ಕೊಟ್ಟಿಗೆ ಗೊಬ್ಬರ ಜಮೀನಿಗೆ ಅಗತ್ಯ
Team Udayavani, Oct 20, 2019, 5:34 AM IST
ಕಾಂಪೋಸ್ಟ್ ತಯಾರಿ ಒಂದು ಕಲೆ. ಗುಂಡಿಯಲ್ಲಿ ಹಾಕಿದ ಗೊಬ್ಬರ, ತ್ಯಾಜ್ಯ ವಸ್ತು ಹೆಚ್ಚಿನ ಶಾಖಕ್ಕೆ ತುತ್ತಾಗಿ ಅಲ್ಲಿರುವ ಜೀವಾಣುಗಳು ಸಾಯುತ್ತವೆ. ಕೆಲವು ಬಾರಿ ಮೇಲ್ಪದರದಲ್ಲಿ ಸರಿ ಪ್ರಮಾಣದ ತೇವಾಂಶ ಇಲ್ಲದೆ, ಶಾಖ ಸಾಲದೆ ಕಳಿಯದೆ ಹಾಗೆಯೇ ಉಳಿಯುತ್ತವೆ. ಹಾಲು ಮೊಸರಾಗುವ ಪ್ರಕ್ರಿಯೆ ರೀತಿ ಕಾಂಪೋಸ್ಟ್ ಸೂಕ್ಷ್ಮ ಜೀವಿಗಳು ಕಾರ್ಯ ನಡೆಸುತ್ತವೆ. ಇದರ ತಿಳಿವಳಿಕೆಯ ಕೊರತೆಯಿಂದ ರೈತರ ಫಲವತ್ತಾದ ಜಮೀನು ಬರಡಾಗುವಂತೆ ಮಾಡುತ್ತದೆ.
ಕೃಷಿ ಉತ್ಪಾದನೆಯಲ್ಲಿ ಕೊಟ್ಟಿಗೆ ಗೊಬ್ಬರ ಬಳಕೆಯಿಂದಾಗುವ ಪ್ರಯೋಜನ ಹಲವು. ಮಣ್ಣಿನ ಆರೋಗ್ಯದ ರಕ್ಷಣೆಯ ಜತೆಗೆ ಭೂಮಿಯ ಫಲವತ್ತತೆ, ಉತ್ಪಾದನೆಯನ್ನು ನಿರಂತರವಾಗಿ ಉಳಿಸಿಕೊಂಡು ಬರುವಲ್ಲಿ ಕೊಟ್ಟಿಗೆ ಗೊಬ್ಬರ ಸಹಕಾರಿ.
ಪ್ರಯೋಜನಗಳು
ಮಣ್ಣಿನ ಆರೋಗ್ಯ ರಕ್ಷಣೆ ಇದರಲ್ಲಿ ಹಲವು ವಿಧಗಳಿವೆ.
ಭೌತಿಕ ಗುಣಧರ್ಮ: ಮಣ್ಣಿನ ಕಣಗಳ ರಚನೆಯಲ್ಲಿ ಸುಧಾರಣೆಯಾಗಿ ಹರಳು ರೂಪದ ಉತ್ತಮ ಕಣಗಳು ಇದರಿಂದ ರಚನೆಯಾಗುತ್ತವೆ. ಭೂಮಿಯ ನೀರು ಹಿಡಿದಿಡುವ ಸಾಮರ್ಥ್ಯ ವೃದ್ಧಿಯಾಗಿ ಸಸ್ಯಕ್ಕೆ ಹೆಚ್ಚು ನೀರು ಲಭಿಸುತ್ತದೆ.
ರಾಸಾಯನಿಕ ಗುಣಧರ್ಮ: ಸಾಮಾನ್ಯವಾಗಿ ಸಾರಜನಕವು ಸ್ಥಿರವಾಗಿರಿಸುವಲ್ಲಿ ಕೊಟ್ಟಿಗೆ ಗೊಬ್ಬರ ಸಹಾಯಕ. ಮಣ್ಣಿನ ಪೋಷಕಾಂಶ ವಿನಿಮಯ ಸಾಮರ್ಥ್ಯ ಇದರಿಂದ ಹೆಚ್ಚಳವಾಗುತ್ತದೆ. ಬಳ್ಳಿಗೆ ಎಲ್ಲ ಪೋಷಕಾಂಶ ಲಭ್ಯವಾಗುತ್ತದೆ. ಪೋಷಕಾಂಶಗಳ ನಿಧಾನಗತಿ ಬಿಡುಗಡೆಯಿಂದ ಅನಗತ್ಯ ಪೋಷಕಾಂಶಗಳ ಸೋರಿಹೋಗುವಿಕೆ ನಿಲ್ಲುತ್ತದೆ. ಕ್ಷಾರಯುಕ್ತ ಜಮೀನಿನ ಅಭಿವೃದ್ಧಿ, ರಂಜಕದ ಸ್ಥಿರೀಕರಣದಲ್ಲಿ ಇಳಿಕೆ, ಭೂಫಲವತ್ತತೆಯೊಂದಿಗೆ ಒಟ್ಟಾರೆ ಉತ್ಪಾದನೆಯಲ್ಲಿ ಹೆಚ್ಚಳ ಕಾಣಬಹುದು.
ಜೈವಿಕ ಗುಣಧರ್ಮ: ಇದು ಮಣ್ಣಿನಲ್ಲಿರುವ ವಿವಿಧ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಪೂರಕವಾಗಿದೆ. ಸಾರಜನಕ ಸ್ಥಿರೀಕರಿಸುವ, ಗಂಧಕ ಕರಗಿಸುವ ಸೂಕ್ಷ್ಮಜೀವಿಗಳ ಸಂಖ್ಯೆ ಹೆಚ್ಚುತ್ತದೆ. ರೈತೋಪಕಾರಿ ಜೀವಿಗಳಾದ ಎರೆಹುಳಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತದೆ. ಈ ಸೂಕ್ಷ್ಮಜೀವಿಗಳು ಸಾವಯವ ವಸ್ತುಗಳ ಕೊಳೆಯುವಿಕೆಯ ಪ್ರಮಾಣ ಹಾಗೂ ವೇಗವನ್ನು ಹೆಚ್ಚಿಸಿ ಪೋಷಕಾಂಶಗಳ ಖನಿಜೀಕರಣ ಪ್ರಮಾಣ ಉತ್ತಮಗೊಂಡು ಅವುಗಳು ನಿಧಾನವಾಗಿ ಬೆಳೆಗಳಿಗೆ ಸಿಗುವಂತೆ ಮಾಡುತ್ತದೆ. ಮಾತ್ರವಲ್ಲ ಭೂಮಿಯಲ್ಲಿನ ಅರೆಕಳಿತ ಸಾವಯವ ಪದಾರ್ಥಗಳು ಬೇಗ ಕಳಿಯುವಂತೆ ಮಾಡುತ್ತದೆ.
ಬಾಹ್ಯ ಅವಲಂಬನೆ ಇಲ್ಲ
ಸಮರ್ಥ ರೀತಿಯ ಗೊಬ್ಬರದ ಸಂಗ್ರಹ-ಪೋಷಕಾಂಶ ನಿರ್ವಹಣೆಗಾಗಿ ಬಾಹ್ಯ ಮೂಲಗಳ ಮೇಲೆ ಮಾಡಬಹುದಾದ ಅವಲಂಬನೆ ತಪ್ಪಿಸಬಹುದು.
ಆರೋಗ್ಯಯುತ ಬೆಳೆ
ಕೊಟ್ಟಿಗೆ ಗೊಬ್ಬರ ಗಿಡಕ್ಕೆ ಸಮಪ್ರಮಾಣದಲ್ಲಿ ಪೋಷಕಾಂಶ ಪೂರೈಸುವುದರಿಂದ ಬೆಳೆ ಆರೋಗ್ಯಕರವಾಗಿರುವುದರಿಂದ ರೋಗ ರುಜಿನಗಳಿಗೆ ತುತ್ತಾಗುವುದು ಕಡಿಮೆ.
ಕಡಿಮೆ ಖರ್ಚು
ಇವುಗಳು ಕ್ಷೇತ್ರ ಬೆಳೆ ಉತ್ಪಾದನೆಯ ವೆಚ್ಚವನ್ನು ತಗ್ಗಿಸಿ ಬಾಹ್ಯ ಮೂಲಗಳಿಂದ ಬರುವ ಪೋಷಕಾಂಶಗಳ ಮೇಲೆ ಮಾಡುವ ಖರ್ಚನ್ನು ಕಡಿಮೆಗೊಳಿಸಲು ಸಹಾಯಕ.
ಪರಿಸರ ಪೂರಕ
ಕೊಟ್ಟಿಗೆ ಗೊಬ್ಬರ ಬಳಸುವಿಕೆಯಿಂದ ಪರಿಸರಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ವಾಯು, ಜಲ, ಮಣ್ಣು ಮಾಲಿನ್ಯಗಳನ್ನು ಇದರಿಂದ ಕಡಿಮೆಗೊಳಿಸಬಹುದು.
ತಯಾರಿಸುವ ವಿಧಾನ
ರೈತರು ಜಮೀನಿನಲ್ಲಿ ಸಾವಯವ ಕೊಟ್ಟಿಗೆ ಗೊಬ್ಬರವನ್ನು ಸುಲಭ, ಪರಿಣಾಮಕಾರಿಯಾಗಿ ತಯಾರಿಸಬಹುದು. ಇದನ್ನು ತಯಾರಿಸಲು ನಮ್ಮ ಸಂಯೋಜಿತ ವಸ್ತುಗಳ ಉದ್ದಕ್ಕೆ ಅನುಗುಣವಾಗಿ 0.9 ಮೀ. ಆಳ, 2.4 ಮೀ., 5 ಮೀ. ಅಗಲದ ತೊಟ್ಟಿ ತಯಾರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರು ಹೊಂದಿದ್ದರೆ ಇದನ್ನು ಹೆಚ್ಚಿಸಬಹುದು ಅಥವಾ ಎರಡು ಗುಂಡಿ ನಿರ್ಮಿಸಬಹುದು. ಗುಂಡಿ ತೋಡಿದ ಅನಂತರ ಜಾನುವಾರುಗಳ ಸೆಗಣಿ, ಮೂತ್ರ, ತರಕಾರಿ ಸಿಪ್ಪೆಗಳು, ಇತರ ಕೊಳೆಯುವ ಪದಾರ್ಥಗಳ ಸಂಯೋಜನೆಯನ್ನು ಗುಂಡಿಯಲ್ಲಿ ಏಕರೂಪವಾಗಿ ಹರಡಬೇಕು.
ಸೆಗಣಿ ಮಿಶ್ರಣವನ್ನು ಅಗತ್ಯಕ್ಕೆ ತಕ್ಕಂತೆ, ತೇವಾಂಶ ಹೊಂದಿದ್ದರೆ ನೀರನ್ನು ಹಾಕಬೇಕು. ಅನಂತರ ಜಾನುವಾರುಗಳ ಸೆಗಣಿ ಮತ್ತು ಇತರ ಮಿಶ್ರ ಉತ್ಪನ್ನಗಳನ್ನು ಸಮವಾಗಿ ಹರಡಿ ಮರಳಿನ 30 ಸೆಂ.ಮೀ. ಪದರ ಮಾಡಿ 6 ತಿಂಗಳ ಕಾಲ ಹಾಗೆಯೇ ಬಿಡಬೇಕು. ಅನಂತರ ವಿವಿಧ ಖನಿಜಗಳನ್ನು ಒಳಗೊಂಡಿರುವ ಉಪಯುಕ್ತ ಸಾವಯವ ಕೊಟ್ಟಿಗೆ ಗೊಬ್ಬರ ದೊರೆಯುತ್ತದೆ.
ಬಳಕೆ ವಿಧಾನ
ರೈತರು ತಮ್ಮದೇ ತೋಟದಲ್ಲಿ ತಯಾರಾದ ಸಾವಯವ ಗೊಬ್ಬರವನ್ನು ಕಾಫಿ, ಮೆಣಸು, ಅಡಕೆ, ಶುಂಠಿ, ಏಲಕ್ಕಿ, ಹೂತೋಟ, ಹಣ್ಣಿನ ಬೆಳೆ ಮುಂತಾದವುಗಳಿಗೆ ಬಳಸಬಹುದು. ಎರಡು ವರ್ಷ ಕಾಲ ಹಾಗೆಯೇ ಇಟ್ಟುಕೊಳ್ಳಲೂಬಹುದು. ಇದನ್ನು ತಯಾರಿಸಲು ಸಾಮಗ್ರಿಗಳ ಸಂಗ್ರಹ ಮಾಡಿ ಇಟ್ಟುಕೊಂಡು ಗೊಬ್ಬರ ಕಳಿತು, ಕೊಳೆತು ಹ್ಯೂಮಸ್ ಆಗುವಂತೆ ಅದರ ಕಡೆ ಗಮನ ನೀಡಬೇಕು. ಜೈವಿಕ ಕ್ರಿಯೆಗೆ ಅಗತ್ಯವಾದ ಇಂಗಾಲ, ಆಮ್ಲಜನಕ ಪ್ರಮಾಣದ ಸಮತೋಲನ ಕಾಯ್ದುಕೊಳ್ಳಬೇಕು.
ಬೇರು ಬಿಡುವಿಕೆ, ಬೆಳವಣಿಗೆಯಲ್ಲಿ ವೃದ್ಧಿ
ಸಮ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಹಾಕುವುದರಿಂದ ಸಸ್ಯಗಳ ಬೇರು ಬಿಡುವಿಕೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಮಣ್ಣಿನ ಮೇಲ್ಪದರ ಈ ಗೊಬ್ಬರ ಹರಡುವಿಕೆಯಿಂದ ಸಡಿಲಗೊಂಡು ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ, ಹವೆ ಹರಡುವಿಕೆಯ ಕಾರ್ಯ ಸರಳಗೊಳಿಸಿ ಬೇರು ಆಳಕ್ಕೆ ಹೋಗುವಲ್ಲಿ ಸಹಾಯಕವಾಗುವುದು. ಬಲಿಷ್ಠ ಬೇರು ಜಮೀನಿನ ಕೆಳ ಪದರದಲ್ಲಿರುವ ನೀರು ಪಡೆಯುವಲ್ಲಿ ಸಹಾಯಕ ಮತ್ತು ತಡವಾಗಿ ಮಳೆ ಬಂದರೂ ಸಸ್ಯಗಳು ಬಾಡುವುದಿಲ್ಲ.
- ಜಯಾನಂದ ಅಮೀನ್, ಬನ್ನಂಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.