ಅಕ್ರಮ ಭೂ ಮಂಜೂರಾತಿ: ದಾಖಲೆಗಳ ನಾಶದ ಹುನ್ನಾರ
Team Udayavani, Oct 21, 2019, 3:00 AM IST
ಹಾಸನ: ಹೇಮಾವತಿ ಮತ್ತು ಯಗಚಿ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ತರ ಪುನರ್ವಸತಿಗೆ ಭೂಮಿ ಮಂಜೂರು ಮಾಡುವಲ್ಲಿ ನಡೆದಿರುವ ಅಕ್ರಮ ಮುಚ್ಚಿ ಹಾಕಲು ದಾಖಲೆಗಳನ್ನೇ ಸುಟ್ಟು ಹಾಕುವ ಹುನ್ನಾರ ನಡೆದಿದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳುಗಡೆ ಸಂತ್ರಸ್ತರಿಗೆ ಪರ್ಯಾಯವಾಗಿ ಭೂಮಿ ಮಂಜೂರು ಮಾಡುವಾಗ ಮುಳುಗಡೆ ಸಂತ್ತಸ್ತರ ಸರ್ಟಿಫಿಕೇಟ್‌ಗಳನ್ನು ಪಡೆದು, ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬ ಆರೋಪಗಳು ಬಂದ ಹಿನ್ನಲೆಯಲ್ಲಿ ಹಾಸನ ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಅವರ ಅಧ್ಯಕ್ಷತೆಯ ತನಿಖಾ ಸಮಿತಿಯು 2015 ರ ಜನವರಿಯಿಂದ 2018ರ ನವೆಂಬರ್ 30 ರ ಅವಧಿಯಲ್ಲಿ ಅಕ್ರಮ ನಡೆದಿರುವುದನ್ನು ಪತ್ತೆ ಹಚ್ಚಿತ್ತು. ಸುಮಾರು 1,674 ಎಕರೆ ಅಕ್ರಮವಾಗಿ ಮಂಜೂರಾಗಿದೆ ಎಂದೂ ಸಮಿತಿಯು ವರದಿ ಸಲ್ಲಿಸಿತ್ತು.
ಈ ಸಂಬಂಧ ಜಿಲ್ಲಾಧಿಕಾರಿಯವರು ಅಕ್ರಮ ಮಂಜೂರಾತಿ ರದ್ದು ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಶೇಷ ಭೂ ಸ್ವಾಧೀನಾಧಿಕಾರಿಯವರಿಗೆ ಆದೇಶಿಸಿದ್ದರು. ಅಕ್ರಮವಾಗಿ ಭೂಮಿ ಮಂಜೂರಾತಿ ಮಾಡಿಸಿಕೊಂಡಿರುವವರ ವಿರುದ್ದ ಅವರಿಗೆ ಸಹಕರಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆಯೂ ಸೂಚಿಸಿದ್ದರು. ಆದರೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿ 17 ದಿನಗಳಾದರೂ ಇನ್ನೂ ಏಕೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಲ್ಲ ಎಂದು ಪ್ರಶ್ನಿಸಿದರು.
ಅಕ್ರಮ ಮುಚ್ಚಿಹಾಕಲು ಯತ್ನ: ಈ ಅಕ್ರಮ ಮುಚ್ಚಿ ಹಾಕಲು ಕಾಣದ ಕೈಗಳು ಪ್ರಯತ್ನಿಸುತ್ತಿವೆ. ಭೂ ಮಂಜೂರಾತಿಯ ದಾಖಲೆಗಳನ್ನು ಸುಟ್ಟು ಹಾಕುವ ಸಂಚು ಕೂಡ ನಡೆಯುತ್ತಿದೆ. ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲು ಮಾಡದಿದ್ದರೆ ದಾಖಲೆಗಳು ನಾಶವಾಗಬಹುದು. ಇದಕ್ಕೆಲ್ಲ ಜಿಲ್ಲಾಧಿಕಾರಿಯವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ರೇವಣ್ಣ ಎಚ್ಚರಿಸಿದರು.
ಸಿಎಂ, ಕಂದಾಯ ಸಚಿವರಿಗೆ ಮನವಿ: ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿರುವವರು ಜಿಲ್ಲಾಧಿಕಾರಿಯವರ ಮೇಲೆ ಪ್ರಭಾವ ಬೀರಿ ಕ್ರಿಮಿನಲ್ ಪ್ರಕರಣ ದಾಖಲಿಸದಂತೆ ಒತ್ತಡ ತಂದಿದ್ದಾರೆ. ಜಿಲ್ಲಾಧಿಕಾರಿಯವರೂ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಮೌಖೀಕ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ ತಾವು ಮುಖ್ಯಮಂತ್ರಿಯವರು ಮತ್ತು ಕಂದಾಯ ಸಚಿವರಿಗೆ ಮನವಿ ಮಾಡುವುದಾಗಿಯೂ ಅವರು ಸ್ಪಷ್ಟಪಡಿಸಿದರು.
ಕಾನೂನು ಹೋರಾಟ: ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿರುವವರ ಹಾಗೂ ಅವರಿಗೆ ಸಹಕಾರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟಕ್ಕೂ ನಾನು ಮತ್ತು ನನ್ನ ಪಕ್ಷ ಸಿದ್ಧ ಎಂದ ರೇವಣ್ಣ ಅವರು, ಅದಕ್ಕೆ ಅವಕಾಶ ನೀಡದಂತೆ ಕ್ರಮ ಜಾರಿಯಾಗಬಹುದೆಂಬ ವಿಶ್ವಾಸವಿದೆ ಎಂದರು.
ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ: ಈ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ. ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಅಕ್ರಮವಾಗಿ ಭೂಮಿ ಮಂಜೂರಾಗಿದೆ ಎಂದು ವರದಿ ನೀಡಿದ ತಕ್ಷಣವೇ ತನಿಖಾ ಸಮಿತಿಯ ಅಧ್ಯಕ್ಷರಾಗಿದ್ದ ಹಾಸನ ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಅವರಿಗೆ ಸ್ಥಳ ತೋರಿಸದೇ ಎತ್ತಂಗಡಿ ಮಾಡಲಾಗಿಯಿತು.
ಅದರ ಬೆನ್ನ ಹಿಂದೆಯೇ ಶಿಸ್ತಿನ ಅಧಿಕಾರಿ ಎಂದೇ ಗುರ್ತಿಸಿದ್ದ ಸಕಲೇಶಪುರ ತಹಶೀಲ್ದಾರ್ ರಕ್ಷಿತ್ ಅವರನ್ನೂ ವರ್ಗಾವಣೆ ಮಾಡಿ, ಮಂಜುನಾಥ್ ಎಂಬವರನ್ನು ಸಕಲೇಶಪುರ ತಹಸೀಲ್ದಾರ್ ಹುದ್ದೆಗೆ ವರ್ಗ ಮಾಡಲಾಗಿದೆ. ಸಕಲೇಶಪುರ ತಾಲೂಕಿನಲ್ಲಿಯೇ ಸುಮಾರು 1000 ಕರೆ ಅಕ್ರಮವಾಗಿ ಭೂಮಿ ಮಂಜೂರಾಗಿರುವುದನ್ನು ತಹಸೀಲ್ದಾರ್ ರಕ್ಷಿತ್ ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದರು. ಈಗ ಅವರನ್ನೂ ತಕ್ಷಣ ವರ್ಗ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಮೇಲೆ ಸಿಎಂ ದ್ವೇಷ: ಬೇರೆ, ಬೇರೆ ಜಿಲ್ಲೆಗಳಲ್ಲಿ ಅಕ್ರಮ ಎಸಗಿ ಅಮಾನತಾಗಿರುವ ಅಧಿಕಾರಿಗಳನ್ನು ಈಗ ಹಾಸನ ಜಿಲ್ಲೆಗೆ ಸರ್ಕಾರ ವರ್ಗ ಮಾಡುತ್ತಿದೆ. ಭ್ರಷ್ಟ ಅಧಿಕಾರಿಗಳನ್ನು ಹಾಸನ ಜಿಲ್ಲೆಗೆ ಮಂಜೂರು ಮಾಡಲೂ ಇಂತಿಷ್ಟು ಎಂದು ದರ ನಿಗದಿಪಡಿಸಿ ವಸೂಲಿ ಆದ ನಂತರವೇ ವರ್ಗ ಮಾಡಲಾಗಿದೆ ಎಂದ ರೇವಣ್ಣ ಅವರು, ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಹಾಸನ ಜಿಲ್ಲೆಯಿಂದ ವರ್ಗ ಮಾಡುವ ಮೂಲಕ ಹಾಸನ ಜಿಲ್ಲೆಯ ಮೇಲೆ ಮುಖ್ಯಮಂತ್ರಿಯವರು ದ್ವೇಷ ಸಾಧಿಸುತ್ತಿದ್ದಾರೆ. ಇಂಥ ದ್ವೇಷದ ರಾಜಕಾರಣ ಒಳ್ಳೆಯದಲ್ಲ ಎಂದೂ ರೇವಣ್ಣ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.