ಒಎಫ್ಸಿ ಅಳವಡಿಕೆಗೆ ಹೊಸ ನಿಯಮ
Team Udayavani, Oct 17, 2019, 3:09 AM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಪ್ಟಿಕಲ್ ಫೈಬರ್ ಕೇಬಲ್‌ಗಳ (ಒಎಫ್ಸಿ) ಅಳವಡಿಕೆಯಲ್ಲಿನ ಲೋಪಗಳಿಗೆ ಕಡಿವಾಣ ಹಾಕಲು ಹೊಸ ನಿಯಮ ರೂಪಿಸಲು ಬಿಬಿಎಂಪಿ ಮುಂದಾಗಿದೆ. ಒಎಫ್ಸಿ ಅಳವಡಿಕೆ ಅಕ್ರಮ ತಡೆಯುವ ಉದ್ದೇಶದಿಂದ ಏಜೆನ್ಸಿಗಳಿಗೆ ದುಬಾರಿ ದಂಡ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿದರೂ ಹೊಸದಾಗಿ ಡಾಂಬರೀಕರಣ ಮಾಡಿದ ರಸ್ತೆಗಳನ್ನೂ ಏಜೆನ್ಸಿಗಳು ಅಗೆಯುತ್ತಿರುವುದರಿಂದ ಪ್ರತಿ ವರ್ಷ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿತ್ತು. ಹೀಗಾಗಿ, ನಿಯಮ ರೂಪಿಸಲು ತೀರ್ಮಾನಿಸಲಾಗಿದೆ.
ನೆಲದಡಿಯಲ್ಲೇ ಒಎಫ್ಸಿ ಅಳವಡಿಸಬೇಕು ಎನ್ನುವ ನಿಯಮವಿದ್ದರೂ, ಏಜೆನ್ಸಿಗಳು ನಿಯಮವನ್ನು ಉಲ್ಲಂ ಸಿ, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಒಎಫ್ಸಿ ಅಳವಡಿಸುತ್ತಿದ್ದವು. ಕೇಬಲ್ ಅಳವಡಿಕೆಯಲ್ಲಿ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಒಎಫ್ಸಿ ಅಳವಡಿಕೆ ನಿಯಮವನ್ನು ಸರಿಪಡಿಸುವುದಕ್ಕೆ ಮುಂದಾಗಿರುವ ಬಿಬಿಎಂಪಿ, ಹಾಲಿ ಏಜೆನ್ಸಿಗಳಿಗೆ ನೀಡಿರುವ ಎಲ್ಲ ಅನುಮತಿಯನ್ನು ಮಂಗಳವಾರದಿಂದಲೇ ಜಾರಿಗೆ ಬರುವಂತೆ ನಿಷೇಧ ಮಾಡಿದೆ.
ನೆಲದಡಿಯಲ್ಲಿ ಹಾರಿಜೆಂಟಲ್ ಡೈರೆಕ್ಷನಲ್ ಡ್ರಿಲ್ಲಿಂಗ್ (ಎಚ್‌ಡಿಡಿ) ಯಂತ್ರದ ಮೂಲಕ ಕೇಬಲ್‌ಗಳನ್ನು ಅಳವಡಿಸಲು ಕೆಲ ಏಜೆನ್ಸಿಗಳು ಅನುಮತಿ ಪಡೆದಿವೆ. ಆದರೆ, ಪಾಲಿಕೆಯಿಂದ 100 ಮೀಟರ್‌ಗೆ ಅನುಮತಿ ಪಡೆದು 500 ಮೀಟರ್ ಕೇಬಲ್ ಅಳವಡಿಸುತ್ತಿದ್ದ ಬಗ್ಗೆ ಹಾಗೂ ಕಾಮಗಾರಿ ಮುಗಿದ ನಂತರ ರಸ್ತೆ ದುರಸ್ತಿ ಮಾಡದಿರುವುದು ಪ್ರಮುಖ ರಸ್ತೆಗಳಲ್ಲಿ ರಸ್ತೆಗುಂಡಿ ಸೃಷ್ಟಿಗೆ ಕಾರಣವಾಗಿತ್ತು.
ಹೊಸದಾಗಿ ಅರ್ಜಿ ಸಲ್ಲಿಸಬೇಕು: “ಒಎಫ್ಸಿ ಅಳವಡಿಕೆ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಹೊಸ ನಿಯಮ ರೂಪಿಸಲು ಮುಂದಾಗಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ “ಉದಯವಾಣಿ’ಗೆ ತಿಳಿಸಿದ್ದಾರೆ. “ಬಿಬಿಎಂಪಿ ಈಗ ಒಎಫ್ಸಿ ಅಳವಡಿಸಿಕೊಳ್ಳಲು ಏಜೆನ್ಸಿಗಳಿಗೆ ನೀಡಿರುವ ಅನುಮತಿ ಪತ್ರದಲ್ಲಿ ನಿರ್ದಿಷ್ಟ ಜಾಗ ಮತ್ತು ಅವಧಿಯನ್ನು ನಿಗದಿ ಮಾಡಿಲ್ಲ. ಹೀಗಾಗಿ, ಏಜೆನ್ಸಿಗಳು ಮನಸೋ ಇಚ್ಛೆ ಕಾಮಗಾರಿ ನಡೆಸುತ್ತಿವೆ. ಈಗ ಎಲ್ಲ ಏಜೆನ್ಸಿಗಳಿಗೂ ಹೊಸದಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗುವುದು,
ಏಜೆನ್ಸಿಗಳು ಎಲ್ಲಿ ಕೇಬಲ್ ಅಳವಡಿಸುತ್ತವೆ ಎನ್ನುವುದನ್ನು ಮತ್ತು ಅವಧಿಯನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸಿ ಒಎಫ್ಸಿ ಅಳವಡಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು. “ಯಾವುದೇ ಏಜೆನ್ಸಿಗಳಿಗೆ ಹಣ ಹಿಂದಿರುಗಿಸುವ ಚಿಂತನೆ ಇಲ್ಲ. ಹೊಸ ನಿಯಮದಂತೆ ಎಲ್ಲ ಏಜಿನ್ಸಿಗಳು ಕಡ್ಡಾಯವಾಗಿ ಹೊಸ ಅರ್ಜಿ ಸಲ್ಲಿಸಬೇಕು. ಈ ಹಿಂದೆ ಅರ್ಜಿಯಲ್ಲಿ ಏಜಿನ್ಸಿಗಳ ಕಾಮಗಾರಿಯ ಬಗ್ಗೆ ಸ್ಪಷ್ಟನೆ ಇರಲಿಲ್ಲ. ಹೀಗಾಗಿ, ಬಿಬಿಎಂಪಿಗೂ ಎಲ್ಲೆಲ್ಲಿ ಕಾಮಗಾರಿ ನಡೆಯುತ್ತಿದೆ ಎನ್ನುವುದರ ಮಾಹಿತಿ ಲಭ್ಯವಾಗುತ್ತಿರಲಿಲ್ಲ’ ಎಂದರು.
ಮೂರು ವರ್ಷ ರಸ್ತೆ ಅಗೆಯಲು ಅವಕಾಶವಿಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಎಫ್ಸಿ ಕೇಬಲ್ ಅಳವಡಿಕೆ ಹಾಗೂ ಜಲ ಮಂಡಳಿ ಸೇರಿದಂತೆ ವಿವಿಧ ಕಾಮಗಾರಿಗಳಿಂದ ರಸ್ತೆಗಳು ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮೂರು ವರ್ಷಗಳವರೆಗೆ ತುರ್ತು ಕಾಮಗಾರಿಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಕಾಮಗಾರಿಗಳಿಗೂ ರಸ್ತೆ ಅಗೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಯುಕ್ತರಾದ ಬಿ.ಎಚ್.ಅನಿಲ್‌ಕುಮಾರ್ ಸ್ಪಷ್ಟಪಡಿಸಿದ್ದು ಹೊಸ ಮಾರ್ಗಗಳಲ್ಲಿ ಒಎಫ್ಸಿ ಅಳವಡಿಕೆಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಒಎಫ್ಸಿ ಹಗರಣ ಟಿವಿಸಿಸಿ ಹಾಗೂ ಇಐಸಿ ತನಿಖೆಗೆ: “ಒಎಫ್ಸಿ ಅಳವಡಿಕೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರವಾಗಿ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ 2015ರಿಂದ 2019ರ ನಡುವೆ ನಡೆದಿರುವ ಎಲ್ಲ ಒಎಫ್ಸಿ ಅಳವಡಿಕೆ ಕಾಮಗಾರಿಗಳನ್ನು ಟಿವಿಸಿಸಿ (ತಾಂತ್ರಿಕ ತನಿಖಾ ಕೋಶ) ಹಾಗೂ ಇಐಸಿ (ಇಂಜಿನಿಯರಿಂಗ್ ಸೆಲ್)ಗಳಿಂದ ಪ್ರತ್ಯೇಕ ತನಿಖೆ ಮಾಡುವುದಕ್ಕೆ ಆದೇಶ ಮಾಡಿದ್ದಾರೆ’ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಬೆಂಗಳೂರಿನ ಅಧ್ಯಕ್ಷ ವಿ.ಆರ್.ಮರಾಠೆ ತಿಳಿಸಿದ್ದಾರೆ. “ಬಿಬಿಎಂಪಿ ವ್ಯಾಪ್ತಿಯಲ್ಲಿ ಒಎಫ್ಸಿ ಅಳವಡಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಮಾಹಿತಿ ಮಾಹಿತಿ ಹಕ್ಕು ಮೂಲಕ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆಯುಕ್ತರಿಗೆ ದೂರು ನೀಡಲಾಗಿತ್ತು’ ಎಂದು ಹೇಳಿದ್ದಾರೆ.
* ಹಿತೇಶ್ ವೈ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.