ಐಪಿಎಲ್ ಹರಾಜಿನ ಕರಿಗುದುರೆಗಳು
Team Udayavani, Oct 19, 2019, 4:03 AM IST
ಐಪಿಎಲ್ 12 ಆವೃತ್ತಿಗಳನ್ನು ಪೂರೈಸಿದೆ. ಮುಂದಿನವರ್ಷ 13ನೆ ಐಪಿಎಲ್ ನಡೆಯಲಿದೆ. ಅದಕ್ಕಾಗಿ ಈ ವರ್ಷ ಡಿ.18ರಂದು ಹರಾಜು ನಡೆಯಲಿದೆ. ಇದೇನು ಪೂರ್ಣಪ್ರಮಾಣದ ಹರಾಜಲ್ಲ. ಹಾಗಾಗಿ ಫ್ರಾಂಚೈಸಿಗಳ ಬಳಿ ಕೊಳ್ಳಲು ಬಹಳ ಹಣವಿರುವುದಿಲ್ಲ. ಆದರೂ ಐಪಿಎಲ್ ಹರಾಜಿಗೆ ತನ್ನದೇ ಮೌಲ್ಯವಿದೆ. ಹಣದ ಹೊಳೆಯನ್ನೇ ಹರಿಸುವ ಈ ಕೂಟದ ಪ್ರತೀ ಹರಾಜಿನಲ್ಲೂ ಏನಾದರೊಂದು ಅಚ್ಚರಿಗಳು ಇದ್ದೇ ಇರುತ್ತವೆ. ಯಾರೂ ನಿರೀಕ್ಷೆಯೇ ಮಾಡಿರದ ಆಟಗಾರನಿಗೆ ಭಾರೀ ಮೊತ್ತ ಕೊಟ್ಟು ಫ್ರಾಂಚೈಸಿಗಳು ಏಮಾರಿರುತ್ತವೆ.
ನಿಜಕ್ಕೂ ಪ್ರತಿಭಾವಂತ ಆಟಗಾರ ಕಡಿಮೆ ಮೊತ್ತಕ್ಕೇ ಮಾರಾಟವಾಗಿ ಬೇಸರಗೊಂಡಿರುತ್ತಾನೆ. ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಆಟವಾಡುತ್ತಿರುವ ಆಟಗಾರನ ಮೇಲೆ ಸದ್ದಿಲ್ಲದೇ ಫ್ರಾಂಚೈಸಿಗಳು ಕಣ್ಣಿಟ್ಟಿರುತ್ತವೆ. ಕಡಿಮೆ ಹಣಕ್ಕೆ, ಅತ್ಯುತ್ತಮ ಆಟಗಾರನನ್ನು ಖರೀದಿಸಿ, ಸಂಚಲನ ಸೃಷ್ಟಿಸುತ್ತವೆ. ಈ ಬಾರಿ ಅಂತಹ ಸಂಚಲನಕ್ಕೆ ಕಾರಣವಾಗಬಲ್ಲ ಐವರು ದೇಶ, ವಿದೇಶಗಳ ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಮಾಹಿತಿ.
ವಿಶ್ವಕಪ್, ಆ್ಯಷಸ್ ನಡುವೆ ಬ್ಯಾಂಟನ್ ಹವಾ: ಇಂಗ್ಲೆಂಡ್‌ನಲ್ಲಿ ಮೊನ್ನೆ ಮೊನ್ನೆಯವರೆಗೆ ಎರಡು ಬೃಹತ್ ಕ್ರಿಕೆಟ್ ಕೂಟಗಳು ಸದ್ದು ಮಾಡಿದವು. ಮೊದಲನೆಯದು ಏಕದಿನ ವಿಶ್ವಕಪ್. ಅದು ಮುಗಿದೂ ಆಯಿತು, ಅದರಲ್ಲಿ ಇಂಗ್ಲೆಂಡ್ ವಿವಾದಾತ್ಮಕವಾಗಿ ಗೆದ್ದೂ ಆಯಿತು. ಅದಾದ ನಂತರ ಆ್ಯಷಸ್ ನಡೆಯಿತು. ಈ ಎರಡರ ಅಬ್ಬರದ ನಡುವೆಯೂ ಬರೀ ಇಂಗ್ಲೆಂಡ್ ದೇಶೀಯ ಕ್ರಿಕೆಟ್‌ನಲ್ಲಿ ಆಡಿಕೊಂಡಿದ್ದ ಹುಡುಗನೊಬ್ಬ ದೊಡ್ಡ ಸದ್ದು ಮಾಡಿದ.
ಅವನ ಹೆಸರು ಥಾಮಸ್ ಬ್ಯಾಂಟನ್. ಕೇವಲ 20 ವರ್ಷದ ಈತ ಸಾಮರ್ಸೆಟ್ ಪರ ಟಿ20ಯಲ್ಲಿ ಬಿರುಗಾಳಿಯೆಬ್ಬಿಸಿದ. ಬರೀ 17 ಪಂದ್ಯದಲ್ಲಿ 591 ರನ್ ಗಳಿಸಿರುವ ಈತ ಸಿಕ್ಸರ್, ಬೌಂಡರಿಗಳ ರಾಶಿ ಹಾಕಿದ್ದಾನೆ. ರಾಯಲ್ ಲಂಡನ್ ಕಪ್, ಕೌಂಟಿಯಲ್ಲೂ ಮೆರೆದಿದ್ದಾನೆ. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಈತನ ಬಿರುಗಾಳಿ ಬ್ಯಾಟಿಂಗ್‌ಗೆ ಮೌನವಾಗಿ ಕ್ರಿಕೆಟ್ ವಿಶ್ವ ಮೆಚ್ಚುಗೆ ಸೂಚಿಸಿದೆ. ಈ ಬಾರಿ ನಡೆಯುವ ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿಗಳು ಈತನ ಖರೀದಿಗಾಗಿ ಮುಗಿಬೀಳುವ ಎಲ್ಲ ಸಾಧ್ಯತೆಗಳೂ ಇವೆ.
ಗಾಯಗಳ ದೊರೆ ಸ್ಟಾರ್ಕ್ ಮೇಲೆ ಮತ್ತೆ ಕಣ್ಣು: ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಪ್ರಸ್ತುತ ವಿಶ್ವ ಕ್ರಿಕೆಟ್‌ನ ಭಯಾನಕ ವೇಗಿಗಳ ಪೈಕಿ ಇವರೂ ಒಬ್ಬರು. ಆದರೆ ಇವರಿಗೆ ಯಾವಾಗಲೂ ಗಾಯದ್ದೇ ಸಮಸ್ಯೆ. ಆದ್ದರಿಂದಲೇ ಐಪಿಎಲ್‌ಗೂ ಇವರಿಗೂ ಆಗಿಬರುತ್ತಿಲ್ಲ. 2015ರ ಒಂದೇ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿ ಮಿಂಚಿನ ಬೌಲಿಂಗ್ ಮಾಡಿದ್ದರು.
2016ರ ಆವೃತ್ತಿಯಲ್ಲಿ ಗಾಯದಿಂದ ಆಡಲಿಲ್ಲ, 2017ರಲ್ಲಿ ಆಡಲು ಅವರು ಬಯಸಲಿಲ್ಲ. 2018ರ ಆವೃತ್ತಿಗೆ ಕೋಲ್ಕತ ತಂಡಕ್ಕೆ 9.4 ಕೋಟಿ ರೂ.ಗೆ ಆಯ್ಕೆಯಾಗಿದ್ದರು. ಆದರೆ ಅವರನ್ನು ದಿಢೀರನೆ ಕೋಲ್ಕತ ತಂಡದಿಂದ ಕೈಬಿಟ್ಟಿತು. ಈಗ 2020ರ ಐಪಿಎಲ್‌ನಲ್ಲಿ ಆಡುವ ಉದ್ದೇಶ ಹೊಂದಿದ್ದಾರೆ. ಅವರ ಬಗ್ಗೆ ಎಲ್ಲ ಫ್ರಾಂಚೈಸಿಗಳು ಭಾರೀ ನಿರೀಕ್ಷೆ ಹೊಂದಿವೆ. ಈ ವೇಗಿಯನ್ನು ಆಯ್ದುಕೊಳ್ಳಲು ಬಿರುಸಿನ ಹಣಾಹಣಿಯನ್ನು ಈಗಲೇ ನಿರೀಕ್ಷಿಸಬಹುದು.
ತಮಿಳುನಾಡಿನ ಬಾದ್ ಶಾ ಶಾರುಖ್ ಖಾನ್: ಶಾರುಖ್ ಖಾನ್ ಎಂದು ಹೇಳಿದ ತಕ್ಷಣ ಎಲ್ಲರ ತಲೆಯಲ್ಲಿ ಬರುವುದು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್. ಈಗ ಅವರ ಹೆಸರನ್ನು ಮರೆತುಬಿಡಿ. ತಮಿಳುನಾಡು ಕ್ರಿಕೆಟ್‌ನಲ್ಲೊಬ್ಬ ಶಾರುಖ್ ಖಾನ್ ಇದ್ದಾರೆ. ಯಾರಿಗೆ ಗೊತ್ತು? ಮುಂದಿನ ದಿನಗಳಲ್ಲಿ ಶಾರುಖ್ ಖಾನ್ ಎಂದರೆ ಈ ಹುಡುಗನ ನೆನಪಾಗುವ ಕಾಲವೂ ಬರಬಹುದು. ಹಾಗಿದೆ ಈತನ ಸ್ಫೋಟಕ ಬ್ಯಾಟಿಂಗ್. ತಮಿಳುನಾಡು ಟಿ20 ಲೀಗ್ (ಟಿಎನ್‌ಪಿಎಲ್)ನಲ್ಲಿ ಸತತ 2 ವರ್ಷದಿಂದ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದಾರೆ.
2018ರ ಆವೃತ್ತಿಯಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ 3ನೆ ಸ್ಥಾನದಲ್ಲಿದ್ದಾರೆ. ಈ ವರ್ಷ ಆಡಿದ ನಾಲ್ಕೇ ಪಂದ್ಯಗಳಲ್ಲಿ 151 ರನ್ ಬಾರಿಸಿದ್ದಾರೆ. ಧೋನಿ ಮಾದರಿಯಲ್ಲಿ ಕಡೆಯ ಹಂತದಲ್ಲಿ ಬ್ಯಾಟ್ ಹಿಡಿದು ಬಂದು ತಂಡವನ್ನು ಗೆಲ್ಲಿಸುವ ತಾಕತ್ತು ಹೊಂದಿದ್ದಾರೆ. ಸದ್ಯ ತಮಿಳುನಾಡು ಮಟ್ಟಿಗೆ ಇವರೊಬ್ಬ ಗ್ರೇಟ್ ಫಿನಿಶರ್. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡದ ಈತ, ಐಪಿಎಲ್‌ನಲ್ಲಿ ದುಬಾರಿ ಯುವ ಆಟಗಾರರಲ್ಲೊಬ್ಬರಾಗುವುದು ಖಚಿತ.
ಹೊಸ ರೂಪದಲ್ಲಿರುವ ನೀಶಮ್ ಹೊಸ ಜೀವನ?: ನ್ಯೂಜಿಲೆಂಡ್‌ನ 29 ವರ್ಷದ ಆಲ್‌ರೌಂಡರ್ ಈ ಬಾರಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಬಹಳ ಸುದ್ದಿ ಮಾಡಿದ್ದರು. ಕಿವೀಸ್ ಅಂತಿಮಹಂತಕ್ಕೇರುವಲ್ಲಿ ಇವರ ಕೊಡುಗೆ ದೊಡ್ಡದು. ಎಡಗೈ ಬ್ಯಾಟಿಂಗ್, ಬಲಗೈ ವೇಗದ ಬೌಲಿಂಗ್ ಮೂಲಕ ಪ್ರಮುಖ ಪಾತ್ರವಹಿಸಿದ್ದರು. ವಿಚಿತ್ರವೆಂದರೆ ನೀಶಮ್ 2014ರಲ್ಲಿ ಒಮ್ಮೆ ಮಾತ್ರ ಐಪಿಎಲ್‌ನಲ್ಲಿ ಆಡಿದ್ದಾರೆ.
ಆ ಬಾರಿ ಡೆಲ್ಲಿ ಡೇರ್‌ಡೇವಿಲ್ಸ್ ತಂಡದ ಪರ ಬರೀ 42 ರನ್ ಗಳಿಸಿದ ಅವರು, ಕೇವಲ 1 ವಿಕೆಟ್ ಕಿತ್ತಿದ್ದರು. ಅದಾದ ಮೇಲೆ ಅವರು ಐಪಿಎಲ್‌ನಿಂದ ಹೊರಬಿದ್ದರು. ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರಿನ್‌ಬ್ಯಾಗೊ ನೈಟ್‌ರೈಡರ್ಸ್ ತಂಡದ ಪರ ಅಮೋಘವಾಗಿ ಬೌಲಿಂಗ್ ಮಾಡಿ 11 ವಿಕೆಟ್ ಕಿತ್ತು ಮಿಂಚಿದ್ದಾರೆ. ನೀಶಮ್ ಹೊಸ ರೂಪವನ್ನು ನೋಡಿರುವ ಐಪಿಎಲ್ ಮಂದಿ ಇವರಿಗಾಗಿ ಸ್ಪರ್ಧೆ ಮಾಡಿಯೇ ತೀರುವ ಸಾಧ್ಯತೆಯಿದೆ.
18 ವರ್ಷದ ಜೈಸ್ವಾಲ್‌ನ ಯಶಸ್ವಿ ಪಯಣ: ಬರೀ 18 ವರ್ಷದ ಮುಂಬೈ ಹುಡುಗ ಯಶಸ್ವಿ ಜೈಸ್ವಾಲ್ ಯಾರೆಂದೇ ನಿಮಗ್ಯಾರಿಗೂ ಗೊತ್ತಿರಲಿಕ್ಕಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಹೋಗಲಿ, ದೇಶೀಯ ಮಟ್ಟದಲ್ಲೂ ಈತ ಯಾರೆಂದೇ ಗೊತ್ತಿಲ್ಲ. ಆದರೆ ಸದ್ದಿಲ್ಲದೇ ಈತ ಒಂದು ಪ್ರಭಾವ ಸೃಷ್ಟಿಸಿದ್ದಾನೆ. ಭಾರತ 19 ವಯೋಮಿತಿಯೊಳಗಿನ ತಂಡದ ಪರ ಏಷ್ಯಾಕಪ್‌ನಲ್ಲಿ ಆಡಿ, ಮಿಂಚು ಹರಿಸಿದ್ದಾನೆ.
2017-17ರ ವಿಜಯ್ ಮರ್ಚೆಂಟ್ ಕೂಟದಲ್ಲಿ 81.80 ಸರಾಸರಿಯಲ್ಲಿ ರನ್ ಗಳಿಸಿದ್ದರು. ಇದೇ ವರ್ಷ ದೇಶೀಯ ಏಕದಿನ ಹಾಗೂ ರಣಜಿಯಲ್ಲೂ ಕಣಕ್ಕಿಳಿದಿದ್ದಾರೆ. ಇಲ್ಲಿ ಬಹಳ ದೂರ ಸಾಗಬೇಕಾಗಿದ್ದರೂ, ಟಿ20 ಮಟ್ಟಿಗೆ ಇವರ ನೆಚ್ಚಿನ ಹುಡುಗ. ಐಪಿಎಲ್ ಫ್ರಾಂಚೈಸಿಗಳು ಇವರ ಆಟವನ್ನು ಈಗಲೇ ಅಂದಾಜಿಸುತ್ತಿದ್ದಿರಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.