ಬೆಳ್ತಂಗಡಿ: ಗುಡುಗಿನ ಸದ್ದಿನಿಂದ ಕಂಪನ
ಸಂಜೆ ವೇಳೆ ದಿಢೀರ್ ಅಬ್ಬರಿಸಿದ ಸಿಡಿಲಿಗೆ ಬೆದರಿದ ಜನತೆ
Team Udayavani, Oct 6, 2019, 5:57 AM IST
ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ಮತ್ತು ಪಟ್ಟಣದ ಸುತ್ತಮುತ್ತ ಶನಿವಾರ ಸಂಜೆ 5ರ ಸುಮಾರಿಗೆ ಭಾರೀ ಮಿಂಚು ಮತ್ತು ಸಿಡಿಲಿನಿಂದ ಕಂಪನದ ಅನುಭವವಾಗಿದ್ದು, ಭೂಕಂಪನವಾಗಿದೆ ಎಂಬ ವದಂತಿ ಹರಡಿತ್ತು.
ಸಂಜೆ ಸುಮಾರು 4 ಗಂಟೆಗೆ ಒಮ್ಮೆಗೆ ಭಾರೀ ಮೋಡ ಕವಿದು ಮಿಂಚು, ಸಿಡಿಲು ಸಹಿತ ಮಳೆಯಾಗಿದೆ. ಒಂದು ತಾಸು ಬಳಿಕ ಗುಡುಗಿನ ಸದ್ದಿಗೆ 3ರಿಂದ 4 ಸೆಕೆಂಡ್ ಕಾಲ ಅಲ್ಲಲ್ಲಿ ಕಂಪನದ ಅನುಭವವಾಗಿದೆ. ಇದರಿಂದಾಗಿ ಭೂಕಂಪನವಾಗಿದೆ ಎಂಬ ವದಂತಿ ಹುಟ್ಟಿಕೊಂಡು ಜನಸಾಮಾನ್ಯರು ಆತಂಕಕ್ಕೆ ಈಡಾದರು.
ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ರಾಜ್ಯದ 14 ಕಡೆಗಳಲ್ಲಿ ಶಾಶ್ವತ ಭೂಕಂಪನ ಮಾಪನ ಕೇಂದ್ರ ಅಳವಡಿಸಲಾಗಿದೆ. ದ.ಕ. ಜಿಲ್ಲೆಗೆ ಹತ್ತಿರದ ಉಡುಪಿಯ ಬ್ರಹ್ಮಾವರ, ಹಾಸನದ ಹೇಮಾವತಿ, ಉತ್ತರ ಕನ್ನಡದ ಸೂಪಾ ಡ್ಯಾಮ್, ಬೆಳಗಾವಿ ಪ್ರದೇಶದಲ್ಲಿರುವ ಯಾವುದೇ ಕೇಂದ್ರದಲ್ಲೂ ಭೂಕಂಪನ ದಾಖಲಾಗಿಲ್ಲ ಎಂದು ಅಧಿಕಾರಿಗಳು “ಉದಯವಾಣಿ’ಗೆ ಸ್ಪಷ್ಟ ಪಡಿಸಿದ್ದಾರೆ.
ಕಂಪನ ಸಾಧ್ಯತೆ ಹೇಗೆ?
ಭೂಮಿಯಲ್ಲಿ ಪ್ರತಿಯೊಂದು ವಸ್ತು ಗಳಲ್ಲೂ ಒಂದೊಂದು ತರಂಗಾಂತರದ ಕಂಪನವಿದ್ದು, ಸಿಡಿಲಿನಂತಹ ತೀವ್ರ ಸದ್ದುಗಳಾದಾಗ ಅದು ಸ್ಥಿರ ವಸ್ತುಗಳಿಗೆ ವರ್ಗಾವಣೆಗೊಳ್ಳುತ್ತದೆ. ವಸ್ತುಗಳ ಕಂಪನದ ಶ್ರುತಿ ಮತ್ತು ಬಾಹ್ಯ ಸದ್ದಿನ ಶ್ರುತಿ ಒಂದೇ ಆದಾಗಲೂ ಇದು ನಡೆಯುತ್ತದೆ. ಕೆಲವೊಮ್ಮೆ ಆಕಾಶದಲ್ಲಿ ವಿಮಾನ ಹಾರುವಾಗ ಮನೆಯ ಕಿಟಕಿ ಬಾಗಿಲು ಕಂಪಿಸುವುದು ಇದಕ್ಕೆ ಒಂದು ಉದಾಹರಣೆ. ಶನಿವಾರ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಮೋಡಗಳಲ್ಲಿ ತೀವ್ರ ಸ್ವರೂಪದ ಘರ್ಷಣೆ ಉಂಟಾಗಿದ್ದು, ಇದರಿಂದ ಹೊರಸೂಸಿದ ಸದ್ದು ಭೂಮಿಯ ಸ್ಥಿರ ವಸ್ತುಗಳಿಗೆ ವರ್ಗಾವಣೆ ಗೊಂಡು ಕಂಪನ ಉಂಟಾಗಿದೆ. ಇದು ಪ್ರಕೃತಿ ಸಹಜ. ಭೂಮಿಯಲ್ಲಿ ಸಣ್ಣ ಪ್ರಮಾಣದಲ್ಲಿ ಕಂಪನ ಉಂಟಾದರೂ ರಿಕ್ಟರ್ ಮಾಪಕದಲ್ಲಿ ದಾಖಲಾಗುತ್ತದೆ. ಜನಸಾಮಾನ್ಯರು ಆತಂಕ ಪಡಬೇಕಿಲ್ಲ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲಲ್ಲಿ ಮಿಂಚು -ಸಿಡಿಲು ಸಹಿತ ಉತ್ತಮ ಮಳೆ
ಮಂಗಳೂರು/ ಉಡುಪಿ: ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಶನಿವಾರ ಸಂಜೆ ಸಿಡಿಲು ಮಿಂಚಿನಿಂದ ಕೂಡಿದ ಮಳೆಯಾದ ವರದಿಯಾಗಿದೆ.
ಮಂಗಳೂರು ನಗರದಲ್ಲಿ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ಸುಬ್ರಹ್ಮಣ್ಯ, ಮೂಲ್ಕಿ, ಹಳೆಯಂಗಡಿ, ಕಿನ್ನಿಗೋಳಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮಳೆಯಾದ ವರದಿಯಾಗಿದೆ. ವೇಣೂರು ಭಾಗದಲ್ಲಿ ಸಿಡಿಲಿನಬ್ಬರ ಜೋರಾಗಿತ್ತು. ಬೆಳ್ತಂಗಡಿಯಲ್ಲಿ ಸಿಡಿಲಿನಿಂದ ಕೂಡಿ ಒಂದು ತಾಸು ಮಳೆಯಾಯಿತು.
ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಮಳೆಯ ಪ್ರಮಾಣ ಇಳಿಮುಖವಾಗಿತ್ತು. ಸಂಜೆಯ ವೇಳೆಗೆ ಕಾರ್ಕಳ, ಕೊಲ್ಲೂರು, ಹಿರಿಯಡ್ಕ ಭಾಗಗಳಲ್ಲಿ ಸಿಡಿಲು ಮಿಂಚಿನ ಸಹಿತ ಉತ್ತಮ ಮಳೆ ಸುರಿಯಿತು. ಉಳಿದಂತೆ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಉಡುಪಿ ನಗರದಲ್ಲೂ ಮಳೆ ಇಳಿಮುಖವಾಗಿತ್ತು.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ 2 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.