ರೇಡಿಯೋ ಜಾಕಿಗೆ ವಿಶಿಷ್ಟ ಕೌಶಲ್ಯ ಅಗತ್ಯ: ಡಾ| ಶಶಿಧರ
Team Udayavani, Oct 23, 2019, 6:20 PM IST
ವಿಜಯಪುರ: ರೇಡಿಯೋದಲ್ಲಿ ನಾವು ಕಾರ್ಯ ನಿರ್ವಹಿಸುವ ಮೂಲಕ ಕೇಳುಗರ ಹೃದಯವನ್ನು ಮುಟ್ಟಬೇಕಾದರೆ ನಮ್ಮಲ್ಲಿ ಉತ್ತಮ ಭಾಷಾ ಶೈಲಿ, ಶಬ್ದ ಭಂಡಾರ ಹೆಚ್ಚಿಸಿಕೊಳ್ಳುವುದು ಅಗತ್ಯ ಎಂದು ಧಾರವಾಡ ಆಕಾಶವಾಣಿ ಕೇಂದ್ರದ ಡಾ| ಶಶಿಧರ ನರೇಂದ್ರ ಅಭಿಪ್ರಾಯಪಟ್ಟರು.
ಮಂಗಳವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಬೆಂಗಳೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೇಡಿಯೋ ಜಾಕಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೇಡಿಯೋ ಆಥವಾ ಇತರೆ ಯಾವುದೆ ವಾಹಿನಿ ಯಶಸ್ಸಿನಲ್ಲಿ ನಿರೂಪಕರ ಪಾತ್ರವೂ ಪ್ರಮುಖವಾಗಿದೆ. ನಿರೂಪಕರು ನಾಯಕರಂತೆ ತಮ್ಮ ಹೊಣೆ ನಿಭಾಯಿಸಬೇಕು. ಪ್ರಸ್ತುತ ಮಾಧ್ಯಮ ಜಗತ್ತಿನಲ್ಲಿ ಶೋತೃಗಳ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಕಲೆಯನ್ನು ಆಕಾಶವಾಣಿಯ ನಿರೂಪಕರು ಕಲಿಯುವುದು ಅತ್ಯಗತ್ಯ ಎಂದರು.
ರೇಡಿಯೋ ಕೇಂದ್ರದಲ್ಲಿ ನಿರೂಪಕರು ಬಳಸುವ ಪ್ರತಿ ಪದವೂ ಅವರ ನಿರೂಪಣಾ ಶೈಲಿ, ವಿಧಾನದ ಮೇಲೆ ತಮ್ಮದೇ ಆದ ಅರ್ಥವನ್ನು ನೀಡುತ್ತವೆ. ಹೀಗಿರುವಾಗ ನಾವು ಯಾವುದೇ ಪದ ಬಳಸುವಾಗ ಬಹಳ ಜಾಗೃತರಾಗಿ ಬಳಸಬೇಕು. ಒಬ್ಬ ನಿರೂಪಕನ ಮಾತುಗಳನ್ನು ಸಾವಿರಾರು ಜನ ಕೇಳುತ್ತಿರುತ್ತಾರೆ, ಹೀಗಾಗಿ ನಿರೂಪಕರು ಬಳಸುವ ಪದಗಳು ಅಪಾರ್ಥ ಕಲ್ಪಿಸಬಾರದು. ಭಾಷೆ, ಧ್ವನಿ ಏರಿಳಿತ, ಪದಗಳ ಬಳಕೆ ಕೇಳುಗರನ್ನ ಕಟ್ಟಿ ಹಾಕುವಂತಿರಬೇಕು. ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರೆ ಅದರಲ್ಲಿ ನಿರೂಪಕರ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ ಎಂದರು.
ಮತ್ತೊಂದೆಡೆ ದೃಶ್ಯ ಮಾಧ್ಯಮಕ್ಕೂ ಮತ್ತು ಶೋತೃ ಮಾಧ್ಯಮಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಶೋತೃ ಮಾಧ್ಯಮದಲ್ಲಿ ನಿರೂಪಕರು ಶಬ್ದಗಳ ಬಳಕೆ, ಭಾಷಾ ಪಾಂಡಿತ್ಯ, ಭಾಷಾ ಹಿಡಿತವನ್ನು ಸಾಧಿಸುವುದು ಅತ್ಯಗತ್ಯ ಎಂದು ಅವರು ಪತ್ರಿಕೋದ್ಯಮ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ರಾಯಚೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಡಾ|ಬಿ.ಎಂ. ಶರಬೇಂದ್ರ ಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶ್ರವಣ ಪರಂಪರೆ ಕಡಿಮೆಯಾಗುತ್ತಿದೆ. ದೃಶ್ಯ ಮಾಧ್ಯಮಗಳಿಂತ ಶ್ರವಣ ಮಾಧ್ಯಮ ನಮ್ಮ ಮೆದುಳಿಗೆ ಹೆಚ್ಚಿನ ಕೆಲಸ ನೀಡುತ್ತದೆ. ಶ್ರವಣ ಮಾಧ್ಯಮ ಸೃಜನಶೀಲ ಕ್ರೀಯೆಯನ್ನು ವೃದ್ಧಿಸುತ್ತದೆ. ಶ್ರವಣ ಮಾಧ್ಯಮದಲ್ಲಿ ನಿರೂಪಕನ ಪಾತ್ರ ಅತ್ಯಂತ ಹಿರಿದಾಗಿದೆ. ಹೀಗಾಗಿ ನಿರೂಪಕ ಕೇಳುಗರಿಗೆ ಹಿತವಾಗುವ ರೀತಿಯಲ್ಲಿ
ನಿರೂಪಣೆ ಮಾಡಬೇಕಾಗುತ್ತದೆ. ಕೇಳುಗರನ್ನ ಹಿಡಿದಿಡುವುದು ಸುಲಭದ ಮಾತಲ್ಲ ಬಹಳ ಕಷ್ಟದ ವಿಷಯ. ಅಂತಹ ಕೇಳುಗರನ್ನು ನಿರೂಪಕ ಹಿಡಿದಿಟ್ಟುಕೊಳ್ಳಬೇಕಾದರೆ ಅತ್ಯಂತ ವಿಶಿಷ್ಟವಾಗಿ ಕೇಳುಗರ ಮನ ಮುಟ್ಟುವ ಶಬ್ದಗಳ ಬಳಕೆ, ಭಾಷಾ ಜ್ಞಾನ ಹೊಂದಿರಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಮಾತನಾಡಿ, ನಮ್ಮ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಲವಾರು ವಿಷಯದ ಮೇಲೆ ಈ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದು, ನೀವೆಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಿ.
ರೇಡಿಯೋ ಜಾಕಿ ಕಾರ್ಯಾಗಾರದಲ್ಲಿ ನಿರೂಪಣೆ, ಶಬ್ದ ಬಳಕೆ, ಧ್ವನಿ ಏರಿಳಿತ, ಮುಂತಾದ ಹಲವಾರು ವಿಷಯಗಳ ಕುರಿತು ನಿಮಗೆ ತಿಳಿಸಿಕೊಡಲಾಗುತ್ತದೆ. ಅತ್ಯಂತ ಸಂಪತ್ಭರಿತ ಕಾರ್ಯಾಗಾರ ಇದಾಗಿರಲಿದ್ದು, ಈ ಕಾರ್ಯಾಗಾರದ ಉಪಯುಕ್ತತೆಯನ್ನು ಎಲ್ಲರೂ ಪಡೆದುಕೊಳ್ಳಿ. ದೂರದ ಊರುಗಳಿಂದ ಬಂದಂತಹ ವಿದ್ಯಾರ್ಥಿನಿಯರು ಈ ಮೂರು ದಿನಗಳ ಕಾಲ ಕಾರ್ಯಾಗಾರದಲ್ಲಿ ಅತ್ಯಂತ ಕ್ರಿಯಾಶೀಲತೆಯಿಂದ ಪಾಲ್ಗೊಂಡು ಇದರ ಸದುಪಯೋಗ ಪಡೆದು ಮರಳಿದರೆ ನಿಮಗಿಂತ ಹೆಚ್ಚಿನ ಸಂತಸ ನಮ್ಮೆಲ್ಲರಿಗೂ
ಆಗುತ್ತದೆ ಎಂದು ಹೇಳಿದರು.
ಡಾ| ತಹಮೀನಾ ಕೋಲಾರ ಸ್ವಾಗತಿಸಿದರು. ಸಂದೀಪ ಪ್ರಾಸ್ತಾವಿಕ ಮಾತನಾಡಿದರು. ದೀಪಾ ತಟ್ಟಿಮನಿ, ಸೃಷ್ಟಿ ಜವಳೆಕರ ಪರಿಚಯಿಸಿದರು. ಜ್ಞಾನಜ್ಯೋತಿ ಚಾಂದಕವಠೆ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.