ಮತದಾರನಿಗೆ ಈಗ ನಿಜವಾದ ಅಗ್ನಿ ಪರೀಕ್ಷೆ
Team Udayavani, Sep 22, 2019, 3:07 AM IST
ಬೆಂಗಳೂರು: ಅಂತೂ ರಾಜ್ಯದಲ್ಲಿ ಉಪ ಚುನಾವಣೆ ಬಂದಿದೆ. 15 ಅನರ್ಹ ಶಾಸಕರ ಮಟ್ಟಿಗೆ, ಕೇಂದ್ರ ಚುನಾವಣಾ ಆಯೋಗದ ತೀರ್ಮಾನ ರಾಜಕೀಯ ಭವಿಷ್ಯದ ಬಗ್ಗೆ ಅನರ್ಹರನ್ನು ಗಂಭೀರವಾಗಿ ಚಿಂತಿಸು ವಂತೆ ಮಾಡಿದೆ. ಆದರೆ, ಚಿಂತಿಸಬೇಕಾದವರು ತ್ರಿಪಕ್ಷಗಳ ನೇತಾರರು! ಅನರ್ಹ ಶಾಸಕರು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮುರಿಯಲು ಕಾರಣರಾದರು. ಇನ್ನು ಬಿಜೆಪಿ ಸರ್ಕಾರ ರಚನೆಯಾಗಲೂ ಬೆಂಬಲ ನೀಡಿದರು.
ರಾಜ್ಯದಲ್ಲಿ ಸಂಖ್ಯಾಬಲದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬಹುಮತ ಇತ್ತು. ಅನರ್ಹರ ರಾಜೀನಾಮೆ ಕಾರಣ ದಿಂದ ತಾಂತ್ರಿಕವಾಗಿ ಬಹುಮತ ಪಡೆದಿರುವ, ಆದರೆ ವಿಧಾನಸಭೆ ಒಟ್ಟಾರೆ ಶಾಸಕರ ಸಂಖ್ಯೆ ಪರಿಗಣಿಸಿದರೆ ಅಲ್ಪಮತೀಯ ಬಿಜೆಪಿ ಸರ್ಕಾರಕ್ಕೆ ಚುನಾವಣಾ ಆಯೋಗ ಒಂದರ್ಥದಲ್ಲಿ ಅಗ್ನಿ ಪರೀಕ್ಷೆ ಒಡ್ಡಿದೆ. ಅಂದರೆ, 15 ಅನರ್ಹರ ಕ್ಷೇತ್ರದಲ್ಲಿ ನಡೆಯುವ ಚುನಾವಣೆಯಲ್ಲಿ ಕನಿಷ್ಠ 7 ಕ್ಷೇತ್ರಗಳನ್ನಾದರೂ ಗೆಲ್ಲಲೇಬೇಕಾದ ಒತ್ತಡ ಬಿಜೆಪಿಗಿದೆ.
ಕೇವಲ ಸರ್ಕಾರ ಉಳಿಸಿಕೊಳ್ಳಲು ಬೇಕಾದ ಮ್ಯಾಜಿಕ್ ಸಂಖ್ಯೆ ಪಡೆಯುವುದು ಮಾತ್ರವಲ್ಲ. ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದ “ಅತೃಪ್ತ’ರನ್ನು ಸಮಾಧಾನಪಡಿಸುವುದು ಬಿ.ಎಸ್.ಯಡಿಯೂರಪ್ಪ ಅವರಿಗೆ ಸವಾಲಾಗಿ ಪರಿಣಮಿಸಿದೆ. ಅದಕ್ಕೆ ಇಂಬೆನ್ನುವಂತೆ ಅನರ್ಹರು ಇತ್ತೀಚೆಗೆ ತಮ್ಮ ರಾಜಕೀಯದ ಅತಂತ್ರತೆ ಬಗ್ಗೆ ಬಿಜೆಪಿಯತ್ತ ಬೊಟ್ಟು ಮಾಡುತ್ತಿರುವುದೇ ಆಗಿದೆ.
ಒಳಗೊಳಗೇ ಬೇಗುದಿ ಅನುಭವಿಸುತ್ತಿರುವ ಬಗ್ಗೆ ಒಂದೊಂದೇ ಮಾತುಗಳು ಕೇಳಿಬರುತ್ತಿದ್ದು ರಾಜ್ಯದ ಮಟ್ಟಿಗೆ ರಾಜಕೀಯ ನೆಮ್ಮದಿಯನ್ನಂತೂ ತರಲು ಸಾಧ್ಯವಿಲ್ಲ. ಅನರ್ಹರು ಈಗ ಮತ್ತೆ ಸಿಡಿದರೆ ಯಡಿಯೂರಪ್ಪ ಸರ್ಕಾರಕ್ಕೆ ನಿಧಾನಗತಿಯಲ್ಲಾದರೂ ಮುಳುವಾಗಬಹುದು. ಸದ್ಯಕ್ಕೆ 7 ಕ್ಷೇತ್ರಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿರುವ ಬಿಜೆಪಿ, ಮುಂದೆ ಮತ್ತೆ ವಿರೋಧ ಪಕ್ಷಗಳಲ್ಲಿರುವ ಅತೃಪ್ತರ’ತ್ತ ಗಾಳ ಹಾಕಿ ಸರ್ಕಾರ ಉಳಿಸಿಕೊಳ್ಳಬಹುದು.
ಆದರೆ, ಸರ್ಕಾರ ಪತನಕ್ಕೆ ರೂವಾರಿಗಳಾದ ಅತೃಪ್ತರ ಪರಿಸ್ಥಿತಿ ಗಮನಿಸಿದರೆ ಹೊಸ ಅತೃಪ್ತರು ಅವರ ದಾರಿಯನ್ನುಹಿಡಿಯುವುದು ಬಹುತೇಕ ಕಷ್ಟ. ಜತೆಗೆ ಅನರ್ಹರ ಮುಂದಿನ ರಾಜಕೀಯ ನಡೆಯೂ ಹೊಸ ರಾಜಕೀಯ ಅವಕಾಶಗಳತ್ತ , ಬಿಜೆಪಿಯ ಸಂತುಷ್ಟಿ/ ಸಂಕಷ್ಟಗಳತ್ತ ಬೆಳಕು ಚೆಲ್ಲುವ ಸಾಧ್ಯತೆಯೂ ಇದೆ. ಹಾಗಾಗಿ ರಾಜ್ಯ ಬಿಜೆಪಿ ಪಾಲಿಗೆ ಹೊಸ ಸವಾಲುಗಳತ್ತ ತೆರೆದುಕೊಳ್ಳುವ ಅಗತ್ಯಗಳು ಕಾಣಬಹುದು.
ಅನರ್ಹರನ್ನು ಸಂಪ್ರೀತಿಗೊಳಿಸಲು, ಅವರ ಸಂಬಂಧಿಗಳಿಗೆ/ ಸ್ನೇಹಿತರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಅವಕಾಶಗಳಿರಬಹುದು. ಅಥವಾ ಮದ್ರಾಸ್ ಹೈಕೋರ್ಟ್ ತೀರ್ಪಿನಂತೆ ಅನರ್ಹತೆಗೆ ತಡೆ ನೀಡಿ ಚುನಾವಣೆಗೆ ಸ್ವತಹ ಸ್ಪರ್ಧಿಸಲು ಅವಕಾಶ ಕಲ್ಪಿಸುವುದು ಅಷ್ಟೇನು ಸುಲಭದ ಮಾತಲ್ಲ. ಹಾಗಂತ ಅದು ಸಾಧುವೂ ಅಲ್ಲ.
ಇತ್ತ ಅಧಿಕಾರ ಕಳೆದುಕೊಂಡು ಕೈಕೈ ಹೊಸೆಯುತ್ತಿರುವ ಕಾಂಗ್ರೆಸ್- ಜೆಡಿಎಸ್ ಮಿತ್ರರು ಮತ್ತು ಮೈತ್ರಿ ಪತನಕ್ಕೆ ಪರೋಕ್ಷವಾಗಿ ಕಾರಣರಾಗಿ ಒಳಗೊಳಗೇ ಸಂತಸ ಪಡುತ್ತಿದ್ದ ಕಾಂಗ್ರೆಸ್ ಪಕ್ಷದ ಕೆಲ ಧುರೀಣರು ಈಗ ಯಾವ ರಾಜಕೀಯ ನಡೆಗೆ ಮುಖಮಾಡುತ್ತಾರೆ ಎಂಬುದು ಚರ್ಚಿಸಬೇಕಾದ ವಿಷಯ. ಅನರ್ಹರ ಕ್ಷೇತ್ರಗಳಲ್ಲಿ ಅನರ್ಹರು ಅಥವಾ ಅವರ ಕಡೆಯವರ ಸೋಲಿಗೆ ಖಂಡಿತಾ ಜೆಡಿಎಸ್ ವರಿಷ್ಠರು ಟೊಂಕ ಕಟ್ಟಿ ನಿಲ್ಲಲಿದ್ದಾರೆ.
ಆದರೆ, ಕಾಂಗ್ರೆಸ್ ಪಕ್ಷದಲ್ಲಿ? ಎಲ್ಲಕ್ಕಿಂತಲೂ ಪ್ರಮುಖವಾಗಿ ಮೈತ್ರಿ ಪತನಕ್ಕೆ ಕಾರಣರೆಂಬ ಆರೋಪ ಹೊತ್ತುಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ಈಗ ಪ್ರಮುಖವಾಗಿ ಮತದಾರನ ಚರ್ಚೆಗೆ ಬರಲಿದೆ. ಒಳಗೊಳಗಿಂದಲೇ ಅನರ್ಹರತ್ತ ಸಹಕರಿಸುತ್ತಾರೆಯೇ ಅಥವಾ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಗಟ್ಟಿಯಾಗಿ ನಿಂತು ಕೆಲಸ ಮಾಡುತ್ತಾರೆಯೇ ಎನ್ನುವುದು ಇಲ್ಲಿ ಮುಖ್ಯ ಅಂಶ.
ಹಾಗಾಗಿ ಸಿದ್ದರಾಮಯ್ಯ ಅವರ ಮಟ್ಟಿಗೆ ಹೇಳುವುದಾದರೆ, ಅವರ ರಾಜಕೀಯ ಭವಿಷ್ಯವೂ ಇಲ್ಲಿ ಪರೀಕ್ಷೆಗೆ ಒಳಪಡಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಗಟ್ಟಿಯಾಗಿ ನಿಲ್ಲಲು ತಮ್ಮ ಅಭ್ಯರ್ಥಿಗಳ ಪರವಾಗಿ ನಿಜವಾಗಿ ಕೆಲಸಮಾಡಲೇ ಬೇಕಾದ ಅನಿವಾರ್ಯತೆ ಅವರಿಗಿದೆ. ಯಾಕೆಂದರೆ ಅನರ್ಹರಲ್ಲಿ ಅನೇಕರು ಅವರ ಸಮೀಪವರ್ತಿಗಳಾಗಿದ್ದವರೇ. ಹೆಚ್ಚಾಗಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲರಾಗಿ ಇರಲು ಕಾರಣರಾದವರು ಆ ಅನರ್ಹರೇ.
ಆದರೆ, ಇಲ್ಲಿ ಪ್ರಮುಖ ಅಂಶವಾದರೆ ಮತದಾರನ ತೀರ್ಮಾನ. ಮತದಾರನ ಕಾರಣಕ್ಕಾಗಿಯೇ ರಾಜ್ಯ ರಾಜಕೀಯದಲ್ಲಿ ಅತಂತ್ರ ರಾಜಕೀಯ ಕಾಣಿಸಿಕೊಂಡಿರುವುದು. ಹಾಗಾಗಿಯೇ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಘಟಿಸುತ್ತಿರುವುದು. ಇಲ್ಲಿ ನಿಜವಾದ ಅಗ್ನಿ ಪರೀಕ್ಷೆ ಮತದಾರನ ಮೇಲೆ ಆಗಲಿದೆ. ಆತ ನೀಡುವ ತೀರ್ಮಾನ, ಮತ್ತಷ್ಟು ಅತಂತ್ರ ರಾಜಕೀಯಕ್ಕೆ ಕಾರಣವಾಗುತ್ತದೋ ಅಥವಾ ರಾಜಕೀಯ ಪಕ್ಷಗಳಿಗೆ ಹೊಸ ಪಾಠವನ್ನು ಕಲಿಸುತ್ತದೋ ಎಂಬುದನ್ನು ಈ ಉಪ ಚುನಾವಣೆ ದಾಖಲಿಸಲಿದೆ.
* ನವೀನ್ ಅಮ್ಮೆಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
MUST WATCH
ಹೊಸ ಸೇರ್ಪಡೆ
Bengaluru Crime: ಕತ್ತು ಬಿಗಿದು ಇಬ್ಬರು ಮಕ್ಕಳನ್ನು ಕೊಂದ ಅಮ್ಮ!
IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.