ನಮ್ಮ ಕೆಲಸ ಮಾಡಿ ಸುಮ್ಮನಿದ್ದು ಬಿಡೋಣ!
Team Udayavani, Sep 30, 2019, 6:00 AM IST
ನಮ್ಮ ಮನೆಯ ಎದುರು ಕಾಲುಹಾದಿಯ ಅಕ್ಕಪಕ್ಕದಲ್ಲಿ ಎರಡು ನಂದಿಬಟ್ಟಲಿನ ಗಿಡಗಳಿವೆ. ವರ್ಷವಿಡೀ ಸದಾ ಹಸುರು ಎಲೆಗಳು ತುಂಬಿರುವ ಬಿಳಿಯ ಹೂವುಗಳ ಗಿಡಗಳು. ಕಳೆದ ನಾಲ್ಕಾರು ವರ್ಷಗಳಿಂದ ನೋಡುತ್ತಿದ್ದೇನೆ, ಪ್ರತೀ ವರ್ಷದ ಈ ಸಮಯದಲ್ಲಿ ಯಾವುದೋ ಚಿಟ್ಟೆ ನಂದಿಬಟ್ಟಲಿನ ಎಲೆಗಳಲ್ಲಿ ಮೊಟ್ಟೆ ಇರಿಸುತ್ತದೆ. ಆಗಸ್ಟ್ ಅಂತ್ಯ, ಸೆಪ್ಟಂಬರ್ ತಿಂಗಳಿಡೀ ನಂದಿಬಟ್ಟಲಿನ ಎಲೆಗಳ ನಡುವೆ ಹುಡುಕಿ ಹಿಡಿಯಲಾಗದಂತೆ ಹುದುಗಿರುವ ಹೆಬ್ಬೆರಳು ಗಾತ್ರದ ಹಸಿರು ಹುಳುಗಳು. ಅವುಗಳ ಇರುವಿಕೆ ಗೊತ್ತಾಗುವುದು ಬುಡದಲ್ಲಿ ಬಿದ್ದಿರುವ ಹಿಕ್ಕೆಗಳಿಂದ ಮಾತ್ರ. ಕಷ್ಟಪಟ್ಟು ಹುಡುಕಿ ನೋಡಿದರೆ ಬದುಕಿನ ಉದ್ದೇಶ ಅದೊಂದೇ ಎನ್ನುವ ಹಾಗೆ ಅವು ನಂದಿಬಟ್ಟಲಿನ ಎಲೆಯನ್ನು ಗಬಗಬನೆ ಮುಕ್ಕುತ್ತಿರುವುದು ಕಾಣಿಸುತ್ತದೆ.
ನಾಲ್ಕೈದು ವರ್ಷಗಳಿಂದ ಗಮನಿಸಿದ್ದು ಇದು. ಪ್ರಾಯಃ ತಾಯಿ ಚಿಟ್ಟೆ ನೂರಾರು ಮೊಟ್ಟೆಗಳನ್ನು ಇಟ್ಟಿರಬಹುದು. ಮಳೆಯಲ್ಲಿ ನೆನೆದು, ಬಿಸಿಲಲ್ಲಿ ಒಣಗಿ ಅರ್ಧದಷ್ಟು ಹಾಳಾಗುತ್ತವೆ, ಅರ್ಧದಷ್ಟು ಮೊಟ್ಟೆಗಳಿಂದ ಹುಳುಗಳು ಹೊರಬರುತ್ತವೆ ಎಂದಿಟ್ಟುಕೊಳ್ಳಿ. ಅವು ಹಸಿರು ಹುಳುಗಳಾಗಿ ಎಲೆಗಳನ್ನು ತಿನ್ನುತ್ತವೆ. ನಾನು ನೋಡನೋಡುತ್ತ ಇದ್ದಹಾಗೆಯೇ ಕುಪ್ಪುಳು ಹಕ್ಕಿ ನಂದಿಬಟ್ಟಲಿನ ದುರ್ಬಲ ಟೊಂಗೆಗಳನ್ನು ಏರಿ ಸರ್ಕಸ್ ಮಾಡುತ್ತಾ ದಿನವೂ ಎನ್ನುವ ಹಾಗೆ ಕ್ಯಾಟರ್‌ಪಿಲ್ಲರ್‌ಗಳನ್ನು ಹಿಡಿದು ತಿನ್ನುತ್ತದೆ. ಹಾಗೆ ಹಕ್ಕಿಗಳು, ಇರುವೆಗಳ ಹೊಟ್ಟೆ ಸೇರದೆ ಬದುಕಿ ಉಳಿದ ಕ್ಯಾಟರ್‌ಪಿಲ್ಲರ್‌ಗಳು ಕೋಶಗಳಾಗಿ ಆ ಹಂತದಲ್ಲಿಯೂ ಅಪಾಯಗಳನ್ನು ಎದುರಿಸಬೇಕು. ಕೋಶವೆಂದರೆ ನಿಮಗೆ ಗೊತ್ತು; ಅದು ಹರಿದಾಡಲಾರದ ನಿಶ್ಚಲ ಸ್ಥಿತಿ, ಹಾಗಾಗಿ ನಾಶವಾಗುವ ಸಾಧ್ಯತೆಗಳು ಹೆಚ್ಚು.
ತಾಯಿ ಚಿಟ್ಟೆ ಇರಿಸಿದ ನೂರಾರು ಮೊಟ್ಟೆಗಳಲ್ಲಿ ಹೀಗೆ ಎಲ್ಲ ಅಪಾಯಗಳಿಂದ ಪಾರಾಗಿ ಹೊಸ ಚಿಟ್ಟೆಯಾಗಿ ಹಾರಿಹೋಗುವಂಥವು ನಾಲ್ಕೋ ಐದೋ ಇರಬಹುದೇನೋ!
ಪ್ರತೀ ವರ್ಷವೂ ಹಸುರು ಕ್ಯಾಟರ್‌ಪಿಲ್ಲರ್‌ಗಳು ನಂದಿಬಟ್ಟಲಿನ ಗಿಡದಲ್ಲಿ ಕಂಡುಬಂದಾಗ ನನಗೆ ಸಮಾಧಾನವಾಗುತ್ತದೆ; ಪ್ರಕೃತಿಯಲ್ಲಿ ಜೀವಸಂಕುಲ ಎಲ್ಲ ಅಡೆತಡೆ, ಸವಾಲುಗಳನ್ನು ಯಶಸ್ವಿಯಾಗಿ ಉತ್ತರಿಸಿ ಮುನ್ನಡೆಯುತ್ತದೆ ಎನ್ನುವ ಅಂತಿಮ ಸತ್ಯದ ರೂಪಕದಂತೆ ಅವು ಭಾಸವಾಗುತ್ತವೆ. ಚಿಟ್ಟೆಯ ಸಾಸಿವೆ ಕಾಳಿಗಿಂತಲೂ ಸಣ್ಣ ಗಾತ್ರದ ಮೊಟ್ಟೆಗಳು, ಅದರಿಂದ ಹೊರಬರುವ ಪುಟ್ಟ ಲಾರ್ವಾಗಳು, ಎಲೆ ತಿನ್ನುತ್ತಾ ಬೆಳೆಯುವ ದುರ್ಬಲ ಕ್ಯಾಟರ್‌ಪಿಲ್ಲರ್, ಚಲಿಸಲಾಗದ ಕೋಶ – ಈ ಎಲ್ಲ ಹಂತಗಳಲ್ಲೂ ಕ್ಷಣಕ್ಷಣಕ್ಕೆ ಎದುರಾಗುವ ಅಪಾಯಗಳನ್ನು ಮೀರಿ ಕೆಲವಾದರೂ ಹೊಸ ಚಿಟ್ಟೆಗಳು ಉಂಟಾಗುತ್ತವಲ್ಲ! ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ಬದುಕು ಮುಂದುವರಿಯುತ್ತದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ!
ಅಮ್ಮ ಚಿಟ್ಟೆಗೆ ತಾನು ಇರಿಸಿಹೋದ ಮೊಟ್ಟೆಗಳಿಂದ ಎಷ್ಟು ಹೊಸ ಚಿಟ್ಟೆಗಳು ಉತ್ಪತ್ತಿಯಾದವು ಎಂಬ ಲಕ್ಷ್ಯವಿಲ್ಲ; ಮೊಟ್ಟೆ ಇರಿಸಿ ಹಾರಿಹೋಗುವುದಷ್ಟೇ ಅದರ ಕೆಲಸ. ನಾನು ನೋಡಿ ಬೆರಗಾಗುವ ಕ್ಯಾಟರ್‌ಪಿಲ್ಲರ್‌ಗಳಿಗೂ ಎಲೆಗಳನ್ನು ತಿಂದು ಬೆಳೆಯುವುದಷ್ಟೇ ಕೆಲಸ; ಬೇರೆ ಯಾವುದರ ಗಣ್ಯವೂ ಇಲ್ಲ. ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟನ್ನು ಶ್ರದ್ಧೆಯಿಂದ ಕುಂದಿಲ್ಲದಂತೆ ಮಾಡಿ ಮುಗಿಸಿ; ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನುವ ಹಾಗಿದೆಯಲ್ಲ ಇದು!
ಮತ್ತೆ ನಾವು; ಹುಲುಮನುಷ್ಯರು ಕಷ್ಟ ಬಂತು, ದುಡ್ಡಿಲ್ಲ, ನಷ್ಟವಾಯಿತು, ಹಾಳಾಯಿತು, ಅವ ಹೋದ, ಇವಳು ಬಂದಳು ಎಂದೆಲ್ಲ ಅಳುವುದೇಕೆ?! ಸವಾಲುಗಳು ಎದುರಾದಾಗ ಕುಗ್ಗುವುದೇಕೆ? ನಮ್ಮ ನಮ್ಮ ಕೆಲಸ ಮಾಡುತ್ತ ಇದ್ದರಾಗದೇ! ಅದಕ್ಕೇನು ವಿಹಿತ ಪ್ರತಿಫಲವೋ ಅದು ತಾನಾಗಿ ಒದಗಿಬಾರದೇ?
– ಆನಂದಮಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.