ಮಾತುಕತೆಯ ಹಂತದಲ್ಲಿರುವ ಚಿತ್ರಗಳು ಪಕ್ಕಾ ಆಗಿಬಿಟ್ಟರೆ, ಅವುಗಳ ಸಂಖ್ಯೆ ಎರಡಂಕಿ ದಾಟುತ್ತೆ. ಹೌದು, ಉಪೇಂದ್ರ ಈಗ ಫುಲ್ ಬಿಝಿ. ಅದಕ್ಕೆ ಕಾರಣ, ಮತ್ತೆ ಉಪ್ಪಿ ರುಚಿಸುತ್ತಿರುವುದು. ಹಾಗಾಗಿ ಹೊಸ ಬಗೆಯ ಕಥೆಗಳನ್ನು ಒಪ್ಪಿಕೊಂಡು ಹೊಸ ಇನ್ನಿಂಗ್ಸ್
ನಲ್ಲೂ ಭರ್ಜರಿ ಸ್ಕೋರ್ ಮಾಡುವ ಸೂಚನೆ ಕೊಟ್ಟಿದ್ದಾರೆ ಉಪೇಂದ್ರ.
“ಬುದ್ಧಿವಂತ’ ಉಪೇಂದ್ರ ಅಭಿನಯದ ಯಶಸ್ವಿ ಚಿತ್ರ. ಈಗ “ಬುದ್ಧಿವಂತ-2′ ಚಿತ್ರ ಮಾಡುತ್ತಿರುವುದು ಗೊತ್ತೇ ಇದೆ. ಮೊದಲು ಈ ಚಿತ್ರವನ್ನು ಮೌರ್ಯ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಇತ್ತು. ಕೊನೆಗೆ “ಬುದ್ಧಿವಂತ -2′ ಜಯರಾಮ್ ತೆಕ್ಕೆಗೆ ಬಂತು. ಇನ್ನು ಈ ಚಿತ್ರವನ್ನು ಟಿ.ಆರ್.ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಅವರಿಗೆ ಉಪೇಂದ್ರ ಜೊತೆಗಿನ ಮೊದಲ ಕಾಂಬಿನೇಷನ್ ಚಿತ್ರವಿದು. ಸದ್ಯಕ್ಕೆ ಚಿತ್ರೀಕರಣ ನಡೆಯುತ್ತಿದ್ದು, ಮೋಷನ್ ಪಿಕ್ಚರ್‌ವೊಂದು ರಿಲೀಸ್ ಆಗಿ, ಹೊಸ ಕುತೂಹಲ ಮೂಡಿಸಿರುವುದು ವಿಶೇಷ.
ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ ಹೊಸದಲ್ಲ. ಈ ಹಿಂದೆ “ಬ್ರಹ್ಮ’ ಮೂಲಕ ಈ ಜೋಡಿ ಮೋಡಿ ಮಾಡಿತ್ತು. ಆ ಬಳಿಕ “ಐ ಲವ್ ಯು’ ಅನ್ನುವ ಮೂಲಕ ಮತ್ತಷ್ಟು ಹತ್ತಿರವಾಯ್ತು. ಈಗ “ಕಬj’ ಚಿತ್ರದ ಮೂಲಕ ಹ್ಯಾಟ್ರಿಕ್ ಸಕ್ಸಸ್ ಕಾಣಲು ಈ ಜೋಡಿ ಸಜ್ಜಾಗುತ್ತಿದೆ. ಇತ್ತೀಚೆಗೆ ಆರ್.ಚಂದ್ರು “ಕಬj’ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಉಪೇಂದ್ರ ಕೈಯಲ್ಲೊಂದು ಲಾಂಗ್ ಹಿಡಿದು ಫೋಸ್ ಕೊಟ್ಟಿದ್ದಾರೆ. ಅದು ಮತ್ತಷ್ಟು ಕುತೂಹಲ ಮೂಡಿಸಿದೆ. ಇನ್ನೊಂದು ವಿಶೇಷವೆಂದರೆ, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿದ್ದು, ಏಳು ಭಾಷೆಯಲ್ಲಿ ತಯಾರಿಸಲು ಆರ್.ಚಂದ್ರು ಪ್ಲಾನ್ ಮಾಡಿದ್ದಾರೆ.
ಇದರ ನಡುವೆಯೇ, ಉಪೇಂದ್ರ ಅವರು “ಕರ್ವ’ ಖ್ಯಾತಿಯ ನಿರ್ದೇಶಕ ನವನೀತ್ ಹೇಳಿದ ಕಥೆಯೊಂದನ್ನು ಒಪ್ಪಿಕೊಂಡು ಚಿತ್ರ ಮಾಡಲು ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರವನ್ನು ತರುಣ್ ಶಿವಪ್ಪ ನಿರ್ಮಾಣ ಮಾಡುತ್ತಿದ್ದಾರೆ.
ಇವರಿಬ್ಬರಿಗೂ ಉಪೇಂದ್ರ ಜೊತೆ ಮೊದಲ ಕಾಂಬಿನೇಷನ್ ಚಿತ್ರ. ನವನೀತ್, ಉಪೇಂದ್ರ ಅವರಿಗಾಗಿಯೇ ಹೊಸ ಬಗೆಯ ಕಥೆ ಹೆಣೆದಿದ್ದಾರೆ. ಕಥೆಯನ್ನು ಕೇಳಿದ ಉಪೇಂದ್ರ, ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ತರುಣ್ ಶಿವಪ್ಪ ಅವರ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಐದನೇ ಸಿನಿಮಾ ಇದು. ಪಕ್ಕಾ ಮನರಂಜನೆಯ ಚಿತ್ರ ಇದಾಗಿದ್ದು, ಉಪೇಂದ್ರ ಶೈಲಿಯ ಸಿನಿಮಾ ಎನ್ನುವುದರಲ್ಲಿ ಯಾವ ಅನುಮಾನವಿಲ್ಲ. ಉಪೇಂದ್ರ ಅವರ ಜನ್ಮದಿನದಂದು ಫಸ್ಟ್ ಲುಕ್ ಕೂಡ ಹೊರಬಂದಿದ್ದು, ಸದ್ಯ ಹೊಸತನವನ್ನು ತೋರಿಸುತ್ತಿದೆ. ಇದರ ಬೆನ್ನಲ್ಲೇ ನಿರ್ದೇಶಕ ಮಂಜು ಮಾಂಡವ್ಯ ಅವರ ಚಿತ್ರವನ್ನು ಉಪೇಂದ್ರ ಮಾಡುತ್ತಿದ್ದಾರೆ. ಈ ಹಿಂದೆಯೂ ಮಂಜು ಮಾಂಡವ್ಯ ಅವರು ಉಪೇಂದ್ರ ಅವರಿಗೆ ಚಿತ್ರ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಆ ಚಿತ್ರವೇ ಬೇರೆ ಈ ಚಿತ್ರವೇ ಚಿತ್ರವೇ ಬೇರೆ ಎನ್ನಲಾಗಿದೆ. ಇನ್ನು, “ಅಣ್ಣಯ್ಯ’ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರ ಜೊತೆಯಲ್ಲಿ ನಿರ್ದೇಶಕ ಶಶಾಂಕ್ ಕೂಡ ಉಪೇಂದ್ರ ಅವರೊಂದಿಗೆ ಒಂದು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಆ ಚಿತ್ರ ಕೂಡ ಇಷ್ಟರಲ್ಲೇ ಸೆಟ್ಟೇರಿದರೂ ಅಚ್ಚರಿ ಇಲ್ಲ ಬಿಡಿ. ಒಟ್ಟಲ್ಲಿ, ಉಪೇಂದ್ರ ಸಾಲು ಸಾಲು ಚಿತ್ರಗಳಲ್ಲಿ ಬಿಝಿಯಾಗಿರುವುದಂತೂ ಹೌದು. ಇನ್ನು, ಅನೇಕ ಕಥೆಗಳನ್ನೂ ಕೇಳುತ್ತಿದ್ದು, ಅವುಗಳಲ್ಲಿ ಇಷ್ಟವಾಗಿದ್ದನ್ನು ಪಕ್ಕಾ ಮಾಡಬೇಕಷ್ಟೇ.
ಅತ್ತ, “ಮಮ್ಮಿ’ ಹಾಗೂ “ದೇವಕಿ’ ಚಿತ್ರಗಳ ನಿರ್ದೇಶಕ ಲೋಹಿತ್ ಅವರು ಹೇಳಿರುವ ಒನ್‌ಲೈನ್ ಕಥೆಯೊಂದನ್ನು ಕೇಳಿರುವ ಉಪೇಂದ್ರ, ಕಥೆ ಪೂರ್ಣಗೊಳಿಸುವಂತೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಹಾಗೊಂದು ವೇಳೆ, ಲೋಹಿತ್ ಪೂರ್ಣ ಕಥೆಯನ್ನು ಉಪೇಂದ್ರ ಅವರಿಗೆ ಹೇಳಿ, ಅದು ಇಷ್ಟವಾದರೆ, ಆ ಚಿತ್ರ ಕೂಡ ಶುರುವಾಗಲಿದೆ ಎಂಬುದು ಲೋಹಿತ್ ಮಾತು.
ಈ ಮಧ್ಯೆ ಉಪೇಂದ್ರ ಮತ್ತು ರಚಿತಾರಾಮ್ ಅವರು ನಟಿಸಬೇಕಿದ್ದ, ಕೆ. ಮಾದೇಶ ಅವರು ನಿರ್ದೇಶಿಸಬೇಕಿದ್ದ ಚಿತ್ರವೊಂದು ಅದ್ಧೂರಿ ಮುಹೂರ್ತ ಆಚರಿಸಿಕೊಂಡು ಆ ಬಳಿಕ ಕೆಲ ಕಾರಣಗಳಿಂದ ಆ ಚಿತ್ರ ಸ್ಥಗಿತಗೊಂಡಿದೆ. ಡಾ.ವಿಜಯಲಕ್ಷ್ಮೀ ಅರಸ್ ನಿರ್ಮಾಣದ ಇನ್ನೂ ಹೆಸರಿಡದ, ಸ್ಕ್ರಿಪ್ಟ್ ರೆಡಿಯಾಗದ ಉಪೇಂದ್ರ ಅಭಿನಯದ ಚಿತ್ರಕ್ಕೆ ತರಾತುರಿಯಲ್ಲಿ ಅದ್ಧೂರಿ ಮುಹೂರ್ತ ನಡೆಸಲಾಗಿತ್ತು. ಪೂಜೆಗಾಗಿಯೇ, ಕಂಠೀರವ ಸ್ಟುಡಿಯೋದಲ್ಲಿ ಬೃಹತ್ ಶಿವಲಿಂಗದ ಸೆಟ್ ಹಾಕಿ, ನಾಯಕ, ನಾಯಕಿ ಪೂಜೆ ಮಾಡುವ ದೃಶ್ಯವೊಂದನ್ನು ಚಿತ್ರೀಕರಿಸುವ ಮೂಲಕ ಹೊಸ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಆ ಚಿತ್ರ ಶುರುವಾಗಲೇ ಇಲ್ಲ. ಹೀಗೆ ಮಾತುಕತೆ, ಪಕ್ಕಾ ಆಗಿರುವ ಅದೆಷ್ಟೋ ಚಿತ್ರಗಳು ಸುದ್ದಿಯೂ ಆಗಿಲ್ಲ.
ಅದೇನೆ ಇರಲಿ, ಉಪೇಂದ್ರ ಅವರು ಯಾವುದೇ ಚಿತ್ರ ಒಪ್ಪಿದರೂ, ಅಲ್ಲೊಂದು ವಿಶೇಷವಿರುತ್ತೆ. ಕಥೆಯಲ್ಲೊಂದು ಹೊಸತನ ಇರುತ್ತೆ. ಹಾಗೆಯೇ ಶೀರ್ಷಿಕೆಯಲ್ಲೂ ಹೊಸದೇನೋ ಇರುತ್ತೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಸಾಮಾನ್ಯವಾಗಿ ಉಪೇಂದ್ರ ಅವರ ನಿರ್ದೇಶನದ ಚಿತ್ರಗಳಲ್ಲಿ ವಿಡಂಬನೆ ಹೆಚ್ಚು. ಅದರಲ್ಲೂ ರಾಜಕಾರಣವನ್ನು ಹೆಚ್ಚು ಫೋಕಸ್ ಮಾಡಿ ಚಿತ್ರ ಮಾಡಿರುವುದುಂಟು. ಉಪೇಂದ್ರ ಅವರ ಶೈಲಿಯ ಚಿತ್ರಗಳನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳು, ಈಗ ಸೆಟ್ಟೇರಿರುವ, ಚಿತ್ರೀಕರಣದಲ್ಲಿರುವ ಚಿತ್ರಗಳ ಬಗ್ಗೆ ಕುತೂಹಲ ಇಟ್ಟುಕೊಂಡಿರುವುದಂತೂ ಸುಳ್ಳಲ್ಲ.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.