ಪೋರ್ಚುಗೀಸ್ ಕತೆ: ಸೇವಕಿ ಮತ್ತು ರಾಜಕುಮಾರಿ
Team Udayavani, Sep 29, 2019, 4:57 AM IST
ಒಂದು ರಾಜ್ಯದ ರಾಜಕುಮಾರಿ ತುಂಬ ಸುಂದರವಾಗಿದ್ದಳು. ಅವಳ ಆಪ್ತ ಸೇವಕಿ ಕಪ್ಪು ಬಣ್ಣದವಳಾಗಿ ಅಂದವಾಗಿರಲಿಲ್ಲ. ಒಮ್ಮೆ ರಾಜಕುಮಾರಿಯು ಕುಚೋದ್ಯಕ್ಕಾಗಿ, “”ನಾನು ನೋಡು, ಎಷ್ಟು ಚಂದವಾಗಿದ್ದೇನೆ, ನನ್ನ ಕೈಹಿಡಿಯಲು ಜಗತ್ತಿನ ಯಾವ ರಾಜಕುಮಾರನೂ ಮುಂದೆ ಬರುತ್ತಾನೆ. ಆದರೆ ಕುರೂಪಿಯಾದ ನಿನಗೆ ಒಬ್ಬ ಭಿಕ್ಷುಕನೂ ಗಂಡನಾಗಿ ಸಿಗುವುದಿಲ್ಲ” ಎಂದು ಹೇಳಿದಳು. ಈ ಮಾತಿನಿಂದ ಸೇವಕಿಗೆ ತುಂಬ ನೋವಾಯಿತು. ಅವಮಾನಿತಳಾದ ಅವಳು ಸುಮ್ಮನಿರಲಿಲ್ಲ. ಅವಳಿಗೆ ಮಾಟ, ಮಂತ್ರಗಳು ತಿಳಿದಿದ್ದವು. ಅದರ ಬಲದಿಂದ ರಾಜಕುಮಾರಿಯನ್ನು ಅಪಹರಿಸಿದಳು. ನಿರ್ಜನ ಪ್ರದೇಶದಲ್ಲಿ ಒಂದು ಒಂಟಿ ಕಂಬದ ಗೋಪುರವನ್ನು ಸೃಷ್ಟಿಸಿದಳು. ಗೋಪುರದ ತುತ್ತತುದಿಯ ಕೋಣೆಯಲ್ಲಿ ರಾಜಕುಮಾರಿಯನ್ನು ಇರಿಸಿ, ಹೊತ್ತು ಹೊತ್ತಿಗೆ ಬೇಕಾದ ಊಟೋಪಚಾರಗಳು ಸಿಗುವಂತೆ ವ್ಯವಸ್ಥೆ ಮಾಡಿದಳು. “”ನೀನು ಸೌಂದರ್ಯದ ಅಹಂಕಾರದಿಂದ ಕೊಬ್ಬಿದವಳು. ಸಾಯುವವರೆಗೂ ಇಲ್ಲಿಯೇ ಬಿದ್ದಿರು. ಯಾವ ರಾಜಕುಮಾರ ಇಲ್ಲಿಗೆ ಬಂದು ನಿನ್ನನ್ನು ಮದುವೆಯಾಗುತ್ತಾನೋ ನಾನು ನೋಡುತ್ತೇನೆ” ಎಂದು ಹೇಳಿಹೋದಳು.
ತನಗೊದಗಿದ ದುರವಸ್ಥೆಗೆ ರಾಜಕುಮಾರಿಯು ದುಃಖಿಸುತ್ತ ಒಂಟಿಯಾಗಿ ಕಾಲ ಕಳೆಯುತ್ತಿದ್ದಳು. ಒಂದು ದಿನ ಅವಳಿರುವ ಗೋಪುರದ ಬಳಿಗೆ ಒಬ್ಬ ರಾಜಕುಮಾರ ಬಂದ. ಕಿಟಕಿಯಿಂದ ನೆಲದ ತನಕ ಇಳಿಬಿದ್ದಿರುವ ರಾಜಕುಮಾರಿಯ ತಲೆಗೂದಲನ್ನು ನೋಡಿದ. ಕುತೂಹಲದಿಂದ ಆ ಕೂದಲನ್ನೇ ಹಗ್ಗದ ಹಾಗೆ ಹಿಡಿದುಕೊಂಡು ಮೇಲೇರುತ್ತ ರಾಜಕುಮಾರಿಯ ಬಳಿಗೆ ತಲುಪಿದ. ಅವಳನ್ನು ಮಾತನಾಡಿಸಿ, ಅವಳಿಗೊದಗಿದ ಕಷ್ಟದ ಕತೆಯನ್ನು ಕೇಳಿ ತಿಳಿದುಕೊಂಡ. “”ದುಃಖಿಸಬೇಡ. ನಾನು ನಿನ್ನನ್ನು ನಾಳೆ ಬಂದು ಅರಮನೆಗೆ ಕರೆದೊಯ್ದು ಮದುವೆ ಮಾಡಿಕೊಳ್ಳುತ್ತೇನೆ. ಒಂದು ಹಗ್ಗವನ್ನು ತಂದು ಗೋಪುರದ ಮೇಲ್ಭಾಗಕ್ಕೆ ಎಸೆಯುತ್ತೇನೆ. ಅದರ ಆಧಾರದಿಂದ ಕೆಳಗಿಳಿದು ಬಾ” ಎಂದು ಹೇಳಿದ. ರಾಜಕುಮಾರಿ ಸಂತೋಷದಿಂದ ಒಪ್ಪಿಕೊಂಡಳು.
ಗೋಪುರದಲ್ಲಿ ಸೇವಕಿ ಇರಿಸಿದ ಒಂದು ಮಂತ್ರವಾದದ ಪುಸ್ತಕ ಇತ್ತು. ರಾಜಕುಮಾರಿ ಅದನ್ನು ಓದಿದಳು. ಅದರ ಬಲದಿಂದ ಕಿಟಕಿ ಮತ್ತು ಬಾಗಿಲುಗಳು ಮಾತನಾಡುವಂತೆ ಮಾಡಿದಳು. ಆದರೆ ಪೊರಕೆ ಮತ್ತು ಗೆರಸೆಯನ್ನು ಕಾಲಿನಿಂದ ತುಳಿದಳು. ಒಂದು ಕಲ್ಲು, ಒಂದು ಹಿಡಿ ಮರಳು, ಒಂದು ಸೀಸೆ ನೀರನ್ನು ಮಂತ್ರಿಸಿ ತೆಗೆದುಕೊಂಡಳು. ರಾಜಕುಮಾರನು ಎಸೆದ ಹಗ್ಗದ ಸಹಾಯದಿಂದ ಕೆಳಗಿಳಿದು ಅವನ ಜೊತೆಗೆ ಕುದುರೆಯನ್ನೇರಿಕೊಂಡು ಹೊರಟುಹೋದಳು.
ಸ್ವಲ್ಪ ಹೊತ್ತಿನಲ್ಲಿ ಸೇವಕಿಯು ಗೋಪುರದ ಬಳಿಗೆ ಬಂದು ರಾಜಕುಮಾರಿಯನ್ನು ಕರೆದಳು. ಆಗ ಬಾಗಿಲುಗಳು ರಾಜಕುಮಾರಿಯ ಧ್ವನಿಯಲ್ಲಿ, “”ಏಳಲು ತುಂಬ ಕಷ್ಟವಾಗಿದೆ. ನೀನು ಹೊರಟುಹೋಗು” ಎಂದವು. ಸೇವಕಿಗೆ ಏನೋ ಅನುಮಾನ ಬಂದಿತು. “”ಯಾಕೆ, ಏನಾಯಿತು?” ಎಂದು ಕೇಳಿದಳು. ಕಿಟಕಿಗಳು, “”ಮೈಕೈ ನೋವು. ನಾಳೆ ಬಾ, ಆಗ ಆರಾಮವಾಗಿ ಇರುತ್ತೇನೆ” ಎಂದವು. ಆದರೆ ಗೆರಸೆ ಮತ್ತು ಪೊರಕೆಗೆ ರಾಜಕುಮಾರಿ ತಮ್ಮನ್ನು ತುಳಿದುಹೋದಳೆಂಬ ಕೋಪ ಇತ್ತು. ಅವು, “”ಸುಳ್ಳು ಸುಳ್ಳು! ರಾಜಕುಮಾರಿ ಸುಂದರನಾದ ರಾಜಕುಮಾರನ ಜೊತೆಗೆ ಓಡಿಹೋಗಿದ್ದಾಳೆ” ಎಂದು ಸತ್ಯ ಹೇಳಿದವು.
ಸೇವಕಿಗೆ ತಾಳಲಾಗದಷ್ಟು ಕೋಪ ಬಂದಿತು. ಒಂದು ಜಿಂಕೆಯನ್ನು ಸೃಷ್ಟಿಸಿ ಅದರ ಮೇಲೆ ಕುಳಿತುಕೊಂಡು ರಾಜಕುಮಾರನನ್ನು ಬೆಂಬತ್ತಿದಳು. ಅವಳು ಸಮೀಪಿಸುತ್ತಿರುವುದನ್ನು ಕಂಡು ರಾಜಕುಮಾರಿಯು ಕೈಯಲ್ಲಿರುವ ಮಂತ್ರಿಸಿದ ಕಲ್ಲನ್ನು ಅವಳತ್ತ ಎಸೆದಳು. ಕಲ್ಲು ದೊಡ್ಡ ಬಂಡೆಯಾಗಿ ಸೇವಕಿಯ ದಾರಿಗೆ ಅಡ್ಡವಾಗಿ ನಿಂತಿತು. ಸೇವಕಿ ಒಂದು ಹಾವಿನ ರೂಪ ಹೊಂದಿ ಬಂಡೆಯ ಮೇಲೇರಿ ಕೆಳಗಿಳಿದು ಮತ್ತೆ ರಾಜಕುಮಾರನ ಬಳಿಗೆ ಸಾಗಿದಳು. ದೂರದಲ್ಲಿ ಬರುತ್ತಿರುವ ಅವಳನ್ನು ಕಂಡ ರಾಜಕುಮಾರಿಯು ಮಂತ್ರಿಸಿದ ಮರಳನ್ನು ಅವಳ ಕಡೆಗೆ ತೂರಿದಳು. ಸೇವಕಿಗೆ ಎದುರಾಗಿ ದೊಡ್ಡ ಮರಳುಭೂಮಿ ಸೃಷ್ಟಿಯಾಯಿತು.
ಸೇವಕಿ ಒಂದು ಪಕ್ಷಿಯಾಗಿ ಮರಳುಭೂಮಿಯನ್ನು ದಾಟಿ ಮತ್ತೆ ರಾಜಕುಮಾರನ ಬಳಿಗೆ ಹೋದಳು. ರಾಜಕುಮಾರಿ ಸೀಸೆಯಲ್ಲಿದ್ದ ಮಂತ್ರಿಸಿದ ನೀರನ್ನು ಚೆಲ್ಲಿದಾಗ ಪ್ರವಾಹ ತುಂಬಿದ ನದಿಯೊಂದು ಸೃಷ್ಟಿಯಾಯಿತು. ಅದನ್ನು ಒಂದು ಮೀನಿನ ರೂಪದಲ್ಲಿ ಸೇವಕಿ ದಾಟಿದಳು. ಆಗ ರಾಜಕುಮಾರನು ತನ್ನ ರಾಜ್ಯವನ್ನು ತಲುಪಿದ್ದ. ರಾಜಕುಮಾರಿಯೊಂದಿಗೆ, “”ಇಲ್ಲಿಯೇ ಒಂದು ಕೊಳದ ಬಳಿ ದಟ್ಟವಾದ ಮರವಿದೆ. ನೀನು ಮರದ ಮೇಲೆ ಹತ್ತಿ ಯಾರಿಗೂ ಕಾಣದ ಹಾಗೆ ಕುಳಿತಿರು. ನಾನು ಅರಮನೆಗೆ ಹೋಗಿ ನಿನ್ನ ಸ್ವಾಗತಕ್ಕೆ ದಾಸಿಯರನ್ನು ಕರೆತರುತ್ತೇನೆ” ಎಂದು ಹೇಳಿದ. ರಾಜಕುಮಾರಿ ಮರದ ಮೇಲೆ ಕುಳಿತ ಬಳಿಕ ಅರಮನೆಯೆಡೆಗೆ ಹೊರಟುಹೋದ.
ರಾಜಕುಮಾರಿಯನ್ನು ಹುಡುಕುತ್ತ ಸೇವಕಿ ಅದೇ ಮರದ ಬಳಿಗೆ ಬಂದಳು. ಅವಳು ಕೊಳದಲ್ಲಿ ಅಡಗಿರಬಹುದೆಂಬ ಶಂಕೆಯಲ್ಲಿ ಒಂದು ಮಣ್ಣಿನ ಕೊಡ ತಂದು ನೀರು ತೆಗೆದಳು. ಆಗ ಮರದ ಮೇಲಿದ್ದ ರಾಜಕುಮಾರಿಗೆ ಕೊಡದ ನೀರಿನಲ್ಲಿ ತನ್ನ ಪ್ರತಿಬಿಂಬ ಕಾಣುತ್ತಿರುವುದು ಗೊತ್ತಾಯಿತು. ಮರದಿಂದ ಒಂದು ಕಾಯಿಯನ್ನು ಗುರಿಯಿಟ್ಟು ಹೊಡೆದು ಕೊಡವನ್ನು ಒಡೆದು ಹಾಕಿದಳು. ಇದ್ದಕ್ಕಿದ್ದಂತೆ ಕೊಡ ಒಡೆದುದು ಕಂಡು ಸೇವಕಿಗೆ ಅನುಮಾನ ಬಲವಾಯಿತು. ಮತ್ತೆ ತಾಮ್ರದ ಕೊಡ ತಂದು ನೀರು ತುಂಬಿದಳು. ತಾಮ್ರದ ಕೊಡವನ್ನು ಒಡೆಯಲು ರಾಜಕುಮಾರಿಗೆ ಸಾಧ್ಯವಾಗಲಿಲ್ಲ. ಕೊಡದ ನೀರಿನಲ್ಲಿ ಮರದ ಮೇಲಿರುವ ರಾಜಕುಮಾರಿಯ ಮುಖ ಸರಿಯಾಗಿ ಕಾಣಿಸಿತು. ನೇತಾಡುತ್ತಿದ್ದ ರಾಜಕುಮಾರಿಯ ಜಡೆ ಹಿಡಿದು ಕೆಳಗೆ ಎಳೆದು ಹಾಕಿದಳು. ಅವಳ ನೆತ್ತಿಯ ಕೂದಲಿಗೆ ಒಂದು ಕಡ್ಡಿಯನ್ನು ಚುಚ್ಚಿದಳು. ಮರುಕ್ಷಣವೇ ರಾಜಕುಮಾರಿ ಒಂದು ಪಾರಿವಾಳವಾಗಿ ಬದಲಾಯಿಸಿದಳು. “”ನಾನು ಸೌಂದರ್ಯವತಿ ಎಂಬ ಅಹಂಕಾರದಿಂದ ಮೆರೆಯುತ್ತಿದ್ದೆಯಲ್ಲವೆ? ಈಗ ನೋಡು, ನಿನ್ನ ರೂಪವನ್ನು ನಾನು ಹೊಂದುತ್ತಿದ್ದೇನೆ. ನಿನ್ನವನಾಗಬೇಕಿದ್ದ ರಾಜಕುಮಾರನ ಕೈಹಿಡಿದು ಸುಖವಾಗಿರುತ್ತೇನೆ. ನೀನು ಶಾಶ್ವತವಾಗಿ ಪಾರಿವಾಳವಾಗಿ ಅಲೆಯುತ್ತಿರು. ಅರಮನೆಗೆ ಬಂದರೆ ನನ್ನ ಮಧ್ಯಾಹ್ನದ ಊಟದ ಖಾದ್ಯವಾಗಿರು” ಎಂದು ಹೇಳಿ ಹಾರಲು ಬಿಟ್ಟಳು.
ಸೇವಕಿ ರಾಜಕುಮಾರಿಯಾದಳು. ಮರದ ಮೇಲೆ ಹತ್ತಿ ಕುಳಿತಳು. ರಾಜಕುಮಾರ ಅವಳ ಸ್ವಾಗತಕ್ಕೆ ದಾಸಿಯರನ್ನು ಕೂಡಿಕೊಂಡು ಬಂದ. ಮೇನೆಯಲ್ಲಿ ಕುಳಿತುಕೊಂಡು ಸೇವಕಿ ಅರಮನೆಗೆ ಹೋದಳು. ಅವಳೊಂದಿಗೆ ತನ್ನ ವಿವಾಹ ನಡೆಸಲು ರಾಜಕುಮಾರ ಅದ್ದೂರಿಯ ಏರ್ಪಾಡು ಮಾಡಿದ. ಮಧ್ಯ ರಾತ್ರೆ ಅವನ ಮನಸ್ಸಿಗೆ ತನ್ನ ಕೈಹಿಡಿಯುವ ರಾಜಕುಮಾರಿಯ ಸೌಂದರ್ಯವನ್ನು ನೋಡಬೇಕೆಂದು ಅನಿಸಿತು. ಸೇವಕಿ ಮಲಗಿದ್ದ ಕೊಠಡಿಯ ಕಿಟಕಿ ಬಾಗಿಲಿನ ಬಳಿ ನಿಂತು ಮಲಗಿರುವ ಅವಳನ್ನು ನೋಡಿದ. ತನ್ನ ನಿಜರೂಪದಲ್ಲಿ ಮಲಗಿರುವ ಸೇವಕಿಯನ್ನು ಕಂಡಾಗ ಅವನಿಗೆ ದಿಗಿಲಾಯಿತು. ಅಂದಗಾತಿಯೆಂದು ಭಾವಿಸಿ ಕರೆತಂದ ರಾಜಕುಮಾರಿ ಕಪ್ಪು ವರ್ಣದ ಕುರೂಪಿಯೆಂದು ತಿಳಿದಾಗ ಅವನಿಗೆ ಸಹಿಸಲಾಗದ ಕೋಪ ಬಂತು. ಬೆಳಗಾದ ಕೂಡಲೇ ರಾಜಭಟರನ್ನು ಕರೆದ. “”ನಾನು ರಾಜಕುಮಾರಿಯೆಂದು ಕರೆತಂದ ಹುಡುಗಿ ಮನುಷ್ಯಳಲ್ಲ, ಒಂದು ಪಿಶಾಚಿಯೇ ಇರಬೇಕು. ಅವಳನ್ನು ಎಳೆದುಕೊಂಡು ಹೋಗಿ ತಲೆ ಕಡಿದು ಹಾಕಿ” ಎಂದು ಆಜ್ಞಾಪಿಸಿದ.
ಆಗ ರಾಜಕುಮಾರಿಯ ಹಾಗೆ ವೇಷ ಧರಿಸಿದ್ದ ಸೇವಕಿ ರಾಜಕುಮಾರನ ಬಳಿಗೆ ಬಂದಳು. “”ವೃಥಾ ಅನುಮಾನಪಟ್ಟು ಯಾಕೆ ನನ್ನನ್ನು ಕೊಲ್ಲಿಸುತ್ತಿರುವೆ? ನಾನು ಪಿಶಾಚಿಯಲ್ಲ, ನಿನ್ನ ಮನಸ್ಸನ್ನು ಗೆದ್ದಿರುವ ರಾಜಕುಮಾರಿಯೇ. ನೀನು ರಾತ್ರೆ ನೋಡುವಾಗ ಕುರೂಪಿಯಾಗಿ ಕಾಣಿಸಿದೆನಲ್ಲವೆ? ಅದಕ್ಕೆ ಕಾರಣ ಮಂತ್ರವಾದದಿಂದ ನನಗೆ ದುರ್ಗತಿ ತಂದುಹಾಕಿದ ಆ ಸೇವಕಿ. ಅವಳು ನಿನ್ನೆ ಒಂದು ಪಾರಿವಾಳವಾಗಿ ನನ್ನ ಬಳಿಗೆ ಬಂದು ರಾತ್ರೆಯಿಡೀ ನೀನು ಕುರೂಪಿಯಾಗಿದ್ದು ರಾಜಕುಮಾರನಿಂದ ಶಿಕ್ಷೆ ಪಡೆಯುವಂತೆ ಮಾಡುತ್ತೇನೆ ಎಂದು ಶಪಥ ಮಾಡಿಹೋದಳು. ಅವಳನ್ನು ಹುಡುಕಿಸಿ ಕರೆತಂದು ಕೊಂದು ಖಾದ್ಯ ತಯಾರಿಸಿ ತಿಂದರೆ ನನಗೆ ಯಾವ ತೊಂದರೆಯೂ ಬರುವುದಿಲ್ಲ” ಎಂದು ಹೇಳಿದಳು.
ರಾಜಕುಮಾರ ಭಟರನ್ನು ಕರೆದು ಪಾರಿವಾಳ ಎಲ್ಲಿದ್ದರೂ ಹುಡುಕಿ ತರಲು ಹೇಳಿದ. ಭಟರು ಉದ್ಯಾನದ ಬಳಿ ಕುಳಿತು ದುಃಖೀಸುತ್ತಿದ್ದ ಅದನ್ನು ಸುಲಭವಾಗಿ ಹಿಡಿದುತಂದರು. ತುಂಬ ಸುಂದರವಾಗಿದ್ದ ಪಾರಿವಾಳವನ್ನು ಕೊಲ್ಲಲು ರಾಜಕುಮಾರನಿಗೆ ಮನಸ್ಸು ಬರಲಿಲ್ಲ. ಅದನ್ನು ಹಿಡಿದು ಪ್ರೀತಿಯಿಂದ ತಲೆಯನ್ನು ನೇವರಿಸಿದ. ಆಗ ಸೇವಕಿ ಅದರ ನೆತ್ತಿಯಲ್ಲಿರಿಸಿದ್ದ ಕಡ್ಡಿ ಕೆಳಗೆ ಬಿದ್ದು ಸುಂದರವಾದ ರಾಜಕುಮಾರಿ ಅಲ್ಲಿ ನಿಂತಿದ್ದಳು. ರಾಜಕುಮಾರ ವಿಸ್ಮಯದಿಂದ, “”ಏನಿದು, ಪಾರಿವಾಳವಾಗಿದ್ದ ನೀನು ರಾಜಕುಮಾರಿಯಾಗಿ ಮೋಸ ಮಾಡುತ್ತಿದ್ದೀಯಾ?” ಎಂದು ಕೇಳಿದ.
ರಾಜಕುಮಾರಿಯು,”” ಅಸಲು ರಾಜಕುಮಾರಿ ಯಾರು ಎಂದು ತಿಳಿಯಲು ಒಂದು ಸಲ ನಿನ್ನ ಕೈಯಿಂದ ಇಬ್ಬರನ್ನೂ ಮುಟ್ಟು. ನಿನ್ನ ಪ್ರೀತಿಯ ಬಲದಿಂದ ನಿಜವಾದ ರಾಜಕುಮಾರಿ ಉಳಿಯುತ್ತಾಳೆಂದು ಯಕ್ಷಿಣಿಯೊಬ್ಬಳು ನನಗೆ ವರ ನೀಡಿದ್ದಾಳೆ” ಎಂದಳು. ರಾಜಕುಮಾರ ಸ್ಪರ್ಶಿಸಿದಾಗ ಕಪಟ ರಾಜಕುಮಾರಿಯಾಗಿ ಮೋಸ ಮಾಡಿದ್ದ ಮಂತ್ರವಾದಿನಿ ಸೇವಕಿಯು ಸುಟ್ಟು ಬೂದಿಯಾದಳು. ನಿಜವಾದ ರಾಜಕುಮಾರಿ ಇನ್ನಷ್ಟು ಚೆಲುವೆಯಾಗಿ ಕಂಗೊಳಿಸಿದಳು. ರಾಜಕುಮಾರ ಅವಳನ್ನು ಮದುವೆಯಾಗಿ ಸುಖವಾಗಿದ್ದ.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.