ಶಾಲೆಗೆ ಹೋಗಲು ಪ್ರತಿನಿತ್ಯ 10 ಕಿ.ಮೀ. ಕಾನನ ನಡಿಗೆ!
Team Udayavani, Sep 24, 2019, 3:08 AM IST
ಬೆಳಗಾವಿ/ಖಾನಾಪುರ: ಸುತ್ತಲೂ ದಟ್ಟ ಅರಣ್ಯ, ಬೆನ್ನ ಮೇಲೆ ಶಾಲೆಯ ಚೀಲ, ವನ್ಯಜೀವಿಗಳ ಭಯದಿಂದ ಜೀವ ಕೈಯಲ್ಲಿ ಹಿಡಿದು ನಿತ್ಯವೂ 8 ರಿಂದ 10 ಕಿ.ಮೀ. ಕ್ರಮಿಸಬೇಕು! ದಿನವೂ ಒಂದಿಲ್ಲೊಂದು ಸವಾಲುಗಳನ್ನು ಎದುರಿ ಸುತ್ತಲೇ ನಡೆಯುವ ಈ ಮಕ್ಕಳ ಗುಂಪಿಗೆ ಶಿಕ್ಷಣ ಎಂಬುವುದು ಸುಲಭದ ದಾರಿಯಲ್ಲ. ದುರ್ಗಮ ಅರಣ್ಯ ಮಾರ್ಗದ ಹಚ್ಚ ಹಸಿರಿನ ಮಧ್ಯೆ ಕೆಂಪು ಮಣ್ಣಿನ ರಸ್ತೆ ಮೇಲೆ ನಿತ್ಯ ತಪ್ಪದ ಪಯಣ.
ಖಾನಾಪುರ ತಾಲೂಕಿನ ಶಿರೋಲಿ ಸುತ್ತಲಿನ ವಿವಿಧ ಅರಣ್ಯ ಪ್ರದೇ ಶದ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳ ನಿತ್ಯದ ಪರಿ ಪಾಟಲು. ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಖಾನಾಪುರ ತಾಲೂಕಿನ ಬಹುತೇಕ ಹಳ್ಳಿಗಳ ಬದುಕೇ ಕೊಚ್ಚಿ ಹೋಗಿರುವುದು ಒಂದೆಡೆ ಯಾದರೆ, ವಿದ್ಯೆ ಪಡೆದು ಭದ್ರ ಭವಿಷ್ಯ ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ವಿದ್ಯಾರ್ಥಿಗಳ ಬದುಕು ಇನ್ನೊಂದೆಡೆ.
ಶಿರೋಲಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ನಿತ್ಯ ಹೆಮ್ಮಡಗಾ, ಅಬನಾಳಿ, ಪಾಲಿ, ಡೊಂಗರಗಾಂವ, ಶಿರೋಲಿವಾಡೆ, ಮಾಂಗೇನಾಳ, ತೇರೇಗಾಳಿ ಹಳ್ಳಿಗಳ ಸುಮಾರು 140 ವಿದ್ಯಾರ್ಥಿಗಳು ಬರುತ್ತಾರೆ. ಕೆಲ ಹಳ್ಳಿಗಳಿಗೆ ಬೆಳಗ್ಗೆ 8 ಗಂಟೆ ಸುಮಾರಿಗೆ ಬಸ್ ಸೌಕರ್ಯ ಇದ್ದರೆ, ಇನ್ನೂ ಕೆಲ ಹಳ್ಳಿಗಳಿಗೆ ಇಲ್ಲ. ಹೀಗಾಗಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲ್ನಡಿಗೆ ಯಲ್ಲಿಯೇ ಶಾಲೆಗೆ ಬರಬೇಕಾದ ಪರಿಸ್ಥಿತಿ ಇದೆ.
ಗಟ್ಟಿ ಹೃದಯಕ್ಕೂ ನಡುಕ: ಜಾಂಬಗಾಂವದಿಂದ ಅಬನಾಳಿವರೆಗೆ ಮೊದಲಿನಿಂದಲೂ ಸಾರಿಗೆ ಸೌಕರ್ಯ ಇಲ್ಲ. ಶಿರೋಲಿ ಶಾಲೆಗೆ ನಿತ್ಯ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಅಬನಾಳಿವರೆಗೆ ಬರುವುದೆಂದರೆ ಎಂಥವರಿಗೂ ನಡುಕ ಹುಟ್ಟುತ್ತದೆ. ಅಷ್ಟೊಂದು ದಟ್ಟ ಕಾಡು ಈ ಪ್ರದೇಶದಲ್ಲಿದೆ. ಸುಮಾರು 3-4 ಕಿಮೀ ನಡೆದು ಹೋದರೆ ಮಾತ್ರ ಈ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಸಿಗುತ್ತದೆ. ಒಂದು ವೇಳೆ ಬಸ್ ತಪ್ಪಿದರೆ ಸುಮಾರು 9-10 ಕಿಮೀ ನಡೆಯಬೇಕು. ಇಲ್ಲದಿದ್ದರೆ ಶಾಲೆಗೆ ಅವತ್ತು ಚಕ್ಕರ್ ಹಾಕಬೇಕಾದ ಪರಿಸ್ಥಿತಿ. ಜತೆಗೆ ತೇರೆಗಾಳಿ ಯಿಂದ 3 ಕಿಮೀ, ಮಾಂಗೇನಾಳದಿಂದ 5 ಕಿಮೀ ಕಾಲ್ನಡಿಗೆಯಲ್ಲಿಯೇ ದಿನನಿತ್ಯ ಶಿರೋಲಿಗೆ ವಿದ್ಯಾರ್ಥಿಗಳು ಬರುತ್ತಾರೆ.
ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದ ಮಲ ಪ್ರಭಾ ನದಿ ನೀರಿಗೆ ಸೇತುವೆಗಳ ಸಂಪರ್ಕ ಕಡಿತ ಗೊಂಡಿ ದ್ದವು. ಅದರಲ್ಲೂ ಪಾಲಿಯಿಂದ ಬರ ಬೇಕಾ ದರೆ ಸೇತುವೆ ಪಕ್ಕದ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಇಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ತಿಂಗಳು ಕಳೆದರೂ ಇನ್ನೂ ಈ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ. ಹೀಗಾಗಿ ಪಾಲಿ ಯಿಂದ 5 ಕಿಮೀ ಕಾಲ್ನಡಿಗೆಯಲ್ಲಿ ಡೊಂಗರಗಾಂವವರೆಗೆ ಬಂದು ಇಲ್ಲಿ ಬಸ್ ಹಿಡಿಯಬೇಕಾಗಿದೆ.
ನೆರೆ ಬಂದಾಗ ಒಂದು ವಾರ ಶಾಲೆಗಳಿಗೆ ರಜೆ ನೀಡ ಲಾಗಿತ್ತು. ಮತ್ತೆ ಶಾಲೆಗಳು ಪ್ರಾರಂಭವಾದಾಗಲೂ ಮಳೆ ನಿಂತಿರಲಿಲ್ಲ. ಇಂಥದರಲ್ಲಿ ದೂರದ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿದ್ದರು. ನಡೆದು ಬರುತ್ತಿದ್ದಾಗ ಕಾಡು ಪ್ರಾಣಿಗಳ ಹೆಜ್ಜೆಯ ಗುರುತುಗಳು ವಿದ್ಯಾರ್ಥಿಗಳಿಗೆ ಕಂಡು ಬಂದಿವೆ. ಬಸ್ ಸೌಲಭ್ಯ ಹೆಚ್ಚಿಸಿದರೆ ಇನ್ನೂ ಬಹಳಷ್ಟು ಮಕ್ಕಳು ಶಾಲೆಗೆ ಬರುತ್ತಾರೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಎಸ್.ಡಿ. ರೋಕಡೆ.
ಹುಲಿ, ಚಿರತೆ, ಕಾಡುಕೋಣ, ಕರಡಿಗಳ ಭಯ: ಖಾನಾಪುರದ ದಟ್ಟ ಅರಣ್ಯದಲ್ಲಿ ವಿವಿಧ ವನ್ಯಜೀವಿಗಳ ಹಾವಳಿಯಿಂದ ಜನರು ಬಸವಳಿದಿದ್ದಾರೆ. ಹೆಮ್ಮಡಗಾ ಸುತ್ತಲಿನ ಪ್ರದೇಶಗಳಲ್ಲಿ ಸುಮಾರು 40 ದಿನಗಳಿಂದೀಚೆಗೆ ಹುಲಿ, ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಜತೆಗೆ ಜಾಂಬಗಾಂವ, ಅಬನಾಳಿ, ಹೆಮ್ಮಡಗಾ, ಮಾಂಗೇನಾಳ, ಪಾಲಿ ಗ್ರಾಮಗಳ ಸುತ್ತ ಕಾಡುಕೋಣ, ಕರಡಿ ಹಾವಳಿಯೂ ಹೆಚ್ಚಿದೆ. ಇಂಥದರಲ್ಲಿಯೇ ಕಾಲ್ನಡಿಗೆಯಲ್ಲಿ ಜೋರಾದ ಧ್ವನಿ ಮಾಡುತ್ತ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಶಾಲೆಯತ್ತ ಹೆಜ್ಜೆ ಹಾಕುತ್ತಾರೆ.
ಶನಿವಾರ ಕಾಲ್ನಡಿಗೆ ಫಿಕ್ಸ್: ಶಿರೋಲಿ ಸರ್ಕಾರಿ ಪ್ರೌಢಶಾಲೆಗೆ ಬರಲು ಕೆಲವು ಹಳ್ಳಿಗಳಿಂದ ಬೆಳಗ್ಗೆ 8.30ರ ಸುಮಾರಿಗೆ ಬಸ್ ಸೌಕರ್ಯ ಇದೆ. ಶನಿವಾರ ಬೆಳಗಿನ ಶಾಲೆ ಇರುವುದರಿಂದ 7.30ಕ್ಕೆ ಶಾಲೆಗೆ ಹಾಜರಾಗಬೇಕು. ಈ ವೇಳೆಯಲ್ಲಿ ಯಾವುದೇ ಬಸ್‌ಗಳಿಲ್ಲ. ಹೀಗಾಗಿ ಶನಿವಾರ ಎಲ್ಲ ವಿದ್ಯಾರ್ಥಿಗಳು ನಡೆಯುತ್ತಲೇ ಶಾಲೆಗೆ ಬರುತ್ತಾರೆ. ಹೀಗಾಗಿ ಶನಿವಾರದ ಬೆಳಗಿನ ಹೊತ್ತಿಗೂ ಬಸ್ ಸೌಕರ್ಯ ಕಲ್ಪಿಸಬೇಕೆಂಬುದು ವಿದ್ಯಾರ್ಥಿಗಳ ಮನವಿ.
* ಭೈರೋಬಾ ಕಾಂಬಳೆ/ಜಗದೀಶ ಹೊಸಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.