ಸವಾಲು ಹಾಕಿ ಕಾರು ಕದಿಯುತ್ತಿದ್ದವ ಸೆರೆ
Team Udayavani, Oct 20, 2019, 3:10 AM IST
ಬೆಂಗಳೂರು: ತಮಿಳುನಾಡು ಪೊಲೀಸರಿಗೆ ಸವಾಲು ಹಾಕಿ ಕಾರು ಕಳವು ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡು ಸ್ಥಳದಲ್ಲೇ ನಕಲಿ ಕೀ ತಯಾರಿಸಿ ಮನೆ ಮಂದೆ ನಿಲುಗಡೆ ಮಾಡಿದ್ದ ಕಾರುಗಳನ್ನು ಕಳವು ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರು ಆಗ್ನೇಯ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಮಿಳುನಾಡಿನ ಮಧುರೈನ ಪರಮೇಶ್ವರನ್(38) ಮತ್ತು ಆತನ ಸಹಚರ ಸದ್ದಾಂ ಹುಸೇನ್(28) ಬಂಧಿತರು. ಆರೋಪಿಗಳು ಬೆಂಗಳೂರು ಮಾತ್ರವಲ್ಲದೆ, ಪುದುಚೇರಿ, ಆಂಧ್ರಪ್ರದೇಶ, ತಮಿಳುನಾಡಿನ ಗಡಿ ಭಾಗಗಳಲ್ಲಿ ಕಾರುಗಳನ್ನು ಕಳವು ಮಾಡುತ್ತಿದ್ದರು. ಕಾರಿನ ನೊಂದಣಿ ಸಂಖ್ಯೆ ಬದಲಿಸಿ ತಮಿಳುನಾಡಿನಲ್ಲಿ ಪರಿಚಯಸ್ಥರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಆರೋಪಿಗಳಿಂದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಕೋಲಾರ ಜಿಲ್ಲೆ ಹಾಗೂ ಗೋವಾದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 17 ಕಾರು ಕಳವು ಪ್ರಕರಣಗಳು ಪತ್ತೆಯಾಗಿವೆ. ಅವರಿಂದ 1.70 ಕೋಟಿ ರೂ.ಮೌಲ್ಯದ 15 ವಿವಿಧ ಕಾರುಗಳನ್ನು ಜಪ್ತಿ ಮಾಡಲಾಗಿದೆ.
ಯುಟ್ಯೂಬ್ ನೋಡಿ, ಸ್ಥಳದಲ್ಲೇ ನಕಲಿ ಕೀ ತಯಾರು: ತಮಿಳುನಾಡಿನಲ್ಲಿ ಕಾರು ಮಾರಾಟಗಾರನಾಗಿದ್ದ ಆರೋಪಿ ಪರಮೇಶ್ವರನ್ ನಂತರ ಕಾರು ಕಳವು ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ. ಕಳವು ಮಾಡುತ್ತಿದ್ದ ಕಾರುಗಳನ್ನು ತಮಿಳುನಾಡಿನ ಜೈಲಿನಲ್ಲಿ ಪರಿಚಯವಾಗಿದ್ದ ಸದ್ದಾಂ ಹುಸೇನ್ ಮೂಲಕ ಮಾರಾಟ ಮಾಡುತ್ತಿದ್ದ. ರಾತ್ರಿಯೆಲ್ಲಾ ನಗರದ ಪ್ರಮುಖ ಪ್ರದೇಶಗಳಲ್ಲಿ ಸುತ್ತಾಡಿ, ಮನೆ ಮುಂದೆ ನಿಲುಗಡೆ ಮಾಡುತ್ತಿದ್ದ ಮಾರುತಿ ಸುಜುಕಿ, ಟಯೋಟಾ ಕಾರುಗಳನ್ನು ಪತ್ತೆ ಹಚ್ಚುತ್ತಿದ್ದ.
ಯುಟ್ಯೂಬ್ ಮೂಲಕ ನಕಲಿ ಕೀ ತಯಾರು ಮಾಡುವುದನ್ನು ಕರಗತ ಮಾಡಿಕೊಂಡಿದ್ದ ಆರೋಪಿ, ಕಳವು ಮಾಡುವ ಕಾರಿನ ಬಳಿ ಹೋಗಿ ಆ ಕಾರಿನ ಮಾಡೆಲ್ ಹಾಗೂ ಇತರೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ. ಕಾರಿನ ಸೆಂಟರ್ ಲಾಕ್‌ನ ಒಳಭಾಗದಲ್ಲಿ ಅಳವಡಿಸುತ್ತಿದ್ದ ಸಣ್ಣ ಪ್ರಮಾಣದ ಚಿಪ್ ಮಾದರಿಯ ವಸ್ತು ಹಾಗೂ ಇತರೆ ಉಪಕರಣಗಳನ್ನು ಬಳಸಿ ಕೇವಲ 15-20 ನಿಮಿಷದಲ್ಲಿ ನಕಲಿ ಕೀ ತಯಾರಿಸಿ ಕಾರು ಕಳವು ಮಾಡಿ ಪರಾರಿಯಾಗುತ್ತಿದ್ದ ಎಂದು ಪೊಲೀಸರು ಹೇಳಿದರು.
ದಂಪತಿ ಸೋಗಿನಲ್ಲಿ ಪರಾರಿ: ಆರೋಪಿ ಆನ್‌ಲೈನ್ ಮೂಲಕ ಯುವತಿಯರನ್ನು ಕರೆಸಿಕೊಂಡು ದಂಪತಿಯ ಸೋಗಿನಲ್ಲಿ ಕಳವು ಮಾಡುವ ಪ್ರದೇಶಗಳಿಗೆ ಹೋಗುತ್ತಿದ್ದ. ಹಾಗೆಯೇ ಆನ್‌ಲೈನ್ ಮೂಲಕವೇ ಬಾಡಿಗೆ ಕಾರು ಚಾಲಕನನ್ನು ತನ್ನೊಂದಿಗೆ ಕರೆದೊಯ್ಯುತ್ತಿದ್ದ. ಬಳಿಕ ಗೆಳತಿ ಜತೆ ಅತಿಥಿ ಗೃಹದಲ್ಲಿ ವಾಸವಾಗಿದ್ದು, ತಡರಾತ್ರಿ ಆಗುತ್ತಿದ್ದಂತೆ ನಗರದ ವಿವಿಧೆಡೆ ಸುತ್ತಾಡಿ, ನಕಲಿ ಕೀ ಬಳಸಿ ಕಾರು ಕಳವು ಮಾಡುತ್ತಿದ್ದ. ಕಾರಿನ ನೊಂದಣಿ ಸಂಖ್ಯೆ ಬದಲಿಸಿ ತನ್ನೊಡನೆ ಕರೆತಂದಿದ್ದ ಬಾಡಿಗೆ ಚಾಲಕನಿಗೆ ಕಳವು ಮಾಡಿದ ಕಾರು ನೀಡಿ ತಮಿಳುನಾಡಿನಲ್ಲಿರುವ ಸದ್ದಾಂಗೆ ತಲುಪಿಸುವಂತೆ ಸೂಚಿಸುತ್ತಿದ್ದ.
ಪರಮೇಶ್ವರನ್‌ನ ಕೃತ್ಯ ತಿಳಿಯದ ಬಾಡಿಗೆ ಕಾರು ಚಾಲಕರು, ಈತ, ದೊಡ್ಡ ಶ್ರೀಮಂತ ಇರಬಹುದು ಎಂದು ಭಾವಿಸಿ ಸುಮ್ಮನಾಗುತ್ತಿದ್ದರು. ಕೃತ್ಯ ಎಸಗಿದ ಬಳಿಕ ತನ್ನ ಗೆಳತಿ ಜತೆ ನೇರವಾಗಿ ಗೋವಾಗೆ ಹೋಗುತ್ತಿದ್ದು, ನಾಲ್ಕೈದು ದಿನ ಕಾಲ ಕಳೆದು ಅಲ್ಲಿಂದ ತಮಿಳುನಾಡಿಗೆ ಹೋಗಿ ತಲೆಮರೆಸಿಕೊಳ್ಳುತ್ತಿದ್ದ. ಸಂಚಾರ ಮಾಡುವಾಗ ಕಾರಿನಲ್ಲಿ ಕುಟುಂಬ ಸದಸ್ಯರು ಇದ್ದಾರೆ ಎಂದು ಹೇಳಿ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.
ಇತ್ತೀಚೆಗೆ ಆಗ್ನೇಯ ವಿಭಾಗದಲ್ಲಿ ದ್ವಿಚಕ್ರ ಮತ್ತು ಕಾರುಗಳ ಕಳವು ಪ್ರಕರಣಗಳು ಹೆಚ್ಚಾಗಿದ್ದವು. ಆ ಹಿನ್ನೆಲೆಯಲ್ಲಿ ಹುಳಿಮಾವು ಠಾಣಾಧಿಕಾರಿ ಎಸ್.ಎಂ.ಚಂದ್ರಪ್ಪ, ಪಿಎಸ್‌ಐ ಚಿದಾನಂದನಾವಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತಂಡ ನಗರದಲ್ಲಿ ಈ ಮೊದಲು ವಾಹನ ಕಳವು ಪ್ರಕರಣದಲ್ಲಿ ಸಕ್ರಿಯನಾಗಿದ್ದ ಪರಮೇಶ್ವರನ್ ಬಗ್ಗೆ ಸಂಗ್ರಹಿಸಿ ಸುಮಾರು ಎರಡು ತಿಂಗಳ ಕಾಲ ಆತನ ಚಲವಲನಗಳ ಮೇಲೆ ನಿಗಾವಹಿಸಿ, ಇತ್ತೀಚೆಗೆ ಕಳವು ಕಾರಿನಲ್ಲಿ ನಗರದಲ್ಲಿ ಓಡಾಡುವಾಗ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ಕೃತ್ಯ!: ಕೆಲ ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಕಾರು ಮಾರಾಟಗಾರನಾಗಿ ಕೆಲಸ ಮಾಡಿಕೊಂಡಿದ್ದ ಪರಮೇಶ್ವರನ್ ವಿರುದ್ಧ ತಮಿಳುನಾಡಿನ ಪೊಲೀಸ್ ಠಾಣೆಯೊಂದರ ಅಧಿಕಾರಿಗಳು ಕಾರು ಕಳವು ಆರೋಪದಡಿ ಪ್ರಕರಣ ದಾಖಲಿಸಿ, ಕಾನೂನು ಕ್ರಮಕೈಗೊಂಡಿದ್ದರು. ಆದರೆ ಆ ಪ್ರಕರಣದಲ್ಲಿ ಆತ ಕಾರು ಕಳವು ಮಾಡಿರಲಿಲ್ಲ. ಬಳಿಕ ಶಿಕ್ಷೆ ಅನುಭವಿಸಿ ಹೊರ ಬಂದ ಆರೋಪಿ, ಜೈಲಿಗೆ ಕಳುಹಿಸಿದ್ದ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ.
ಬಳಿಕ ನಿರ್ದಿಷ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಕಾರು ಕಳುವು ಮಾಡಿ, ಠಾಣೆಗೆ ಕರೆ ಮಾಡಿ” ಈ ನಂಬರ್ ಕಾರು ಕಳವು ಮಾಡಿರುವುದು ನಾನೇ. ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ’ ಎಂದು ಸವಾಲು ಹಾಕುತ್ತಿದ್ದ. ಹೀಗೆ ಸುಮಾರು 25ಕ್ಕೂ ಅಧಿಕ ಕಾರು ಕಳವು ಮಾಡಿ, ಅನಂತರ ಪೊಲೀಸರಿಗೆ ಕೈಗೆ ಸಿಕ್ಕಿ ಬಿದ್ದಿದ್ದ. ಬಳಿಕ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಸಲಹೆ ಮೇರೆಗೆ ಕೃತ್ಯ ಬಿಟ್ಟಿದ್ದ. ಆದರೆ, ಐಷಾರಾಮಿ ಜೀವನಕ್ಕೆ ಮಾರು ಹೋಗಿ ಕೆಲ ವರ್ಷಗಳಿಂದ ಕರ್ನಾಟಕ, ಆಂಧ್ರಪ್ರದೇಶ, ಗೋವಾದಲ್ಲಿ ತನ್ನ ಕೃತ್ಯ ಮುಂದುವರಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಪತ್ನಿ ವಕೀಲೆ: ಪರಮೇಶ್ವರನ್ ಪತ್ನಿ ತಮಿಳುನಾಡಿನಲ್ಲಿ ವಕೀಲೆ ವೃತ್ತಿ ಮಾಡುತ್ತಿದ್ದು, ಪುತ್ರ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಾನೆ. ಪತಿಯ ಈ ವಿಚಾರ ತಿಳಿದ ಪತ್ನಿ ಸಾಕಷ್ಟು ಬಾರಿ ಬುದ್ದಿ ಹೇಳಿದ್ದಾರೆ. ಆದರೂ ಆರೋಪಿ ತನ್ನ ಕೃತ್ಯವನ್ನು ಮುಂದುವರಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಪೊಲೀಸರಿಗೆ ಸಿಗುತ್ತಿರಲಿಲ್ಲ: ಈ ಹಿಂದೆ ಮಡಿವಾಳ ಠಾಣೆ ವ್ಯಾಪ್ತಿಯ ವಾಹನ ಕಳವು ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಅನಂತರ ಎಚ್ಚೆತ್ತುಕೊಂಡಿದ್ದ ಪರಮೇಶ್ವರನ್, ಕೃತ್ಯ ಎಸಗುವ ಸುಮಾರು 3-4 ಗಂಟೆಗಳ ಮೊದಲು ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ವಾಟ್ಸ್‌ಆ್ಯಪ್ ಕರೆ ಮಾತ್ರ ಮಾಡುತ್ತಿದ್ದ. ಅಲ್ಲದೆ, ಸಿಸಿಟಿವಿ ಕ್ಯಾಮೆರಾ ಇರುವ ಸ್ಥಳದಲ್ಲಿ ಮುಖಕ್ಕೆ ಮುಸುಕು ಧರಿಸುವ ಜತೆಗೆ ಕೆಲವೊಮ್ಮೆ ಸಿಸಿಟಿವಿ ಕ್ಯಾಮೆರಾವನ್ನು ನಿಷ್ಕ್ರಿಯಗೊಳಿಸುತ್ತಿದ್ದ.
ಅಷ್ಟೇ ಅಲ್ಲದೆ, ಇಂಗ್ಲಿಷ್, ತಮಿಳು, ತೆಲಗು, ಹಿಂದಿ ಭಾಷೆಯನ್ನು ಸುಲಭವಾಗಿ ಮಾತನಾಡುತ್ತಿದ್ದ ಆರೋಪಿ, ಗೆಳೆತಿಯರೊಂದಿಗೆ ಲಾಡ್ಜ್ನಲ್ಲಿ ಕೊಠಡಿ ಪಡೆಯುವಾಗ ಸಾಫ್ಟ್ವೇರ್ ಕಂಪೆನಿ ಹಾಗೂ ಖಾಸಗಿ ಕಂಪನಿ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದ. ಅದಕ್ಕೆ ತಕ್ಕಂತೆ ಬಟ್ಟೆ ಕೂಡ ಧರಿಸುತ್ತಿದ್ದ. ಹೀಗಾಗಿ ಆತನ ವರ್ತನೆಯಲ್ಲಿ ಯಾವುದೇ ಅನುಮಾನ ಬರುತ್ತಿರಲಿಲ್ಲ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.