ಪಿಂಚಣಿ, ಭವಿಷ್ಯನಿಧಿ ಪಡೆಯಲು ಸಾವಿರಾರು ಕಾರ್ಮಿಕರ ಪರದಾಟ
ವಿಭಿನ್ನ ಜನ್ಮ ದಿನಾಂಕದ ಸಮಸ್ಯೆ
Team Udayavani, Oct 7, 2019, 5:13 AM IST
ಮಂಗಳೂರು: ದಾಖಲೆಗಳಲ್ಲಿ ಜನ್ಮ ದಿನಾಂಕದ ವ್ಯತ್ಯಾಸದಿಂದಾಗಿ ಭವಿಷ್ಯನಿಧಿ ಮತ್ತು ಪಿಂಚಣಿ ಪಡೆಯುವುದಕ್ಕೆ ಕಾರ್ಮಿಕರು ಎರಡು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗೆ ಇನ್ನೂ ಪರಿಹಾರ ದೊರಕಿಲ್ಲ. ಸಾವಿರಾರು ಕಾರ್ಮಿಕರು ಭವಿಷ್ಯನಿಧಿ ಮತ್ತು ಪಿಂಚಣಿಗಾಗಿ ಕಚೇರಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಾರ್ಮಿಕರು ತಮ್ಮ ನಿವೃತ್ತಿ ಅಥವಾ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಭವಿಷ್ಯನಿಧಿ ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಬೇಕು. ಇಲಾಖೆಯಲ್ಲಿ ಅರ್ಜಿ ಇತ್ಯರ್ಥಗೊಳಿಸುವಾಗ ಆಧಾರ್ ಕಾರ್ಡ್‌ನಲ್ಲಿರುವ ಜನ್ಮದಿನಾಂಕಕ್ಕೂ ಭವಿಷ್ಯ ನಿಧಿ ಖಾತೆಯಲ್ಲಿ ಇರುವ ಜನ್ಮದಿನಾಂಕಕ್ಕೂ ತಾಳೆಯಾಗದಿದ್ದರೆ ಅರ್ಜಿ ಇತ್ಯರ್ಥವಾಗುವುದಿಲ್ಲ. ಅರ್ಜಿದಾರರು ಭವಿಷ್ಯ ನಿಧಿಗೆ ನೀಡಿದ ಜನ್ಮದಿನಾಂಕವೇ ಆಧಾರ್‌ನಲ್ಲೂ ನಮೂದಾಗುವಂತೆ ತಿದ್ದುಪಡಿ ಮಾಡಿಸಬೇಕಾಗಿದೆ. ಸಾಧ್ಯವಾಗದಿದ್ದಲ್ಲಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಪಾಸ್‌ಪೋರ್ಟನ್ನು ಪುರಾವೆಯಾಗಿ ಸಲ್ಲಿಸಬೇಕು. ಯಾವುದೂ ಇಲ್ಲವೆಂದಾದರೆ ಜಿಲ್ಲಾ ಶಸ್ತ್ರಚಿಕಿತ್ಸಕರು ವಯಸ್ಸಿನ ಬಗ್ಗೆ ದೃಢಪತ್ರ ನೀಡಬೇಕು.
ಸಮಸ್ಯೆಯ ಮೂಲ
ಬೀಡಿ, ಗೋಡಂಬಿ ಕಾರ್ಖಾನೆ ಸೇರಿದಂತೆ ಕೆಲವು ಕ್ಷೇತ್ರಗಳ ಬಹುತೇಕ ಕಾರ್ಮಿಕರು ಹೆಚ್ಚಿನ ವಿದ್ಯಾಭ್ಯಾಸ ಪಡೆದಿರುವುದಿಲ್ಲ. ಕೆಲಸಕ್ಕೆ
ಸೇರುವಾಗ ಯಾವುದೋ ಒಂದು ಜನ್ಮದಿನಾಂಕ ನೀಡಿರುತ್ತಾರೆ. ಆಧಾರ್ ಮಾಡಿಸುವಾಗ ಯಾವುದೋ ದಾಖಲೆ ನೀಡಿ ಜನ್ಮದಿನಾಂಕ ನಮೂದಿಸಿರುತ್ತಾರೆ. ಈ ಹಿಂದೆ ಭವಿಷ್ಯನಿಧಿ ಇತ್ಯರ್ಥಕ್ಕೆ ಕಾರ್ಖಾನೆಯಲ್ಲಿ ನೀಡಿದ ಜನ್ಮ ದಿನಾಂಕವೇ ದಾಖಲೆಯಾಗಿ ಪರಿಗಣಿತವಾಗುತ್ತಿತ್ತು. ಆಗ ಸಮಸ್ಯೆ ಆಗುತ್ತಿರಲಿಲ್ಲ. ಆಧಾರ್ ಕಡ್ಡಾಯ ಆದ ಬಳಿಕ ಸಮಸ್ಯೆ ಸೃಷ್ಟಿಯಾಗಿದೆ.
ಆಧಾರ್ ಪರಿಗಣನೆಯಾಗಲಿ
ಭವಿಷ್ಯನಿಧಿ ಖಾತೆಯಲ್ಲಿ ನಮೂದಾಗಿರುವ ಜನ್ಮದಿನಾಂಕವನ್ನು ಹೊರತುಪಡಿಸಿ ಆಧಾರ್ ಕಾರ್ಡ್‌ನಲ್ಲಿರುವ ಜನ್ಮದಿನಾಂಕವನ್ನಷ್ಟೇ ಅಧಿ
ಕೃತವಾಗಿ ಪರಿಗಣಿಸಿ ಭವಿಷ್ಯನಿಧಿ ಮತ್ತು ಪಿಂಚಣಿ ಪಾವತಿಸುವುದೇ ಸಮಸ್ಯೆ ನಿವಾರಣೆಗಿರುವ ಸುಲಭ ದಾರಿ. ಇದರಿಂದ ಬಡಕಾರ್ಮಿಕರು ಆಧಾರ್‌ಗಾಗಿ ಜಿಲ್ಲಾ ಕೇಂದ್ರ, ರಾಜಧಾನಿ ಬೆಂಗಳೂರಿಗೆ ಅಲೆದಾಡುವುದು ತಪ್ಪುತ್ತದೆ. ಈಗ ಭವಿಷ್ಯನಿಧಿ ಇಲಾಖೆ ಕೇಂದ್ರ ಸರಕಾರದ ಕಾರ್ಮಿಕ ಸಚಿವಾಲಯದ ಅಧೀನದಲ್ಲಿ ಬರುತ್ತಿದ್ದು, ಸಚಿವಾಲಯದಿಂದ ಮಾತ್ರ ಇದನ್ನು ಬಗೆಹರಿಸಲು ಸಾಧ್ಯವಿದೆ.
ಆಧಾರ್ ಅಧ್ವಾನ
ಆಧಾರ್ ಕಾರ್ಡ್‌ನಲ್ಲಿ ಜನ್ಮದಿನಾಂಕವನ್ನು ಸರಿಪಡಿಸುವುದು ಪ್ರಯಾಸದ ಕೆಲಸ. ಜನ್ಮದಿನಾಂಕದಲ್ಲಿ 1 ವರ್ಷದಿಂದ ಕಡಿಮೆ ವ್ಯತ್ಯಾಸವಿದ್ದರೆ ಜಿಲ್ಲಾ ಕೇಂದ್ರದಲ್ಲಿ ಸರಿಪಡಿಸಬಹುದು. ಅದಕ್ಕಿಂತ ಹೆಚ್ಚಿನ ವ್ಯತ್ಯಾಸವಿದ್ದರೆ ರಾಜ್ಯ ರಾಜಧಾನಿಗೆ ಹೋಗಬೇಕು. ಬಡಕಾರ್ಮಿಕರಿಗೆ ಇದು ಕಷ್ಟದ ಕೆಲಸ. ಜಿಲ್ಲಾ ಸರ್ಜನ್ ನೀಡುವ ದೃಢಪತ್ರ ಸಾಕಾಗುತ್ತದೆ ಎಂದು ಹೇಳುತ್ತಾರಾದರೂ ಅದನ್ನೂ ಪಡೆಯುವುದು ಸುಲಭವಿಲ್ಲ. ಜಿಲ್ಲಾ ಸರ್ಜನ್ ಮಧ್ಯಾಹ್ನದವರೆಗೆ ಆಸ್ಪತ್ರೆ ರೌಂಡ್ಸ್‌ನಲ್ಲಿರುತ್ತಾರೆ. ಜಿಲ್ಲಾ ಮಟ್ಟ, ಬೆಂಗಳೂರಿನ ಸಭೆಗಳಿರುತ್ತವೆ. ಇತರ ಕರ್ತವ್ಯ ಸಂಬಂಧಿತ ಒತ್ತಡಗಳಿರುತ್ತವೆ. ಅವರನ್ನು ಕಾದು ದೃಢಪತ್ರ ಪಡೆಯುವುದೂ ಸಾಹಸದ ಕೆಲಸವೇ. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ನೀಡಿದರೂ ಪರಿಶೀಲನೆಗೆಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕಳುಹಿಸಲಾಗುತ್ತದೆ. ಅವರಿಗೂ ಇಲಾಖೆಯ ಕಾರ್ಯದೊತ್ತಡಗಳಿರುವುದರಿಂದ ವಿಲೇವಾರಿ ಆಗದೆ ನೆನೆಗುದಿಯಲ್ಲಿರುತ್ತದೆ.
– ಕೇಶವ್ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.