ಸ್ಮಾರಕಗಳು ಇಲ್ಲಿ..ಎಎಸ್‌ಐ ಕಚೇರಿ ಅಲ್ಲಿ
ಸ್ಮಾರಕದೂರಿಗೆ ಇಲ್ಲ ಪುರಾತತ್ವ ವೃತ್ತ ಕಚೇರಿಸ್ಮಾರಕಗಳೇ ಇಲ್ಲದ ಧಾರವಾಡದಲ್ಲಿದೆ ಪುರಾತತ್ವ ಸರ್ವೇಕ್ಷಣಾ ಕಚೇರಿ
Team Udayavani, Sep 25, 2019, 11:58 AM IST
ಜಿ.ಎಸ್. ಕಮತರ
ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯಾದ್ಯಂತ ಇರುವ ಐತಿಹಾಸಿಕ ನೂರಾರು ಸ್ಮಾರಕಗಳ ಸಂರಕ್ಷಣೆಗೆ ಭಾರತಿಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ಲಕ್ಷ್ಯ ಒಂದೆಡೆಯಾದರೆ, ಮಹಾನಗರದ ಅಭಿವೃದ್ಧಿಗೂ ತೊಡಕಾಗಿದೆ.
ವಿಜಯಪುರ ನಗರದಲ್ಲಿ ಪುರಾತತ್ವ ಇಲಾಖೆ ಸ್ಮಾರಕ ಸಂರಕ್ಷಕರ ಕಚೇರಿ ಮಾತ್ರ ಇದ್ದು ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವ ಅಧೀಕ್ಷರ ಕಚೇರಿ ದೂರದ ಧಾರವಾಡದಲ್ಲಿರುವ ಜಿಲ್ಲೆಯ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ಶಕ್ತಿ ತೋರದ ಕಾರಣ ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿ ವಿಷಯದಲ್ಲೂ ಹಿನ್ನಡೆ ಅನುಭವಿಸುವಂತಾಗಿದೆ.
ವಿಜಯಪುರ ಐತಿಹಾಸಿಕ ವಿಷಯಗಳೊಂದಿಗೆ ನಂಟು ಬೆರೆಸಿಕೊಂಡಿರುವ ಹಂಪೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರತ್ಯೇಕವಾಗಿ ಉಪ ವೃತ್ತ ಕಚೇರಿ ತೆರೆದಿದ್ದು, ಕರ್ನಾಟಕ ರಾಜ್ಯದ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯ ಕಚೇರಿ ಕೂಡ ಇದೆ. ಆದರೆ ಕೇಂದ್ರ ಪುರಾತತ್ವ ಲಾಖೆ ವ್ಯಾಪ್ತಿಯಲ್ಲಿ 96 ಹಾಗೂ ರಾಜ್ಯದ ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಯಲ್ಲಿ 45 ಸ್ಮಾರಕಗಳಿದ್ದರೂ ವಿಜಯಪುರ ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧೀನದಲ್ಲಿರುವ ಪ್ರಾಚ್ಯವಸ್ತು ಸಂರಕ್ಷಣೆ ಅಧೀಕ್ಷಕರ ಕಚೇರಿಯೇ ಇಲ್ಲ.
ಹೇಳಿಕೊಳ್ಳುವಂಥ ಪಾರಂಪರಿಕ ಸ್ಮಾರಕಗಳೇ ಇಲ್ಲದ ಧಾರವಾಡ ನಗರದಲ್ಲಿ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ ವೃತ್ತ ಕಚೇರಿ ರೆರೆದಿದೆ. ಐತಿಹಾಸಿಕವಾಗಿ ನೂರಾರು ಸಂರಕ್ಷಿತ ಸ್ಮಾರಕಗಳನ್ನು ಮಡಿಲಲ್ಲಿ ಇರಿಸಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ವೃತ್ತ ಕಚೇರಿಗೆ ಬದಲಾಗಿ ಸಹಾಯಕರ ಕಚೇರಿಯನ್ನು ಮಾತ್ರ ಇರಿಸಿದೆ. ಇದು ಪ್ರವಾಸೋದ್ಯಮದ ವಿಷಯದಲ್ಲಿನ ನಿರ್ಲಕ್ಷ್ಯ ಮಾತ್ರವಲ್ಲ, ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ವಿಷಯದಲ್ಲಿ ಕೂಡ ಅದೇ ದುಸ್ಥಿತಿಯನ್ನು ತೆರೆದಿಡುವ ವ್ಯವಸ್ಥೆಯ ವ್ಯಂಗ್ಯ ಎನ್ನುವುದಕ್ಕೆ ವಿಜಯಪುರ ಜಿಲ್ಲೆ ಮತ್ತೊಂದು ಸಾಕ್ಷಿಯಾಗಿ ನಿಂತಿದೆ.
ದೇಶದಲ್ಲಿರುವ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗಾಗಿ ಭಾರತೀಯ ಪುರಾತತ್ವ ಸವೇಕ್ಷಣಾ ಇಲಾಖೆ ಬ್ರಿಟಿಷರ ಕಾಲದಲ್ಲಿ 1861ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಬ್ರಿಟಿಷ್ ಅಧಿಕಾರಿ ಅಲೆಗ್ಸಾಂಡರ್ ಕನ್ನಿಂಗ್ ಎಂಬವರು ಮೊಟ್ಟ ಮೊದಲು ಈ ಇಲಾಖೆಯ ಮಹಾ ನಿರ್ದೇಶಕರಾಗಿದ್ದರು. ದೇಶದಲ್ಲಿ ಭಾರತೀಯ ಪುರಾತನ ಹಾಗೂ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಗೆ ವೃತ್ತ ಕಚೇರಿಗಳನ್ನು ತೆರೆಯಲಾಯಿತು. ಹೀಗೆ ತೆರೆದ ವೃತ್ತ ಕಚೇರಿಗಳಲ್ಲಿ ಬೆಂಗಳೂರಿನಲ್ಲೂ ಕಚೇರಿ ತೆರೆಯಲು ಅವಕಾಶ ಸಿಕ್ಕಿದ್ದು, ದೇಶದಲ್ಲಿ ಇದೀಗ 29 ವೃತ್ತಗಳಿದ್ದು, ದೆಹಲಿ, ಲೇಹ ಹಾಗೂ ಹಂಪಿ ಸೇರಿದಂತೆ ಮೂರು ಮಿನಿ ಸರ್ಕಲ್ ಕಚೇರಿಗಳನ್ನು ಹೊಂದಿದೆ.
ರಾಜ್ಯದ ಎಲ್ಲ ಜಿಲ್ಲೆಗಳ ಕೇಂದ್ರ ಸರ್ಕಾರಿ ವ್ಯಾಪ್ತಿಯ ಎಲ್ಲ ಸ್ಮಾರಕ ಸಂರಕ್ಷಣೆಗೆ ಭಾರತೀಯ ಪುರಾತತ್ವ ಇಲಾಖೆಯ ವೃತ್ತ ಕಚೇರಿ ಬೆಂಗಳೂರಿನಲ್ಲಿ ಮಾತ್ರ ಇತ್ತು. ಎಚ್.ಡಿ. ದೇವೇಗೌಡ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ, ಕನ್ನಡಿಗ ಎಸ್. ಆರ್. ಬೊಮ್ಮಾಯಿ ಅವರು ಮಾನವ ಸಂಪನ್ಮೂಲ ಇಲಾಖೆ ಸಚಿವರಾಗಿದ್ದರು. ರಾಜ್ಯದ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ದುಸ್ಥಿತಿ ಅರಿತ ಅವರು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಪಾರಂಪರಿಕ ಸ್ಮಾರಕಗಳ ರಕ್ಷಣೆಗೆ ಪ್ರತ್ಯೇಕ ವೃತ್ತ ಸ್ಥಾಪಿಸುವ ಉದ್ದೇಶದೊಂದಿಗೆ ಚಿಂತನೆ ನಡೆಸಿದರು.
ಅಂತಿಮವಾಗಿ ಸದರಿ ಕಚೇರಿಯನ್ನು ತಮ್ಮ ತವರು ಜಿಲ್ಲೆಯ ಸಹಜ ಪ್ರೇಮ, ವ್ಯಾಮೋಹದಿಂದಾಗಿ ಅವಿಭಜಿತ ಧಾರವಾಡದಲ್ಲಿ ಕೇಂದ್ರ ಕಚೇರಿ ಮಾಡಿಕೊಂಡರು. ಅಚ್ಚರಿಯ ಸಂಗತಿ ಎಂದರೆ ಅಖಂಡ ಧಾರವಾಡ ಜಿಲ್ಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವೃತ್ತ ಕಚೇರಿ ತೆರೆಯುವುದಕ್ಕೆ ಮುಖ್ಯವಾಗಿ ಬೇಕಿದ್ದ ನಿರೀಕ್ಷಿತ ಸಂಖ್ಯೆ ಸ್ಮಾರಕಗಳೇ ಇರಲಿಲ್ಲ. ಆದರೂ ಧಾರವಾಡದಲ್ಲಿ ಎಎಸ್‌ಐ ವೃತ್ತ ಕಚೇರಿ ಹೊಂದಿದ್ದು, ಈ ಕಚೇರಿ ವ್ಯಾಪ್ತಿಗೆ ಇದೀಗ ಧಾರವಾಡ ಜಿಲ್ಲೆಯಿಂದ ಪ್ರತ್ಯೇಕಗೊಂಡಿರುವ ಹಾವೇರಿ, ಗದಗ, ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕಗೊಂಡಿರುವ ಬಾಗಲಕೋಟೆ, ವಿಭಜಿತ ವಿಜಯಪುರ, ಕಲಬುರಗಿ, ಬೀದರ ಜಿಲ್ಲೆಗಳು ಸೇರಿವೆ.
300ಕ್ಕೂ ಹೆಚ್ಚು ಸ್ಮಾರಕ: ಗಮನೀಯ ಆಂಶ ಎಂದರೆ
ಧಾರವಾಡ ವೃತ್ತ ಕಚೇರಿ ವ್ಯಾಪ್ತಿಯಲ್ಲೇ ವಿಜಯಪುರ ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಐತಿಹಾಸಿಕ ಸ್ಮಾಕರಗಳಿದ್ದು, ಈಗಾಗಲೇ ಸಮೀಕ್ಷೆಗೊಂಡು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀನದಲ್ಲೇ ಸಂರಕ್ಷಿತ ನಗರದಲ್ಲಿನ 88 ಸ್ಮಾರಕ ಸೇರಿ ಜಿಲ್ಲೆಯಾದ್ಯಂತ 96 ಸ್ಮಾರಕಗಳಿವೆ. ಜಿಲ್ಲೆಯಲ್ಲಿ ಸಮೀಕ್ಷೆ ಈ ವೃತ್ತದ ವ್ಯಾಪ್ತಿಯಲ್ಲಿರುವ ವಿಜಯಪುರ ಜಿಲ್ಲೆಯಲ್ಲಿ ಕಂಡು ಬರುವಷ್ಟು ಪಾರಂಪರಿಕ ಸ್ಮಾಕರಗಳು ದೇಶದಲ್ಲೇ ಅತ್ಯಧಿಕ ಎಂಬ ಹಿರಿಮೆ ಹೊಂದಿದೆ. ಹೀಗಾಗಿ ವಿಜಯಪುರ ಮಹಾನಗರಕ್ಕೆ ಪಾರಂಪರಿಕ ನಗರ ಎಂದು ಗುರುತಿಸಿದ್ದು, ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಅಧಿಕೃತ ಘೋಷಣೆಗೆ ನಿರ್ಧರಿಸಿದೆ.
ಮತ್ತೊಂದೆಡೆ ಆದಿಲ್‌ಶಾಹಿ ಅರಸರ ಬೇಸಿಗೆ ಅರಮನೆ ಇರುವ ಕುಮಟಗಿ ಹಳ್ಳಿಗೆ ಪರಂಪರೆ ಗ್ರಾಮದ ಮಾನ್ಯತೆ ನೀಡುವ ಕುರಿತು ಸಿದ್ಧತೆ ನಡೆದಿದೆ. ದಶಕದ ಬೇಡಿಕೆ: ವಿಜಯಪುರ ಜಿಲ್ಲೆಯಲ್ಲಿ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವೃತ್ತ ಕಚೇರಿ ಇಲ್ಲದೇ ಕೇವಲ ಸಂರಕ್ಷಣೆಯ ಸಹಾಯಕರ ಸಾಂಕೇತಿಕ ಕಚೇರಿಯಿಂದಾಗಿ ಜಿಲ್ಲೆಯ ಸ್ಮಾರಕಗಳು ಸಂರಕ್ಷಣೆ ಇಲ್ಲದೇ ಬಳಲುವಂತಾಗಿವೆ. ವಿಜಯಪುರ ಜಿಲ್ಲೆಗೆ ಧಾರವಾಡದ ವೃತ್ತ ಕಚೇರಿಯನ್ನು ಸ್ಥಳಾಂತರಿಸುವ, ಇಲ್ಲವೇ ಪ್ರತ್ಯೇಕ ವೃತ್ತ ರಚಿಸುವ ಕುರಿತು ಹಲವು ದಶಕಗಳಿಂದ ಬೇಡಿಕೆ ಇದ್ದರೂ, ಆರೇಳು ವರ್ಷಗಳ ಹಿಂದೆ ಇದಕ್ಕೆ ಗಟ್ಟಿ ಧ್ವನಿ ಕೇಳಲಾರಂಭಿಸಿದೆ.
ಎಎಸ್‌ಐ ನವದೆಹಲಿ ಕಚೇರಿಯಿಂದ ಬಂದಿದ್ದ ಜಮಾಲ್ ಹುಸೇನ್ ಎಂಬ ಸಹಾಯಕ ಮಹಾ ನಿರ್ದೇಶಕರಿಗೆ ಎಂ.ಬಿ. ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಎಎಸ್‌ಐ ವೃತ್ತ ಕಚೇರಿ ಆರಂಭಕ್ಕೆ ಮನವಿ ಸಲ್ಲಿಸಿದ್ದರು. ಜಿಲ್ಲೆಯಲ್ಲಿ ಪಾರಂಪರಿಕ ನೂರಾರು ಸ್ಮಾರಕಗಳಿದ್ದು, ಇಷ್ಟೊಂದು ಸ್ಮಾರಕಗಳ ಸಂರಕ್ಷಣೆಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವ ಪ್ರತ್ಯೇಕ ಅಧೀಕ್ಷಕ ಹುದ್ದೆಯ ಕಚೇರಿ ಬೇಕಿದೆ. ಒಂದೊಮ್ಮೆ ಪ್ರತ್ಯೇಕ ವೃತ್ತ ಕಚೇರಿ ತೆರೆಯಲು ಆಸಾಧ್ಯ ಎಂದಾದರೆ ದೆಹಲಿ, ಲೇಹ ಹಾಗೂ ಹಂಪಿಗಳಲ್ಲಿ ಇರುವಂತೆ ಉಪ ವೃತ್ತ ಕಚೇರಿಯನ್ನು ನೀಡಿ, ಅಧೀಕ್ಷರ ಹುದ್ದೆಗೆ ಬದಲಾಗಿ ಉಪ ಆಧೀಕ್ಷಕರ ಹುದ್ದೆ ಸೃಷ್ಟಿಸಿ, ಸ್ವತಂತ್ರ ಅಧಿಕಾರ ನೀಡಿ ಎಂಬ ಬೇಡಿಕೆಯ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಆದರೆ ಇಂಥ ಯಾವುದೇ ಬೇಡಿಕೆಗೆ ಭಾರತೀಯ ಪುರಾತತ್ವ ಇಲಾಖೆ ಮಹಾ ನಿರ್ದೇಶಕರು ಸೊಪ್ಪು ಹಾಕಲೇ ಇಲ್ಲ. ಇಷ್ಟಕ್ಕೂ ಕೇಂದ್ರ ಸರ್ಕಾರದ ಸಂಸ್ಕೃತಿ-ಪ್ರವಾಸೋದ್ಯಮ ಇಲಾಖೆ ಸಚಿವರು, ಸಚಿವಾಲಯದ ಅಧಿಕಾರಿಗಳನ್ನು ಈ ವಿಷಯದಲ್ಲಿ ಮನವರಿಕೆ ಮಾಡಿಕೊಡುವ ಕೆಲಸ ಆಗಿಲ್ಲ. ಕೇಂದ್ರ ಸರ್ಕಾರದಿಂದ ಆಗಬೇಕಿರುವ ಈ ಕೆಲಸದ ಕುರಿತು ಒತ್ತಡ ಹೇರುವ ಕನಿಷ್ಠ ಕೆಲಸವೂ ಜಿಲ್ಲೆಯನ್ನು ಮೂರು ಬಾರಿ ಪ್ರತಿನಿಧಿಸಿ, ಮೋದಿ ಅವರ ಮೊದಲ ಅವಧಿ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ ಜಿಗಜಿಣಗಿ ಅವರಿಂದ ಆಗಿಲ್ಲ.
ಮನವರಿಕೆ ಅಗತ್ಯ: ಕೇಂದ್ರ ಸರ್ಕಾರ ಮಾಡಬೇಕಿರುವ ಈ ಕೆಲಸಕ್ಕೆ ಸಂಸದರ ಒತ್ತಾಸೆಯ ಅಗತ್ಯವಿದೆ. ಆದರೆ ಸಂಸದ ರಮೇಶ ಜಿಗಜಿಣಗಿ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದೇನೆ, ಸಚಿವರಿಗೆ ಪತ್ರ ಕಳಿಸಿದ್ದೇನೆ, ಕಾರ್ಯದರ್ಶಿಗೆ ಹೇಳಿದ್ದೇನೆ ಎಂಬ ಹಂತದಿಂದ ಮುಂದೆ ಹೆಜ್ಜೆ ಇರಿಸಿಲ್ಲ. ಕೇಂದ್ರ ಸರ್ಕಾರದ ಪುರತತ್ವ ಇಲಾಖೆಯ ವ್ಯಾಪ್ತಿ ಹೊಂದಿರುವ ಕೇಂದ್ರ ಸಂಸ್ಕೃತಿ ಸಚಿವರಿಗೆ ಜಿಲ್ಲಾಡಳಿತದ ಮೂಲಕ ದಾಖಲೆಗಳನ್ನು ಸಂಗ್ರಹಿಸಿ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ವಿಜಯಪುರ ಜಿಲ್ಲೆಯಲ್ಲಿ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವೃತ್ತ-ಉಪ ವೃತ್ತ ಕಚೇರಿ ಸ್ಥಾಪನೆಯ ಅಗತ್ಯತೆ ಹಾಗೂ ಮಹತ್ವದ ಕುರಿತು ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕಿದೆ.
ವಿಜಯಪುರ ಜಿಲ್ಲೆಯಲ್ಲಿ ಸಹಾಯಕ ಸ್ಮಾರಕ ಸಂರಕ್ಷಕರ ಹುದ್ದೆಯ ಕಚೇರಿ ಇರುವ ಕಾರಣ ಇವರಿಂದ ಸ್ಮಾರಕಗಳ ಸಂರಕ್ಷಣೆ ಹಾಗೂ ಹಾನಿಯಾದ ಸಂದರ್ಭದಲ್ಲಿ ಯಾವುದೇ ನಿರ್ಧಾರಕ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ. ಅಲ್ಲದೇ ನಗರದಲ್ಲಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಗಳು ಅಭಿವೃದ್ಧಿ ಕೈಗೊಳ್ಳುವ ಯೋಜನೆಗೆ ಪುರಾತತ್ವ ಇಲಾಖೆಯ ಸ್ಥಾನಿಕ ಅಧಿಕಾರಿಗಳು ತಕರಾರು ಪತ್ರ ಬರೆಯುವುದನ್ನು ಹೊರತುಪಡಿಸಿ ಬೇರೆ ಕೆಲಸ ಮಾಡುತ್ತಿಲ್ಲ.
ಎಎಸ್‌ಐ ವಿಜಯಪುರ ಕಚೇರಿ ಸಿಬ್ಬಂದಿ ವರ್ತನೆಯ ದ್ವಂದ್ವ ಹೇಗಿದೆ ಎಂದರೆ ಐತಿಹಾಸಿಕ ಗಗನಮಹಲ್ ಬಳಿಯ ಅರೆಕಿಲ್ಲಾ ಸ್ವತ್ಛತೆ ಹಾಗೂ ನಿರ್ವಹಣೆಗಾಗಿ ಕಂದಕದಲ್ಲಿ ದೋಣಿ ವಿಹಾರ ಆರಂಭಕ್ಕೆ ತಕರಾರು ತೆಗೆಯುತ್ತಾರೆ. ಆದರೆ ತಮ್ಮ ಕಚೇರಿ ಇರುವ ಹಾಗೂ ನಿತ್ಯ ದೇಶ-ವಿದೇಶಿ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಐತಿಹಾಸಿಕ ಗೋಲಗುಮ್ಮಟ ಪ್ರವೇಶ ದ್ವಾರದ ಮುಂಭಾಗದಲ್ಲಿ ಮುಖ್ಯ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕ ಸುಲಭ ಶೌಚಾಲಯ ನಿರ್ಮಾಣ ಆಗಿದ್ದರೂ ಕಣ್ಮುಚ್ಚಿ ಕುಳಿತಿರುವುದು ಅಚ್ಚರಿ ಮೂಡಿಸುತ್ತದೆ.
ಕಡತ ರನಾನೆಗಷ್ಟೇ ಸೀಮಿತ: ವಿಯಪುರದಲ್ಲಿರುವ ಸಂರಕ್ಷಕ ಹುದ್ದೆ ಸಿಬ್ಬಂದಿ ದರ್ಜೆಯದ್ದಾಗಿರುವ ಕಾರಣ ಯಾವುದೇ ನಿರ್ಧಾರ ಕೈಗೊಳ್ಳುವುದು ಇಲ್ಲಿನ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಸ್ಥಳೀಯರು ನೀಡುವ ಯಾವುದೇ ದೂರು, ಬೇಡಿಕೆಗೆ ಇಲ್ಲಿಂದ ಕೇವಲ ಧಾರವಾಡ ಕಚೇರಿಗೆ ಕಡತ ರವಾನಿಸುವ ಹೊಣೆಯಷ್ಟೇ ಇದೆ. ಅಲ್ಲದೇ ನಗರದಲ್ಲಿ ಎಎಸ್‌ಐ ಮೂರು ಸಂರಕ್ಷಕ ಹುದ್ದೆ ತೆರೆದಿದ್ದು, ಈ ಅಧಿಕಾರಿಗಳಿಗೆ ಧಾರವಾಡದಿಂದ ಬೀದರವರೆಗಿನ ವಿವಿಧ ಸಂರಕ್ಷಕರ ಕಚೇರಿಗಳ ಪ್ರಭಾರಿ ನೀಡಿದ್ದಾರೆ.
ಹೀಗಾಗಿ ವಿಜಯಪುರ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ವಾಸ್ತವಿಕ ಸಂರಕ್ಷಣೆ ಇಲ್ಲದೇ ಬಳಲುವಂತಾಗಿದೆ.
ವಿಜಯಪುರ ನಗರದಲ್ಲಿ ಎಎಸ್‌ಐ ಕಚೇರಿಯ ಮೂವರು ಸಹಾಯಕ ಸಂರಕ್ಷಕರ ಹುದ್ದೆಗಳಿದ್ದು, ಯಾರೊಬ್ಬರಿಗೂ ತಮ್ಮ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿರುವ ಸ್ಮಾರಕಗಳೆಷ್ಟು, ಎಲ್ಲೆಲ್ಲಿವೆ ಎಂಬುದೇ ತಿಳಿದಿಲ್ಲ. ಅಷ್ಟರ ಮಟ್ಟಿಗೆ ಜಿಲ್ಲೆಯ ಸ್ಮಾರಕಗಳು ಹಾಗೂ ಸ್ಮಾರಕಗಳ ಸಂರಕ್ಷಕರ ಮಧ್ಯೆ ಕಂದಕವಿದೆ. ಮತ್ತೂಂದೆಡೆ ಸ್ಥಳೀಯ ಸಿಬ್ಬಂದಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲದ ಕಾರಣ ಜಿಲ್ಲೆಯ ಅಭಿವೃದ್ಧಿಗೆ ಬಂದಿರುವ ಕೋಟಿ ಕೋಟಿ ಹಣ ಬಳಕೆಯಾಗದೇ ಸರ್ಕಾರಕ್ಕೆ ಮರಳಿದ ಉದಾಹರಣೆಗಳೂ ಇವೆ. ಜಿಲ್ಲೆಯಲ್ಲಿ ಎಎಸ್‌ಐ ಕಚೇರಿ ಆರಂಭಗೊಂಡರೆ ನಗರದ ಅಭಿವೃದ್ಧಿ ವಿಷಯದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರಿ ಆಗಲಿದೆ.
ಹಲವು ಪ್ರಯೋಜನ: ವಿಜಯಪುರ ಜಿಲ್ಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀಕ್ಷಕ ಉಪ ವಲಯ ಕಚೇರಿ ಸ್ಥಾಪಿಸಿದಲ್ಲಿ ವಿಜಯಪುರ ಮಹಾನಗರದಲ್ಲಿನ ಅಭಿವೃದ್ಧಿಗೆ ತೊಡಕಾಗಿರುವ ಯೋಜನೆಗಳಿಗೆ ಸ್ಥಳೀಯವಾಗಿ ಅಧೀಕ್ಷಕ ದಜೆರ್ಯ ಅಧಿಕಾರಿ ಸ್ಥಳೀಯವಾಗಿಯೇ ನಿರ್ಧಾರ ಕೈಗೊಳ್ಳುತ್ತಾರೆ. ತಮ್ಮ ವ್ಯಾಪ್ತಿಗೆ ಮೀರಿದ್ದರೆ ದೆಹಲಿಯಲ್ಲಿರುವ ಕೇಂದ್ರ ಕಚೇರಿ ಜೊತೆ ನೇರ ಸಂಪರ್ಕ ಸಾಧಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಓಗಾಗಲೇ ಒತ್ತುವರಿಯಾಗಿರುವ ಹಲವು ಸ್ಮಾರಕಗಳ ತೆರವು ಹಾಗೂ ಒತ್ತುವರಿ ಆಗುತ್ತಿರುವ ಸ್ಮಾರಕಗಳ ಸಂರಕ್ಷಣೆ ಸಾಧ್ಯವಾಗುತ್ತದೆ.
ಹಂಪಿ ಮಾದರಿಯಲ್ಲೇ ವಿಜಯಪುರಕ್ಕೂ ಪ್ರತ್ಯೇಕವಾಗಿ ಕಿರುವೃತ್ತ ಕಚೇರಿ ತೆರೆದು ಸ್ವತಂತ್ರ ಅಧಿಕಾರದ ಅಧೀಕ್ಷಕ ಹುದ್ದೆ ನೀಡಿದಲ್ಲಿ ಜಿಲ್ಲೆಯ ಅಭಿವೃದ್ಧಿ, ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಹಕಾರಿ ಆಗಲಿದೆ ಎಂಬ ಕೂಗು ಎದ್ದಿದೆ. ಕರ್ನಾಟಕ ಸರ್ಕಾರದ ಆಧೀನದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಕೂಡ ವಿಜಯಪುರ ಜಿಲ್ಲೆಯಲ್ಲಿ ಕಚೇರಿ ತೆರೆದರೆ ಹಂಪೆ ಹಾಗೂ ವಿಜಯಪುರ ಜಿಲ್ಲೆಯ ಇತಿಹಾಸದ ಮೇಲೆ ಬೂದಿ ಮುಚ್ಚಿರುವ ಹಲವು ಐತಿಹಾಸಿಕ ಸಂಗತಿಗಳ ಮೇಲೆ ಸಂಶೋಧನೆ ನಡೆಸಿ, ಬೆಳಕು ಚಲ್ಲುವ ಕೆಲಸವೂ ಆಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.