ಫುಲ್ ಮೀಲ್ಸ್ 10 ರೂ.!
ಹೋಟೆಲ್ ರಾಮ್‌ಪ್ರಸಾದ್
Team Udayavani, Oct 14, 2019, 5:20 AM IST
ಈ ಹೋಟೆಲ್‌ನಲ್ಲಿ ಊಟ, ತಿಂಡಿ, ಟೀ, ಕಾಫಿ ಏನೇ ತೆಗೆದುಕೊಂಡ್ರೂ ಬೆಲೆ 10 ರೂ. ಮಾತ್ರ. ಇದು, ಸರ್ಕಾರದ ವತಿಯಿಂದ ನಡೆಯುವ ಇಂದಿರಾ ಕ್ಯಾಂಟೀನ್ ಅಲ್ಲ. ಹೊಸದಾಗಿ ಹೋಟೆಲ್ ಆರಂಭಿಸಿದ್ದರಿಂದ ಪ್ರಚಾರಕ್ಕಾಗಿ ಕಡಿಮೆ ರೇಟಿಗೆ ಕೊಡ್ತಾ ಇರೋದೂ ಅಲ್ಲ. ಈ ಹೋಟೆಲ್‌ಗೆ 81 ವರ್ಷಗಳ ಇತಿಹಾಸ ಇದೆ. ಅದುವೇ, ಸ್ವಾತಂತ್ರ್ಯ ಪೂರ್ವದಲ್ಲೇ ಅಂದ್ರೆ 1938ರಲ್ಲೇ ಆರಂಭವಾದ ಸುಳ್ಯದ ಶ್ರೀರಾಂಪೇಟೆಯಲ್ಲಿನ ರಾಂಪ್ರಸಾದ್ ಹೋಟೆಲ್. ಇದು “ಸರಳಾಯರ ಹೋಟೆಲ್’ ಎಂದೇ ಸ್ಥಳೀಯರಿಗೆ ಚಿರಪರಿಚಿತ.
ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಂಗಾಡ್ ತಾಲೂಕಿನ ಪಣತಾಡಿ ಗ್ರಾಮದ ವೆಂಕಟರಮಣ ಸರಳಾಯ ಈ ಹೋಟೆಲ್‌ನ ಸಂಸ್ಥಾಪಕರು. ಮನೆಯಲ್ಲಿ 11 ಜನ ಮಕ್ಕಳು, ಬಡತನ ಬೇರೆ. ಕೆಲಸ ಮಾಡಲು ಸುಳ್ಯಕ್ಕೆ ವಲಸೆ ಬಂದ ವೆಂಕಟರಮಣ ಸರಳಾಯ, ಈಗ ಇರುವ ಹೋಟೆಲ್ ಜಾಗವನ್ನೇ ಖರೀದಿ ಮಾಡಿ, ಅಲ್ಲೇ ಹುಲ್ಲು ಹಾಸಿನ ಗುಡಿಸಲು ಕಟ್ಟಿಕೊಂಡು ಚಿಕ್ಕದಾಗಿ ಹೋಟೆಲ್ ಆರಂಭಿಸಿದ್ದರು. ನಂತರ ಇವರ ಮಗ ಸುಂದರ್ ಸರಳಾಯ, ಚಿಕ್ಕದಾಗಿ ಹೆಂಚಿನ ಮನೆ ಕಟ್ಟಿ 40 ವರ್ಷ ಹೋಟೆಲ್ ನಡೆಸಿದರು, ನಂತರ ಸುಸಜ್ಜಿತ ಕಟ್ಟಡ ಕಟ್ಟಿ ಹೋಟೆಲ್ ಮುಂದುವರಿಸಿದರು. ಇವರಿಗೆ ವಿನೋದಾ ಸರಳಾಯ ಸಾಥ್ ನೀಡಿದರು. ಕಟ್ಟಡ ಬದಲಾದ್ರೂ ರುಚಿಯಲ್ಲಿ ಬದಲಾವಣೆಯಾಗಿಲ್ಲ. ಚೀಪ್ ಇನ್ ರೇಟ್, ವೆರಿ ಬೆಸ್ಟ್ ಇನ್ ಟೇಸ್ಟ್ ಎಂಬಂಥ ಈ ಹೋಟೆಲನ್ನು ಈಗ ನೋಡಿಕೊಳ್ಳುತ್ತಿರುವವರು ರಾಘವೇಂದ್ರ ಸರಳಾಯ.
ಈಗಲೂ ತಂದೆಯದ್ದೇ ಕೈ ರುಚಿ:
79 ವರ್ಷವಾದ್ರೂ ತನ್ನ ಮಗನ ಕೆಲಸಕ್ಕೆ ಬೆನ್ನೆಲುಬಾಗಿರುವ ಸುಂದರ್ ಸರಳಾಯ, ಈಗಲೂ ಮುಂಜಾನೆಯೇ ಎದ್ದು ತಿಂಡಿ ತಯಾರಿ ಮಾಡ್ತಾರೆ. ಇದರಿಂದ ರುಚಿಯಲ್ಲಿ ಕೊರತೆ ಕಂಡುಬರುವುದಿಲ್ಲ ಅನ್ನುತ್ತಾರೆ ರಾಘವೇಂದ್ರ ಸರಳಾಯ.
ವಿದ್ಯಾರ್ಥಿಗಳ ಊಟದ ಮನೆ:
ಸುಳ್ಯ ತಾಲೂಕಿನ ಹಲವು ಗ್ರಾಮಗಳಿಂದ ಪಟ್ಟಣದಲ್ಲಿನ ಜ್ಯೂನಿಯರ್ ಕಾಲೇಜು, ಖಾಸಗಿ ಶಾಲಾ, ಕಾಲೇಜುಗಳಿಗೆ ಬರುವ ಮಕ್ಕಳಿಗೆ ಸರಳಾಯ ಹೋಟೆಲ್ಲೇ ಮಧ್ಯಾಹ್ನದ ಊಟದ ಮನೆ. ಸರ್ಕಾರ ಬಿಸಿಊಟ ಕೊಡುವುದಕ್ಕೂ ಮೊದಲು ಹೈಸ್ಕೂಲ್ ಮಕ್ಕಳೂ ಸರಳಾಯ ಹೋಟೆಲ್‌ನಲ್ಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.
ಖರ್ಚು ಕಡಿಮೆ, ರೇಟೂ ಕಡಿಮೆ:
ಹೋಟೆಲ್ ಕಟ್ಟಡ ಸ್ವಂತದ್ದು, ಕ್ಲೀನಿಂಗ್ ಬಿಟ್ಟರೆ, ಅಡುಗೆ, ಸಪ್ಲೆ„ಯರ್, ಕ್ಯಾಷಿಯರ್ ಇತರೆ ಎಲ್ಲಾ ಕೆಲಸವನ್ನೂ ಮನೆಯವರೇ ಮಾಡಿಕೊಳ್ಳುವುದರಿಂದ ಖರ್ಚು ಕಡಿಮೆ. ಅಲ್ಲದೇ, ಹೆಚ್ಚು ಲಾಭ ಮಾಡಬೇಕೆಂಬ ಆಸೆಯೂ ಇಲ್ಲ. ಇರೋದರಲ್ಲಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಹೊಟ್ಟೆ ತುಂಬಿಸಬೇಕು ಎಂಬ ಹಂಬಲ ಮಾಲೀಕರದ್ದು.
ವಿಶೇಷ ಪ್ರಸಂಗ:
ಹಲವು ವರ್ಷಗಳ ಹಿಂದೆ ಹೋಟೆಲ್‌ಗೆ ಬಂದಿದ್ದ ನಾಲ್ಕೈದು ಪ್ರವಾಸಿಗರು ಊಟ ಮಾಡಿ, 30 ರೂ. ಬಿಲ್ ಕೊಟ್ಟು ನಾಲ್ಕೈದು ಕಿ.ಮೀ. ಹೋಗಿದ್ದಾರೆ. ನಂತರ ಹೋಟೆಲ್‌ನವರು ಅಷ್ಟು ಜನ ಊಟ ಮಾಡಿದ್ರೂ ಕೇವಲ ಒಬ್ಬರ ಬಿಲ್ ತೆಗೆದುಕೊಂಡಿರಬೇಕು ಎಂದು ಯೋಚಿಸಿ, ಹಣ ಕೊಡಲು ಮತ್ತೆ ವಾಪಸ್ ಬಂದು ಕೇಳಿದ್ದಾರೆ. ಎಲ್ಲರಿಗೂ ಸೇರಿಸಿ ಬಿಲ್ ಮಾಡಲಾಗಿದೆ ಎಂಬ ಸಂಗತಿ ತಿಳಿದು, ಇಷ್ಟು ಕಡಿಮೆ ಬೆಲೆಗೆ ಅಷ್ಟೊಂದು ರುಚಿಯಾದ ತಿಂಡಿಯಾ ಎಂದು ಅಚ್ಚರಿ ಪಟ್ಟು, ಧನ್ಯವಾದ ಹೇಳಿ ಹೋಗಿದ್ದಾರೆ. ಈ ಹೋಟೆಲ್‌ನಲ್ಲಿ ಊಟ ಮಾಡಿ ಬದುಕು ಕಂಡುಕೊಂಡ ಎಷ್ಟೋ ವಿದ್ಯಾರ್ಥಿಗಳು ಈಗಲೂ ಹೋಟೆಲ್‌ಗೆ ಬಂದು ತಿಂಡಿ ಸವಿಯದೇ ಹೋಗಲ್ಲ.
ಬೆಳಗ್ಗಿನ ತಿಂಡಿ:
ಬೆಳಗ್ಗೆ 3.30ಕ್ಕೆ ತಿಂಡಿ ಸಿದ್ಧವಾಗುತ್ತೆ. ಉಪ್ಪಿಟ್ಟು, ಅವಲಕ್ಕಿ, ಇಡ್ಲಿ, ವಡೆ, ಪೂರಿ, ಬನ್ಸ್ (ಎಲ್ಲದರ ದರ 10 ರೂ.), ಮೊಸರು ವಡೆ (15 ರೂ.), ಇವುಗಳ ಜೊತೆಗೆ ಚಟ್ನಿ, ಫಲ್ಯ ಕೊಡ್ತಾರೆ. ಮಧ್ಯಾಹ್ನ ಊಟಕ್ಕೆ ಅನ್ನ, ಸಾಂಬರ್, ಪಲ್ಯ, ಉಪ್ಪಿನಕಾಯಿ, ಗಸಿ, ಮಜ್ಜಿಗೆ ಸಿಗುತ್ತದೆ ದರ 10 ರೂ.. ಮೊಸರು ತೆಗೆದುಕೊಂಡ್ರೆ ಪ್ರತ್ಯೇಕವಾಗಿ 5 ರೂ. ಕೊಡಬೇಕು.
ಹೋಟೆಲ್ ಸಮಯ:
ಮುಂಜಾನೆ 3.30ಕ್ಕೆ ಆರಂಭವಾದ್ರೆ 11 ಗಂಟೆಯವರೆಗೆ ತಿಂಡಿ, 12.30ರಿಂದ ಮಧ್ಯಾಹ್ನ 2 ಗಂಟೆವರೆಗೂ ಊಟ, ಸಂಜೆ 5.30ರವರೆಗೆ ಟೀ, ಕಾಫಿ ಜೊತೆ ತಿಂಡಿ ಇದ್ರೆ ಸಿಗುತ್ತೆ. ಭಾನುವಾರ ಬೆಳಗ್ಗೆ 9ರವರೆಗೆ ಮಾತ್ರ ತೆರೆದಿರುತ್ತದೆ.
ಹೋಟೆಲ್ ವಿಳಾಸ:
ಹೋಟೆಲ್ ರಾಂಪ್ರಸಾದ್(ಸರಳಾಯ ಹೋಟೆಲ್), ಸುಳ್ಯದ ಹೃದಯಭಾಗದಲ್ಲಿರುವ ಶ್ರೀರಾಮಪೇಟೆಯಲ್ಲಿದೆ.
– ಭೋಗೇಶ ಆರ್.ಮೇಲುಕುಂಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.