ಸೇವೆ ಸ್ಥಗಿತಗೊಳಿಸಿದ ಕೆಎಸ್ಆರ್ ಸಿಟಿ ಮಹಿಳಾ ಬಸ್
ವಿಧಾನಸಭಾ ಚುನಾವಣೆ ವೇಳೆ ಸಂಚಾರ ನಿಲ್ಲಿಸಿದ್ದ ಬಸ್
Team Udayavani, Oct 4, 2019, 4:35 AM IST
ಮಂಗಳೂರು-ಕಾಸರಗೋಡು ನಡುವೆ ಈ ಹಿಂದೆ ಸಂಚರಿಸುತ್ತಿದ್ದ ಬಸ್.
ಮಹಾನಗರ: ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಕೆಲವು ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗ ದಿಂದ ಆರಂಭಿಸಿದ್ದ “ಮಹಿಳಾ ವಿಶೇಷ ಬಸ್’ ಸೇವೆ ಈಗ ರದ್ದುಗೊಂಡಿದೆ.
ಆರು ವರ್ಷಗಳ ಹಿಂದೆ ಎಂ. ಮಹೇಶ್ ಅವರು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗಾಧಿಕಾರಿಯಾಗಿದ್ದ ವೇಳೆ ಮಂಗಳೂರು- ಕಾಸರಗೋಡು ಮಾರ್ಗದಲ್ಲಿ ಮಹಿಳಾ ವಿಶೇಷ ಬಸ್ ಕಾರ್ಯಾಚರಣೆಗೆ ಚಾಲನೆ ನೀಡಿದ್ದರು. ಇದಾದ ಕೆಲವು ವರ್ಷಗಳ ಕಾಲ ಬಸ್ ಸಂಚಾರ ಸಾಗಿತ್ತು. ಆದರೆ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣಾ ಕೆಲಸಕ್ಕೆ ಬಸ್ ಹೊಂದಿಸುವ ನಿಟ್ಟಿನಲ್ಲಿ ಮಂಗ ಳೂರು- ಕಾಸರಗೋಡು ಮಾರ್ಗದಲ್ಲಿ ಸಂಚರಿಸುವ ಮಹಿಳಾ ಬಸ್‌ಸೇವೆಯನ್ನು ನಿಲ್ಲಿಸಲಾಗಿತ್ತು. ಬಳಿಕ, ಈವರೆಗೆ ಪುನರಾರಂಭಗೊಂಡಿಲ್ಲ.
54 ಆಸನದ ಬಸ್
ಕೆಎಸ್ಸಾರ್ಟಿಸಿಯ ಈ ಹಿಂದಿನ ವೇಳಾಪಟ್ಟಿಯಂತೆ ಈ ಬಸ್ ಎರಡು ಟ್ರಿಪ್ ಹೊಂದಿದ್ದು, ಬೆಳಗ್ಗೆ 8 ಗಂಟೆಗೆ ಕಾಸರಗೋಡಿನಿಂದ ಹೊರಟು 9.40ಕ್ಕೆ ಮಂಗಳೂರು ತಲುಪುತ್ತಿತ್ತು. ಇನ್ನು ಸಂಜೆ 6.05ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 7.30ಕ್ಕೆ ಕಾಸರಗೋಡು ತಲು ಪುತ್ತಿತ್ತು. ಮಹಿಳಾ ವಿಶೇಷ ಬಸ್ ಎಂಬ ಫಲಕವನ್ನು ಜೋಡಿಸಿದ್ದು, ಒಟ್ಟು 54 ಆಸನ ಸಾಮರ್ಥ್ಯವನ್ನು ಈ ಬಸ್ ಹೊಂದಿತ್ತು.
ಬೆಂಗಳೂರಿನಲ್ಲಿ ಬಿಎಂಟಿಸಿ ಕೂಡ ಈ ಹಿಂದೆ ಮಹಿಳಾ ಬಸ್ ಆದಂತಹ ಪಿಂಕ್ ಬಸ್ ಸೇವೆಯನ್ನು ಆರಂಭಗೊಳಿಸಿತ್ತು. ಆದರೆ ಕೆಲವು ಸಮಯದ ಬಳಿಕ ಈ ಸೇವೆಯೂ ರದ್ದುಗೊಂಡಿತು.
ಮಹಿಳೆಯರಿಗೆ ಅನುಕೂಲಿಯಾಗಿದ್ದ ಬಸ್
ಕಾಸರಗೋಡು ಕಡೆಯಿಂದ ಮಂಗಳೂರಿನ ಶಾಲಾ-ಕಾಲೇಜುಗಳಿಗೆ ಕಲಿಕೆಗೆಂದು ಹೆಚ್ಚಿನ ಮಂದಿ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಅದರಲ್ಲಿಯೂ ಬೆಳಗ್ಗೆ, ಸಂಜೆಯ ವೇಳೆ ಆ ಭಾಗದ ಬಸ್‌ಗಳಲ್ಲಿ ಜನಜಂಗುಳಿ ಇರುವುದರಿಂದ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳಾ ಪ್ರಯಾಣಿಕರಿಗೆ ಸಂಚರಿಸಲು ಕಿರಿಕಿರಿ ಉಂಟಾಗುತ್ತದೆ. ಇದೇ ಕಾರಣಕ್ಕೆ ಮಹಿಳೆಯರ ಅನು ಕೂಲಕ್ಕಾಗಿ ಮತ್ತೂಮ್ಮೆ ಮಂಗಳೂರು- ಕಾಸರಗೋಡು ಮಹಿಳಾ ಬಸ್ ಸೇವೆಯನ್ನು ಪುನರಾರಂಭಿಸಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆ.
15 ವರ್ಷಗಳ ಹಿಂದಿತ್ತು ಮಹಿಳಾ ಸಿಟಿ ಬಸ್
ಮಂಗಳೂರಿನಲ್ಲಿ ಸುಮಾರು 15 ವರ್ಷಗಳ ಹಿಂದೆ ಮಹಿಳಾ ವಿಶೇಷ ಸಿಟಿ ಬಸ್ ಸೇವೆ ಇತ್ತು. ಆಗಿನ ರಾಜ್ಯಪಾಲರಾಗಿದ್ದ ರಮಾದೇವಿ ಅವರು ನೂತನ ಬಸ್ಸಿಗೆ ಚಾಲನೆ ನೀಡಿದ್ದರು. ಅನಂತರ 27 ನಂಬರ್‌ನ ಸ್ಟೇಟ್‌ಬ್ಯಾಂಕ್-ಮಂಗಳಾದೇವಿ, 44 ನಂಬರ್‌ನ ಉಳ್ಳಾಲ-ಸ್ಟೇಟ್‌ಬ್ಯಾಂಕ್ ಮತ್ತು 21 ನಂಬರ್ ನೀರುಮಾರ್ಗಕ್ಕೆ ಮಹಿಳಾ ಬಸ್ ಸಂಚಾರ ಇತ್ತು. ದಿನಕಳೆದಂತೆ ಬಸ್‌ಗೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಒಂದೇ ಬಸ್‌ನಲ್ಲಿ ಎರಡು ಭಾಗ ಮಾಡಿ ಮಹಿಳೆಯರು ಮತ್ತು ಪುರುಷರ ವಿಭಾಗ ಮಾಡಲಾಗಿತ್ತು. ಆದರೂ, ಉತ್ತಮ ಜನಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಚರ್ಚೆ ನಡೆಸಿ ಕ್ರಮ
ಮಂಗಳೂರು-ಕಾಸರಗೋಡು ಸಂಚರಿಸುವ ಮಹಿಳಾ ಕೆಎಸ್ಸಾರ್ಟಿಸಿ ಬಸ್ ಈ ಹಿಂದೆ ವಿಧಾನಸಭಾ ಚುನಾವಣಾ ಕಾರ್ಯ ನಿಮಿತ್ತ ರದ್ದುಗೊಂಡಿತ್ತು. ಈಗ ಬಸ್ ಪುನರಾರಂಭಿಸುವ ನಿಟ್ಟಿನಲ್ಲಿ ವಿಭಾಗಾಧಿಕಾರಿಗಳ ಬಳಿ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.
- ಜಯಶಾಂತ್, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ
– ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.