ನಾಳೆಯಿಂದ ಹಾಸನಾಂಬೆಯ ದರ್ಶನ ಆರಂಭ


Team Udayavani, Oct 16, 2019, 3:00 AM IST

hasanambe

ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿ ದೇವತೆ ಹಾಸನಾಂಬೆಯ ದರ್ಶನ ಅ.17ರಿಂದ ಆರಂಭವಾಗಲಿದ್ದು, ಅ.28ರ ವರೆಗೂ ಭಕ್ತರು ದೇವಿಯ ದರ್ಶನಕ್ಕೆ ಹಾಸನ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡುತ್ತಿದೆ. ಆದರೆ ಜಾತ್ರಾ ಮಹೋತ್ಸವದ ಸಿದ್ಧತೆಗೆ ಮಳೆ ಅಡಚಣೆಯಾಗಿದ್ದು, ಅರೆ, ಬರೆ ಸಿದ್ಧತೆಯ ನಡುವೆಯೇ ಗುರುವಾರದಿಂದ ಹಾಸನಾಂಬಾ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ.

ಕಳೆದ ಒಂದು ತಿಂಗಳನಿಂದಲೂ ಹಾಸನ ಜಿಲ್ಲಾಡಳಿತವು ಹಾಸನಾಂಬಾ ಜಾತ್ರಾ ಮಹೋತ್ಸವದ ಸಿದ್ಧತೆಯಲ್ಲಿ ತೊಡಗಿದ್ದು, ವಿವಿಧ ಇಲಾಖೆಗಳಿಗೆ ಮೂಲ ಸೌಕರ್ಯದ ಹೊಣೆಯನ್ನು ವಹಿಸಿದೆ. ದೇವಾಲಯದ ಆವರಣದಲ್ಲಿ ಸ್ವಚ್ಛತೆ, ದೇವಾಲಯದ ಸುತ್ತಮುತ್ತ ಸ್ವಚ್ಛತೆ, ದೇವಾಲಯಕ್ಕೆ ಬಣ್ಣ ಬಳಿಯುವುದು, ಭಕ್ತರು ಸುಗಮವಾಗಿ ದೇವಿಯ ದರ್ಶನ ಪಡೆಯಲು ಸರದಿಯ ಸಾಲುಗಳ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಮತ್ತಿತರ ವ್ಯವಸ್ಥೆ, ವಿದ್ಯುದ್ಧೀಪದ ಅಲಂಕಾರವನ್ನು ಜಿಲ್ಲಾಡಳಿತವು ಮಾಡಿದೆ. ಆದರೆ ರಸ್ತೆಗಳ ಗುಂಡಿ ಮುಚ್ಚುವ ‌ಸ್ವಚ್ಛತೆಯ ಕೆಲಸ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ.

ರಸ್ತೆ ಅಭಿವೃದ್ಧಿಗೆ ಮಳೆ ಅಡ್ಡಿ: ದೇವಾಲಯದ ಹಿಂಭಾಗದ ಹೊಸಲೈನ್‌ ರಸ್ತೆ ಡಾಂಬರೀಕರಣ ನಡೆಯುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಪ್ರತಿದಿನವೂ ಮಳೆ ಬರುತ್ತಿರುವುದರಿಂದ ಡಾಂಬರೀಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಸಂತೆಪೇಟೆ ಪಾಯಣ್ಣ ಸರ್ಕಲ್‌ನಿಂದ ಹಳೆ ಮಟನ್‌ ಮಾರ್ಕೆಟ್‌ ರಸ್ತೆ ವರೆಗೆ ಮಾತ್ರ ಡಾಂಬರೀಕರಣ ನಡೆದಿದೆ. ಅಲ್ಲಿಂದ ಸಾಲಗಾಮೆ ರಸ್ತೆ ವರೆಗೂ ರಸ್ತೆ ದುರಸ್ತಿ ಆರಂಭವಾಗಿಯೇ ಇಲ್ಲ. ಜಾತ್ರಾ ಮಹೋತ್ಸವದ ವೇಳೆಗೆ ಸರಸ್ವತಿಪುರಂ ಸರ್ಕಲ್‌ನಿಂದ ವರ್ತುಲ ರಸ್ತೆವರೆಗೆ ಸಾಲಗಾಮೆ ರಸ್ತೆಯ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದರೂ ಆ ರಸ್ತೆ ಕಾಮಗಾರಿ ಜಾತ್ರೆ ಮುಗಿದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ದೇವಾಲಯದ ಸುತ್ತಮುತ್ತ ಒಎಫ್ಸಿ ಕೇಬಲ್‌ ಅಳವಡಿಕೆಗೆ ಅಗೆದಿರುವ ರಸ್ತೆ ದುರಸ್ತಿ ಕೆಲಸ ಇನ್ನೂ ಮುಗಿದಿಲ್ಲ. ಆದರೆ ಎನ್‌.ಆರ್‌.ವೃತ್ತದಿಂದ ತಣ್ಣೀರುಹಳ್ಳದವರೆಗೆ ಬಿ.ಎಂ.ರಸ್ತೆಯನ್ನು ಕಾಂಕ್ರೀಟ್‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸಂತೆಪೇಟೆ ಪಾಯಣ್ಣ ಸರ್ಕಲ್‌ ಹೊರತುಪಡಿಸಿ ಉಳಿದಂತೆ ಕಾಂಕ್ರೀಟ್‌ ರಸ್ತೆ ನಿರ್ಮಾಣದ ಕಾಮಗಾರಿ ಪೂರ್ಣಗೊಂಡದ್ದು ಸಮಾಧಾನದ ಸಂಗತಿ.

ಪೌರಕಾರ್ಮಿಕರ ವಿಶೇಷ ತಂಡ ರಚನೆ: ಸ್ವಚ್ಛತೆಯ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಹಾಸನ ನಗರಸಭೆ ಪ್ರಮುಖ ರಸ್ತೆಗಳಲ್ಲಿ ವಿಶೇಷವಾಗಿ ಬಿ.ಎಂ.ರಸ್ತೆಯಲ್ಲಿ ಡೇರಿ ಸರ್ಕಲ್‌ನಿಂದ ಎನ್‌.ಆರ್‌.ವೃತ್ತದವರೆಗೂ ಸ್ವಚ್ಛಗೊಳಿಸಿದೆ. ದೇವಾಲಯದ ಪರಿಸರದಲ್ಲಿ ಸ್ವಚ್ಛತೆಯ ಕೆಲಸ ಭರದಿಂದ ನಡೆಯುತ್ತಿದ್ದು, ಅದಕ್ಕಾಗಿ ಕಾರ್ಮಿಕರ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.

ಜಿಲ್ಲಾಡಳಿತವು ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ ಆರಂಭಿಸಿದರೂ ಮಳೆ ಅಡ್ಡಿಯಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಸಿದ್ಧತೆಯಾಗದೆ ಅರೆ,ಬರೆ ಸಿದ್ಧತೆಯ ನಡುವೆಯೇ ಹಾಸನಾಂಬಾ ಜಾತ್ರಾ ಮಹೋತ್ಸವವು ಆರಂಭವಾಗುತ್ತಿದೆ. ಒಟ್ಟು 13 ದಿನ ನಡೆಯುವ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೂ ಮಳೆ ಕಾಡುವ ಆತಂಕವಿದ್ದು, ಭಕ್ತರ ಸರದಿಯ ಸಾಲಿನುದ್ದಕ್ಕೂ ವಾಟರ್‌ ಪ್ರೂಫ್ ಮೇಲ್ಛಾವಣಿ ಅಳವಡಿಸಲಾಗುತ್ತಿದೆ.

ಶ್ರೀ ಹಾಸನಾಂಬೆಯ ಮಹಿಮೆ: ಶ್ರೀ ಹಾಸನಾಂಬ ದೇವಿಯ ಬಗ್ಗೆ ಪುರಾಣದ ಕತೆಗಳು ಮತ್ತು ಐತಿಹಾಸಿಕದ ಹಲವು ದಾಖಲೆಗಳಿವೆ. ಶ್ರೀ ಹಾಸನಾಂಬೆಯು ಭಕ್ತರ ಬೇಡಿಕೆಗಳನ್ನು ಈಡೇರಿಸುವ, ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿ ಸಂತಸ, ನೆಮ್ಮದಿ ಸಮೃದ್ಧಿ ನೀಡುವ ಶಕ್ತಿ ದೇವತೆ ಎಂಬ ನಂಬಿಕೆಯ ಹಿನ್ನಲೆಯಲ್ಲಿ ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನದ ಭಾಗ್ಯವಿರುವ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗಾಗಿ ದೇವಿಯ ದರ್ಶನದ ಎರಡು ವಾರಗಳಲ್ಲಿ ಕೋಟ್ಯಂತರ ರೂ. ಕಾಣಿಕೆಯೂ ದೇವಾಲಯಕ್ಕೆ ಸಂಗ್ರಹವಾಗಲಿದೆ.

ಪ್ರತಿ ವರ್ಷ ಅಶ್ವಯುಜ ಮಾಸದ ಪೂರ್ಣಿಮೆಯ ನಂತರದ ಗುರುವಾರ ಹಾಸನಾಂಬಾ ದೇಗುಲದ ಬಾಗಿಲು ತೆರೆದು, ಬಲಿಪಾಡ್ಯಮಿಯ (ದೀಪಾವಳಿ ಹಬ್ಬ) ಮರುದಿನ ದೇವಾಲಯದ ಬಾಗಿಲು ಮುಚ್ಚುವ ಸಂಪ್ರದಾಯ ನಡೆದುಕೊಂಡು ಬಂದಿದೆ. ದೇವಿಯ ಗರ್ಭಗುಡಿಯಲ್ಲಿ ಹುತ್ತದ ಮಾದರಿಯಲ್ಲಿರುವ ಮೂರು ಗದ್ದುಗೆಗಳಿವೆ. ಸಪ್ತ ಮಾತೃಕೆಯರ ಪೈಕಿ ವೈಷ್ಣವಿ, ಮಹೇಶ್ವರಿ, ಕೌಮಾರಿಯರೇ ಆ ಮೂರು ಹುತ್ತದ ರೂಪಗಳು ಎಂಬ ನಂಬಿಕೆಯಿದೆ. ಗದ್ದುಗೆಗಳ ರೂಪದ ದೇವಿಯ ದರ್ಶನ ವರ್ಷಕ್ಕೊಮ್ಮೆ ಮಾತ್ರ. ಹಾಗಾಗಿ ರಾಜ್ಯದ ವಿವಿಧೆಡೆಯಿಂದ ಹಾಗೂ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಮಾಡುತ್ತಾರೆ.

ಸಪ್ತ ಮಾತೃಕೆಯರಾದ ಬ್ರಾಹ್ಮಿದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿ ವಾರಣಾಸಿ (ಕಾಶಿ)ಯಿಂದ ದಕ್ಷಿಣಾಭಿಮುಖವಾಗಿ ವಿಹಾರಾರ್ಥವಾಗಿ ಬಂದರೆಂದು, ಅವರಲ್ಲಿ ಪೈಕಿ ವೈಷ್ಣವಿ, ಮಹೇಶ್ವರಿ, ಕೌಮಾರಿಯರೇ ಹುತ್ತದ ರೂಪದಲ್ಲಿ ಹಾಸನಾಂಬಾ ದೇವಾಲಯದಲ್ಲಿ ನೆಲೆಸಿದ್ದಾರೆ. ಬ್ರಾಹ್ಮಿದೇವಿಯು ಆಲೂರು ತಾಲೂಕು ಕೆಂಚಮ್ಮನ ಹೊಸಕೋಟೆಯಲ್ಲಿ ಕೆಂಚಮ್ಮದೇವಿಯಾಗಿ, ಚಾಮುಂಡಿ, ವಾರಾಹಿ ಮತ್ತು ಇಂದ್ರಾಣಿಯವರು ಹಾಸನದ ದೇವಿಗೆರೆಯಲ್ಲಿ ನೆಲಸಿದ್ದಾರೆ ಎಂಬ ನಂಬಿಕೆಯಿದೆ.

ಬ್ರಹ್ಮನ ವರದಿಂದ ಉನ್ಮತ್ತನಾದ ಅಂಧಕಾಸುರನ ಪ್ರತಿ ಹನಿ ರಕ್ತದಿಂದಲೂ ಒಬ್ಬೊಬ್ಬ ಅಂಧಕಾಸುರ ಹುಟ್ಟುತ್ತಿದ್ದ. ರಕ್ತ ಬೀಳುವುದನ್ನು ತಡೆಯಲು ಶಿವನು ಒಂದು ಶಕ್ತಿಯನ್ನು ಸೃಷ್ಟಿಸಿದ. ಅದೇ ಯೋಗೇಶ್ವರಿ. ಇತರೆ ದೇವತೆಗಳೂ ಶಿವನ ಸಹಾಯಕ್ಕೆ ತಮ್ಮ ಶಕ್ತಿಯನ್ನು ತುಂಬಲು ಮುಂದಾದರು. ಹೀಗೆ ಜನ್ಮ ತಾಳಿದವರೇ ಸಪ್ತ ಮಾತೃಕೆಯರು. 64 ಕಲೆಗಳಿಗೆ ಅಧಿದೇವತೆಯರಾದ ಸಪ್ತಮಾತೃಕೆಯರು ಶ್ರೀ ಹಾಸನಾಂಬೆಯ ರೂಪದಲ್ಲಿದ್ದಾರೆ ಎಂಬುದು ಪುರಾಣ.

ಐತಿಹಾಸಿಕವಾಗಿ ಹಾಸನದ ಪ್ರದೇಶವನ್ನು ಚೋಳರಸರ ಅಧಿಪತಿ ಬುಕ್ಕಾನಾಯಕ ವಂಶಸ್ಥರು ಆಳುತ್ತಿದ್ದರು. ಅವರ ವಂಶಸ್ಥ ಕೃಷ್ಣಪ್ಪ ನಾಯಕ ಒಮ್ಮೆ ಪ್ರಯಾಣ ಹೊರಟಾಗ ಒಂದು ಮೊಲ ಅಡ್ಡ ಬಂದು ಪಟ್ಟಣ ಪ್ರವೇಶಿಸಿತು. ಇದು ಅಪಶಕುನ ಎಂದು ಕೃಷ್ಣಪ್ಪನಾಯಕ ನೊಂದುಕೊಂಡಿದ್ದಾಗ ಹಾಸನಾಂಬೆ ಪ್ರತ್ಯಕ್ಷಳಾಗಿ ಮೊಲ ಹೊಕ್ಕಿದ ಪ್ರದೇಶದಲ್ಲಿ ಕೋಟೆಯನು ಕಟ್ಟು ಎಂದು ಎಂದು ಹೇಳಿದಳೆಂದು, ಅಲ್ಲಿ ಕೋಟೆ ಕಟ್ಟಿ ಹಾಸನಾಂಬ ಎಂದು ಕೃಷ್ಣಪ್ಪನಾಯಕ ಹೆಸರಿಟ್ಟನೆಂಬುದು ಐತಿಹ್ಯ. ಹಾಸನ ತಾಲೂಕು ಕುದುರುಗುಂಡಿ ಗ್ರಾಮದಲ್ಲಿನ ಕ್ರಿ.ಶ.1140 ರಲ್ಲಿ ಸ್ಥಾಪತವಾದ ವೀರಗಲ್ಲಿನ ಶಿಲಾ ಶಾಸನದಲ್ಲಿ ಹಾಸನಾಂಬೆಯ ಹಾಸನವೆಂಬ ಉಲ್ಲೇಖವಿದೆ.

* ಎನ್‌. ನಂಜುಂಡೇಗೌಡ

ಟಾಪ್ ನ್ಯೂಸ್

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

madhu-bangara

Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.