ಅವಿನಾಶ್ ರಾಷ್ಟ್ರೀಯ ದಾಖಲೆ; ಟೋಕಿಯೋಗೆ ಆಯ್ಕೆ
ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್ಶಿಪ್
Team Udayavani, Oct 6, 2019, 6:18 AM IST
ದೋಹಾ: ಭಾರತದ ಸ್ಟೀಪಲ್ಚೇಸ್ ಕ್ರೀಡಾಳು ಅವಿನಾಶ್ ಸಬ್ಲೆ “ದೋಹಾ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್ಶಿಪ್’ನಲ್ಲಿ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿ ಟೋಕಿಯೊ ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದಾರೆ. ಆದರೆ ಫೈನಲ್ನಲ್ಲಿ 13ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದ್ದಾರೆ.
ಮಹಾರಾಷ್ಟ್ರದ ಮಾಂಡ್ವಾ ಗ್ರಾಮದ ಕೃಷಿಕನ ಮಗನಾದ ಅವಿನಾಶ್ ಸಬ್ಲೆ 3 ದಿನಗಳ ಅಂತರದಲ್ಲಿ 2 ಸಲ ಪುರುಷರ 3,000 ಮೀ. ಸ್ಟೀಪಲ್ಚೇಸ್ ಸ್ಪರ್ಧೆಯ ತಮ್ಮ ರಾಷ್ಟ್ರೀಯ ದಾಖಲೆಯನ್ನು ತಿದ್ದಿ ಬರೆದದ್ದು ವಿಶೇಷ. ಮಂಗಳವಾರದ ಮೊದಲ ಸುತ್ತಿನ ಹೀಟ್ಸ್ನಲ್ಲಿ 8 ನಿಮಿಷ, 25.33 ಸೆಕೆಂಡ್ಗಳ ಸಾಧನೆಗೈದಿದ್ದರು. ಇದರೊಂದಿಗೆ ತಮ್ಮ 8 ನಿಮಿಷ, 28.94 ಸೆಕೆಂಡ್ಗಳ ರಾಷ್ಟ್ರೀಯ ದಾಖಲೆಯನ್ನು ಮೊದಲ ಸಲ ಅಳಿಸಿದರು. ಬಳಿಕ ಫೈನಲ್ನಲ್ಲಿ 8 ನಿಮಿಷ, 21.37 ಸೆಕೆಂಡ್ಗಳಲ್ಲಿ ದೂರ ಕ್ರಮಿಸಿ ಹೊಸ ದಾಖಲೆ ಸ್ಥಾಪಿಸಿದರು.
ಇದು ಒಂದು ವರ್ಷದಲ್ಲಿ ಸಬ್ಲೆ ನಿರ್ಮಿಸಿದ 4ನೇ ರಾಷ್ಟ್ರೀಯ ದಾಖಲೆ. ಒಲಿಂಪಿಕ್ ಅರ್ಹತೆಯ ಮಾನದಂಡ 8 ನಿಮಿಷ, 22 ಸೆಕೆಂಡ್ ಆಗಿದೆ.
ಹಾಲಿ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವ ಚಾಂಪಿಯನ್, ಕೀನ್ಯದ ಕಾನ್ಸೆಸ್ಲಸ್ ಕಿಪ್ರುಟೊ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು
(8:01.35 ಸೆಕೆಂಡ್).
ಕೆ.ಟಿ. ಇರ್ಫಾನ್, ದೇವೇಂದರ್ ವಿಫಲ
ಪುರುಷರ 20 ಕಿ.ಮೀ. ರೇಸ್ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಕೆ.ಟಿ. ಇರ್ಫಾನ್ 27ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು (1 ಗಂಟೆ, 35 ನಿಮಿಷ, 21 ಸೆಕೆಂಡ್). ಭಾರತದ ಮತ್ತೋರ್ವ ಸ್ಪರ್ಧಿ ದೇವೇಂದರ್ ಸಿಂಗ್ 36ನೇ ಸ್ಥಾನಿಯಾದರು (1:41:48 ಸೆಕೆಂಡ್). ರೇಸ್ನಲ್ಲಿ ಒಟ್ಟು 52 ಮಂದಿ ಪಾಲ್ಗೊಂಡಿದ್ದು, ಇವರಲ್ಲಿ ಸ್ಪರ್ಧೆಯನ್ನು ಪೂರ್ತಿಗೊಳಿಸಿದ್ದು 40 ಮಂದಿ ಮಾತ್ರ.
2017ರ ವಿಶ್ವ ಆ್ಯತ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಇರ್ಫಾನ್ ಮತ್ತು ದೇವೇಂದರ್ ಕ್ರಮವಾಗಿ 23ನೇ ಹಾಗೂ 50ನೇ ಸ್ಥಾನದೊಂದಿಗೆ ಸ್ಪರ್ಧೆಯನ್ನು ಕೊನೆಗೊಳಿಸಿದ್ದರು. ಇವರಲ್ಲಿ ಇರ್ಫಾನ್ ಈಗಾಗಲೇ ಟೋಕಿಯೊ ಒಲಿಂಪಿಕ್ ಅರ್ಹತೆ ಸಂಪಾದಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.