ಅಭ್ಯರ್ಥಿಗಳ ಆಯ್ಕೆಗೆ ಎಚ್ಚರಿಕೆ ಹೆಜ್ಜೆ
Team Udayavani, Sep 26, 2019, 3:10 AM IST
15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಲ್ಲಿ ಅಭ್ಯರ್ಥಿ ಆಯ್ಕೆಯ ಸವಾಲು ಎದುರಾಗಿದೆ. ಬಿಜೆಪಿಯ ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಟಿಕೆಟ್‌ಗೆ ಪಟ್ಟು ಹಿಡಿದಿದ್ದರೆ, ಕೆಲವರು ಪಕ್ಷೇತರರಾಗಿ ಸ್ಪರ್ಧೆಗೆ ಚಿಂತಿಸುತ್ತಿರುವುದು ಪಕ್ಷದ ನಾಯಕರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಇನ್ನು ಉಪಕದನವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಲೆಕ್ಕಾಚಾರದ ಹೆಜ್ಜೆ ಇಡುತ್ತಿದೆ. ಪ್ರತೀ ಕ್ಷೇತ್ರದ ಆಕಾಂಕ್ಷಿಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಜೆಡಿಎಸ್‌ನ ಸಂಸದೀಯ ಮಂಡಳಿ ಸಭೆ ನಡೆಯಲಿದೆ.
ಟಿಕೆಟ್‌ಗಾಗಿ ನಿಲ್ಲದ ಅಪಸ್ವರ
ಬೆಂಗಳೂರು: ಬಿಜೆಪಿಯ ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಟಿಕೆಟ್‌ಗೆ ಪಟ್ಟು ಹಿಡಿದು ಕೆಲವರು ಪಕ್ಷೇತರರಾಗಿ ಸ್ಪರ್ಧೆಗೆ ಚಿಂತಿಸುತ್ತಿರುವುದು ಪಕ್ಷದ ನಾಯಕರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಹಿರೇಕೆರೂರು ಕ್ಷೇತ್ರದ ಉಪಚುನಾವಣೆ ಸಂಬಂಧ ಸಿಎಂ ಯಡಿಯೂರಪ್ಪ ಅವರು ಅನರ್ಹತೆಗೊಂಡ ಶಾಸಕ ಬಿ.ಸಿ.ಪಾಟೀಲ್ ಹಾಗೂ ಬಿಜೆಪಿಯ ಮಾಜಿ ಶಾಸಕ ಯು.ಬಿ. ಬಣಕಾರ್ ಅವರನ್ನು ಮಂಗಳವಾರ ರಾತ್ರಿ ತಮ್ಮ ನಿವಾಸಕ್ಕೆ ಕರೆಸಿ ನಡೆಸಿದ ಸಂಧಾನ ಪ್ರಯತ್ನ ವಿಫಲವಾಗಿದೆ ಎಂದು ಹೇಳಲಾಗಿದೆ. “ಬಿ.ಸಿ.ಪಾಟೀಲ್‌ಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ.
ಹಾಗಾಗಿ ತಮಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದಾಗಿ’ ಯಡಿಯೂರಪ್ಪ ಅವರು ಯು.ಬಿ.ಬಣಕಾರ್‌ಗೆ ತಿಳಿಸಿ ಸಮಾಧಾನಪಡಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ. ಇನ್ನೊಂದೆಡೆ ಹೊಸಕೋಟೆಯಿಂದ ಬಿಜೆಪಿ ಟಿಕೆಟ್ ಪಡೆಯಲು ತೀವ್ರ ಕಸರತ್ತು ನಡೆಸಿರುವ ಶರತ್ ಬಚ್ಚೇಗೌಡ ಗುರುವಾರ ಹಾಗೂ ಶುಕ್ರವಾರ ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಗುರುವಾರ ನಂದಗುಡಿ, ಸೂಲಿಬೆಲೆ ಹೋಬಳಿ ಜನರ ಅಭಿಪ್ರಾಯ ಸಂಗ್ರಹಿಸಲಾಗುವುದು. ಬಳಿಕ ಸ್ಥಳೀಯ ಮುಖಂಡರು, ನಾಯಕರೆಲ್ಲಾ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.
ಶರತ್‌ಗೆ ಟಿಕೆಟ್ ನೀಡಲಿ: ನನ್ನ ಚುನಾವಣೆಯಲ್ಲಿ ಪುತ್ರ ಶರತ್ ಕೆಲಸ ಮಾಡಿದ್ದಾನೆ. ಹೊಸಕೋಟೆಯಲ್ಲೂ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾನೆ. ಹಾಗಾಗಿ ಹೊಸಕೋಟೆ ಉಪಚುನಾವಣೆಯಲ್ಲಿ ಪಕ್ಷದಿಂದ ಶರತ್‌ಗೆ ಟಿಕೆಟ್ ಸಿಗಬೇಕು. ಎಂ.ಟಿ.ಬಿ. ನಾಗರಾಜ್‌ಗೆ ಏನಾದರೂ ಸ್ಥಾನಮಾನ ನೀಡಲಿ ಇಲ್ಲವೇ ವಿಧಾನ ಪರಿಷತ್ ಸದಸ್ಯ, ಸಚಿವರನ್ನಾಗಿ ಬೇಕಾದರೆ ಮಾಡಲಿ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕೆ.ಆರ್.ಪುರ ಕ್ಷೇತ್ರದಿಂದ ಅನರ್ಹ ಶಾಸಕ ಬೈರತಿ ಬಸವರಾಜು ಅವರಿಗೆ ಬಿಜೆಪಿ ಟಿಕೆಟ್ ನೀಡುವುದಕ್ಕೆ ಮಾಜಿ ಶಾಸಕ ಎನ್.ಎಸ್.ನಂದೀಶ್ ರೆಡ್ಡಿ ಹಾಗೂ ಬೆಂಬಲಿಗರು ವಿರೋಧ ವ್ಯಕ್ತಪ ಡಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿ ನಿರಂತರವಾಗಿ ಹೋರಾಟ ನಡೆಸುತ್ತಾ ಬರಲಾಗಿದೆ. ಹಾಗಾಗಿ ನಂದೀಶ್‌ರೆಡ್ಡಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದು, ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
ಕಾಗವಾಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ರಾಜು ಕಾಗೆ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ. ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಆದೇಶವನ್ನು ಬಿಜೆಪಿ ನಾಯಕರು ಹಾಗೂ ಟಿಕೆಟ್ ಆಕಾಂಕ್ಷಿಗಳು ಎದುರು ನೋಡುತ್ತಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಆಧರಿಸಿ ಪಕ್ಷದ ನಾಯಕರು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ. ಹಾಗಾಗಿ ಟಿಕೆಟ್ ಆಕಾಂಕ್ಷಿಗಳು, ಅವರ ಬೆಂಬಲಿಗರ ಆಕ್ರೋಶ ಬೂದಿ ಮುಚ್ಚಿದ ಕೆಂಡದಂತಿದೆ.
ಬಂಡಾಯ ತಡೆಗೆ ಪ್ರತ್ಯೇಕ ಅಭಿಪ್ರಾಯ ಸಂಗ್ರಹ
ಬೆಂಗಳೂರು: ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ ಲೆಕ್ಕಾಚಾರದ ಹೆಜ್ಜೆ ಇಡುತ್ತಿದೆ. ಪ್ರತಿಯೊಂದು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಪಕ್ಷದಲ್ಲಿ ಬಂಡಾಯ ಏಳುವುದನ್ನು ತಡೆಗಟ್ಟಲು ಬುಧವಾರ ಪ್ರತಿಯೊಂದು ಕ್ಷೇತ್ರದ ಆಕಾಂಕ್ಷಿಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚುನಾವಣೆ ಘೋಷಣೆಯಾಗಿರುವ 15 ಕ್ಷೇತ್ರಗಳಲ್ಲಿ ಬೆಳಗಾವಿ ಜಿಲ್ಲೆಯ 3 ಕ್ಷೇತ್ರಗಳನ್ನು ಹೊರತುಪಡಿಸಿ ಪ್ರಬಲ ಪೈಪೋಟಿ ಇರುವ ಉಳಿದ ಕ್ಷೇತ್ರಗಳಲ್ಲಿ ಪ್ರತೀ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳನ್ನು ಒಟ್ಟಿಗೆ ಕರೆದು ಕ್ಷೇತ್ರದಲ್ಲಿನ ವಾತಾವರಣ, ಜಾತಿ ಲೆಕ್ಕಾಚಾರ, ಅನರ್ಹ ಶಾಸಕರು ಅಥವಾ ಅವರ ಸಂಬಂಧಿಕರು ಸ್ಪರ್ಧಿಸಿದರೆ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರ ನಡೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಅಲ್ಲದೇ ಪಕ್ಷ ಯಾರಿಗೇ ಟಿಕೆಟ್ ನೀಡಿದರೂ, ಬಂಡಾಯ ಸಾರದೇ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಈಗಾಗಲೇ ಬೆಳಗಾವಿಯ 3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮ ಗೊಂಡಿದೆ. ಹೊಸಪೇಟೆ ಕ್ಷೇತ್ರಕ್ಕೆ ಮಾಜಿ ಸಚಿವ ಸಂತೋಷ್ ಲಾಡ್ ಹೆಸರು ಕೇಳಿ ಬಂದಿದ್ದರೂ, ಅವರು ಸ್ಪರ್ಧೆಗೆ ನಿರಾಕರಿಸಿ ರುವುದರಿಂದ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿಗೆ ಟಿಕೆಟ್ ಸಿಗುವುದು ಖಚಿತವಾದಂತಿದೆ.
ಯಲ್ಲಾಪುರ ಕ್ಷೇತ್ರಕ್ಕೆ ಭೀಮಣ್ಣ ನಾಯ್ಕ, ರಾಣೆ ಬೆನ್ನೂರಿಗೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅಥವಾ ಅವರ ಪುತ್ರ ಪ್ರಕಾಶ್ ಕೋಳಿವಾಡ್, ಕೆ.ಆರ್. ಪೇಟೆಯಲ್ಲಿ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಹೆಸರು ಮುಂಚೂ ಣಿಯಲ್ಲಿದೆ. ಕೆ.ಆರ್.ಪುರಂ ಕ್ಷೇತ್ರದಲ್ಲಿ ವಿಪ ಸದಸ್ಯ ಎಂ. ನಾರಾಯಣಸ್ವಾಮಿ, ಡಿ.ಕೆ. ಮೋಹನ್, ಜಗದೀಶ್ ರೆಡ್ಡಿ, ಸಿ.ಎಂ. ಧನಂಜಯ ಹೆಸರು ಕೇಳಿ ಬಂದಿವೆ. ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ ದಲ್ಲಿ ಮಂಜುನಾಥ ಗೌಡ, ಶಿವರಾಜ್, ಭಾರತಿ ಶಂಕರ್, ಡಾ. ಗಿರೀಶ್ ನಾಶಿ, ಮಂಜುಳಾ ಪುರುಷೋತ್ತಮ್ ಹೆಸರು ಕೇಳಿ ಬಂದಿವೆ.
ಹೊಸಕೋಟೆ ಕ್ಷೇತ್ರದಲ್ಲಿ ಪದ್ಮಾ ವತಿ ಸುರೇಶ್, ಮುನಿಶಾಮಣ್ಣ, ನಾರಾಯಣ ಗೌಡ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಾಗರಾಜು ಜಿ.ಎಚ್. ಎಲವಳ್ಳಿ ರಮೇಶ್, ಜಗದೀಶ್ ರೆಡ್ಡಿ, ನಾರಾಯಣಸ್ವಾಮಿ, ಅಂಜಿನಪ್ಪ, ಹಿರೆಕೆ ರೂರು ಕ್ಷೇತ್ರಕ್ಕೆ ಬಿ.ಎಚ್. ಬನ್ನಿಕೋಡ್, ಎಸ್.ಕೆ. ಕರಿಯಣ್ಣವರ್, ಬಿ.ಎನ್. ಬಣಕಾರ್, ಪಿ.ಡಿ. ಬಸವಲಿಂಗಯ್ಯ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಯಶವಂತಪುರ ಕ್ಷೇತ್ರಕ್ಕೆ ಎಂ. ರಾಜಕುಮಾರ್, ಸದಾನಂದ ಹಾಗೂ ಅಮೃತ್ ಗೌಡ ನಡುವೆ ಪೈಪೋಟಿ ಇದೆ. ಈ ಕ್ಷೇತ್ರಗಳಲ್ಲಿ 2-3 ಪ್ರಬಲ ಆಕಾಂಕ್ಷಿಗಳಿರು ವುದರಿಂದ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಾಯಕರು ತೀರ್ಮಾನಿಸಿದ್ದಾರೆಂದು ತಿಳಿದು ಬಂದಿದೆ.
ಆಕಾಂಕ್ಷಿಗಳ ವಿರೋಧ: ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್‌ಗೆ ಶಿವಾಜಿನಗರ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಟಿಕೆಟ್ ಆಕಾಂ ಕ್ಷಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಎಐಸಿಸಿ ಕಾರ್ಯ ದರ್ಶಿ ಸಲೀಂ ಅಹಮದ್, ಟಿಕೆಟ್ ಆಕಾಂಕ್ಷಿಗ ಳಾಗಿರುವ ಎಸ್.ಎ.ಹುಸೇನ್, ರೆಹಮಾನ್ ಷರೀಫ್ ಹಾಗೂ ಬಿ.ಆರ್. ನಾಯ್ಡು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ರಿಜ್ವಾನ್‌ಗೆ 2 ಬಾರಿ ಲೋಕಸಭಾ ಟಿಕೆಟ್ ನೀಡಲಾಗಿದೆ. ಅಲ್ಲದೇ ವಿ± ಸದಸ್ಯರನ್ನಾಗಿ ಮಾಡಲಾಗಿದ್ದು, ಈಗ ಮತ್ತೆ ಅವರಿಗೆ ಟಿಕೆಟ್ ನೀಡಿದರೆ ಬೇರೆಯವರಿಗೆ ಅನ್ಯಾಯ ವಾಗಲಿದೆ ಎಂದು ವಾದಿಸಿದ್ದಾರೆಂದು ತಿಳಿದು ಬಂದಿದೆ.
ಇಂದು ಕೈ ಅಭ್ಯರ್ಥಿಗಳ ಆಯ್ಕೆ ಸಭೆ
ಬೆಂಗಳೂರು: ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡಲು ಗುರುವಾರ ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಪಕ್ಷದ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಭೆಯಲ್ಲಿ ಚರ್ಚಿಸಿ ಅಂತಿಮ ಪಟ್ಟಿ ಸಿದ್ಧಪಡಿಸುವ ಸಾಧ್ಯತೆ ಇದೆ.
ಕೆ.ಸಿ.ವೇಣುಗೋಪಾಲ್ ಸಭೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬುಧವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ಚುನಾವಣಾ ಕಾರ್ಯತಂತ್ರ ಕುರಿತು ಅನೌಪಚಾರಿಕ ಸಭೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಸಭೆಯಲ್ಲಿ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್ ಪಾಲ್ಗೊಂಡಿದ್ದರು. ಡಾ.ಜಿ.ಪರಮೇಶ್ವರ್ ಈ ಸಭೆಯಿಂದಲೂ ದೂರ ಉಳಿಯುವ ಮೂಲಕ ಪರೋಕ್ಷವಾಗಿ ತಮಗಿರುವ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಸಂಸದೀಯ ಮಂಡಳಿ ಸಭೆ ಇಂದು
ಬೆಂಗಳೂರು: ಅಭ್ಯರ್ಥಿಗಳ ಆಯ್ಕೆ ಸಂಬಂಧ ಗುರುವಾರ ಜೆಡಿಎಸ್‌ನ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿ ಕೋರ್ ಕಮಿಟಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು ಪ್ರತಿ ಕ್ಷೇತ್ರದ ಸ್ಥಿತಿಗತಿ ಚರ್ಚಿಸಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಿದ್ದಾರೆ. 15 ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳು ಪಕ್ಷದ ನಾಯಕರ ಮೇಲೆ ಒತ್ತಡ ಹೇರಿದ್ದು, ಆಕಾಂಕ್ಷಿಗಳ ಪಟ್ಟಿಯೊಂದಿಗೆ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಮಗೆ ಯಾರನ್ನೋ ಕರೆತಂದು ಟಿಕೆಟ್ ಕೊಡುವ ಉದ್ದೇಶವಿಲ್ಲ. ಶರತ್ ಬಚ್ಚೇಗೌಡ, ನಂದೀಶ್ ರೆಡ್ಡಿ ಸಂಪರ್ಕ ಮಾಡಿಲ್ಲ. ಪಕ್ಷ ನಿಷ್ಠೆ, ಗೆಲ್ಲುವ ಸಾಮರ್ಥ್ಯ ಇದ್ದವರಿಗೆ ಟಿಕೆಟ್ ನೀಡುತ್ತೇವೆ. ಗುರುವಾರ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತೇವೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ನಮ್ಮ ಕ್ಷೇತ್ರದ ಮುಖಂಡರ ಸಭೆ ನಡೆಸಿದ್ದಾರೆ. ಯಾರನ್ನು ಅಭ್ಯರ್ಥಿ ಮಾಡಬೇಕೆಂದು ಅಭಿಪ್ರಾಯ ಹೇಳಿದ್ದೇವೆ. ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಟ್ಟಾಗಿಯೇ ಕೆಲಸ ಮಾಡುತ್ತೇವೆ. ನನಗೆ ಅಥವಾ ನನ್ನ ಮಗನಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ.
-ಕೆ.ಬಿ. ಕೋಳಿವಾಡ, ಮಾಜಿ ಸ್ಪೀಕರ್
ಪಕ್ಷಕ್ಕೆ ದ್ರೋಹ ಮಾಡಿದವರನ್ನು ಸೋಲಿಸಬೇಕು. ಹೀಗಾಗಿ ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡಬೇಕು. ಇನ್ನೂ ಯಾರಿಗೂ ಅಧಿಕೃತವಾಗಿ ಟಿಕೆಟ್ ನೀಡುವುದಾಗಿ ಹೇಳಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುವ ಬಗ್ಗೆ ಚರ್ಚೆ ಮಾಡಿದ್ದೇವೆ.
-ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.