ಲೈಂಗಿಕ ಹಸಿವನ್ನೇ ಪ್ರೀತಿ ಎನ್ನಲಾದೀತೇ?
Team Udayavani, Oct 15, 2019, 5:08 AM IST
ಪ್ರೇಮವೆಂದರೇನು? ಭಾರತೀಯ ತಾತ್ವಿಕ ಗ್ರಂಥಗಳು ಪ್ರೇಮವನ್ನು ಲೈಂಗಿಕ ಆಕರ್ಷಣೆಯೊಂದಿಗೆ ಎಂದಿಗೂ ಸಮೀಕರಿಸಿಲ್ಲ. ಆದರೆ ಪಾಶ್ಚಾತ್ಯ ಜಗತ್ತಿನಲ್ಲಿ ಪ್ರೇಮಕ್ಕೆ ಸಂವಾದಿ ಪದ ಲವ್. ಈ ಪದದ ಜೊತೆಗೆ ಇರುವ ಇನ್ನೊಂದು ಸಂಗತಿ ಲೈಂಗಿಕ ಹಪಾಹಪಿ. ಒಬ್ಬಳು ಯುವತಿಗೆ ಯುವಕ, ಒಬ್ಬ ಯುವಕನಿಗೆ ಯುವತಿ ನಾನು ನಿನ್ನನ್ನು ಪ್ರೀತಿಸುತ್ತೇನೆಂದು ಹೇಳುವಾಗಲೇ, ಅದನ್ನು ಕೇಳುವಾಗಲೇ ಅಲ್ಲೊಂದು ಅನುಮಾನ ಶುರುವಾಗುತ್ತದೆ. ಇದು ನಿಜವಾಗಲೂ ಪ್ರೀತಿನಾ? ಲೈಂಗಿಕ ಆಕರ್ಷಣೆಯಾ? ಎಂಬ ಅನುಮಾನವದು. ಪ್ರೀತಿ ಎಂಬ ಪದದಲ್ಲಿ ಬಹಳ ವಿಶಾಲವಾದ ಅರ್ಥವಿದೆ. ಅದನ್ನು ಯಾವುದೇ ಒಬ್ಬ ವ್ಯಕ್ತಿಗೆ, ವಸ್ತುವಿಗೆ, ವಿಷಯಕ್ಕೆ ಸೀಮಿತ ಮಾಡಲಾಗುವುದಿಲ್ಲ. ಪ್ರೀತಿ ಮರಳಿ ನಿರೀಕ್ಷೆ ಮಾಡುವುದಿಲ್ಲ. ಅದರ ಸಾರ್ಥಕ್ಯವಿರುವುದೇ ಉದಾರವಾಗಿ ಎಲ್ಲರಿಗೂ ಹಂಚುವುದರಲ್ಲಿ. ಒಬ್ಬ ವ್ಯಕ್ತಿಗೆ ಸೀಮಿತ ಮಾಡಿ ನಿನ್ನನ್ನು ಪ್ರೀತಿಸುತ್ತೇನೆಂದು ಹೇಳುವಾಗ, ನಿನ್ನನ್ನು ಜಾಸ್ತಿ ಪ್ರೀತಿಸುತ್ತೇನೆ, ಇನ್ನೊಬ್ಬರ ಮೇಲಿನ ಪ್ರೀತಿ ಕಡಿಮೆ ಎನ್ನುವಾಗ ತಾರತಮ್ಯದ ಅನುಭವವಾಗುತ್ತದೆ. ಪ್ರೀತಿಯಲ್ಲಿ ತಾರತಮ್ಯವಿರುವುದಿಲ್ಲ. ಒಬ್ಟಾಕೆಯನ್ನು ಜಾಸ್ತಿ ಪ್ರೀತಿಸುವುದು, ಉಳಿದವರನ್ನು ಕಡಿಮೆ ಪ್ರೀತಿಸುವುದು ಹೇಗೆ ಸಾಧ್ಯ? ಹೀಗೆ ವ್ಯತ್ಯಾಸ ಮಾಡುವವರಲ್ಲಿ ನಿಜವಾದ ಪ್ರೀತಿಯಿಲ್ಲ ಎನ್ನಬೇಕಾಗುತ್ತದೆ ಅಥವಾ ತಮ್ಮ ಪ್ರೀತಿಯನ್ನು ವಿಶ್ವವ್ಯಾಪಿ ಮಾಡುವುದರಲ್ಲಿ ಅವರು ಸೋತಿದ್ದಾರೆ ಎನ್ನುವುದೇ ಸತ್ಯ. ಹೇಗೇ ನೋಡಿದರೂ, ಹೇಗೇ ತರ್ಕಿಸಿದರೂ, ವ್ಯಾಖ್ಯಾನಿಸಿದರೂ, ಪ್ರೀತಿಯನ್ನು ಸಣ್ಣ ವ್ಯಾಪ್ತಿಯಲ್ಲಿ ತರಲು ಸಾಧ್ಯವೇ ಇಲ್ಲ. ಹಾಗೆ ತಂದಕೂಡಲೇ ಅದನ್ನು ಅದು ಪ್ರೀತಿಯೆನಿಸಿಕೊಳ್ಳುವ ಅರ್ಹತೆ ಕಳೆದುಕೊಳ್ಳುತ್ತದೆ.
ಆದ್ದರಿಂದಲೇ ಯುವಕ-ಯುವತಿಯ ನಡುವೆ ಹುಟ್ಟುವ ಪ್ರೇಮವನ್ನು ಪವಿತ್ರವೆಂದು ಎಷ್ಟೇ ಹೇಳಿದರೂ, ಅದರ ವ್ಯಾಪ್ತಿ ಚಿಕ್ಕದಾಗಿರುವುದರಿಂದ, ಅದರಲ್ಲಿ ತಾರತಮ್ಯವಿರುವುದರಿಂದ ಅಲ್ಲೇನೋ ವ್ಯತ್ಯಾಸ ಕಾಣುತ್ತದೆ. ಹಾಗೂ ಪರಸ್ಪರ ನಿರೀಕ್ಷೆಯಿರುವುದರಿಂದ (ಮದುವೆಯಾಗುವುದೇ ಪ್ರೀತಿಯ ಗಮ್ಯ ಎಂದು ತಿಳಿದಿರುತ್ತಾರೆ) ಈ ಪ್ರೀತಿ ಉದಾತ್ತ ಎನ್ನಲಾಗುವುದಿಲ್ಲ. ಈ ರೀತಿಯ ಪ್ರೀತಿಯಲ್ಲಿರುವುದು ಲೈಂಗಿಕ ಆಕರ್ಷಣೆ. ಬಹುತೇಕ ಪ್ರೇಮಿಗಳು ಅದನ್ನು ಸುಳ್ಳು ಎಂದೇ ವಾದಿಸುತ್ತಾರೆ. ತಮ್ಮ ಪ್ರೀತಿಯಲ್ಲಿ ಲೈಂಗಿಕ ಆಸಕ್ತಿಯೇ ಇಲ್ಲ ಎನ್ನುವವರು ಮದುವೆಯಾಗುವ ಬಗ್ಗೆ ತೀವ್ರ ಆಸಕ್ತಿ ಇಟ್ಟುಕೊಂಡಿರುತ್ತಾರೆ. ಮದುವೆಯಾಗದಿದ್ದರೆ, ತಮ್ಮ ಪ್ರೀತಿಗೆ ಸಾರ್ಥಕ್ಯವೇ ಇಲ್ಲ ಎನ್ನುತ್ತಾರೆ. ಇನ್ನು ಕೆಲವರು ಮದುವೆಗೆ ಮುಂಚೆ ಪ್ರೀತಿಯ ಹೆಸರಲ್ಲಿ ತಮ್ಮ ಲೈಂಗಿಕ ಹಸಿವನ್ನು ತಣಿಸಿಕೊಳ್ಳುತ್ತಾರೆ. ಲೈಂಗಿಕ ಹಸಿವನ್ನೇ ಪ್ರೀತಿಯೆಂದು ತಪ್ಪಾಗಿ ಭಾವಿಸಿರುವುದು, ಆ ರೀತಿ ನಾಮಕರಣ ಮಾಡಿರುವುದು ಪಾಶ್ಚಾತ್ಯ ಕ್ರಮ.
ಭಾರತೀಯರ ಪ್ರೀತಿಯೇ ಬೇರೆ. ಹೌದು, ಈ ದೇಶದ ಯುವಕರು ವಿದೇಶಿ ವಿಚಾರಗಳಿಂದ, ಜೀವನಪದ್ಧತಿಗಳಿಂದ ಬಲವಾಗಿ ಆಕರ್ಷಿತರಾಗಿದ್ದಾರೆ. ಹಾಗಾಗಿ ಭಾರತೀಯವೆಂದರೇನು? ಪಾಶ್ಚಾತ್ಯವೆಂದರೇನು? ಎಂಬ ಗೊಂದಲವೇ ಹುಟ್ಟಿಕೊಳ್ಳುತ್ತದೆ. ಇಷ್ಟೆಲ್ಲದರ ನಡುವೆ ಇಲ್ಲಿ ಹುಟ್ಟಿದ ಯುಗಪುರುಷರು, ಸಂತರು, ಸನ್ಯಾಸಿಗಳು, ಅವಧೂತರು, ಯೋಗಿಗಳು, ಜ್ಞಾನಿಗಳು ಪ್ರೀತಿಯ ನಿಜವಾದ ಅರ್ಥವನ್ನು ಪದೇಪದೇ ತಿಳಿಸಿ, ಆ ಭಾವವನ್ನು ನಮ್ಮಲ್ಲಿ ಶಾಶ್ವತವಾಗಿ ಜಾಗೃತವಾಗಿಟ್ಟಿದ್ದಾರೆ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ಹಿಮಾಲಯವನ್ನು ನಾವು ಪ್ರೀತಿಸುತ್ತೇವೆ, ಇಷ್ಟಪಡುತ್ತೇವೆ, ಅದು ನಮ್ಮೊಂದಿಗೇ ಇರಬೇಕೆಂದು ಬಯಸುವುದಿಲ್ಲ, ಇದು ಪ್ರೀತಿಯ ನಿಜಸ್ವರೂಪ. ಅಂದರೆ ಪ್ರೀತಿಯಲ್ಲಿ ನಿರೀಕ್ಷೆಗಳಿರುವುದಿಲ್ಲ. ಭಾರತೀಯ ಪರಂಪರೆ ಹೇಳಿದ್ದು ಇದನ್ನೇ. ಭಾರತದ ಮಹಾಪುರುಷರು ಪ್ರೀತಿಯ ಔನ್ನತ್ಯವನ್ನು ಮುಟ್ಟಿ, ಅದು ಹೇಗಿರಬೇಕೆಂದು ಸೂಚಿಸಿದವರು. ಇವತ್ತಿಗೂ ಅವರನ್ನು ನೆನೆಸಿಕೊಳ್ಳುವಾಗ ಈ ಭಾವವನ್ನು ಮರೆಯಲಾಗುವುದಿಲ್ಲ. ಶಿವನ ಬಗ್ಗೆ ಅಕ್ಕಮಹಾದೇವಿಯ ಪ್ರೀತಿ, ಕೃಷ್ಣನ ಮೇಲೆ ಮೀರಾಬಾಯಿಯ ಪ್ರೀತಿ, ಶಾರದಾ ಮಾತೆ ತಮ್ಮ ಪತಿ ರಾಮಕೃಷ್ಣ ಪರಮಹಂಸರನ್ನು ಪ್ರೀತಿಸಿದ್ದು ಅಷ್ಟು ಮಾತ್ರವಲ್ಲ ಬದುಕಿದ್ದು ಹೀಗೆಯೇ. ಇಂತಹ ಮಹೋನ್ನತ ದರ್ಶನವನ್ನು ರಾಮಾಯಣದಲ್ಲಿ ಕಾಣಬಹುದು. ಶ್ರೀರಾಮ, ಆತನ ಪತ್ನಿ ಸೀತೆ, ಭರತ, ಲಕ್ಷ್ಮಣ, ಶತೃಘ್ನ, ಹನುಮಂತ, ವಿಭೀಷಣ, ರಾವಣನ ಪತ್ನಿ ಮಂಡೋದರಿ, ವಿಭೀಷಣನ ಪತ್ನಿ ಸರಮೆ ಇವರೆಲ್ಲರ ಪ್ರೀತಿಗೆ ಅಸೀಮ.
-ನಿರೂಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.