ಕ್ಲೈಮ್ ಸ್ಟೋರಿ; ಗಾಡಿಗೆ ವಿಮೆಯ ರಕ್ಷಣೆ
Team Udayavani, Oct 14, 2019, 5:35 AM IST
“ಬಾಡಿ’ಗೂ, “ಗಾಡಿ’ಗೂ ವಿಮೆ ಇರಬೇಕು ಎಂಬುದು ಇಂದಿನ ಲೆಕ್ಕಾಚಾರ. ಎಲ್ಲಕ್ಕಿಂತ ಹೆಚ್ಚಾಗಿ, ವಿಮೆಗೆ ಒಳಪಡದ ವಾಹನ ಓಡಿಸುವುದನ್ನೇ ರಸ್ತೆಸಂಚಾರ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ, ವಾಹನ ಅವಘಡ ನಡೆದ ಸಂದರ್ಭದಲ್ಲಿ ಸಹಾಯಕ್ಕೆ ಬರುವ ವಾಹನ ವಿಮೆಗಳ ಕುರಿತು ಎಲ್ಲಾ ಸವಾರರೂ ತಿಳಿದುಕೊಂಡಿರಬೇಕು.
“ಅರೆ, ವಾಹನ ಕೊಂಡರೆ ವಿಮೆ ಏಕೆ ಮಾಡಿಸಬೇಕು? ಆ್ಯಕ್ಸಿಡೆಂಟ್ ಮಾಡೋಕೆ ಅಂತಾನೇ ವಾಹನ ತಗೊಂಡಿರ್ತಿವಾ? ಸ್ವಲ್ಪ ಒಳ್ಳೇದನ್ನ ಯೋಚೆ° ಮಾಡಿ’ ಅನ್ನೋ ಕಾಲ ಈಗಿಲ್ಲ. ದ್ವಿಚಕ್ರವಾಹನ ಅಥವಾ ಕಾರು, ಯಾವುದನ್ನೇ ಕೊಂಡರೂ ಮೊದಲು ಮಾಡಿಸುವುದು ಇನ್ಷೊರೆನ್ಸ್. “ಬಾಡಿ’ಗೂ, “ಗಾಡಿ’ಗೂ ವಿಮೆ ಇರಬೇಕು ಎಂಬುದು ಇಂದಿನ ಲೆಕ್ಕಾಚಾರ. ಎಲ್ಲಕ್ಕಿಂತ ಹೆಚ್ಚಾಗಿ, ವಿಮೆಗೆ ಒಳಪಡದ ವಾಹನವನ್ನು ಓಡಿಸುವುದನ್ನು ಕೂಡ ಸಂಚಾರ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
ಮೊನ್ನೆ ಮೊನ್ನೆ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡದ ಮೊತ್ತ ಪರಿಷ್ಕರಣೆ ಮಾಡಿದ ನಂತರ, ವಿಮೆ ಇಲ್ಲದ ವಾಹನ ಸವಾರರಿಗೆ ವಿಧಿಸುತ್ತಿರುವ ದಂಡ ದುಬಾರಿಯಾಗಿದೆ. ಈ ದಂಡದ ಮೊತ್ತದಲ್ಲಿ ದ್ವಿಚಕ್ರವಾಹನ ಒಂದರ ವಿಮೆ ಸಲೀಸಾಗಿ ಬಂದುಬಿಡುತ್ತದೆ. ಹೀಗಾಗಿ, ವಿಮೆ ಮಾಡಿಸಲು ಮೀನ ಮೇಷ ಎಣಿಸಿದಿರೆಂದರೆ, ವಿಮೆಗೆ ಮಾಡುವ ವೆಚ್ಚಕ್ಕಿಂತಲೂ ಹೆಚ್ಚು ಹಣವನ್ನು ದಂಡದ ರೂಪದಲ್ಲಿ ಪೊಲೀಸರಿಗೆ ಪಾವತಿಸಬೇಕಾಗುತ್ತದೆ!
ಏನೇನು ಕವರ್ ಆಗುತ್ತವೆ
ವಾಹನ ವಿಮೆಯಲ್ಲಿ ಮೂರನೇ ವ್ಯಕ್ತಿ ವಿಮೆ ಮತ್ತು ಸಮಗ್ರ ಮೋಟಾರು ವಿಮೆ ಎಂಬ ಎರಡು ವಿಧಗಳಿವೆ. ಮೂರನೇ ವ್ಯಕ್ತಿ ವಿಮೆಯು, ಒಂದೊಮ್ಮೆ ವಾಹನ ಅಪಘಾತಕ್ಕೀಡಾದಾಗ ಗಾಯಗೊಳ್ಳುವ ಅಥವಾ ಪ್ರಾಣ ಕಳೆದುಕೊಳ್ಳುವ ವ್ಯಕ್ತಿ ಮತ್ತು ಹಾನಿಗೀಡಾಗುವ ಆಸ್ತಿಗೆ ವಿಮೆಯ ಸುರಕ್ಷತೆಯನ್ನು ಒದಗಿಸುತ್ತದೆ. ಇಲ್ಲಿ ವಾಹನಗಳಿಗಾಗುವ ಹಾನಿಯು ವಿಮೆ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ, ಸಮಗ್ರ ಮೋಟಾರು ವಿಮೆ ಹಾಗಲ್ಲ; ಇಲ್ಲಿ ಅಪಘಾತದ ವೇಳೆ ಕಾರು ಅಥವಾ ದ್ವಿಚಕ್ರ ವಾಹನಕ್ಕಾಗುವ ಎಲ್ಲ ನಷ್ಟವನ್ನು ಭರಿಸಲಾಗುತ್ತದೆ (ಪಾಲಿಸಿ ಆಧಾರದಲ್ಲಿ). ಅಪಘಾತ, ವಾಹನ ಕಳವು, ಪ್ರಕೃತಿ ವಿಕೋಪ, ಗಲಭೆ, ಬೆಂಕಿ ಅವಘಡ ಸಂಭವಿಸಿದ ಸಂದರ್ಭಗಳಲ್ಲಿ ವಾಹನ ಮಾಲೀಕರಿಗೆ ಹಾಗೂ ಸಹ ಪ್ರಯಾಣಿಕರಿಗೆ ಆಗುವ ನಷ್ಟವನ್ನು ವಿಮಾ ಕಂಪನಿಗಳು ಭರಿಸಿಕೊಡುತ್ತವೆ.
ಬಿ-ಟು-ಬಿ, ಅಂದರೆ ಬಂಪರ್ ಟು ಬಂಪರ್ ವಿಮೆ ಮಾಡಿಸಿದರೆ ಕಾರಿನಲ್ಲಿರುವ ಎ.ಸಿ, ಮ್ಯೂಸಿಕ್ ಸಿಸ್ಟಂ ಹಾಗೂ ಇತರ ಆ್ಯಕ್ಸೆಸರಿಗಳು ಸಹ ವಿಮೆ ವ್ಯಾಪ್ತಿಗೆ ಒಳಪಡುತ್ತವೆ. ಇಂತಹ ವಿಮೆಗಳು ಕೊಂಚ ದುಬಾರಿ. ಆದರೆ ವಾಹನಕ್ಕೆ ಸಮಗ್ರ ಸುರಕ್ಷತೆ ಒದಗಿಸುತ್ತವೆ. ಅದೂ ಅಲ್ಲದೆ ಈಗ್ಗೆ ನಾಲ್ಕೈದು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, ಈಗ ವಿಮೆ ಖರೀದಿಸುವುದು ಅತ್ಯಂತ ಸುಲಭ.
ನೋ ಕ್ಲೈಂ ಬೋನಸ್ (ಎನ್‌ಸಿಬಿ)
ನಿಮ್ಮ ವಾಹನ ಇದುವರೆಗೂ ಒಮ್ಮೆ ಕೂಡ ಅಪಘಾತಕ್ಕೀಡಾಗಿಲ್ಲವಾ? ಹಾಗಾದರೆ ಅದು ನೋ ಕ್ಲೈಂ ಬೋನಸ್ ವ್ಯಾಪ್ತಿಗೆ ಬರುತ್ತದೆ. ವರ್ಷದಿಂದ ವರ್ಷಕ್ಕೆ ಎನ್‌ಸಿಬಿಯ ಪ್ರಯೋಜನಗಳು ಹೆಚ್ಚು. ನೀವು ಅಪಘಾತ ಎಸಗದೇ, ಯಾವುದೇ ಕ್ಲೈಂಗಳನ್ನು ಮಾಡದೆ ಪ್ರತಿ ವರ್ಷ ಪಾಲಿಸಿ ರಿನೀವಲ್ ಮಾಡಿಸುತ್ತಿದ್ದರೆ, ವರ್ಷದಿಂದ ವರ್ಷಕ್ಕೆ ನಿಮ್ಮ ಪಾಲಿಸಿಯ ಪ್ರೀಮಿಯಂ ಮೊತ್ತದಲ್ಲಿ ಶೇ.20ರಿಂದ ಶೇ.50ರಷ್ಟು ಕಡಿಮೆಯಾಗುತ್ತಾ ಸಾಗುತ್ತದೆ. ಒಂದೊಮ್ಮೆ ನೀವು ಐದು ವರ್ಷ ಯಾವುದೇ ಅಪಘಾತ ಎಸಗದೇ, ಯಾವುದೇ ಕ್ಲೈಂ ಮಾಡದೇ ವಾಹನ ನಿರ್ವಹಿಸಿದ್ದೇ ಆದರೆ, ವಿಮಾ ಕಂಪನಿ ನಿಮಗೆ ಶೇ.50ರಷ್ಟು ಡಿಸ್ಕೌಂಟ್ ನೀಡಬಹುದು.
ಖರೀದಿಸುವುದೆಲ್ಲಿ?
ಮೊದಲೆಲ್ಲಾ ವಾಹನಗಳಿಗೆ ವಿಮೆ ಮಾಡಿಸುವುದು ಕಷ್ಟದ ಕೆಲಸವಾಗಿತ್ತು. ಮೊದಲು ವಿಮಾ ಕಂಪನಿಯ ಪ್ರತಿನಿಧಿಯನ್ನು ಸಂಪರ್ಕಿಸಿ, ಆತ ಬಂದು ವಾಹನದ ಸ್ಥಿತಿಗತಿ ಪರಿಶೀಲಿಸಿ, ಹತ್ತಾರು ಪುಟಗಳ ಫಾರಂ ಭರ್ತಿ ಮಾಡಿಸಿಕೊಂಡು, ಐದಾರು ಕಡೆ ಸಹಿ ಪಡೆದು ಹೋಗಿ, ವಾಹನದ ವಿಮಾ ಪತ್ರವನ್ನು ತಲುಪಿಸಲು ತಿಂಗಳ ಸಮಯವೇ ಬೇಕಿತ್ತು. ಆದರೆ ಈಗ ಎಲ್ಲವೂ ಡಿಜಿಟಲೈಸ್ ಆಗಿರುವುದರಿಂದ, ಮೊದಲಿನಷ್ಟು ಜಂಜಾಟ ಇಲ್ಲ. ಆನ್‌ಲೈನ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ವಾಹನ ವಿಮೆ ಮಾಡಿಸಬಹುದು. ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕ ಪಾಲಿಸಿ ಬಜಾರ್ ರೀತಿಯ ವೆಬ್‌ಸೈಟ್‌ಗಳಿಗೆ ಭೇಟಿ ಕೊಟ್ಟರೆ, ಜಗತ್ತಿನಲ್ಲಿರುವ ಎಲ್ಲ ವಿಮಾ ಕಂಪನಿಗಳು, ಅವುಗಳು ನೀಡುತ್ತಿರುವ ಆಫರ್‌ಗಳು, ನಿಮ್ಮ ವಾಹನಕ್ಕೆ ವಿವಿಧ ಕಂಪನಿಗಳು ಕೋಟ್ ಮಾಡಿರುವ ಪ್ರೀಮಿಯಂ ಮೊತ್ತ, ಪ್ರಯೋಜನಗಳು ಸೇರಿ ಎಲ್ಲ ಅಂಶಗಳು ಕ್ಷಣಾರ್ಧದಲ್ಲಿ ಕಣ್ಣೆದುರಿಗೆ ಬರುತ್ತವೆ.
ನಿಮಗೆ ಸೂಕ್ತವೆನಿಸುವ ಕಂಪನಿಯ ವಿಮೆಯನ್ನು ಆನ್‌ಲೈನ್‌ನಲ್ಲೇ ಖರೀದಿಸಬಹುದು. ಹಣ ಪಾವತಿ ಮಾಡಿದ ಒಂದು ನಿಮಿಷದ ಒಳಗಾಗಿ ಪಾಲಿಸಿ ದಾಖಲೆಗಳು ನಿಮ್ಮ ಇಮೇಲ್ ವಿಳಾಸಕ್ಕೆ ಬಂದು ಬೀಳುತ್ತವೆ. ಇದಾದ ವಾರದ ಒಳಗೆ ವಿಮೆಯ ಅಸಲಿ ಪತ್ರಗಳು ಕೊರಿಯರ್ ಮೂಲಕ ನಿಮ್ಮ ಮನೆಗೆ ಬರುತ್ತವೆ. ಹೀಗಾಗಿ, ಆನ್‌ಲೈನ್ ಮೂಲಕ ವಿಮೆ ಖರೀದಿಸುವುದು ಅತ್ಯಂತ ಸುಲಭ ಮಾರ್ಗ. ಆನ್‌ಲೈನ್ ಮೂಲಕ ವಿಮೆ ಖರೀದಿಸುವುದರ ದೊಡ್ಡ ಲಾಭವೆಂದರೆ, ಇಲ್ಲಿ ನಿಮಗೆ ಹೆಚ್ಚು ಆಯ್ಕೆಗಳಿರುತ್ತವೆ. ಹೀಗಾಗಿ, ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚು ಪ್ರಯೋಜನಗಳನ್ನು ನೀಡುವ ಪಾಲಿಸಿಯನ್ನು ನೀವು ಖರೀದಿಸಬಹುದು.
ಅಂದುಕೊಂಡಷ್ಟು ಸುಲಭವಲ್ಲ ಕ್ಲೈಂ
ವಿಮಾ ಕಂಪನಿ ಕೇಳುವ ಎಲ್ಲ ದಾಖಲೆಗಳನ್ನು ನೀವು ಒದಗಿಸಿದ ಮಾತ್ರಕ್ಕೆ ಕೆಲಸ ಮುಗಿಯಿತು ಎಂದು ನಿಟ್ಟುಸಿರು ಬಿಡುವಂತಿಲ್ಲ. ಏಕೆಂದರೆ ವಿಮೆ ಖರೀದಿಸುವಾಗ ಏನೊಂದೂ ಪ್ರಶ್ನೆ ಕೇಳದೆ ಹಣ ಪಡೆಯುವ ಕಂಪನಿಗಳು, ಕ್ಲೈಂ ವಿಷಯಕ್ಕೆ ಬಂದಾಗ ಜಿಪುಣತನ ಪ್ರದರ್ಶಿಸುತ್ತವೆ. ಜತೆಗೆ, ನೂರೆಂಟು ಪರೀಕ್ಷೆ, ಕ್ರಾಸ್‌ಚೆಕ್ ಎನ್ನುತ್ತಾ ವಾಹನ ಮಾಲೀಕರ ಜೀವ ತಿನ್ನುತ್ತವೆ.
ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸಿದ ನಂತರವೂ, ಕಂಪನಿಯು ಒಬ್ಬ ಸರ್ವೇಯರ್‌ಅನ್ನು ನೇಮಿಸುತ್ತದೆ. ಸತ್ಯಾಸತ್ಯತೆ ತಿಳಿಯಲು ಆತ ವಿಮೆಗೆ ಒಳಪಟ್ಟ ನಿಮ್ಮ ಕಾರು, ಬೈಕು ಅಥವಾ ಇನ್ನಾವುದೇ ವಾಹನವನ್ನು ಖುದ್ದು ಪರಿಶೀಲಿಸುತ್ತಾನೆ. ಬಳಿಕ ವಾಹನದ ರಿಪೇರಿಗೆ ತಗುಲಬಹುದಾದ ಮೊತ್ತವನ್ನು ಅಂದಾಜಿಸುತ್ತಾನೆ. ಈ ಸರ್ವೇಯರ್ ಬಂದು ವಾಹನ ಪರಿಶೀಲಿಸಿದ ಬಳಿಕವೇ ನೀವು ವಾಹನವನ್ನು ರಿಪೇರಿಗೆ ಕೊಡಬೇಕು. ಮೊದಲೇ ರಿಪೇರಿ ಮಾಡಿಸಿದ್ದರೆ ನಿಮ್ಮ ವಿಮಾ ಮೊತ್ತ ಖೋತಾ!
ಒಂದೊಮ್ಮೆ ನಿಮ್ಮ ವಾಹನ ಕಳವಾಗಿದ್ದಲ್ಲಿ ವಿಮಾ ಕಂಪನಿಯ ಪ್ರತಿನಿಧಿಯ ಜತೆ, ವಾಹನ ಕಳವಾದ ಸ್ಥಳದ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕು. ವಾಹನದೊಂದಿಗೆ ಅಸಲಿ ಆರ್‌ಸಿ ಕೂಡಾ ಕಳುವಾಗಿದ್ದರೆ, ಸಂಬಂಧಿಸಿದ ಆರ್‌ಟಿಒದಲ್ಲೂ ದೂರು ದಾಖಲಿಸಿ ಮತ್ತೂಂದು ಆರ್‌ಸಿ ಪಡೆಯಬೇಕು. ಇಷ್ಟೆಲ್ಲಾ ಮಾಡಿದ ಬಳಿಕ ಪೊಲೀಸರು ಮತ್ತು ಆರ್‌ಟಿಒ ವಾಹನ ಹುಡುಕಲು ಇಂತಿಷ್ಟು ಸಮಯ ನಿಗದಿಯಾಗಿರುತ್ತದೆ. ಆ ಸಮಯ ಮುಗಿಯುವವರೆಗೂ ವಿಮೆ ಹಣ ನಿಮ್ಮ ಕೈಸೇರುವುದಿಲ್ಲ. ಇದಕ್ಕೆ ತಿಂಗಳುಗಳೇ ತಗುಲುತ್ತವೆ.
ಕ್ಲೈಂ ಮಾಡುವಾಗ ಇವೆಲ್ಲಾ ಬೇಕು
– ವಿಮಾ ಪಾಲಿಸಿಯ ಅಸಲಿ ದಾಖಲೆ
– ವಾಹನದ ನೋಂದಣಿಗೆ ಸಂಬಂಧಿಸಿದ ದಾಖಲೆ (ಆರ್‌ಸಿ)
– ವಾಹನ ಮಾಲೀಕರ ಚಾಲನಾ ಪರವಾನಗಿ (ಡಿಎಲ್)
– ವಾಹನ ಅಪಘಾತಕ್ಕೀಡಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಪಡೆದ ಪ್ರಥಮ ವರ್ತಮಾನ ವರದಿ (ಎಫ್ಐಆರ್) ಪ್ರತಿ
– ವಾಹನ ರಿಪೇರಿ ಮಾಡಿಸಿದ್ದಕ್ಕೆ ಪ್ರತಿಯಾಗಿ ನೀವು ಪಾವತಿಸಿದ ಹಣದ ಅಧಿಕೃತ ಹಾಗೂ ಸವಿವರವಾದ ಬಿಲ್
ದಂಡ ಹಾಕುತ್ತಾರೆ ಎಂಬ ಕಾರಣಕ್ಕೋಸ್ಕರ ವೆಹಿಕಲ್ ಇನ್ಷೊರೆನ್ಸ್ ಮಾಡಿಸುವವರ ಸಂಖ್ಯೆ ನಮ್ಮಲ್ಲಿ ಹೆಚ್ಚು. ಹೀಗಾಗಿ ಹೆಚ್ಚು ಮುತುವರ್ಜಿ ವಹಿಸದೆ, ನಿಬಂಧನೆಗಳನ್ನು ಓದದೆ ವಿಮೆ ಮಾಡಿಸಿಬಿಡುತ್ತಾರೆ. ಕ್ಲೈಮ್ ಮಾಡುವ ಸಂದರ್ಭ ಬಂದಾಗಲೇ ಅವರಿಗೆ ತಮ್ಮ ತಪ್ಪಿನ ಅರಿವಾಗೋದು. ಅದಕ್ಕಾಗಿ ವೆಹಿಕಲ್ ಇನ್ಷೊರೆನ್ಸ್ ಮಾಡಿಸುವ ಮುನ್ನವೇ ಅದರ ಕುರಿತು ತಿಳಿದುಕೊಳ್ಳಬೇಕಾದ ಅಗತ್ಯವಿದೆ.
– ಗುನೀìಶ್ ಖುರಾನಾ, ಅಧ್ಯಕ್ಷ, ಬಜಾಜ್ ಅಲಾಯಂಝ್
– ಬಸವರಾಜ ಕೆ. ಜಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.