“ಪರಿಸರ ಸ್ವತ್ಛತೆಗೆ ಪ್ರತಿಯೋರ್ವರೂ ಸ್ವಲ್ಪ ಸಮಯ ವಿನಿಯೋಗಿಸಿ’
Team Udayavani, Sep 26, 2019, 5:35 AM IST
ಕಾರ್ಕಳ: ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಕಾರ್ಕಳದಲ್ಲಿ 5 ದಿನಗಳ ಕಾಲ ಸ್ವತ್ಛತೆ ಕುರಿತಾಗಿ ವಿನೂತನ ಆಂದೋಲನ ನಡೆಯಲಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಾಗರಿಕರು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಶಾಸಕ ವಿ. ಸುನಿಲ್ ಕುಮಾರ್ ಮನವಿ ಮಾಡಿಕೊಂಡರು.
ಸೆ. 25ರಂದು ಕಾರ್ಕಳ ತಾ.ಪಂ. ಸಭಾಂಗಣದಲ್ಲಿ ಗಾಂಧಿ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಾಂಧೀಜಿ ನೂರೈವತ್ತು, ಸ್ವತ್ಛತೆಗಾಗಿ ಸ್ವಲ್ಪ ಹೊತ್ತು ಅಭಿಯಾನದ ಮುಖಾಂತರ ಸ್ವರ್ಣ ಕಾರ್ಕಳ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿಯೋರ್ವರೂ ಪರಿಸರ ಸ್ವತ್ಛತೆೆಗಾಗಿ ಸ್ವಲ್ಪ ಸಮಯ ವಿನಿಯೋಗಿಸಬೇಕೆಂದು ವಿನಂತಿಸಿದರು.
ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದ ಶಾಸಕರು, ಅ. 2ರಂದು ಪರಿಸರ ಸ್ವತ್ಛತೆ, ಅ. 3ರಂದು ಸರಕಾರಿ ಕಚೇರಿ, ಶಾಲಾ ಕಾಲೇಜು ಸ್ವತ್ಛತೆ, ಅ. 4ರಂದು ಜಲಮೂಲಗಳ ಸ್ವತ್ಛತೆ, ಅ.5ರಂದು ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸೆ. 26, 27 ಪೂರ್ವಭಾವಿ ಸಭೆ
ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ
ಗೊಳಿಸುವನಿಟ್ಟಿನಲ್ಲಿ ಸೆ. 26, 27ರಂದು ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಭೆ ನಡೆಯಲಿದೆ ಎಂದು ಅವರು ಈ ವೇಳೆ ತಿಳಿಸಿದರು.
ಪರಿಸರ ಸ್ವತ್ಛಗೊಳಿಸಿದ ಬಳಿಕವೂ ಕೆಲವರು ಕಸ, ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡುತ್ತಾರೆ ಎಂದು ಸಭೆಯಲ್ಲಿದ್ದ ಓರ್ವರು ಅಸಮಾಧಾನ ತೋಡಿಕೊಂಡಾಗ ಮಾತನಾಡಿದ ಶಾಸಕರು, ಪೊಲೀಸರು ಅಂಥವರ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ನಿಯಮವಿದೆ. ಹಾಗಂಥ ನಾನು ಪೊಲೀಸರ ಮೇಲೆ ಒತ್ತಡ ಹೇರಿದಲ್ಲಿ ಮುಂದೆ ಚುನಾವಣೆಗೆ ನಿಲ್ಲಬೇಕಲ್ವೇ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸರಕಾರಿ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಜನಪ್ರತಿ ನಿಧಿಗಳು, ಶಾಲಾ, ಕಾಲೇಜಿನ ಮುಖ್ಯಸ್ಥರು, ದೈಹಿಕ ಶಿಕ್ಷಣ ಶಿಕ್ಷಕರು, ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಮೂಲ್ಯ, ಜಿ.ಪಂ. ಸದಸ್ಯರಾದ ಉದಯ ಎಸ್. ಕೋಟ್ಯಾನ್, ರೇಷ್ಮಾ ಉದಯ ಶೆಟ್ಟಿ, ದಿವ್ಯಾಶ್ರೀ ಅಮೀನ್, ತಹಶೀಲ್ದಾರ್‌ಗಳಾದ ಪುರಂದರ ಹೆಗ್ಡೆ, ಮಹೇಶ್ಚಂದ್ರ, ಬಿಇಒ ಶಶಿಧರ್ ಜಿ.ಎಸ್., ಸಂಪನ್ಮೂಲ ವ್ಯಕ್ತಿ ಜಯಂತ ರಾವ್, ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್, ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಭಾಸ್ಕರ್ ವಿ. ಉಪಸ್ಥಿತರಿದ್ದರು.
ತಾ.ಪಂ. ಇಒ ಡಾ| ಮೇ| ಹರ್ಷ ಕೆ.ಬಿ. ಸ್ವಾಗತಿಸಿದರು. ಕೃಷ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ತಲಾ 10 ಲಕ್ಷ ರೂ. ಅನುದಾನ
ಸ್ವತ್ಛತೆಗಾಗಿ ಗರಿಷ್ಠ ಪ್ರಮಾಣದಲ್ಲಿ ತೊಡಗಿಸಿಕೊಂಡ ತಾಲೂಕಿನ 2 ಗ್ರಾ.ಪಂ.ಗಳಿಗೆ ತಲಾ 10 ಲಕ್ಷ ರೂ. ವಿಶೇಷ ಅನುದಾನ ಒದಗಿಸಿಕೊಡಲಾಗುವುದು ಎಂದು ಶಾಸಕರು ಭರವಸೆಯಿತ್ತರು.
ನ. 30 ಸಂಕಲ್ಪ ದಿನಾಚರಣೆ
ಕಾರ್ಕಳದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಾರ್ಕಳ ಸ್ವತ್ಛತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುವಂತಿರಬೇಕು. ಹೀಗಾಗಿ ಸ್ವತ್ಛತೆ ಕಾರ್ಯ ಕ್ರಮ ಅನ್ನುವುದು ಕೇವಲ ಫೋಟೊಗ್ರಫಿಗಾಗಿ ಆಯೋಜನೆಯಾಗದೇ ಪರಿಸರ ಸ್ವತ್ಛತೆಗೊಂಡು ಪ್ರೇರೇಪಿಸುವಂತಿರಬೇಕು. ನ.30ರಂದು ಸಂಕಲ್ಪ ದಿನಾಚರಣೆ ಜರಗಲಿದೆ ಎಂದು ಶಾಸಕರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.