ರೈಲ್ವೇ ವಿಭಾಗ: ಹೋರಾಟಗಾರರಿಂದ ಅಭಿಪ್ರಾಯ ಸಂಗ್ರಹ
Team Udayavani, Oct 19, 2019, 6:49 PM IST
ಕಲಬುರಗಿ: ಈಗಾಗಲೇ ಘೋಷಣೆಯಾಗಿರುವ ಕಲಬುರಗಿ ರೈಲ್ವೆ ವಿಭಾಗವನ್ನು ಆರಂಭಿಸುವ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಹೋರಾಟದ ರೂಪುರೇಷೆ ರೂಪಿಸಿಲು ಶುಕ್ರವಾರ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಎಚ್‌ಕೆಸಿಸಿಐ) ನೇತೃತ್ವದಲ್ಲಿ ಹೋರಾಟಗಾರರ ದುಂಡು ಮೇಜಿನ ಸಭೆ ನಡೆಯಿತು.
ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಭಾಗದ ಸಂಘಟನೆಗಳು ಮತ್ತು ಹೋರಾಟಗಾರರ ಸಭೆಯಲ್ಲಿ ಎಲ್ಲರಿಂದಲೂ ಅಭಿಪ್ರಾಯ ಸಂಗ್ರಹಿಸಲಾಯಿತು. ವಿವಿಧ ಸಂಘಟನೆಗಳ ಪ್ರತಿನಿಧಿಗಳು ಬಂದ್, ರೈಲು ತಡೆ ಮೂಲಕ ಹೋರಾಟವನ್ನು ತೀವ್ರಗೊಳಿಸುವ ಬಗ್ಗೆ ಅಭಿಪ್ರಾಯ ಮಂಡಿಸಿದರು.
ರೈಲ್ವೆ ಪರಿಣಿತರು ಮತ್ತು ಆರ್‌ಟಿಐ ಕಾರ್ಯಕರ್ತರು ಈಗಾಗಲೇ ರೈಲ್ವೆ ವಿಭಾಗ ಮಂಜೂರು ಆಗಿದೆ. ಹೀಗಾಗಿ ನೇರವಾಗಿ ಹೋರಾಟಕ್ಕೆ ಇಳಿಯುವ ಬದಲು ರಾಜಕೀಯವಾಗಿ ಒತ್ತಡ ಹೇರುವ ಪ್ರಯತ್ನ ಮಾಡಬೇಕು. ಇದಕ್ಕಾಗಿ ನಾಗರಿಕರಲ್ಲಿ ಜಾಗೃತಿ ಮೂಡಿಸಿ ಆರಂಭದಲ್ಲಿ ಅಭಿಯಾನದ ರೂಪ ಕೊಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇದರ ಆಧಾರ ಮೇಲೆ ಸಮಿತಿ ರಚಿಸುವ ತೀರ್ಮಾನಕ್ಕೆ ಬರಲಾಯಿತು. ಈ ಸಂಬಂಧ ಅ.19ರಂದು ಎಚ್‌ಕೆಸಿಸಿಐಯಲ್ಲಿ ಮತ್ತೂಂದು ಸುತ್ತಿನ ಸಭೆ ನಡೆಯಲಿದೆ.
ವಿದ್ಯಾರ್ಥಿಗಳಲ್ಲಿ ಜಾಗೃತಿ: ವಿದ್ಯಾರ್ಥಿಗಳಲ್ಲಿ ರೈಲ್ವೆ ವಿಭಾಗ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಹೋರಾಟದಲ್ಲಿ ಭಾಗಿದಾರರನ್ನಾಗಿ ಮಾಡುವ ಕುರಿತು ಸಭೆಯಲ್ಲಿ ಅಭಿಪ್ರಾಯ ಕೇಳಿ ಬಂತು. ಹೀಗಾಗಿ 15 ದಿನದೊಳಗಾಗಿ ವಿದ್ಯಾರ್ಥಿಗಳನ್ನು ಸೇರಿಕೊಂಡು ಕಲಬುರಗಿ ರೈಲ್ವೆ ನಿಲ್ದಾಣದ ಮುಂದೆ ಸಾಂಕೇತಿಕ ಪ್ರತಿಭಟನೆ ಮಾಡಲಾಗುವುದು ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗವು ತಾರತಮ್ಯ ಧೋರಣೆಯಿಂದ ನರಳುತ್ತಿದೆ. ಈ ಪ್ರದೇಶಕ್ಕೆ 371(ಜೆ), ಹೈಕೋರ್ಟ್, ಕೆಎಟಿ ಸೇರಿದಂತೆ ಎಲ್ಲವನ್ನೂ ಹೋರಾಟದಿಂದ ಪಡೆದುಕೊಂಡಿದ್ದೇವೆ. ಹೀಗಾಗಿ ನಮ್ಮ ಭಾಗದ ಆರು ಜಿಲ್ಲೆಗಳು ಒಗ್ಗಟ್ಟು ಪ್ರದರ್ಶಿಸುವ ಕಾಲ ಈಗ ನಮ್ಮ ಮುಂದೆ ಇದೆ ಎಂದರು.
ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, ಸಂಸದರ ಕರ್ತವ್ಯ ಏನು?
ಘನತೆ, ಗೌರವ ಗೊತ್ತಿಲ್ಲದ ಸಂಸದರನ್ನು ನಾವು ಕಂಡಿದ್ದೇವೆ. ಇದರಿಂದ ಮೊದಲಿನಿಂದ ನಾವು ಅನ್ಯಾಯಕ್ಕೆ ಒಳಗಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ವಾಜಪೇಯಿ ಸರ್ಕಾರದಲ್ಲಿ ನಿತೀಶ್ ಕುಮಾರ ರೈಲ್ವೆ ಸಚಿವರಾಗಿದ್ದಾಗಲೇ ನಮ್ಮ ಭಾಗದಲ್ಲಿ ರೈಲ್ವೆ ವಿಭಾಗ ಆಗಬೇಕಿತ್ತು. ಆದರೆ, ರಾಜ್ಯದ ನಾಯಕರ ಕುತಂತ್ರದಿಂದ ಅದು ಫಲಕೊಡಲಿಲ್ಲ. ನಂತರ ಅದರ ನೆನಪೇ ಆಗಲಿಲ್ಲ. ಮಾಜಿ ಸಿಎಂ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ಸಂಸದರಾಗಿ ಖರ್ಗೆ ಮಂತ್ರಿಯಾಗಿ ರೈಲ್ವೆ ವಿಭಾಗ ಘೋಷಣೆ ಮಾಡಿದರು. ಆದರೆ, ಅದನ್ನು ಮಂತ್ರಿ ಮಂಡಲದಲ್ಲಿ ಖರ್ಗೆ ಅವರು ಮಂಡಿಸುವಲ್ಲಿ ಮನಸ್ಸು ಮಾಡಲಿಲ್ಲ. ಇದು ನನೆಗುದಿಗೆ ಬೀಳಲು ಕಾರಣ ಎಂದರು.
ಅಭಿವೃದ್ಧಿಯಲ್ಲಿ ರಾಜಕೀಯ ಬಂದರೆ ಯಾವುದೇ ಕೆಲಸಗಳು ಆಗಲ್ಲ. ಯುಪಿಎ ಸರ್ಕಾರ ಹೋಗಿ ಎನ್‌ಡಿಎ ಸರ್ಕಾರ ಬಂದ ಮೇಲೆ ಆಗಿರೋದು ಅದೇ. ಹೋರಾಟದ ಸಂದರ್ಭದಲ್ಲಿ ನಮ್ಮ ಸಂಘಟನೆಗಳ ಬಲ ಪ್ರದರ್ಶನ ಮಾಡಬೇಕಿದೆ. ಪ್ರತಿ ಸಂಘಟನೆಯಿಂದ ಕನಿಷ್ಠ 50 ಜನರನ್ನಾದರೂ ಸೇರಿಸಬೇಕು. ಆಗ ಮಾತ್ರವೇ ನಮ್ಮ ಹೋರಾಟ ಮತ್ತು ಸಂಘಟನೆಯ ಶಕ್ತಿ ಗೊತ್ತಾಗಲಿದೆ ಎಂದು ಹೇಳಿದರು. ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ, ರೈಲ್ವೆ ಹೋರಾಟಗಾರರಾದ ಸುನೀಲ ಕುಲಕರ್ಣಿ, ವೆಂಕಟೇಶ ಮುದ್ಗಲ್, ಅರುಣಕುಮಾರ ಪಾಟೀಲ, ಬೆಂಗಳೂರಿನ ಎಫ್‌ಕೆಸಿಸಿಐ ಮಾಜಿ ಸದಸ್ಯ ಪ್ರಕಾಶ
ಮಂಡೋತ್, ಕನ್ನಡ ಪರ ಹೋರಾಟಗಾರರಾದ ಶರಣು ಗದ್ದಗಿ, ಮಂಜುನಾಥ ನಾಲವಾರಕರ್ ಮಾತನಾಡಿದರು.
ಬೆಳಗುಂಪಾದ ಭರತೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಎಚ್‌ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ, ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ, ಇತರ ಕನ್ನಡ ಪರ ಸಂಘಟನೆಗಳ ಮುಖಂಡರಾದ ನಂದಕುಮಾರ, ಸಚಿನ ಫರತಾಬಾದ್, ಗೋಪಾಲ ನಾಟಿಕಾರ, ದತ್ತು ಭಾಸಗಿ, ಸಂದೀಪ ಭರಣಿ, ದತ್ತು ಹಯ್ನಾಳಕರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.