ಹಳ್ಳಿಯಿಂದ ದಿಲ್ಲಿಗೆ ಕನ್ನಡ

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ "ಕನ್ನಡ ಕಲಿಕೆ' ಜಾಲತಾಣದ ಕುರಿತು...

Team Udayavani, Oct 27, 2019, 5:09 AM IST

z-4

ಕನ್ನಡದ ಬಗ್ಗೆ ನಾನು ಸಾಕಷ್ಟು ಕೇಳಿದ್ದೇನೆ. ಆದರೆ ಲಿಪಿಯನ್ನು ಕುತೂಹಲದಿಂದ ಪ್ರತೀಬಾರಿ ಗಮನಿಸಿದಾಗಲೂ ಕೊನೆಗೆ ನನ್ನಲ್ಲಿ ಉಳಿಯುವುದು ಜಿಲೇಬಿಯ ಆಕೃತಿ ಮಾತ್ರ”

ಇತ್ತೀಚೆಗೆ ನನ್ನ ದೆಹಲಿಯ ಸಹೋದ್ಯೋಗಿಯೊಬ್ಬರು ಹೀಗೊಂದು ಮಾತನ್ನು ಹೇಳಿದಾಗ ನಾನು ಸಣ್ಣಗೆ ನಕ್ಕುಬಿಟ್ಟಿದ್ದೆ. ಆದರೆ, ದೆಹಲಿ ಮೂಲದ ಈ ವ್ಯಕ್ತಿಗೆ ಕನ್ನಡದ ಬಗ್ಗೆ ಇರುವ ಕುತೂಹಲವು ಸಹಜವಾಗಿಯೇ ನನ್ನಲ್ಲಿ ಆಸಕ್ತಿಯನ್ನು ಮೂಡಿಸಿತ್ತು. ಏಕೆಂದರೆ, ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ನಾಲ್ಕು ಪ್ರಮುಖ ಭಾಷೆಗಳಿವೆ ಎಂಬ ಬಗ್ಗೆ ತಿಳಿದಿಲ್ಲದ ಅದೆಷ್ಟೋ ವಿದ್ಯಾವಂತರನ್ನು ರಾಷ್ಟ್ರರಾಜಧಾನಿಯಲ್ಲಿ ಕಂಡು ಬೆಚ್ಚಿಬಿದ್ದವನು ನಾನು. ಹೀಗಾಗಿ, ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ವಾಸವಿರುವ ಅನ್ಯರಾಜ್ಯದ ವ್ಯಕ್ತಿಯೊಬ್ಬ ಇಂದಿಗೂ “ಕನ್ನಡ್‌ ಗೊತ್ತಿಲ್ಲಾ’ ಎಂದು ರಾಗವಾಗಿ ಹೇಳಿದರೆ ಅದನ್ನೊಂದು ಹಳಸಿದ ಜೋಕ್‌ ಎಂದು ಮರೆಯುವುದಕ್ಕಿಂತಲೂ, ಅದೇಕೋ ಗಾಬರಿಯನ್ನು ಹುಟ್ಟಿಸಿಬಿಡುತ್ತದೆ. ಜಾಗತೀಕರಣದ ನಂತರದ ದಿನಗಳು ಭಾಷಾವೈವಿಧ್ಯಗಳ ಬೀಡಾಗಿರುವ ಭಾರತದಲ್ಲಿ, ಅದರಲ್ಲೂ ಕನ್ನಡದಂತಹ ಶ್ರೀಮಂತ ಪರಂಪರೆಯುಳ್ಳ ಭಾಷೆಯನ್ನು ಈ ಮಟ್ಟಿಗೆ ನುಂಗಿಬಿಟ್ಟವೋ ಎಂದು ದಿಗಿಲಾಗುತ್ತದೆ. ಕಳೆದ ಒಂದೆರಡು ದಶಕಗಳಿಂದ ಕನ್ನಡಿಗರು ಸಾಕಷ್ಟು ಬೆಳೆದಿದ್ದಾರೆ ಎಂಬುದೇನೋ ಸತ್ಯ. ಹಾಗೆಂದು ಈ ಬೆಳವಣಿಗೆಗಾಗಿ ಉಸಿರಿನಂತಿರುವ ಭಾಷೆಯನ್ನು ಕಂದಾಯವಾಗಿ ಕಟ್ಟಬೇಕಾಗಿರುವ ಪರಿಸ್ಥಿತಿಯು ನಮಗೆ ಬಂದುಬಿಟ್ಟಿತೇ ಎಂಬ ಪ್ರಶ್ನೆಗಳು ಮೂಡುವುದು ಸಹಜ.

ಸದ್ಯದ ಪರಿಸ್ಥಿತಿಗಳು ಹೀಗಿರುವಾಗ ಕನ್ನಡದ ಬಗ್ಗೆ ಕಾಳಜಿಯುಳ್ಳವರು ಕರ್ನಾಟಕದಾಚೆಗೂ ಭಾಷೆಯನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವ ಸುದ್ದಿಗಳನ್ನು ಓದಿದಾಗಲೆಲ್ಲಾ ಆಗುವ ಸಂತಸವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಕನ್ನಡದ ಬಗ್ಗೆ ದೇಶ-ವಿದೇಶಗಳಲ್ಲಿ ಇಂಥ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಲೇ ಇವೆ ಎಂಬುದು ನಿಜಕ್ಕೂ ಹೊಸ ಭರವಸೆಗಳನ್ನು ಹುಟ್ಟುಹಾಕುವ ಸಂಗತಿಗಳು. ಆದರೆ, ಸದ್ದಿಲ್ಲದೆ ನಡೆಯುತ್ತಿರುವ ಇಂಥ ಆಶಾದಾಯಕ ಬೆಳವಣಿಗೆಗಳ ಬಗ್ಗೆ ಕೊಂಚ “ಸದ್ದು ಮಾಡುವುದು’ ಮತ್ತು “ಸುದ್ದಿ ಮಾಡುವುದು’ ಸದ್ಯದ ಅಗತ್ಯ.

ರಾಷ್ಟ್ರ ರಾಜಧಾನಿಯಲ್ಲಿ ಕನ್ನಡ ಕಹಳೆ
ಹೀಗೆ, ಕರ್ನಾಟಕದ ರಾಜಧಾನಿಯಲ್ಲೇ ಕನ್ನಡವು ಸೊರಗುತ್ತಿದೆಯೆಂಬ ಮಾತುಗಳು ಕೇಳಿಬರುತ್ತಿರುವಾಗ, ಇತ್ತ ಈ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೊಂದಾದ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಆಸಕ್ತರ ತಂಡವೊಂದು ಕನ್ನಡ ಕಲಿಕೆಗೊಂದು ಹೊಸ ಭಾಷ್ಯವನ್ನು ಬರೆಯುತ್ತಿದೆ. 2015ರಲ್ಲಿ ದಿಲ್ಲಿಯ ಜೆಎನ್‌ಯುವಿನಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆಯ ಅನುದಾನದ ಸಹಯೋಗದಿಂದ ಆರಂಭವಾಗಿದ್ದ ಕನ್ನಡ ಅಧ್ಯಯನ ಪೀಠದ ಈವರೆಗಿನ ಯಶಸ್ವಿ ಪಯಣವು ಇದಕ್ಕೊಂದು ಒಳ್ಳೆಯ ನಿದರ್ಶನ. ಹೀಗೆ ದಿಲ್ಲಿ ಅಭೀ ದೂರ್‌ ಹೈ ಎಂಬ ಮಾತು ಕನ್ನಡಕ್ಕೆ ಅನ್ವಯಿಸುವುದಿಲ್ಲ ಎನ್ನುತ್ತಾರೆ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿರುವ
ಡಾ. ಪುರುಷೋತ್ತಮ ಬಿಳಿಮಲೆ.

ಕನ್ನಡ ಕಲಿಕೆ ಜಾಲತಾಣದ ಒಂದು ಪುಟ

ಜೆಎನ್‌ಯುವಿನ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಭಾಗವಾಗಿರುವ ಕನ್ನಡ ಅಧ್ಯಯನ ಪೀಠವು ಎರಡು ಸೆಮಿಸ್ಟರ್‌ಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಕನ್ನಡ ಭಾಷೆಯನ್ನು ಆಸಕ್ತ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಲಿಸುವ ನಿಟ್ಟಿನಲ್ಲಿ ಪಠ್ಯಕ್ರಮವನ್ನು ಸಿದ್ಧಪಡಿಸಿ ಅಳವಡಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ, ಅದರಾಚೆಗೂ ತನ್ನದೇ ಆದ ವಿಶಿಷ್ಟ ಕಾರ್ಯಕ್ರಮಗಳಿಂದ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ ಆಸಕ್ತರ ಮುಂದಿರಿಸುತ್ತ ಸಕ್ರಿಯವಾಗಿದೆ. ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳು, ಸರಣಿ ಉಪನ್ಯಾಸಗಳು, ಕನ್ನಡ ಪುಸ್ತಕಗಳನ್ನೊಳಗೊಂಡ ವ್ಯವಸ್ಥಿತ ಗ್ರಂಥಾಲಯ, ಅಧ್ಯಯನ ಪೀಠದ ಸ್ವಂತ ಪ್ರಕಟಣೆಗಳು… ಹೀಗೆ ಹತ್ತಾರು ವಿನೂತನ ಪ್ರಯೋಗಗಳು ದೂರದ ದಿಲ್ಲಿಯಲ್ಲಿ ಕನ್ನಡದ ಹೆಸರಿನಲ್ಲಿ ನಡೆಯುತ್ತಲೇ ಇವೆ. 2018-19 ರ ಶೈಕ್ಷಣಿಕ ವರ್ಷವೊಂದರಲ್ಲೇ ದೇಶ-ವಿದೇಶಗಳ ಹಲವಾರು ಮಂದಿ ವಿದ್ಯಾರ್ಥಿಗಳು ಇಲ್ಲಿ ಕನ್ನಡವನ್ನು ಕಲಿತಿದ್ದಾರೆ. ಇನ್ನು ಸಾಹಿತ್ಯಾಸಕ್ತರಿಗಾಗಿ ರನ್ನನ ಗದಾಯುದ್ಧದಿಂದ ಹಿಡಿದು ಶಿವರಾಮ ಕಾರಂತರ ಅಳಿದ ಮೇಲೆ ಕಾದಂಬರಿಯವರೆಗೂ ಪೀಠವು ಕನ್ನಡ ಸಾಹಿತ್ಯವನ್ನು ಪರಿಚಯಿಸಿದೆ ಎಂಬುದು ಇಲ್ಲಿ ಗಮನಾರ್ಹ ಅಂಶ.

“ಕನ್ನಡ ಕಲಿಕೆ’ ಎಂಬ ಕನಸು
ಕನ್ನಡದ ದೈನಂದಿನ ಬಳಕೆಯ ಜೊತೆಗೇ ಭಾಷೆಯ ಶ್ರೀಮಂತ ಸಾಹಿತ್ಯಿಕ ಪರಂಪರೆಯನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಕರ್ನಾಟಕದ ಭಾಷಾ ವೈವಿಧ್ಯ, ಚರಿತ್ರೆ, ಜಾನಪದ, ವಾಸ್ತುಶಿಲ್ಪ, ಬುಡಕಟ್ಟು, ಆಧುನಿಕತೆಗಳ ಬಗ್ಗೆ ಮತ್ತಷ್ಟು ಪರಿಣಾಮಕಾರಿ ನೋಟವನ್ನು ಬೀರಬಲ್ಲ ಮಹತ್ತರ ಗುರಿಯನ್ನಿರಿಸಿಕೊಂಡು ಆರಂಭವಾಗಿದ್ದ ಜಾಲತಾಣವೇ ಕನ್ನಡ ಕಲಿಕೆ. ಭಾಷಾಕಲಿಕೆಗಾಗಿ ಸಿದ್ಧಪಡಿಸಲಾಗುವ ಜಾಲತಾಣಗಳು ಸಾಮಾನ್ಯವಾಗಿ ಪ್ರಕಟಿತ ಪಠ್ಯಪುಸ್ತಕಗಳನ್ನೇ ಅಳವಡಿಸುವುದರಿಂದಾಗಿ ತಂತ್ರಜ್ಞಾನದ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳುವಲ್ಲಿ ವಿಫ‌ಲವಾಗುತ್ತವೆ. ಇನ್ನು ಎಲ್ಲರ ಅನುಕ್ಷಣದ ಒಡನಾಡಿಯಾಗಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಇವುಗಳನ್ನು ಬಳಸುವುದಂತೂ ಮತ್ತಷ್ಟು ಸಂಕೀರ್ಣವಾಗಿ ಬಹುತೇಕರು ಕ್ರಮೇಣ ತಮ್ಮ ಆಸಕ್ತಿಯನ್ನು ಕಳೆದುಕೊಂಡಿರುವುದನ್ನು ನಾವು ನೋಡಿರುತ್ತೇವೆ. ಇಂಥ ಮಿತಿಗಳನ್ನು ಗಮನದಲ್ಲಿರಿಸಿಕೊಂಡೇ ಇಂದಿನ ತಂತ್ರಜ್ಞಾನದ ಯುಗದಲ್ಲಿ ಕನ್ನಡ ಭಾಷಾಕಲಿಕೆಯನ್ನು ಸರಳವಾಗಿಸಿ, ಬಳಕೆದಾರ ಸ್ನೇಹಿ ಆವೃತ್ತಿಯ ರೂಪದಲ್ಲಿ ಪರಿಚಯಿಸಲಾಗಿರುವ ಕನ್ನಡ ಕಲಿಕೆ ಜಾಲತಾಣವು ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಕನಸಿನ ಕುಡಿ.

ಅಸಲಿಗೆ ಕನ್ನಡ ಕಲಿಕೆ ಜಾಲತಾಣವು ಭಾಷಾಕಲಿಕೆಯ ನಾಲ್ಕು ಪ್ರಮುಖ ಕೌಶಲಗಳಾದ ಆಲಿಸುವಿಕೆ, ಸಂಭಾಷಣೆ, ಓದುವಿಕೆ ಮತ್ತು ಬರೆಯುವಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂವತ್ತು ವೀಡಿಯೋಗಳನ್ನು ಸದ್ಯ ಪಠ್ಯವಾಗಿ ಬಳಸಿಕೊಂಡಿದೆ. ಇನ್ನು ವರ್ಣಮಾಲೆಯನ್ನು ಕಲಿಸಲು ಬಿಳಿ ಹಲಗೆಯ ಮೇಲೆ ಅಕ್ಷರಗಳು ಮೂಡುವ ವಿಧಾನದಿಂದ ಹಿಡಿದು ವ್ಯಾಕರಣ ಸೂತ್ರಗಳವರೆಗೆ ಎಲ್ಲವನ್ನೂ ಇಲ್ಲಿ ಕಾಣಬಹುದು. ಇಲ್ಲಿರುವ ವ್ಯಾಕರಣ ರೂಪಗಳನ್ನು ಮತ್ತು ವೀಡಿಯೋ ದೃಶ್ಯಾವಳಿಗಳನ್ನು ಒಂದಕ್ಕೊಂದು ಪೂರಕವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಬೋಧಕರು ತೋರಿದ್ದೇ ಆದಲ್ಲಿ ಇಂಥಾ ಪ್ರಯೋಗ ಗಳು ದೊಡ್ಡ ಮಟ್ಟಿನ ಯಶಸ್ಸನ್ನು ಕಾಣುವುದರಲ್ಲಿ ಸಂದೇಹವಿಲ್ಲ.

ಭಾಷಾಕಲಿಕೆಯ ವಿಚಾರಕ್ಕೆ ಬಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಸರಿಸಲಾಗುತ್ತಿರುವ ಸಂವಹನ, ಸಂಸ್ಕೃತಿ, ಸಂಪರ್ಕ, ಹೋಲಿಕೆ ಮತ್ತು ಸಮುದಾಯದ ಮಾದರಿಗಳನ್ನು ಅಳವಡಿಸಿರುವ ಹೆಗ್ಗಳಿಕೆ ಈ ಜಾಲತಾಣದ್ದು. ಈ ವಿಧಾನದಲ್ಲಿ ಅನ್ಯಭಾಷಾ ಪರಿಸರದಲ್ಲಿ ಕನ್ನಡವು ಸಂವಹನಗೊಳ್ಳ ಬೇಕಾದ ರೀತಿ, ಭಿನ್ನ ಸಂಸ್ಕೃತಿಗಳ ನಡುವೆ ಕನ್ನಡವು ಅನುಷ್ಠಾನಗೊಳ್ಳಬೇಕಾದ ಬಗೆ, ಅನ್ಯಭಾಷಿಕರೊಂದಿಗೆ ಕನ್ನಡವು ಸಂಪರ್ಕವನ್ನು ಸಾಧಿಸಲು ತಯಾರಾಗಬೇಕಾದ ರೀತಿ, ಭಾಷಾಕಲಿಕೆಯಲ್ಲಿ ಸಹಜವಾಗಿ ಏರ್ಪಡುವ ತೌಲನಿಕ ದೃಷ್ಟಿಕೋನ ಹಾಗೂ ಯಾವ ಸಮುದಾಯಕ್ಕೆ ಕನ್ನಡವನ್ನು ಕಲಿಸಲಾಗುತ್ತಿದೆ ಯೆಂಬ ಪ್ರಜ್ಞೆ… ಇವಿಷ್ಟನ್ನೂ ಗಮನದಲ್ಲಿರಿ ಸಲಾಗಿದೆ ಎನ್ನುತ್ತಾರೆ ಡಾ. ಪುರುಷೋತ್ತಮ ಬಿಳಿಮಲೆ.

ಹೊಸತನದ ಪ್ರಯೋಗ ಶಾಲೆ
ಭಾಷಾಕಲಿಕೆಯ ವಿಧಾನಗಳು ಸರಳವಾಗಿ ದ್ದಷ್ಟೂ ಬಳಕೆದಾರರನ್ನು ಆಕರ್ಷಿಸುವುದು ಸಹಜ. ಇನ್ನು ಹೊಸತನದ ಪ್ರಯೋಗಗಳು ಕಲಿಕೆಯನ್ನು ಮತ್ತಷ್ಟು ಉಲ್ಲಾಸದಾಯಕವಾಗಿಯೂ ಮಾಡುವಲ್ಲಿ ಸಹಕಾರಿ. ಕನ್ನಡ ಕಲಿಕೆ ಜಾಲತಾಣವು ಇಂಥ ಸೂಕ್ಷ್ಮ ಅಂಶಗಳನ್ನು ಗಮನದಲ್ಲಿರಿಸಿಕೊಂಡೇ ಮುನ್ನಡೆದಿದೆ ಎಂಬುದನ್ನು ಹೇಳಲೇಬೇಕು. ಪ್ರಸ್ತುತ ಜಾಲತಾಣ ದಲ್ಲಿ ನಾಲ್ಕರಿಂದ ಆರು ನಿಮಿಷಗಳ ವ್ಯಾಪ್ತಿಯ, ಸರಾಸರಿ ಐನೂರು ಪದಗಳಿರುವ ಒಟ್ಟು ಮೂವತ್ತು ವೀಡಿಯೋಗಳನ್ನು ಬಳಸಿಕೊಳ್ಳಲಾ ಗಿದೆ. ಶಿಶುಗೀತೆ, ನಮ್ಮ ಆಹಾರ, ಜನಪದ ಲೋಕ, ಮಂಟೇಸ್ವಾಮಿ ಕಾವ್ಯ, ಪತ್ರಿಕೋದ್ಯಮ, ಕನ್ನಡ ಸಂಶೋಧನೆ, ದಾಸರ ಪದಗಳು… ಹೀಗೆ ಜಾಲತಾಣದ ಮೂವತ್ತು ವೀಡಿಯೋಗಳು ಹಲವು ಕ್ಷೇತ್ರಗಳನ್ನು ಒಟ್ಟಾರೆಯಾಗಿ ಆರಿಸಿಕೊಂಡಿರುವುದು ಇಲ್ಲಿಯ ವಿಶೇಷ. ನೈಜಸಂದರ್ಭಗಳಲ್ಲಿ ಚಿತ್ರೀಕರಿಸಿ ದಾಖಲಿಸಲ್ಪಟ್ಟಿರುವ ಈ ವೀಡಿಯೋಗಳು ಕನ್ನಡವನ್ನು ಸಹಜ ಸಂದರ್ಭಗಳಲ್ಲಿರಿಸಿ ಆಲಿಸುವಿಕೆ, ಓದುವಿಕೆ ಮತ್ತು ಸಂಭಾಷಣೆಗಳನ್ನು ಸುಲಭವಾಗಿ ಕಲಿಯಲು ಉತ್ತಮ ಮಾರ್ಗದರ್ಶಿಯಾಗಿರುವುದಲ್ಲದೆ ಕನ್ನಡ ಭಾಷೆಯ ಸ್ಪಷ್ಟ ಉಚ್ಚಾರಣೆಗಳನ್ನು ತಿಳಿಯುವುದಕ್ಕೂ ಪರಿಣಾಮಕಾರಿಯಾಗಿ ಉಪಯುಕ್ತವಾಗಬಲ್ಲವು.

ಭಾಷೆಯೂ, ಭವಿಷ್ಯವೂ
ಕನ್ನಡ ಕಲಿಕೆ ಜಾಲತಾಣವು ಒಂದು ವಿಶಿಷ್ಟ ಪ್ರಯೋಗವೇ ಸರಿ. ಅಸಲಿಗೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಹೊರತುಪಡಿಸಿದರೆ ಬೇರಾವ ಭಾರತೀಯ ಭಾಷೆಗಳಲ್ಲೂ ಇಂಥಾ ಪ್ರಯೋಗಗಳು ನಡೆದಿಲ್ಲ. ಮುಂದಿನ ದಿನಗಳಲ್ಲಿ ಹೊಸ ವೀಡಿಯೋಗಳನ್ನು ಸೇರಿಸುತ್ತ ಜಾಲತಾಣವನ್ನು ನವೀಕರಿಸುವ ಹಾಗೂ ಬಳಕೆದಾರರ ಅನುಭವ, ಅಭಿಪ್ರಾಯಗಳನ್ನು ನಿಯಮಿತವಾಗಿ ಪರಿಗಣಿಸಿ ಜಾಲತಾಣವನ್ನು ಪರಿಷ್ಕರಿಸುವತ್ತಲೂ ಕನ್ನಡ ಪೀಠದ ಉತ್ಸಾಹಿ ತಂಡವು ಕಾರ್ಯೋನ್ಮುಖವಾಗಿದೆ.

“ಈ ತರಗತಿಗಳು ನನಗೆ ಜ್ಞಾನ ಮತ್ತು ಸಂತೋಷವನ್ನು ಕೊಟ್ಟಿವೆ. ಕನ್ನಡ ಪೀಠಕ್ಕೆ ನನ್ನ ಎದೆಯಾಳದಿಂದ ಧನ್ಯವಾದಗಳು’, ಎಂದು ಕನ್ನಡವನ್ನು ಹೊಸದಾಗಿ ಕಲಿತ ಜಾರ್ಖಂಡ್‌ ಮೂಲದ ವಿದ್ಯಾರ್ಥಿನಿಯೊಬ್ಬಳು ಕನ್ನಡದಲ್ಲೇ ತನ್ನ ಕೈಬರಹದ ಪತ್ರವೊಂದನ್ನು ರವಾನಿಸುತ್ತಾಳೆ. ಜೆ.ಎನ್‌.ಯು ಕನ್ನಡ ಅಧ್ಯಯನ ಪೀಠದಿಂದ ಕನ್ನಡವನ್ನು ಕಲಿತ ಈಕೆ ಸದ್ಯ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್‌ ಪದವಿಗಾಗಿ ಅಧ್ಯಯನವನ್ನು ಆರಂಭಿಸಿದ್ದಾಳೆ. ಎಲ್ಲಿಯ ಜಾರ್ಖಂಡ್‌, ಎಲ್ಲಿಯ ದಿಲ್ಲಿ, ಎಲ್ಲಿಯ ಕನ್ನಡ!

ಪ್ರಸಾದ್‌ ನಾೖಕ್‌

ಟಾಪ್ ನ್ಯೂಸ್

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.