ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು
Team Udayavani, Oct 16, 2019, 12:24 PM IST
ಬಳ್ಳಾರಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಐತಿಹಾಸಿಕ ಹಂಪಿ ಉತ್ಸವವನ್ನು ಬರ, ನೆರೆ ಹಾವಳಿ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಎರಡು ದಿನಗಳ ಕಾಲ ಸರಳ ಆಚರಣೆಗೆ ಸಿಎಂ ಯಡಿಯೂರಪ್ಪ ಮೌಖಿಕವಾಗಿ ಅನುಮತಿ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆಹಾವಳಿ ಜತೆಗೆ ಬರ ಪರಿಸ್ಥಿತಿಯೂ ಆವರಿಸಿದೆ. ಈ ಹಿನ್ನೆಲೆಯಲ್ಲಿ ಹಂಪಿ ಉತ್ಸವವನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂಬ ಉದ್ದೇಶದಿಂದ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾ ಉತ್ಸುವಾರಿ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಅವರೂ ಸಹ ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ಎರಡು ದಿನಗಳ ಮಟ್ಟಿಗೆ ಸರಳವಾಗಿಯಾದರೂ ಹಂಪಿ ಉತ್ಸವವನ್ನು ಆಚರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಡಿಸಿಎಂ ಹುದ್ದೆಗೆ ಸಂಬಂಧಿಸಿದಂತೆ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ರಾಮುಲು, ಈ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಶಾಸಕ ಸೋಮಶೇಖರರೆಡ್ಡಿ ಸೇರಿ ಹಲವರಿಗೆ ನನ್ನ ಮೇಲೆ ಅಭಿಮಾನ ಇರಬಹುದು. ಅವರಿಗೂ ವಾಕ್ ಸ್ವಾತಂತ್ರ್ಯ ಇದೆ. ಹಾಗಂತ ಪಕ್ಷಕ್ಕೆ ಮುಜುಗರ ಉಂಟು ಮಾಡಬಾರದು ಎಂದರು.
ನೆರೆಹಾವಳಿಯಿಂದಾಗಿ ರೈತರು ಮತ್ತು ನೇಕಾರರಿಂದ ಸಾಲಮನ್ನಾ ಮಾಡುವಂತೆ ಒತ್ತಾಯ ಬರುತ್ತಿದೆ. ಈ ಕುರಿತು ಸಿಎಂ ಯಡಿಯೂರಪ್ಪ ಬಳಿ ಚರ್ಚಿಸಲಾಗುವುದು ಎಂದ ಸಚಿವ ರಾಮುಲು, ಸಾಲಮನ್ನಾ ವಿಚಾರದಲ್ಲಿ ಗೊಂದಲ ಇದೆ. ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರ ಸ್ವಾಮಿ ಅವರಿಗೂ ಸ್ಪಷ್ಟತೆ ಇರಲಿಲ್ಲ. ಹಾಗಾಗಿ ಈ ಬಗ್ಗೆ ನಾಳೆ ನಾಡಿದ್ದು ಸಿಎಂ ಬಳಿ ಕೂಲಂಕುಷವಾಗಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಎವ್.ಆರ್.ಗವಿಯಪ್ಪರಿಗೆ ನಿಗಮ ಮಂಡಳಿ ನೀಡಲಾಗಿದೆ. ಅದನ್ನು ಸ್ವೀಕರಿಸಯವಂತೆ ಅವರ ಮನವೊಲಿಸಲು ಪ್ರಯತ್ನಿಸಲಾಗುವುದು. ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಗೆಲ್ಲವುದು ಮುಖ್ಯ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.