ಗರಿಗೆದರಿದ ಶಂಕರನಾರಾಯಣ ತಾಲೂಕು ಹೋರಾಟ
Team Udayavani, Oct 12, 2019, 5:52 AM IST
ಕುಂದಾಪುರ: ಶಂಕರನಾರಾಯಣ ಕೇಂದ್ರ ಸ್ಥಳವು ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವುದರಿಂದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರನ್ನು ಅ.9ರಂದು ಭೇಟಿಯಾಗಿ ಶಂಕರನಾರಾಯಣ ಹೋಬಳಿ ಕೇಂದ್ರ ಹಾಗೂ ವಿಶೇಷ ತಹಶೀಲ್ದಾರ್ ಕಚೇರಿಯ ಅಗತ್ಯವನ್ನು ಹೋರಾಟ ಸಮಿತಿಯು ಮನವಿ ಸಲ್ಲಿಸಿ ಮನವರಿಕೆ ಮಾಡಿತು.
ಜತೆಗೆ ಹಿಂದಿನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಸಾವಿರಾರು ಜನರ ಸಮ್ಮುಖದಲ್ಲಿ ಶಿಲಾನ್ಯಾಸ ಆಗಿರುವ ಸೌಡ -ಶಂಕರನಾರಾಯಣ ಸಂಪರ್ಕ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಈ ಕಾಮಗಾರಿಯನ್ನು ಅತಿ ಶೀಘ್ರ ಪ್ರಾರಂಭಿಸಲು ಹೋರಾಟ ಸಮಿತಿಯು ಶಾಸಕರಿಗೆ ಮನವಿ ನೀಡಿತು.
ಬೈಂದೂರು ಶಾಸಕರು ಹೋರಾಟ ಸಮಿತಿ ನಿಯೋಗಕ್ಕೆ ಸ್ಪಂದಿಸಿ ತಾನು ಕೂಡಲೇ ಸಂಬಂಧಪಟ್ಟವರ ಜತೆ ಮಾತನಾಡಿ ಶಂಕರನಾರಾಯಣಕ್ಕೆ ನ್ಯಾಯ ಒದಗಿಸುವುದಾಗಿ ತಿಳಿಸಿದರು.
ತಣ್ಣಗಾದ ಧ್ವನಿ
ಬ್ರಿಟಿಷ್ ಅಧಿಪತ್ಯದ ಕಾಲದಿಂದಲೂ ಉಪ ನೋಂದಣಿ ಕಚೇರಿ ಸಹಿತ ಹತ್ತು ಹಲವು ಸರಕಾರಿ ಕಚೇರಿಗಳನ್ನು ಹೊಂದಿರುವ ಶಂಕರನಾರಾಯಣ ತಾಲೂಕು ರಚನೆ ಕೂಗು ದಶಕಗಳಿಂದಲೂ ಮಾರ್ದನಿಸುತ್ತಿದೆ. ಹಿಂದಿನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಹೋರಾಟ ಸಮಿತಿಯು ಬೆಂಗಳೂರಿಗೆ ಹೋಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷಯ ಮನವರಿಕೆ ಮಾಡಿದಾಗ ಒಂದು ಹಂತದಲ್ಲಿ ಘೋಷಣೆಯಾಗುವವರೆಗೆ ಹೋಗಿ ನಂತರ ಅಲ್ಲೇ ತಣ್ಣಗಾಗುತ್ತಾ ಹೋಯಿತು.
ಶಂಕರ ನಾರಾಯಣ ತಾಲೂಕು ರಚನಾ ಹೋರಾಟ ಸಮಿತಿಯ ನಿಯೋಗದಲ್ಲಿ ಅಧ್ಯಕ್ಷ ಆವರ್ಸೆ ರತ್ನಾಕರ ಶೆಟ್ಟಿ, ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ, ಕ್ರೋಢ ಶಂಕರನಾರಾಯಣ ದೇಗುಲದ ಆನುವಂಶೀಯ ಮೊಕ್ತೇಸರ ಲಕ್ಷಿ$¾àನಾರಾಯಣ ಉಡುಪ, ವ್ಯ. ಸೇ. ಸ.ಬ್ಯಾಂಕಿನ ಅಧ್ಯಕ್ಷ ಗಣಪತಿ ಶೇಟ್, ಮುಂಬಾರು ದಿನಕರ ಶೆಟ್ಟಿ, ತೋಟಾಡಿ ರಮೇಶ್ ಕನ್ನಂಥ, ತಲಾರಿ ನರಸಿಂಹ ಭಟ್ ಉಪಸ್ಥಿತರಿದ್ದರು.
ಮತ್ತೆ ನೆನಪು
ಈಗ ಯಡಿಯೂರಪ್ಪ ಅವರ ಸರಕಾರ ಬಂದಾಗ ಪುನಃ ಗರಿಗೆದರಿದ್ದು,ಹೋರಾಟ ಸಮಿತಿಯು ಮತ್ತೆ ಹೋರಾಟಕ್ಕೆ ಸಿದ್ಧವಾಗಿದೆ.ಈಗಾಗಲೇ ಜಿಲ್ಲಾಡಳಿತ ಯಂತ್ರ ಶಂಕರನಾರಾಯಣವು ಹೋಬಳಿ ಕೇಂದ್ರ ಹಾಗೂ ನಾಡ ಕಚೇರಿ ಆಗಲು ವರದಿ ತಯಾರಾಗಿ ಕಡತ ಸರಕಾರದ ಖಜಾನೆಯಲ್ಲಿ ಧೂಳು ಹಿಡಿಯುತ್ತ ಕೂತಿದೆ. ಎರಡು(ಕುಂದಾಪುರ,ಬೈಂದೂರು) ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಪ್ರಸ್ತಾವಿತ ಶಂಕರನಾರಾಯಣ ಹೋಬಳಿ ಕೇಂದ್ರಕ್ಕೆ ಸಂಬಂಧಪಟ್ಟಂತೆ ಹೋರಾಟ ಸಮಿತಿಯು ಈಗಾಗಲೇ ರಾಜ್ಯ ಸರಕಾರದ ಗಮನ ಸೆಳೆಯುತ್ತಿದ್ದು ವ್ಯಾಪ್ತಿಯ ಇಬ್ಬರು ಶಾಸಕರನ್ನು ಭೇಟಿಯಾಗಿ ಮನವಿ ಜತೆಗೆ ಮನವರಿಕೆ ಮಾಡಿದೆ.