18 ವರ್ಷಗಳ ಬಳಿಕ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ
ಪರೀಕ್ಷೆ ಎದುರಿಸಲಿದ್ದಾರೆ ರಾಜ್ಯದ 8.96 ಲಕ್ಷ ವಿದ್ಯಾರ್ಥಿಗಳು
Team Udayavani, Oct 22, 2019, 4:59 AM IST
ಸಾಂದರ್ಭಿಕ ಚಿತ್ರ
ಮಹಾನಗರ: ರಾಜ್ಯದಲ್ಲಿ 18 ವರ್ಷಗಳ ಬಳಿಕ ಏಳನೇ ತರಗತಿಗೆ ಈ ಬಾರಿ ಪಬ್ಲಿಕ್ ಪರೀಕ್ಷೆ ನಡೆಯುತ್ತಿದೆ. 2019-20ನೇ ಸಾಲಿನಲ್ಲಿ ರಾಜ್ಯದ ಒಟ್ಟು 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
2003ನೇ ಇಸವಿಯವರೆಗೆ ರಾಜ್ಯದಲ್ಲಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಚಾಲ್ತಿಯಲ್ಲಿತ್ತು. ಅನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ನಡೆಯಲ್ಪಡುತ್ತಿದ್ದ ಪಬ್ಲಿಕ್ ಪರೀಕ್ಷೆಗಳನ್ನು ನಿಲ್ಲಿಸಿ 1ರಿಂದ 6ನೇ ತರಗತಿಗೆ ನಡೆಯುತ್ತಿದ್ದಂತೆ 7ನೇ ತರಗತಿಗೂ ತರಗತಿ ಪರೀಕ್ಷೆಗಳನ್ನೇ ನಡೆಸಲಾಗುತ್ತಿತ್ತು. ಆದರೆ, ಇದೀಗ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಬೇಕು ಎಂಬ ಆಶಯದೊಂದಿಗೆ ಮತ್ತೆ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆಯನ್ನು ಪರಿಚಯಿಸಲಾಗಿದೆ.
ಈ ಬಾರಿ 7ನೇ ತರಗತಿಯ ರಾಜ್ಯ ಪಠ್ಯಕ್ರಮದ 8.96 ಲಕ್ಷ ವಿದ್ಯಾರ್ಥಿಗಳು ಅದರಲ್ಲಿ 4.8 ಲಕ್ಷ ಬಾಲಕರು, 4.16 ಲಕ್ಷ ಬಾಲಕಿಯರು ಪಬ್ಲಿಕ್ ಪರೀಕ್ಷೆ ಬರೆಯಲಿದ್ದಾರೆ. ಸಿಬಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳು ಸೇರಿ ಒಟ್ಟು 10.83 ಲಕ್ಷ ವಿದ್ಯಾರ್ಥಿಗಳು 2019-20ನೇ ಸಾಲಿನಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.
ಅನುತ್ತೀರ್ಣ ಇಲ್ಲ
2019-20ನೇ ಸಾಲಿನಲ್ಲಿ ನಡೆಸುವ ಪಬ್ಲಿಕ್ ಪರೀಕ್ಷೆ ಪ್ರಾಯೋಗಿಕವಾಗಿದ್ದು, ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಲಾಗುವುದಿಲ್ಲ. ಪಬ್ಲಿಕ್ ಪರೀಕ್ಷೆಯಾದರೂ ಹಿಂದಿನ ವರ್ಷಗಳಂತೆಯೇ ಎಲ್ಲರನ್ನೂ ಉತ್ತೀರ್ಣಗೊಳಿಸುವ ಪ್ರಕ್ರಿಯೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಿರಾಳತೆಯನ್ನು ನೀಡಲಿದೆ. ಆದರೆ 2020-21ನೇ ಸಾಲಿನಿಂದ ಅನುತ್ತೀರ್ಣ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಅಲ್ಲದೆ, ಎಸೆಸೆಲ್ಸಿ, ಪಿಯುಸಿಯಲ್ಲಿರುವಂತೆ, ಅನುತ್ತೀರ್ಣರಾದವರಿಗೆ ಜೂನ್‌ನಲ್ಲಿ ಪೂರಕ ಪರೀಕ್ಷೆಯೂ ನಡೆಯಲಿದೆ.
ಶಾಲಾ ಮಟ್ಟದಲ್ಲಿ ಪರೀಕ್ಷೆ?
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿ ಪಬ್ಲಿಕ್ ಪರೀಕ್ಷೆಗಳನ್ನು ಶಾಲಾ ಮಟ್ಟ ಅಥವಾ ಜಿಲ್ಲಾ ಮಟ್ಟದಲ್ಲಿ ನಡೆಸುವುದರ ಬಗ್ಗೆ ಗೊಂದಲಗಳಿವೆ. ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಪರೀಕ್ಷೆಗಳು ಶಾಲಾ ಮಟ್ಟದಲ್ಲಿಯೇ ನಡೆಯಲಿದ್ದು, ಪ್ರಶ್ನೆ ಪತ್ರಿಕೆಗಳನ್ನು ರಾಜ್ಯ ಮಟ್ಟದಲ್ಲೇ ತಯಾರಿಸಲಾಗುತ್ತದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರವಾಗಿಲ್ಲ ಎಂದು ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊನೆಯ ಪರೀಕ್ಷೆ ಬರೆದವರು 8.75 ಲಕ್ಷ ಮಂದಿ
2002-03ನೇ ಸಾಲಿನಲ್ಲಿ 7ನೇ ತರಗತಿಗೆ ನಡೆದ ಕೊನೆಯ ಪಬ್ಲಿಕ್ ಪರೀಕ್ಷೆಯನ್ನು ರಾಜ್ಯದಲ್ಲಿ ಒಟ್ಟು 8.75 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಆ ಸಂದರ್ಭ ವಿಷಯವಾರು 35 (100ರಲ್ಲಿ) ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಆದರೆ ಈ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿ ಉತ್ತೀರ್ಣ/ಅನುತ್ತೀರ್ಣರಾಗಿದ್ದಾರೆ ಎಂಬ ಮಾಹಿತಿ ರಾಜ್ಯ ಶಿಕ್ಷಣ ಇಲಾಖೆಯಿಂದ ಲಭ್ಯವಾಗಿಲ್ಲ.
ದ.ಕ., ಉಡುಪಿ 42,442 ವಿದ್ಯಾರ್ಥಿಗಳು
ದ.ಕ. ಜಿಲ್ಲೆಯಲ್ಲಿ ಅಂದಾಜು 28,876 ಮಂದಿ ವಿದ್ಯಾರ್ಥಿಗಳು, ಉಡುಪಿ ಜಿಲ್ಲೆಯಲ್ಲಿ 13566 ಮಂದಿ ವಿದ್ಯಾರ್ಥಿಗಳು ಸೇರಿ ಸುಮಾರು 42,442 ಮಂದಿ ಈ ಬಾರಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬರೆಯಲಿದ್ದಾರೆ ಎಂದು ಉಭಯ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಾಲಾ ಮಟ್ಟದಲ್ಲಿ ಪರೀಕ್ಷೆ
2002-03ನೇ ಇಸವಿಯಲ್ಲಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆದಿತ್ತು. ಅನಂತರ ಈ ವರ್ಷವೇ ಪಬ್ಲಿಕ್ ಪರೀಕ್ಷೆ ನಡೆಯುತ್ತಿರುವುದು. ರಾಜ್ಯದಲ್ಲಿ 8.96 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಬಹುತೇಕ ಶಾಲಾ ಮಟ್ಟದಲ್ಲಿಯೇ ಈ ಶೈಕ್ಷಣಿಕ ವರ್ಷದ ಪರೀಕ್ಷೆಗಳು ನಡೆಯಲಿವೆ.
- ಪುರುಷೋತ್ತಮ್, ಕಾರ್ಯಕ್ರಮಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು
ವಾರಕ್ಕೆ ಐದು ಶಾಲೆ ಭೇಟಿ
ಈ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ವಾರಕ್ಕೆ ಕನಿಷ್ಠ ಐದು ಶಾಲೆಗಳಿಗೆ ಭೇಟಿ ನೀಡುವಂತೆ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಆತಂಕ ಹೊಂದಬಾರದು. ಇದರಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ನಾಪಾಸು ಮಾಡಲಾಗುವುದಿಲ್ಲ.
- ಶೇಷಶಯನ ಕಾರಿಂಜ, ಡಿಡಿಪಿಐ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.