ಆಕರ್ಷಿಸುತ್ತಿವೆ ಗೂಡುದೀಪ, ಹಣತೆಗಳು
ದೀಪಾವಳಿ ಹಬ್ಬಕ್ಕೆ ದಿನಗಣನೆ
Team Udayavani, Oct 24, 2019, 4:16 AM IST
ನಗರದ ಮಾರುಕಟ್ಟೆಯಲ್ಲಿ ಗೂಡುದೀಪಗಳನ್ನು ಖರೀದಿಸುತ್ತಿರುವ ಗ್ರಾಹಕರು.
ಮಹಾನಗರ: ದೀಪಾವಳಿ ಆಚರಣೆಗೆ ನಗರದಲ್ಲಿ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಗೂಡು ದೀಪಗಳು, ಹಣತೆಗಳು ದೀಪಾವಳಿಯ ಪ್ರಮುಖ ಆಕರ್ಷಣೆಯಾಗಿದ್ದು, ವಿವಿಧ ಮಾದರಿಯ ಹಣತೆ ಮತ್ತು ಗೂಡು ದೀಪಗಳ ಸಂಗ್ರಹ ಅಂಗಡಿ ಮಳಿಗೆಗಳಲ್ಲಿ ರಾರಾಜಿಸುತ್ತಿವೆ. ಈ ಬಾರಿಯೂ ಮಾರುಕಟ್ಟೆಗೆ ವಿವಿಧ ಮಾದರಿಯ ಬಟ್ಟೆ, ಪ್ಲಾಸ್ಟಿಕ್ ಮತ್ತು ಬಣ್ಣದ ಕಾಗದಗಳಿಂದ ಮಾಡಿದ ಗೂಡು ದೀಪಗಳು ಮಾರುಕಟ್ಟೆಯಲ್ಲಿವೆ. ಇವುಗಳ ಪೈಕಿ ಬಣ್ಣದ ಕಾಗದದ ಗೂಡುದೀಪಗಳಿಗೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚುತ್ತಿದೆ.
ವೈವಿಧ್ಯಮಯ ಗೂಡುದೀಪಗಳು
ಬಟ್ಟೆಯಿಂದ ಮಾಡಿದ ಗೂಡುದೀಪಗಳಲ್ಲಿ ಸುಮಾರು 25ಕ್ಕೂ ಹೆಚ್ಚಿನ ವಿಧಗಳಿದ್ದು, 60 ರೂ.ಗಳಿಂದ 350 ರೂ.ವರೆಗೆ ದರ ಇದೆ. ಪ್ಲಾಸ್ಟಿಕ್ ಗೂಡುದೀಪಗಳಲ್ಲಿ ಸುಮಾರು 150ಕ್ಕೂ ಮಿಕ್ಕಿ ವಿಧಗಳಿದ್ದು, 50 ರೂ. ಗಳಿಂದ ಪ್ರಾರಂಭವಾಗಿ 400 ರೂ. ಗಳಿಗೂ ಹೆಚ್ಚಿನ ದರದ ಗೂಡುದೀಪಗಳು ಮಾರುಕಟ್ಟೆಗೆ ಬಂದಿವೆ. 40ಕ್ಕೂ ಹೆಚ್ಚು ಬಣ್ಣಗಳ ಕಾಗದದ ಗೂಡು ದೀಪಗಳಿದ್ದು, 400 ರಿಂದ 450 ರೂ. ದರ ಮಾರುಕಟ್ಟೆಯಲ್ಲಿದೆ.
ಉರ್ವಸ್ಟೋರ್ ಬಳಿಯ ಅಂಗಡಿ ಮಾಲಕರೊಬ್ಬರಾದ ಸಂತೋಷ್ ಕುಮಾರ್ “ಸುದಿನ’ಕ್ಕೆ ಪ್ರತಿಕ್ರಿಯಿಸಿ “ಕಳೆದ ವರ್ಷಕ್ಕೆ ಹೋಲಿಸಿದರೆ ಗೂಡುದೀಪ ಖರೀದಿಯಲ್ಲಿ ಈ ಬಾರಿ ಗ್ರಾಹಕರಿಂದ ನಿರಾಸಕ್ತಿ ಹೆಚ್ಚಿದೆ. ಈ ಹಿಂದೆ ಹಬ್ಬಕ್ಕೆ ಮೂರ್‍ನಾಲ್ಕು ದಿನಗಳಿರುವಾಗಲೇ ಖರೀದಿ ಭರದಿಂದ ಸಾಗುತ್ತಿತ್ತು. ಆದರೆ ಇನ್ನೂ ಹೆಚ್ಚಿನ ಸಂಖ್ಯೆಯ ಜನ ಖರೀದಿಯಲ್ಲಿ ತೊಡಗಿಲ್ಲ’ ಎನ್ನುತ್ತಾರೆ.
ಮಣ್ಣಿನ ಹಣತೆ ಖರೀದಿ ಹೆಚ್ಚಳ
ಮಣ್ಣಿನಿಂದ ತಯಾರಿಸಿದ, ಪಿಂಗಾಣಿ ಹಣತೆಗಳ ಖರೀದಿಯೂ ಮಾರುಕಟ್ಟೆಯಲ್ಲಿ ಜೋರಾಗಿದೆ. ಮಣ್ಣಿನ ಹಣತೆಗಳ ಬೆಲೆ ಕಡಿಮೆ. ಪಿಂಗಾಣಿ ಹಣತೆಗಳು ತುಸು ದುಬಾರಿ. ಕೆಲವು ಕಡೆ ರಸ್ತೆ ಬದಿಗಳಲ್ಲಿ ಮತ್ತು ತಳ್ಳು ಗಾಡಿಗಳಲ್ಲಿ ಹಣತೆಗಳ ಮಾರಾಟ ನಡೆಯುತ್ತಿದೆ. ಆವೆ ಮಣ್ಣಿನಿಂದ ತಯಾರಿಸಿದ ಒಂದು ಹಣತೆಗೆ 2 ರೂ. ನಿಂದ 8 ರೂ. ತನಕ ದರ ಇದೆ. ಹಣತೆಗಳನ್ನು ಅಂದವಾಗಿ ಜೋಡಿಸಿದ ಸೆಟ್‌ಗಳು ಲಭ್ಯವಿದ್ದು, ಸೆಟ್ ಒಂದರ ಬೆಲೆ 150 ರೂ.-250 ರೂ.ವರೆಗೆ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.