ಮಳೆ ಕಡಿಮೆಯಾದರೂ ದುರಸ್ತಿ ಕಾರ್ಯ ಆರಂಭವಾಗಿಲ್ಲ !
ನಗರದ ರಸ್ತೆಗಳೆಲ್ಲ ಹೊಂಡ-ಗುಂಡಿ
Team Udayavani, Oct 1, 2019, 5:00 AM IST
ವಿಶೇಷ ವರದಿ: ಮಹಾನಗರ: ನಗರ “ಸ್ಮಾರ್ಟ್ ಸಿಟಿ’ಯಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಇಲ್ಲಿನ ಹಲವು ರಸ್ತೆಗಳಲ್ಲಿ ಈಗ ಹೊಂಡ-ಗುಂಡಿಗಳು ಸೃಷ್ಟಿಯಾಗಿ ಸಂಚಾರ ದುಸ್ತರವಾಗಿದೆ. ಈ ಬಾರಿಯ ಮಳೆಯಿಂದಾಗಿ ಇಲ್ಲಿನ ಬಹುತೇಕ ರಸ್ತೆಗಳು ಹಾಳಾಗಿವೆ. ಆದರೆ ಇದೀಗ ಮಳೆ ಕಡಿಮೆಯಾದರೂ ಅವುಗಳ ದುರಸ್ತಿಗೆ ಸಂಬಂಧಪಟ್ಟವರು ಗಮನಹರಿಸುವ ಮುನ್ಸೂಚನೆ ಕಾಣಿಸುತ್ತಿಲ್ಲ.
ನಗರದೆಲ್ಲೆಡೆ ನವರಾತ್ರಿ-ದಸರಾ ಸಡಗರ ವಿದ್ದರೂ ಕೆಲವು ದೇವಸ್ಥಾನ ಗಳಿಗೆ ತೆರಳುವ ರಸ್ತೆಗಳ ದುಃಸ್ಥಿತಿ ಊಹಿ ಸುವುದಕ್ಕೂ ಅಸಾಧ್ಯ ಎನ್ನು ವಂತಾಗಿದೆ. ಹೊಂಡ ತುಂಬಿದ ರಸ್ತೆಗಳಿಗೆ ಮರು ಡಾಮರು ಹಾಕಲು ಅಥವಾ ತೇಪೆ ಹಚ್ಚಲು ಪಾಲಿಕೆ ಮತ್ತು ಆಡಳಿತ ವ್ಯವಸ್ಥೆ ಇನ್ನೂ ಮುಂದಾಗದಿರುವುದು ವಿಪರ್ಯಾಸ.
ಹಂಪನಕಟ್ಟೆ ವ್ಯಾಪ್ತಿಯ ರಸ್ತೆ ಹೊಂಡ ಗಳಿಂದಲೇ ಆವರಿಸಿಕೊಂಡಿದ್ದು, ಅಲ್ಲಿ ಧೂಳಿನ ವಾತಾವರಣವೇ ವ್ಯಾಪಿಸಿದೆ. ಡಾಮರು ಕಿತ್ತುಹೋಗಿ ಜಲ್ಲಿಕಲ್ಲು ಕಾಣಿಸಿಕೊಂಡಿವೆ. ಹೀಗಾಗಿ, ದ್ವಿಚಕ್ರ ವಾಹನದವರು ಅಪಾಯಕಾರಿಯಾಗಿ ತೆರಳಬೇಕಾಗಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಹಂಪನಕಟ್ಟೆಗೆ ಬರುವ ಒಳರಸ್ತೆಯೂ ಜಲ್ಲಿಕಲ್ಲಿನಿಂದ ತುಂಬಿಕೊಂಡಿದೆ.
ಜಪ್ಪಿನಮೊಗರುವಿನಿಂದ ಮೋರ್ಗನ್ ಗೇಟ್ ರಸ್ತೆ, ಜಪ್ಪು ಮಾರುಕಟ್ಟೆ ರಸ್ತೆ, ಮಂಗಳಾದೇವಿ ದ್ವಾರದಿಂದ ಅತ್ತಾವರ ತೆರಳುವ ರಸ್ತೆ, ಶರವು ದೇವಸ್ಥಾನ ಮುಂಭಾಗ ರಸ್ತೆ, ಪಾಂಡೇಶ್ವರ ದೇವಸ್ಥಾನ ರಸ್ತೆ, ಹೊಗೆಬಜಾರ್‌ನಿಂದ ಬೋಳಾರ ರಸ್ತೆ, ಮಂಗಳಜ್ಯೋತಿಯಿಂದ ಉಳಾಯಿ ಬೆಟ್ಟು ರಸ್ತೆ, ಪಚ್ಚನಾಡಿ ರೈಲ್ವೇ ಗೇಟ್‌ನಿಂದ ಮಂಗಳಜ್ಯೋತಿ ಹಾದು ಹೋಗುವ ಕೆಲವು ಭಾಗ, ಉರ್ವ ಮಾರುಕಟ್ಟೆಯಿಂದ ಸುಲ್ತಾನ್‌ಬತ್ತೇರಿ ರಸ್ತೆ, ಕೊಡಿಯಾಲ್‌ಬೈಲ್‌ನ ಜೈಲ್ ರಸ್ತೆ, ಪಾದುವದಿಂದ ಶರಬತ್‌ಕಟ್ಟೆಯ ಭದ್ರಕಾಳಿ ಮಂದಿರದ ತನಕ, ಪಾದುವದಿಂದ ಕದ್ರಿ ಪಾರ್ಕ್ ರಸ್ತೆ ಭಾಗಶಃ, ಮೇರಿಹಿಲ್‌ನಿಂದ ವೆಂಕಟರಮಣ ರಸ್ತೆ, ಬೋಂದೆಲ್ ಚರ್ಚ್‌ನಿಂದ ವಾಮಂಜೂರು ರಸ್ತೆಯ ಮಧ್ಯ ಭಾಗದ ಹಲವೆಡೆ, ಕಪಿತಾನಿಯೋ ರಸ್ತೆ… ಹೀಗೆ ಸಿಟಿಯ ಹಲವು ಭಾಗಗಳ ರಸ್ತೆಗಳು ಸದ್ಯ ಹೊಂಡಗಳಿಂದಲೇ ಅಪ ಖ್ಯಾತಿಗೆ ಒಳಗಾಗಿವೆ.
ಜ್ಯೋತಿಯ ಗೋಲ್ಡ್ ಪಿಂಚ್ ಹೊಟೇಲ್ ಹಿಂಭಾಗದಿಂದ ಬಲ್ಮಠ ಹೋಗುವ ಒಳರಸ್ತೆ ಹಾಗೂ ಆರ್ಯ ಸಮಾಜ ರಸ್ತೆಯನ್ನು ಒಳಚರಂಡಿ ಕಾಮಗಾರಿಗಾಗಿ ಪಾಲಿಕೆಯು ಅಗೆದು ಅರ್ಧದಲ್ಲಿಯೇ ಬಿಟ್ಟು ಇಂದು ರಸ್ತೆ ಪೂರ್ಣ ಹೊಂಡ ಗುಂಡಿಗಳಾಗಿವೆ. ಹೀಗಾಗಿ ವಾಹನಗಳು ಇಲ್ಲಿ ಗುಂಡಿಗಳಲ್ಲೇ ಪಯಣಿಸಬೇಕಾಗಿದೆ.
ಬಂದರು-ಸೆಂಟ್ರಲ್ ಮಾಕೆಟ್ ರಸ್ತೆ ದುಸ್ಥಿತಿ
ಇನ್ನು ಹಳೆಬಂದರು ಪರಿಸರದ ಕಥೆ ಎಲ್ಲಕ್ಕಿಂತಲೂ ಭಿನ್ನವಾಗಿದೆ. ಬಂದರು ರಸ್ತೆಯ ಕಾಂಕ್ರೀಟ್ ಕಂಡಿರುವ ಅಜೀ ಜುದ್ದೀನ್ ರಸ್ತೆ ಹೊರತುಪಡಿಸಿ ಬಹುತೇಕ ಇಲ್ಲಿನ ರಸ್ತೆಗಳು ಹೊಂಡಗಳಿಂದಲೇ ಆವೃತವಾಗಿದೆ. ಮೊದಲೇ ಸಿಂಗಲ್ ರಸ್ತೆ, ವಾಹನ ದಟ್ಟಣೆಯ ಈ ರಸ್ತೆ ಈಗ ಹೊಂಡಗಳಿಂದ ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ. ಇಲ್ಲಿಯೂ ಒಳಚರಂಡಿ ಕಾಮಗಾರಿಗಾಗಿ ಡಾಮರು ಕಿತ್ತು ಹಾಕಿ ಅರ್ಧದಲ್ಲೇ ಬಿಟ್ಟಿರುವುದರಿಂದ ಸಮಸ್ಯೆ ಜಟಿಲವಾಗಿದೆ. ನಗರದ ಸೆಂಟ್ರಲ್ ಮಾರುಕಟ್ಟೆಯ ಸುತ್ತಮುತ್ತ ಪರಿಸರದ ರಸ್ತೆಯೂ ಇದೇ ರೀತಿ ಹೊಂಡಗಳಿಂದಲ್ಲೇ ತುಂಬಿ ಪ್ರಯಾಣವೇ ಸಂಚಕಾರವಾಗಿದೆ. ನಿತ್ಯ ಸಾವಿರಾರು ಜನರು ಸಂಚರಿಸುವ ಇಲ್ಲಿನ ರಸ್ತೆ ಸರಿಪಡಿಸುವ ಬಗ್ಗೆ ಪಾಲಿಕೆ/ಆಡಳಿತ ವ್ಯವಸ್ಥೆ ಇನ್ನೂ ಮನಸ್ಸು ಮಾಡಿದಂತಿಲ್ಲ. ಕುಲಶೇಖರದಿಂದ ಮೂಡುಬಿದಿರೆಗೆ ಹೋಗುವ ರಸ್ತೆ ಕೂಡ ಹೊಂಡಗಳಿಂದ ತುಂಬಿಹೋಗಿದ್ದು, ಸಂಚಾರ ಸಮಸ್ಯೆ ಎದುರಾಗಿದೆ.
ನಂತೂರು/ಪಂಪ್‌ವೆಲ್ ರಸ್ತೆ ಹೊಂಡಮಯ
ಸಾವಿರಾರು ವಾಹನಗಳು ನಿತ್ಯ ಸಂಚರಿಸುವ ನಗರದ ನಂತೂರು ಸರ್ಕಲ್‌ನಲ್ಲಿ ಹೊಂಡಗಳು ನಿರ್ಮಾಣವಾಗಿ ಇಂದು ಆತಂಕ ಸೃಷ್ಟಿಸಿಯಾಗಿದೆ. ಇಲ್ಲಿಂದ ಬಿಕರ್ನಕಟ್ಟೆ ಗೆ ತೆರಳುವ ರಸ್ತೆಯ ಪರಿಸ್ಥಿತಿ ಅಯ್ಯೋ ಅನ್ನುವಂತಾಗಿದೆ. ಈ ಮಧ್ಯೆ, ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ಮುಗಿಯದ ವೃತ್ತಾಂತ. ಹಲವು ಸಮಯದ ಗಡುವು ಕಳೆದರೂ ಇನ್ನೂ ಇದರ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇಂತಹ ಸಮಸ್ಯೆಯ ಮಧ್ಯೆಯೇ ಇದೀಗ ಪಂಪ್‌ವೆಲ್ ಫ್ಲೈಓವರ್ ಕೆಳಗಿನ ಸರ್ವಿಸ್ ರಸ್ತೆ ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ. ಮಳೆಯ ಹಿನ್ನೆಲೆಯಲ್ಲಿ ಸರ್ವಿಸ್ ರಸ್ತೆ ಸಂಪೂರ್ಣ ಹಾಳಾಗಿ, ಪಂಪ್‌ವೆಲ್‌ನಿಂದ ಉಜ್ಜೋಡಿವರೆಗೆ ಹೋಗುವ, ಬರುವ ಎರಡೂ ಕಡೆಗಳಲ್ಲಿ ಸಂಚಾರ ಸಂಕಷ್ಟವಾಗಿದೆ. ತೊಕ್ಕೊಟ್ಟು ಫ್ಲೈಓವರ್ ಕೆಳಭಾಗ ಸರ್ವಿಸ್ ರಸ್ತೆ ಕೂಡ ಇದೇ ಪರಿಸ್ಥಿತಿಯಲ್ಲಿದೆ. ಡಾಮರಿಗಿಂತ ಇಲ್ಲಿ ಹೊಂಡಗಳೇ ಕಾಣುತ್ತಿವೆ.
ರಸ್ತೆ ದುರಸ್ತಿಗೆ ಪಾಲಿಕೆಗೆ ಸೂಚನೆ
ನವರಾತ್ರಿ-ದಸರಾ ಹಿನ್ನೆಲೆಯಲ್ಲಿ ನಗರದ ಕೆಲವೆಡೆ ಇರುವ ಗುಂಡಿ ಬಿದ್ದ ರಸ್ತೆಗಳಿಗೆ ತುರ್ತಾಗಿ ಡಾಮರು ಹಾಕುವಂತೆ ಪಾಲಿಕೆಗೆ ಈಗಾಗಲೇ ಸೂಚಿಸಲಾಗಿದೆ. ಇದಾದ ತತ್‌ಕ್ಷಣ ನಗರದ ಇತರ ಭಾಗಗಳಲ್ಲಿರುವ ಹೊಂಡ ಗಳ ರಸ್ತೆ ದುರಸ್ತಿಗೆ ಕ್ರಮ ವಹಿಸಲಾಗುವುದು.
– ವೇದವ್ಯಾಸ ಕಾಮತ್, ಶಾಸಕರು
ರಸ್ತೆ ದುರಸ್ತಿಗೆ ಆದ್ಯತೆ
ನಗರದಲ್ಲಿ ಮಳೆಯಿಂದಾಗಿ ಹೊಂಡಗಳಾಗಿರುವ ರಸ್ತೆಗಳ ದುರಸ್ತಿಗೆ ಆದ್ಯತೆ ನೀಡಲಾಗುವುದು. ಡಾಮರು ಹಾಕುವ ವೇಳೆ ಮಳೆ ಬಂದರೆ ಕಾಮಗಾರಿ ನಡೆಸಿಯೂ ಪ್ರಯೋಜನವಿಲ್ಲ. ಹೀಗಾಗಿ ಕೆಲವೇ ದಿನಗಳಲ್ಲಿ ನಗರದಲ್ಲಿರುವ ಹೊಂಡಗಳಿರುವ ರಸ್ತೆಯ ಪೂರ್ಣ ವಿವರ ಪಡೆದು ಡಾಮರು ಕಾಮಗಾರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಯುಕ್ತರು ಮನಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.