ಯಾವ ಹಕ್ಕಿಯ ಕೊರಳ ಹಾಡದು?
Team Udayavani, Oct 13, 2019, 5:11 AM IST
ಅಲೇಖ ಶಿವರಾಮ ಭಟ್ ಓದಿದ್ದು ಎರಡನೆಯ ತರಗತಿ. ಆದರೆ, ಅವರಲ್ಲಿ ಇರುವ ಪಾಂಡಿತ್ಯ ಮಾತ್ರ ಅಪೂರ್ವವಾದುದು. ಅಜ್ಜ ಸ್ವತಃ ರಾಣಾಯನೀ ಶಾಖೆಯ ಪ್ರಕಾಂಡ ಪಂಡಿತ. ತಂದೆ ಶಂಭು ಭಟ್ಟರಿಂದ ಪಾರಂಪರಿಕ ವಿಧಾನದಿಂದಲೇ ಎಂಟತ್ತು ವರ್ಷಗಳ ಕಾಲ ವೇದವಿದ್ಯಾಭ್ಯಾಸ ಮಾಡಿದವರು ಶಿವರಾಮ ಭಟ್ಟರು. ಈ ವೇದಪಾಂಡಿತ್ಯವೇ ಅವರಿಗೆ ಮುಂದೆ ರಾಷ್ಟ್ರಪತಿ ವೇದವಿದ್ವಾಂಸ ಪುರಸ್ಕಾರವನ್ನು ತಂದು ಕೊಟ್ಟಿದೆ.
ಒಮ್ಮೆ ವೇದಗಳ ಮಹತ್ವವನ್ನು ಕೇಳಿದ್ದ ಬ್ರಿಟಿಷ್ ಅಧಿಕಾರಿಯೊಬ್ಬ ತನಗೂ ಅದನ್ನು ಕಲಿಸಿಕೊಡುವಂತೆ ಒಬ್ಬ ಬ್ರಾಹ್ಮಣನಲ್ಲಿ ಕೇಳಿದನಂತೆ. “ಅದು ಸಾಧ್ಯವಿಲ್ಲ. ಆಷೇಯ ಪರಂಪರೆಯಂತೆ ತಂದೆ, ಮಗನಿಗೆ ಮಾತ್ರ ಕಲಿಸಲು ಮಾತ್ರ ಸಾಧ್ಯ’ ಎಂದು ನಿರಾಕರಿಸಿದನಂತೆ. ಸಿಟ್ಟಾದ ಅಧಿಕಾರಿ “ನಾಳೆಯವರೆವಿಗೂ ಗಡುವು ಕೊಡುತ್ತೇನೆ. ಇಲ್ಲದಿದ್ದರೆ ನಿನ್ನಲ್ಲಿರುವ ಎಲ್ಲವನ್ನು ಸುಟ್ಟುಹಾಕುತ್ತೇನೆ’ ಎಂದನಂತೆ.
ಆ ದಿನ ರಾತ್ರಿಯೇ ಬ್ರಾಹ್ಮಣ ತನ್ನ ನಾಲ್ಕು ಮಕ್ಕಳಿಗೆ ವೇದಗಳನ್ನು ಕಲಿಸಿಕೊಟ್ಟು, ತನ್ನಲ್ಲಿದ್ದ ಎಲ್ಲ ವೇದಗಳ ತಾಡೋಲೆಗಳನ್ನು ಬೆಂಕಿಗೆ ಹಾಕಿಬಿಟ್ಟನಂತೆ. ಇದು ಎಂದೋ ಓದಿದ ಕಥೆ. ಸತ್ಯವೋ ಕಟ್ಟುಕಥೆಯೋ ಗೊತ್ತಿಲ್ಲ. ಆದರೆ, ಕಥೆ ಮತ್ತೆ ನೆನೆಪಾದದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಹತ್ತಿರದ ಗೋಳಿಬೈಲಿನ ಅಲೇಖ ಶಿವರಾಮ ಭಟ್ಟರನ್ನು ಕಂಡಾಗ. ಅವರನ್ನು ನಾನು ನೋಡಿದ್ದು ಮೂರೋ ನಾಲ್ಕೊ ವರ್ಷದವಳಿದ್ದಾಗ. ಅಜ್ಜನ ಕಾಲದಿಂದಲೂ ಅವರು ನಮ್ಮ ಮನೆಯ ವೈದಿಕ ಕಾರ್ಯಗಳಿಗೆ ಬರುತ್ತಿದ್ದರು. ಅವರ ವೇದಘೋಷ ನನ್ನ ಮನಸ್ಸಿನಲ್ಲಿ ಹಲವು ಭಾವಗಳನ್ನು ಸ್ಪುರಿಸುತ್ತಿತ್ತು.
ಹೌದು. ಅಲೇಖ ಶಿವರಾಮ ಭಟ್ ಓದಿದ್ದು ಎರಡನೆಯ ತರಗತಿ. ಆದರೆ, ಅವರಿಗೆ ಇರುವ ಪಾಂಡಿತ್ಯ ಮಾತ್ರ ಅಪೂರ್ವವಾದುದು. ಅಜ್ಜ ಸ್ವತಃ ರಾಣಾಯನೀ ಶಾಖೆಯ ಪ್ರಕಾಂಡ ಪಂಡಿತ. ಈ ಹೊತ್ತಿಗೂ ಅವರು ಬರೆದ ಮೂವತ್ತಕ್ಕೂ ಹೆಚ್ಚು ತಿಗಳಾರಿ ಭಾಷೆಯಲ್ಲಿರುವ ಗ್ರಂಥಗಳಲ್ಲಿ ಎರಡನ್ನು ಮಾತ್ರ ಅಧ್ಯಯನ ಮಾಡಲು ಸಾಧ್ಯವಾಗಿದೆಯಂತೆೆ. ತಂದೆ ಶಂಭು ಭಟ್ಟರಿಂದ ಪಾರಂಪರಿಕ ವಿಧಾನದಿಂದಲೇ ಸುಮಾರು 8-10 ವರ್ಷಗಳ ಕಾಲ ವೇದವಿದ್ಯಾಭ್ಯಾಸ ಮಾಡಿದರು ಶಿವರಾಮ ಭಟ್ಟರು. ಈ ವೇದಪಾಂಡಿತ್ಯವೇ ಅವರಿಗೆ ಮುಂದೆ ರಾಷ್ಟ್ರಪತಿ ವೇದವಿದ್ವಾಂಸ ಪುರಸ್ಕಾರ (1998) ವನ್ನು ತಂದುಕೊಡುತ್ತದೆಂದು ಭಾವಿಸಿರಲಿಲ್ಲ.
ಏನಿದು ರಾಣಾಯನಿ ಶಾಖೆ?
ಸಾಮವೇದದಲ್ಲಿ ಕೌತುಮಿ, ರಾಣಾಯನಿ ಮತ್ತು ಜೈಮುನಿ ಎಂಬ ಮೂರು ಶಾಖೆಗಳಿವೆ. ರಾಣಾಯನಿ ಶಾಖೆಯು ಗೋಕರ್ಣ, ಮಹಾರಾಷ್ಟ್ರ ಮತ್ತು ಹೊನ್ನಾವರದ ಪಂಚಗ್ರಾಮಗಳಲ್ಲಿ ಮಾತ್ರ ಪ್ರಚಲಿತದಲ್ಲಿದೆ. “ಸಂಗೀತ ಕೂಡ ಬಂದದ್ದು ವೇದದಿಂದಲೇ. ಮುಂದೆ ಅದನ್ನು ಜನಸಾಮಾನ್ಯರ ಮನರಂಜನೆಗೆ, ಆ ಮೂಲಕ ಕಲಾಭಿವ್ಯಕ್ತಿಯ ಮೂಲಕ ವ್ಯಕ್ತಿತ್ವದ ಔನ್ಯತ್ಯಕ್ಕೆ ಬಳಸಿಕೊಳ್ಳಲಾಯಿತು. ಸಾಮವೇದದಲ್ಲಿರುವ ಮಂತ್ರಗಳು ಮಾತ್ರ ವ್ಯಕ್ತಿಯ ಆಂತರಂಗಿಕ ಔನ್ಯತ್ಯಕ್ಕೆ ಕಾರಣವಾದವು’ ಎನ್ನುವುದು ಶಿವರಾಮ ಭಟ್ಟರ ವಿವರಣೆ. ಅವರ ಪ್ರಕಾರ ಯಾವ ವೇದಗಳು ಮೇಲಲ್ಲ ಕೀಳೂ ಅಲ್ಲ. ಅವೆಲ್ಲವೂ ಪ್ರಕೃತಿಯಲ್ಲಿರುವ ವೈವಿಧ್ಯಮಯ ಗಿಡ ಮರ ಬಳ್ಳಿಗಳಂತೆ ಎನ್ನುವ ನಂಬಿಕೆ ಅವರದು “ವೇದಮಂತ್ರಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವುದಕ್ಕೆ ಎಂ. ಎಸ್. ಸುಬ್ಬಲಕ್ಷ್ಮೀ ದೊಡ್ಡ ಉದಾಹರಣೆ. ಅವರು ವಿಷ್ಣು ಸಹಸ್ರನಾಮವನ್ನು ಹೇಳಿರುವ ಕ್ರಮ ತುಂಬಾ ಅಪೂರ್ವವಾದುದು. ಅವರು ಲಘು, ದೀರ್ಘ ಸ್ವರ (ಅಲ್ಪಪ್ರಾಣ ಮಹಾಪ್ರಾಣ) ಗಳನ್ನು ಉಚ್ಚರಿಸಿರುವ ಕ್ರಮಗಳಲ್ಲಿ ಸಣ್ಣ ತಪ್ಪೂ ಇಲ್ಲ. ಅವರ ಸ್ವರಸೌಂದರ್ಯ ನಮ್ಮ ಮನಸ್ಸನ್ನು ಮುಟ್ಟುವಂಥದು ಶಿವರಾಮ ಭಟ್ ಎಷ್ಟೇ ಸಂಪ್ರದಾಯವಾದಿಗಳಾದರೂ ವೇದಮಂತ್ರಗಳನ್ನು ಪುರುಷರು- ಅದರಲ್ಲಿಯೂ ಅದು ವೈದಿಕ ಬ್ರಾಹ್ಮಣರ ಆಸ್ತಿ ಎಂದು ನಂಬಿದವರಲ್ಲ. ಎಲ್ಲಿ ಪ್ರತಿಭೆ, ಸಾಮರ್ಥ್ಯಗಳಿವೆಯೋ ಅವುಗಳನ್ನು ಒಪ್ಪಿಕೊಳ್ಳಬೇಕೆಂಬ ಅವರ ಮನಃಸ್ಥಿತಿ ದೊಡ್ಡದು ಮಾತ್ರವಲ್ಲ; ಪೂರ್ಣ ಆಷೇìಯವಾದುದು ಆಧುನಿಕವಾಗಿಯೂ ಇರುತ್ತದೆ ಎನ್ನುವುದಕ್ಕೆ ಉದಾಹರಣೆ.
ಈಚೆಗೆ ಬೆಂಗಳೂರಿನ ಅಭಿನವ ಹೊನ್ನಾವರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಅವರ ಜೊತೆಗಿನ ಒಡನಾಟದಿಂದ ನನಗೆ ವಿಶೇಷ ಅನುಭೂತಿ ದೊರೆಯಿತು. ಅವರು ವೇದಮಂತ್ರಗಳನ್ನು ಉಚ್ಚರಿಸುವ ರೀತಿಯಲ್ಲಿ ಮಾತ್ರವಲ್ಲ, ಅದನ್ನು ಹೇಗೆ ಕಲಿಸಬೇಕೆಂಬುದಕ್ಕೆ ಕೊಡುತ್ತಿದ್ದ ಉದಾಹರಣೆಗಳು ಕೂಡ ಅಶ್ಚರ್ಯ ಹುಟ್ಟಿಸಿತು. ಒಂದು ಋಕ್ಕನ್ನು ಹೇಳಿ “ಇದನ್ನು ಬಾಯಿಯಲ್ಲಿ ಗಾಳಿಯನ್ನು ಶೇಖರಿಸಿಟ್ಟುಕೊಂಡು ಕಪ್ಪೆಯು ಹಾರುವಂತೆ ಉಚ್ಚರಿಸಬೇಕು’ ಎಂದು ವಿವರಿಸಿದರು. ಕುದುರೆ, ಆನೆಗಳ ಚಿತ್ರಗಳನ್ನು ನಮ್ಮ ಮುಂದೆ ತಂದು ಅವುಗಳ ನೆನಪಿನಲ್ಲಿ ಆ ಮಂತ್ರಗಳು ಉಳಿಯುವಂತೆ ಮಾಡುವಲ್ಲಿನ ನಮ್ಮ ಹಿರಿಯರ ಜ್ಞಾನ ಎಷ್ಟು ದೊಡ್ಡದಿರಬೇಡ? ಎಷ್ಟು ವೈಜ್ಞಾನಿಕವಾಗಿರಬೇಡ ! ಭಟ್ಟರು ಮಂತ್ರಗಳನ್ನು ಪಠಿಸುತ್ತಿದ್ದರೆ ನನಗೆ ಮಳೆಗಾಲದಲ್ಲಿನ ಕಡಲಿನ ಮೊರೆತದ ಹಾಗೆ ಕೇಳಿಸುತ್ತಿತ್ತು. ಇನ್ನೊಮ್ಮೆ ಮರದ ಎಲೆಗಳ ಮೇಲಿಂದ ನೀರು ನೆಲಕ್ಕೆ ಬೀಳುವಲ್ಲಿನ ಲಯವಾಗಿ. ಒಮ್ಮೆಯಂತೂ ಅವರು ಉಚ್ಚರಿಸುತ್ತಿದ್ದ ಮಂತ್ರಗಳ ಮಧ್ಯೆಯೇ ಅವರ ಅಂಗಳದಲ್ಲಿದ್ದ ಹಸುವೊಂದು ಕೂಗಿತು. ಈ ಮಂತ್ರದ ಉಚ್ಚಾರಕ್ಕೂ ಗೋವಿನ ಕರೆಗೂ ಸಂಬಂಧವಿರುವಂತಿದೆಯಲ್ಲ! ಎನ್ನುವ ಭಾವ ನನ್ನಲ್ಲಿ ಸುಳಿದು ಹೋಯಿತು. ಅದನ್ನು ನನ್ನ ಆಧುನಿಕ ಮನಸ್ಸು ಸುಲಭವಾಗಿ ಒಪ್ಪಬೇಕಲ್ಲ? ಅದೊಂದು ಕಾಕತಾಳೀಯವಿರಬೇಕು ಎಂದುಕೊಳ್ಳುತ್ತಿರುವಂತೆಯೇ ಮತ್ತೂಂದು ಋಕ್ಕಿನ ಉಚ್ಚಾರ ಸಮಯದಲ್ಲಿ ಮತ್ತೂಂದು ಹಸು ಕೂಗಿತು. ಹೌದು, ನಮ್ಮಲ್ಲಿನ ಹಸುಗಳ ಕರೆಯಲ್ಲಿ ಎಷ್ಟೆಲ್ಲ ವೈವಿಧ್ಯವಿದೆಯಲ್ಲ – ಮಂತ್ರಗಳ ಉಚ್ಚಾರಣೆಯಲ್ಲೂ ಇರುವಂತೆ.
ಶಿವರಾಮ ಭಟ್ ಅವರು ತಮ್ಮ ಮಗ ಶಂಭುವಿಗೆ ಈ ಪಾಠವನ್ನು ಕಲಿಸಿ¨ªಾರೆ. ಅವರ ನಂತರ? “ಇವತ್ತು ಇದು ಯಾರಿಗೂ ಬೇಕಿಲ್ಲ. ಕಲಿಯಲಿಕ್ಕೆ ಬರುವವರಿಗೆ ಒಂದೇ ಗುಕ್ಕಿನಲ್ಲಿ ಎಲ್ಲವೂ ಸಿಕ್ಕಿಬಿಡಬೇಕು. ಆದರೆ, ಇದಕ್ಕೆ ಏಳೆಂಟು ವರ್ಷಗಳ ಸತತ ಅಭ್ಯಾಸ ಬೇಕು. ಯಾರಾದರೂ ಬಂದು ಕಲಿಯುತ್ತೇವೆಂದರೆ ಕಲಿಸಿಕೊಡಲು ನಾವು ಸಿದ್ಧ’ ಎನ್ನುತ್ತಾರೆ ಶಂಭು. ತಮ್ಮ ಮಕ್ಕಳು ಕಾನ್ವೆೆಂಟಿನಲ್ಲಿ ಓದಿ ಮಲ್ಟಿನ್ಯಾಷನಲ್ ಕಂಪೆನಿಯಲ್ಲಿ ಜೇಬು ತುಂಬ ಹಣ ತರಬೇಕೆಂದು ನಿರೀಕ್ಷಿಸುವ ಯಾವ ತಂದೆ-ತಾಯಿಯರಿಗೆ ತಮ್ಮ ಮಗ ಹೀಗೆ ಕಲಿಯಬೇಕೆಂಬ ಆಸೆ ಇರುತ್ತದೆ? ಅದು ಅವರ ತಪ್ಪಲ್ಲ ಬಿಡಿ. ಆದರೆ, ನಾವು ನಿರಾಶರಾಗಬೇಕಿಲ್ಲ. ಎಷ್ಟೋ ವರ್ಷಗಳಿಂದ ಅಡೆತಡೆಗಳಿಂದ ಉಳಿದು ಬಂದಿರುವ ಈ ಪರಂಪರೆ ಮುಂದೆಯೂ ಉಳಿದೇ ಉಳಿಯುತ್ತದೆ ಎಂಬ ನಂಬಿಕೆ ನನ್ನದು.
ಶಿವರಾಮಭಟ್ಟರ ಮಂತ್ರಗಳು ನನ್ನಲ್ಲಿ ಅನಂತ ಭಾವನೆಗಳನ್ನು ಸ್ಪುರಿಸಿದ್ದು ಮಾತ್ರವಲ್ಲ , ಅವತ್ತು ರಾತ್ರಿಯಿಡಿ ನನ್ನ ಕಣ್ಣುಗಳಲ್ಲಿ ಕೋರೈಸುವ ಬೆಳಕಾಗಿ ತುಂಬಿತ್ತು. ಮಾರನೆಯ ದಿನ ಎದ್ದವಳೇ ದೊಡ್ಡಹೊಂಡದಲ್ಲಿ ಎಂದಿನಂತೆ ವಾಕಿಂಗ್ ಹೊರಟೆ. ಸುತ್ತಲೂ ಕಾಡುಕೋಳಿ, ನವಿಲು ಮುಂತಾದ ಅಸಂಖ್ಯ ಹಕ್ಕಿಗಳ ಕೂಗು ಕಿವಿಯನ್ನು ತುಂಬುತ್ತಿತ್ತು. ಒಂದೂರಿಗೆ ಹೋಗುವ ತಿರುವಿನಲ್ಲಿ ಒಂದು ಮರದ ಮೇಲೆ ಹಕ್ಕಿಯ ಹಾಡು ಕೇಳುತ್ತಿತ್ತು. ಆ ಹಕ್ಕಿ ಎಲ್ಲಿದೆ ಎಂದು ಗುರುತಿಸಲು ನನಗೆ ಐದು ನಿಮಿಷ ಬೇಕಾಯಿತು. ಆ ಹಕ್ಕಿಗೆ ಇರುವ ಹೆಸರಾವುದು? ಗೊತ್ತಿಲ್ಲ. ಆ ಹಕ್ಕಿ ಮತ್ತೆ ಹಾಡಲು ಶುರುಮಾಡಿತು. ಅದಕ್ಕೆ ಪ್ರತಿಕ್ರಿಯೆಯಾಗಿ ಕಾಡಿನ ಮತ್ತೂಂದು ಮೂಲೆಯಿಂದ ಅಂತಹದ್ದೇ ಹಾಡು. ನಾನು ಮುಂದೆ ನಡೆದೆ. ಆ ಹಕ್ಕಿಯೂ ಸ್ವಲ್ಪದೂರ ಮುಂದೆ ಬಂದು ಒಂದು ಕಾಡಿನ ಬಳ್ಳಿಯ ಮೇಲೆ ಕುಳಿತುಕೊಂಡಿತು. ಆ ಹಕ್ಕಿಯ ಭಾರವನ್ನು ಆ ಬಳ್ಳಿ ತಡೆಯುತ್ತದೆಯೇ? ಎಂದುಕೊಂಡೆ. ಆ ಹಕ್ಕಿ ತನ್ನ ಕೊಕ್ಕನ್ನು ಸುತ್ತಮುತ್ತ ಹೊರಳಿಸಿ ಹಾಡಲು ಸುರುಮಾಡಿತು. ಒಂದರೆ ನಿಮಿಷ ಮಾತ್ರ. ಆ ಹಾಡಿನ ರಾಗ ಯಾವುದು? ಅದರ ಭಾವವನ್ನು ಯಾವ ಶಬ್ದಗಳಲ್ಲಿ ಬರೆಯಲು ಸಾಧ್ಯ? ಕಲಿಸುವುದಾದರೆ ಹೇಗೆ? ಆ ಪುಟ್ಟ ಹಕ್ಕಿ ಆ ಬಳ್ಳಿಯನ್ನು ಬಿಟ್ಟು ಕಾಡಿನ ಕಡೆ ಹಾರಿತು. ಆ ಬಳ್ಳಿಯ ಭಾಗ್ಯವೇ! ಬಳ್ಳಿ ಹಕ್ಕಿ ಎದ್ದು ಹೋದ ಭಾರಕ್ಕೆ ಮೇಲೆ- ಕೆಳಗೆ ತೊನೆಯಿತು. ಅದು ಹಕ್ಕಿಯ ಹಾಡಿನ ಲಯದಂತಲೇ?
ನನಗೆ ಶಿವರಾಮ ಭಟ್ ಅವರೂ ಹೀಗೆಯೇ ಒಂದು ಹಕ್ಕಿಯೆಂದು ಅನಿಸಿತು.
ಸಂಧ್ಯಾ ಹೆಗಡೆ ದೊಡ್ಡಹೊಂಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.