ಎರಡು ಯುಗದ ಕಥೆ ಸಾರಿದ ಕಾಮ್ಯಕಲಾ ಪ್ರತಿಮಾ
ರಂಗಭೂಮಿ ಉಡುಪಿ ಪ್ರಸ್ತುತಿ
Team Udayavani, Sep 27, 2019, 5:05 AM IST
ಕೀಚಕನ ವಿಕೃತ ಕಾಮ ಮತ್ತು ರಾವಣನು ಸೀತೆಯಲ್ಲಿ ಕೊನೆಗೆ ಮಾತೃ ಪ್ರೇಮವನ್ನು ಕಾಣುವ ಪ್ರಸಂಗದ ಸುತ್ತ ನಾಟಕ ಸಾಗುತ್ತಿದೆ. ಕಾಮವೇ ಅಂತಿಮವಲ್ಲ, ಮಾತೃಪ್ರೇಮವೇ ಅಂತಿಮ ಮತ್ತು ಪ್ರೀತಿಯ ಬೆಸುಗೆ ಬೇಕು ಎಂಬ ಸಂದೇಶವನ್ನು ಸಾರುತ್ತಿದೆ. ತಾನು ಮತ್ತು ಸೋದರ ಕುಂಭಕರ್ಣ ಸೀತೆಗೆ ಮಕ್ಕಳಾಗಿ ಜನಿಸುವ ಕನಸು ರಾವಣಗೆ ಬೀಳುವುದನ್ನು ತೋರಿಸಲಾಗಿದೆ.
ಸಾಮಾನ್ಯವಾಗಿ ಒಂದು ಕಲಾಪ್ರಯೋಗದಲ್ಲಿ ಒಂದು ಕಥೆ ಮಾತ್ರ ಇರುತ್ತದೆ. ಆದರೆ ಸೆ. 2ರಂದು ಮಣಿಪಾಲದ ಸಿಂಡಿಕೇಟ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ರಂಗಭೂಮಿ ಉಡುಪಿ ಇವರು ಪ್ರದರ್ಶಿಸಿದ ಕಾಮ್ಯ ಕಲಾ ಪ್ರತಿಮಾ ನಾಟಕವು ಎರಡು ಪ್ರಮುಖ ಮಹಾಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ಒಳಗೊಂಡು ಒಂದು ಹೊಸ ಪ್ರಯೋಗವಾಗಿ ಕಂಡುಬಂತು.
ವಿರಾಟನ ಅರಮನೆಯಲ್ಲಿ ಪಾಂಡವರ ಅಜ್ಞಾತವಾಸ ಮತ್ತು ರಾವಣನ ಪುತ್ರ ಹಾಗೂ ಸಹೋದರರ ವಧೆಯ ಬಳಿಕದ ಕಥೆಯನ್ನು ನಾಟಕ ರೂಪದಲ್ಲಿ ಕಟ್ಟಿಕೊಡಲಾಗಿತ್ತು. ಕುಮಾರವ್ಯಾಸನ ವಿರಾಟಪರ್ವ ಮತ್ತು ಕುವೆಂಪು ಅವರ ರಾಮಾಯಣ ದರ್ಶನಂ ಕೃತಿಯಿಂದ ಆಯ್ದ ಭಾಗಕ್ಕೆ ಕಾಮ್ಯ ಕಲಾ ಪ್ರತಿಮಾ ಎಂಬ ಹೆಸರಿನಲ್ಲಿ ನಾಟಕ ರೂಪ ನೀಡಿದವರು ನಿರ್ದೇಶಕ ಗಣೇಶ್ ಮಂದಾರ್ತಿ. ಕೀಚಕನ ವಿಕೃತ ಕಾಮ ಮತ್ತು ರಾವಣನು ಸೀತೆಯಲ್ಲಿ ಕೊನೆಗೆ ಮಾತೃ ಪ್ರೇಮವನ್ನು ಕಾಣುವ ಪ್ರಸಂಗದ ಸುತ್ತ ನಾಟಕ ಸಾಗುತ್ತದೆ. ಕಾಮವೇ ಅಂತಿಮವಲ್ಲ, ಮಾತೃಪ್ರೇಮವೇ ಅಂತಿಮ ಮತ್ತು ಜನರಲ್ಲಿ ಪ್ರೀತಿಯ ಬೆಸುಗೆ ಬೇಕು ಎಂಬ ಸಂದೇಶವನ್ನು ಈ ನಾಟಕ ಸಾರುತ್ತಿದೆ. ತಾನು ಮತ್ತು ಸೋದರ ಕುಂಭಕರ್ಣ ಸೀತೆಗೆ ಮಕ್ಕಳಾಗಿ ಜನಿಸುವ ಕನಸು ರಾವಣನಿಗೆ ಬೀಳುವುದನ್ನು ತೋರಿಸಲಾಗಿದೆ.
ಇಡೀ ನಾಟಕದಲ್ಲಿ ಗಮನ ಸೆಳೆದದ್ದು ಚುಟುಕಾದ ಅರ್ಥಗರ್ಭಿತ ಸಂಭಾಷಣೆ ಹಾಗೂ ಸಂಗೀತಮಯ ಹಿನ್ನೆಲೆ ಧ್ವನಿ. ಕೀಚಕ ಕೀಚಕ ನಮ್ಮ ಕೀಚಕ, ಅತುಲ ಭುಜಬಲ ನಮ್ಮ ಕೀಚಕ ಎಂಬ ಹಾಡು ಪ್ರೇಕ್ಷಕರ ಬಾಯಲ್ಲಿ ಕೇಳಿ ಬಂದಿದೆ. ಪ್ರತಿಯೊಂದು ಪಾತ್ರದ ಚುರುಕುತನ, ರಂಗನಡೆ, ಬೆಳಕಿನ ಕೌಶಲ, ಸರಳವಾದ ಆದರೆ ಅರ್ಥವತ್ತಾದ ಆಕರ್ಷಕ ರಂಗಸಜ್ಜಿಕೆ ಮೆಚ್ಚುಗೆಗಳಿಸಿದೆ. ಒಂದೂ ಮುಕ್ಕಾಲು ತಾಸಿನ ಅವಧಿಯಲ್ಲಿ ಎಲ್ಲೂ ಲೋಪವಾಗದಂತೆ, ಗಮನ ಬೇರೆಡೆ ಹರಿಯದಂತೆ ಹಿಡಿದಿಟ್ಟುಕೊಳ್ಳುವಲ್ಲಿ ತಂಡ ಯಶಸ್ವಿಯಾಗಿದೆ.
ಕೀಚಕ, ಸೈರಂದ್ರಿ, ವಲಲ, ರಾವಣ ಪಾತ್ರಗಳು ಮನಸ್ಸಲ್ಲಿ ಅಚ್ಚೊತ್ತಿ ನಿಲ್ಲುವಂತೆ ಮಾಡಿದೆ. ಅದರಲ್ಲೂ ಖಳನಾಯಕ ಕೀಚಕ ಮತ್ತು ಸೈರಂದ್ರಿ ಪಾತ್ರಗಳು ಹೆಚ್ಚು ಅಪ್ಯಾಯಮಾನವಾಗಿತ್ತು. ಕೀಚಕನಾಗಿ ಪ್ರದೀಪಚಂದ್ರ ಕುತ್ಪಾಡಿ ಹಾಗೂ ಸೈರಂದ್ರಿಯಾಗಿ ಶ್ರೀಶ್ರೇಯಾ ಅವರ ಅಭಿನಯ ಮೆಚ್ಚುಗೆ ಗಳಿಸಿದೆ. ಸೈರಂದ್ರಿಯ ರೂಪಕ್ಕೆ ಮನಸೋತು ಶಯನಗೃಹದಲ್ಲಿ ಮನೋವೇದನೆಯಿಂದ ಬಳಲುವ ಕೀಚಕನ ದೃಶ್ಯ ಮನಸ್ಪರ್ಶಿಯಾಗಿತ್ತು. ಕೀಚಕ ಸಂಹಾರಕ್ಕಾಗಿ ನಾಟ್ಯ ಶಾಲೆಗೆ ಹೋಗುವ ವಲಲನಿಗೆ ಸೈರಂದ್ರಿಯು ಸೀರೆ ಉಡಿ ಸುವ ದೃಶ್ಯ ಮನಸ್ಸಿಗೆ ಮುದ ನೀಡಿತು.
ಇವರಿಗೇನೂ ಕಡಿಮೆ ಇಲ್ಲ ಎಂಬಂತೆ ವಲಲನ ಪಾತ್ರವನ್ನು ನಿರ್ವಸಿದ ಮೊಹಮ್ಮದ್ ಅಶ್ಪಕ್ ಅವರೂ ಶಹಬ್ಟಾಸ್ ಪಡೆದುಕೊಂಡಿದ್ದಾರೆ. ಸುದೇಷ್ಣೆಯಾಗಿ ಗಾಯತ್ರಿ, ವಿರಾಟನಾಗಿ ಶ್ರೀಪಾದ, ಬ್ರಹನ್ನಳೆಯಾಗಿ ಡಾ| ವೆಂಕಟ್ರಾಜ್ ಐತಾಳ್, ಕಂಕಭಟ್ಟರಾಗಿ ರಾಜೇಶ್ ಭಟ್ ಪಣಿಯಾಡಿ, ಗೋಪಾಲಕ ನಕುಲ -ಸಹದೇವರಾಗಿ ಮಹೇಶ್ ಮಲ್ಪೆ ಮತ್ತು ಪ್ರಮೋದ್ ಶೆಟ್ಟಿ ತಮ್ಮ ಪಾತ್ರಗಳಿಗೆ ಸಮರ್ಥವಾಗಿ ನ್ಯಾಯ ಒದಗಿಸಿದರು.
ಅತಿಕಾಯ ವಧೆಯಾದ ಬಳಿಕದ ರಾವಣ- ಮಂಡೋದರಿಯ ಪುತ್ರಶೋಕ, ಪತ್ನಿ ತಾರಾಕ್ಷಿಯ ವೇದನೆ ಒಳಗೊಂಡ ಕಥಾಭಾಗವೂ ಮುದ ನೀಡಿತು. ತಾನೇ ಕಾರಣಳಾಗಿ ಆರಂಭವಾಗಿರುವ ಯುದ್ಧವನ್ನು ನಿಲ್ಲಿಸುವಂತೆ ಸೋದರಿ ಚಂದ್ರನಖೀ ಕೇಳಿಕೊಂಡರೂ ಹಟ ತೊರೆಯದೆ ರಾವಣ ಯುದ್ಧದ ನಿರ್ಧಾರದಿಂದ ಹಿಂದೆ ಸರಿಯದೆ ಕತೆ ಮುಂದುವರಿಯುತ್ತದೆ. ಚಂದ್ರನಖೀಯಾಗಿ ಸಿಂಚನಾ, ರಾವಣವಾಗಿ ಕಾರ್ತಿಕ್ ಪ್ರಭು, ಲಂಕಾ ಲಕ್ಷ್ಮೀಯಾಗಿ ಸುಶ್ಮಿತಾ, ಧಾನ್ಯಮಾಲಿನಿಯಾಗಿ ಸನ್ನಿಧಿ ಹೆಬ್ಟಾರ್, ತಾರಾಕ್ಷಿಯಾಗಿ ಶ್ರೀಶ್ರೇಯಾ, ದೇವಿಯಾಗಿ ಬಾಲನಟಿ ಪ್ರತೀಕ್ಷಾ ಹಾಗೂ ಕುಶಲವರ ಪಾತ್ರಗಳಲ್ಲಿ ಆಶ್ಲೇಷ್ ಭಟ್ ಮತ್ತು ರಕ್ಷಿತ್, ಹೆಚ್ಚು ಆಕರ್ಷಕವಾಗಿ ಗಮನ ಸೆಳೆದ ಕುದುರೆಗಳಾಗಿ ಮಹೇಶ್ ಮಲ್ಪೆ, ಚರಣ್ ಮಲ್ಪೆ ಮತ್ತು ಪ್ರಮೋದ್ ಶೆಟ್ಟಿ ಸಮರ್ಥ ಅಭಿನಯ ನೀಡಿದ್ದರು. ರಾವಣನ ಪಾತ್ರವಂತೂ ಹೆಚ್ಚು ಗಮನ ಸೆಳೆಯಿತು. ರಾವಣನಿಗೆ ಒಲಿದು ಇಳಿದು ಬರುವ ಲಂಕಾ ಲಕ್ಷ್ಮೀಯ ದೃಶ್ಯ ಆಕರ್ಷಕವಾಗಿತ್ತು ಮತ್ತು ಅದಕ್ಕೆ ಕ್ಷಿಪ್ರವಾಗಿ ರಂಗಸಿದ್ಧಪಡಿಸಿದ ಚುರುಕುತನ ಮೆಚ್ಚತಕ್ಕದ್ದೇ.
ಅನುಷ್ ಎ. ಶೆಟ್ಟಿ ಮತ್ತು ಸಂದೇಶ್ ದೇವಪ್ರಿಯ, ಗಣೇಶ್ ಮಂದಾರ್ತಿ, ಗೀತಂ ಗಿರೀಶ್ ಅವರ ಸಂಗೀತ ಇಡೀ ನಾಟಕದ ಯಶಸ್ಸಿಗೆ ಸಹಕರಿಸಿದೆ. ಪೃಥ್ವಿನ್ ಕೆ. ವಾಸು ಮತ್ತು ನಿತಿನ್ ಪೆರಂಪಳ್ಳಿ ಅವರ ಬೆಳಕಿನ ಸಂಯೋಜನೆಯೂ ಸಮರ್ಥವಾಗಿತ್ತು. ಶ್ರೀಪಾದ ಅವರ ಪ್ರಸಾಧನವೂ ನಾಟಕಕ್ಕೆ ಹೊಸ ಘನತೆ ತಂದುಕೊಟ್ಟಿತು.
ಪುತ್ತಿಗೆ ಪದ್ಮನಾಭ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.