ಭಿಕ್ಷಾಟನೆ: ಹರಕೆ ಹೆಸರಲ್ಲಿ ಮಕ್ಕಳಿಗೆ ಹಿಂಸೆ
Team Udayavani, Oct 5, 2019, 3:44 AM IST
ಉಜಿರೆ ಪೇಟೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ ತಾಯಿ ಮತ್ತು ಮಗು.
ಬೆಳ್ತಂಗಡಿ: ಮಕ್ಕಳ ಅಪಹರಣ, ಆಸ್ಪತ್ರೆಗಳಿಂದ ನವಜಾತ ಶಿಶುಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ನವರಾತ್ರಿಯಂತಹ ವಿಶೇಷ ದಿನಗಳಲ್ಲಿ ಹೊರ ರಾಜ್ಯಗಳಿಂದ ವಲಸೆ ಬರುವ ಮಂದಿ ಮಕ್ಕಳಿಗೆ ವೇಷ ಹಾಕಿಸಿ ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.
ಕಳೆದೆರಡು ದಿನಗಳಿಂದ ಬೆಳ್ತಂಗಡಿ, ಉಜಿರೆ ಪರಿಸರದಲ್ಲಿ ಸುಮಾರು ನಾಲ್ಕು ವರ್ಷದ ಪುಟ್ಟ ಮಕ್ಕಳಿಗೆ ಬಣ್ಣ ಬಳಿದು, ವೇಷ ತೊಡಿಸಿ, ಅಂಗಡಿ ಮುಂಗಟ್ಟುಗಳಿಗೆ ಕಳುಹಿಸಿ ಭಿಕ್ಷಾಟನೆಯಲ್ಲಿ ತೊಡಗಿಸಲಾಗುತ್ತಿದೆ. ಈ ಕುರಿತು ಮಕ್ಕಳ ಹೆತ್ತವರನ್ನು ಪ್ರಶ್ನಿಸಿದರೆ “ದೇವರಿಗೆ ಹರಕೆ ಹೊತ್ತಿದ್ದು, ಒಂದೇ ದಿವಸ’ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇನ್ನೂ ಮಾತು ಬಾರದ, ಹಾಲುಗಲ್ಲದ ಮುಗ್ಧ ಕಂದಮ್ಮಗಳನ್ನು ಬಿಸಿಲು, ಮಳೆ, ಚಳಿ ಎನ್ನದೆ ಫುಟ್‌ಪಾತ್‌ಗಳ ಮೇಲೆ ಭಿಕ್ಷಾಟನೆಗೆ ತೊಡಗಿಸುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರಕಾರಗಳು ಭರವಸೆ ನೀಡಿದರೂ ಪಾಲನೆಯಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇನ್ನೂ ಎಚ್ಚೆತ್ತಿಲ್ಲ.
ನವರಾತ್ರಿ ಹಬ್ಬಕ್ಕೆ ಭಿಕ್ಷೆ
ಹೆಚ್ಚಾಗಿ ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತಿತರ ಆಯ್ದ ಸ್ಥಳಗಳಲ್ಲಿ ಕಂಡುಬರುತ್ತಿದ್ದ ಮಕ್ಕಳು ಈಗ ಗ್ರಾಮೀಣ ಪರಿಸರದತ್ತ ಕಾಲಿರಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಾರ್ನೆಮಿ ವೇಷ, ಹುಲಿ ವೇಷ ಪ್ರಸಿದ್ಧಿ ಪಡೆದಿದ್ದು, ಇದನ್ನೇ ಹೊರ ಜಿಲ್ಲೆಯ ಮಂದಿ ದುರುಪಯೋಗಪಡಿಸು ತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸೀಮಿತ ಸಮಯವನ್ನು ಬಳಸಿ ಭಿಕ್ಷೆ ಬೇಡುವುದರಿಂದ, ಜನ ಇಂಥ ಹಬ್ಬದ ಸಂದರ್ಭದಲ್ಲಿ ದಾನ-ಧರ್ಮ ಮಾಡು ವುದರಿಂದ ಭಿಕ್ಷೆ ಎತ್ತಲು ಇದೊಂದು ಕಾರಣವಾಗುತ್ತಿದೆ.
ದೇಶದಲ್ಲಿ ಅಂದಾಜು ಸುಮಾರು 75 ಲಕ್ಷ ಭಿಕ್ಷುಕರಿದ್ದಾರೆ. ಭಿಕ್ಷೆಗಿಳಿಸಲಾಗುವ ಪ್ರತಿ ಮಕ್ಕಳ ಕೈಯಲ್ಲಿ ನಿತ್ಯ 100ರಿಂದ 500 ರೂ.ವರೆಗೆ ಸಂಗ್ರಹವಾಗುತ್ತಿದೆ. ಹಾಗಾಗಿ ಇದೊಂದು ದಂಧೆಯಾಗಿ ಬೆಳೆಯುತ್ತಿದೆ.
ಚಿತ್ರಹಿಂಸೆ ತಪ್ಪಲಿ
ಭಿಕ್ಷಾಟನೆ ನಿಗ್ರಹ ಕಾಯಿದೆಯೇನೋ ಜಾರಿಯಲ್ಲಿದೆ. ಆದರೆ ವರ್ಷಕ್ಕೆ ಒಂದೆರಡು ಬಾರಿಯಷ್ಟೆ ಭಿಕ್ಷುಕರನ್ನು ಹಿಡಿದು ಪುನರ್ವಸತಿ ಕೇಂದ್ರಕ್ಕೆ ಸೇರಿಸುವ ಕಾರ್ಯ ನಡೆಯುತ್ತದೆ. ಭಿಕ್ಷಾಟನೆ ಮಾಫಿಯಾವನ್ನು ಬಗ್ಗುಬಡಿಯುವ ಮೂಲಕ ಸರಕಾರ ಅಮಾಯಕ ಮಕ್ಕಳು ಚಿತ್ರಹಿಂಸೆ ಅನುಭವಿಸುವುದನ್ನು ತಪ್ಪಿಸಬೇಕು. ತಾಯಿ-ಮಕ್ಕಳು ಎಂದು ಹೇಳಿಕೊಂಡು ಭಿಕ್ಷೆ ಬೇಡುವವರನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸುವ ಮೂಲಕ, ಆ ಮಕ್ಕಳು ಅಪಹರಣಕ್ಕೊಳಗಾದವರೇ ಎಂಬುದನ್ನು ಪತ್ತೆಹಚ್ಚಬೇಕು. ಭಿಕ್ಷಾಟನೆಗೆ ಮಕ್ಕಳ ಬಳಕೆ ಕಂಡುಬಂದರೆ ಅವರ ಪೂರ್ವಾಪರ ವಿಚಾರಿಸಬೇಕು. ಅನುಮಾನ ಬಂದರೆ ಸಮೀಪದ ಪೊಲೀಸ್ ಠಾಣೆ ಅಥವಾ ಸ್ವಯಂಸೇವಾ ಸಂಘಟನೆಗಳಿಗೆ ಮಾಹಿತಿ ನೀಡುವ ಮೂಲಕ ಪುಟಾಣಿಗಳಿಗೆ ಈ ಕೂಪದಿಂದ ಮುಕ್ತಿ ಕೊಡಿಸಲು ಪ್ರಯತ್ನಿಸಬೇಕು. ಇದಕ್ಕೆ ಸಾರ್ವಜನಿಕರ ನೆರವೂ ಅಗತ್ಯ.
ಮಾಹಿತಿ ನೀಡಿ
ಭಿಕ್ಷಾಟನೆಗೆ ಮಕ್ಕಳನ್ನು ಬಳಸಿರುವುದು ಕಂಡು ಬಂದಲ್ಲಿ ಭಿಕ್ಷಾಟನೆ ಕಾಯ್ದೆ ಪ್ರಕಾರ ಸಮಾಜ ಕಲ್ಯಾಣ ಇಲಾಖೆಯವರು ದೂರು ದಾಖಲು ಮಾಡಿ ರಕ್ಷಣೆ ಮಾಡಬೇಕೆಂದು ಕಾಯ್ದೆಯಲ್ಲಿ ಉಲ್ಲೇಖೀಸಲಾಗಿದೆ. ಆದ್ದರಿಂದ ತಾಯಿ ಹಾಗೂ ಮಕ್ಕಳು ಭಿಕ್ಷೆ ಬೇಡುವುದು ಕಂಡು ಬಂದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ದೂರವಾಣಿ 0824-2451237 / ಚೈಲ್ಡ್ ಲೈನ್ 1098ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಅಥವಾ ತತ್‌ಕ್ಷಣ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.
ಅಪರಾಧ
ಮಕ್ಕಳ ಭಿಕ್ಷಾಟನೆ ಅಪರಾಧ. ಅಂಥ ಚಟುವಟಿಕೆ ಕಂಡು ಬಂದಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ಮಂಗಳೂರು ನಿರಾಶ್ರಿತ ಕೇಂದ್ರಕ್ಕೆ ಹಸ್ತಾಂತರಿಸುವ ಕುರಿತಾಗಿ ಕ್ರಮ ಕೈಗೊಳ್ಳಲಾಗುತ್ತದೆ.
-ಸಂದೇಶ್ ಪಿ.ಜಿ. ಪೊಲೀಸ್ ವೃತ್ತ ನಿರೀಕ್ಷಕರು, ಬೆಳ್ತಂಗಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.