“ಬಿಲ್‌ಗೇಟ್ಸ್’ಗೆ ಹಾಡಿನ ಸಂಭ್ರಮ
Team Udayavani, Oct 24, 2019, 6:00 AM IST
ಶಾಲೆಯಲ್ಲಿ ಸದಾ ತರಲೆ, ಕೀಟಲೆ ಮಾಡುವ ಇಬ್ಬರು ಗೆಳೆಯರಿಗೆ ತಾವೂ ಬಿಲ್‌ಗೇಟ್ಸ್ ರೀತಿ ಬೆಳೆಯಬೇಕು ಎಂಬ ಆಸೆ ಹುಟ್ಟುತ್ತೆ. ಆ ಆಸೆಯ ಬೆನ್ನತ್ತಿ ಅವರಿಬ್ಬರೂ ಬೆಂಗಳೂರಿಗೆ ಹೊರಡುತ್ತಾರೆ. ಆ ಕಾಣದ ಊರಿಗೆ ಬರುವ ಹಳ್ಳಿಯ ಗೆಳೆಯರ ಪಾಡು ಏನಾಗುತ್ತೆ, ಅವರ ಆಸೆ ಈಡೇರುತ್ತೋ, ಇಲ್ಲವೋ ಅನ್ನೋದೇ “ಬಿಲ್‌ಗೇಟ್ಸ್’ ಕಥೆ. ಸದ್ಯ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. “ಬಿಲ್‌ಗೇಟ್ಸ್’ ಬಹುತೇಕ ಜನರಿಗೆ ಗೊತ್ತು.
ಅವರಂತೆಯೇ ಆಗಬೇಕು ಎಂದು ಕನಸು ಕಾಣುವ ಇಬ್ಬರು ಹೀರೋಗಳ ಕಥೆಯನ್ನು ಹಾಸ್ಯಮಯವಾಗಿ, ಸಂದೇಶ ರೂಪದಲ್ಲಿ ಕಟ್ಟಿಕೊಡಲಾಗಿದೆ. ಈ ಚಿತ್ರವನ್ನು ಶ್ರೀನಿವಾಸ ಸಿ. ಮಂಡ್ಯ ನಿರ್ದೇಶಿಸಿದ್ದಾರೆ. ಚಿಕ್ಕಣ್ಣ ಹಾಗು ಶಿಶಿರ್ ಶಾಸ್ತ್ರಿ ಹೀರೋಗಳಾಗಿ ಕಾಣಿಸಿಕೊಂಡಿದ್ದಾರೆ. ಹಳ್ಳಿಯಲ್ಲಿದ್ದ ಇಬ್ಬರು ಗೆಳೆಯರು ಬಿಲ್‌ಗೇಟ್ಸ್‌ನಂತೆಯೇ ಆಗಬೇಕು ಎಂದು ಪಣತೊಡುವ ಅಂಶಗಳೆಲ್ಲವೂ ಹಾಸ್ಯಮಯವಾಗಿದ್ದರೂ, ಇಲ್ಲಿ ಸಾಮಾಜಿಕ ಕಳಕಳಿಯೂ ಇದ್ದು, ಈಗಿನ ಟ್ರೆಂಡ್‌ಗೆ ತಕ್ಕಂತಹ ಚಿತ್ರ ಕಟ್ಟಿಕೊಡಲಾಗಿದೆ ಎಂಬುದು ನಿರ್ದೇಶಕರ ಮಾತು.
ಚಿತ್ರ ತುಂಬಾ ಚೆನ್ನಾಗಿ ಮೂಡಿಬರಲು ಚಿತ್ರತಂಡ ಶ್ರಮಿಸಿದೆ. ಕೆಲ ದೃಶ್ಯಗಳು ಇನ್ನೂ ಚೆನ್ನಾಗಿ ಬರಬೇಕು ಎಂಬ ಉದ್ದೇಶದಿಂದಲೇ ಮರು ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಯಮಲೋಕದ ದೃಶ್ಯಗಳೂ ಇವೆ. ಆ ಸೀನ್‌ಗಳನ್ನೆಲ್ಲಾ ಗ್ರಾಫಿಕ್ಸ್ ಮಾಡಲಾಗಿದೆ. ಹೀಗಾಗಿ ಚಿತ್ರ ಕೂಡ ತಡವಾಗಿದೆ ಎಂಬುದು ನಿರ್ದೇಶಕರ ಸ್ಪಷ್ಟನೆ. ಅಕ್ಷರರೆಡ್ಡಿ, ರಶ್ಮಿತಾ ನಾಯಕಿಯರಾದರೆ, ಚಿತ್ರದಲ್ಲಿ ಕುರಿ ಪ್ರತಾಪ್, ಗಿರಿ, ರಾಜ್‌ಶೇಖರ್, ರಾಜೇಶ್, ಮನೋಹರ್, ಬ್ಯಾಂಕ್‌ಜನಾರ್ದನ್, ಯತಿರಾಜ್, ಪ್ರಿಯಾಂಕ ಚಿಂಚೊಳ್ಳಿ ಮುಂತಾದವರು ನಟಿಸಿದ್ದಾರೆ.
ರಾಜಶೇಖರ್ ಚಿತ್ರಕಥೆ ಬರೆದರೆ, ರಾಕೇಶ್ ಸಿ.ತಿಲಕ್ ಛಾಯಾಗ್ರಹಣವಿದೆ. ಮರಿಸ್ವಾಮಿ ಅವರ ಸಂಕಲನವಿದೆ. ರಾಜೇಶ್.ಡಿ ಹಾಗು ಅರುಣ್ ಸಾಹಿತ್ಯವಿದೆ. ನೋಬಿನ್‌ಪೌಲ್ ಸಂಗೀತ ಸಂಯೋಜಿಸಿದ್ದಾರೆ. ಶ್ರೀಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿದ್ದ, ಎಲ್ಲೆಡೆ ಮೆಚ್ಚುಗೆ ಪಡೆದಿವೆ. ಲಹರಿ ವೇಲು, ಧರ್ಮಕೀರ್ತಿರಾಜು, ಪ್ರಥಮ್, ರವಿ ಬಸ್ರೂರು, ಮನೋಹರ್ ಇತರರು “ಬಿಲ್‌ಗೇಟ್ಸ್’ ತಂಡಕ್ಕೆ ಶುಭಹಾರೈಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.