ಹ್ಯಾಪೀ ರಾಜ್ಯೋತ್ಸವ ಅನ್ನೋರಲ್ಲೂ….
Team Udayavani, Oct 27, 2019, 5:43 AM IST
ಇತ್ತೀಚೆಗೆ ಕನ್ನಡವನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಭಾಷೆಯ ಬಳಕೆ ಹೀಗೇ ಮುಂದುವರಿದರೆ ಇನ್ನು ಮುಂದಿನ ದಿನಗಳಲ್ಲಿ ಕನ್ನಡವೇ ಇಲ್ಲವಾಗುತ್ತದೆ ಎನ್ನುವ ವಿಚಾರವನ್ನು ಬಹಳಷ್ಟು ಜನ ಹೇಳುವುದನ್ನು ಕೇಳಿರಬಹುದು.ಕೆಲವು ವಿಚಾರವಂತರೆನ್ನಿಸಿಕೊಂಡವರು ಕೂಡ ಪದೇ ಪದೆ ಅದನ್ನೇ ಹೇಳಿ ನಾವು ಕೂಡ ಹಾಗಾಗಬಹುದೇನೋ ಎಂದು ಭ್ರಮೆಯಲ್ಲಿರುವಂತೆ ಮಾಡಿದ್ದಾರೆ.
ಆದರೆ ಅದು ತಪ್ಪು ಅಭಿಪ್ರಾಯ. ಈ ಅಭಿಪ್ರಾಯಗಳು ರೂಪುಗೊಳ್ಳುತ್ತಿರುವುದು ಕೇವಲ ನಗರವಾಸಿಗಳ ಕನ್ನಡ ಬಳಕೆ ಮತ್ತು ಪ್ರೀತಿಯನ್ನು ಆಧರಿಸಿ. ಆದರೆ ಕನ್ನಡ ಎನ್ನುವುದು ಕೋಟ್ಯಂತರ ಜನಗಳ ಮಾತೃಭಾಷೆ. ಇಂದಿಗೂ ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ಸಾಮಾನ್ಯ ಜನರು ಮಾತನಾಡುತ್ತಿರುವುದು ಬಳಸುತ್ತಿರುವುದು ಕನ್ನಡ ಭಾಷೆಯನ್ನೇ.
ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಭಾಷೆಯ ಶ್ರೀಮಂತಿಕೆ ಅದನ್ನು ಯಾವತ್ತೂ ಅಳಿಯ ಗೊಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ನಗರವಾಸಿ ಗಳಲ್ಲೂ ಕನ್ನಡ ಪರ ನೈಜ ಕಾಳಜಿ ಬೆಳೆಯ ತೊಡಗಿರುವುದು ಮತ್ತು ಆ ನಿಟ್ಟಿನಲ್ಲಿ ಹಲವು ರೀತಿಗಳಲ್ಲಿ ವಿವಿಧ ಸಮೂಹಗಳು ಕೆಲಸ ಮಾಡುತ್ತಿರುವುದು ಸ್ವಲ್ಪಮಟ್ಟಿಗಾದರೂ ಖುಷಿಪಡುವಂತಹ ವಿಚಾರ.
ಆದರೆ ನಾವು ಗಹನವಾಗಿ ಚಿಂತಿಸಬೇಕಾದ ಸಂಗತಿ ಒಂದಿದೆ. ಕನ್ನಡ ಭಾಷೆ ಅಳಿಯಲಾರದು ಅನ್ನೋದು ನಿಜ. ಆದರೆ ಭಾಷೆ ಉಳಿದುಕೊಂಡರೆ ಅಷ್ಟೇ ಸಾಕೆ? ಭಾಷೆ ಬೆಳೆಯುವುದು ಬೇಡವೆ? ಭಾಷೆ ಕೇವಲ ಒಂದು ಭಾಷೆಯಾಗಿ ಉಳಿದುಕೊಳ್ಳುವುದು ಬೇರೆ. ಹೊಸ ವಿಚಾರಗಳಿಗೆ ಹೊಸ ಅನುಭವಗಳಿಗೆ ತೆರೆದುಕೊಳ್ಳುತ್ತಾ ಸಾಗಿ ಮತ್ತಷ್ಟು ಶ್ರೀಮಂತವಾಗಿ ಬೆಳೆಯುವುದು ಬೇರೆ.
ಬೆಳವಣಿಗೆ ಇಲ್ಲದ ಭಾಷೆ ಮತ್ತು ವ್ಯಕ್ತಿತ್ವ ಎರಡೂ ಒಂದೇ. ಹಾಗಾಗಿ ಕನ್ನಡ ಭಾಷೆಯ ಬೆಳವಣಿಗೆಗಾಗಿ ನಾವೇನು ಮಾಡಬಹುದು ಎನ್ನೋದನ್ನು ಆಲೋಚಿಸಬೇಕಾಗಿದೆ. ರಾಜೋತ್ಸವದ ದಿನ ಹ್ಯಾಪಿ ಕನ್ನಡ ರಾಜ್ಯೋತ್ಸವ ಅನ್ನುವವರಲ್ಲೂ ಎಲ್ಲೋ ಒಂದಷ್ಟು ಕನ್ನಡದ ಪ್ರೀತಿಯನ್ನು ಗುರುತಿಸಬಹುದು. ಆದರೆ ಆ ಪ್ರೀತಿಯ ಅಭಿವ್ಯಕ್ತಿಗಳೆಲ್ಲಾ ಕೇವಲ ಒಂದು ದಿನಕ್ಕೆ ಸೀಮಿತವಾಗಿ ಬಿಟ್ಟರೆ ಅದರಿಂದ ಭಾಷೆಯ ಅಭಿವೃದ್ಧಿಯೂ ಸಾಧ್ಯವಿಲ್ಲ. ಕೊನೇಪಕ್ಷ ಶುಭಾಶಯಗಳನ್ನಾದರೂ ಕನ್ನಡದಲ್ಲಿ ನೆಟ್ಟಗೆ ಹೇಳದಿದ್ದರೆ ಹೇಗೆ?
ಸಂವಹನ ಕ್ರಿಯೆಯೂ ಭಾಷೆಯ ಬೆಳವಣಿಗೆಗೆ ಸಹಕಾರಿ. ಆದರೆ ಅದೇ ಎಲ್ಲವೂ ಅಲ್ಲ. ಒಂದು ಭಾಷೆಯ ಬೆಳವಣಿಗೆ ಎಂದರೆ ಅದು ಅದರ ಸರ್ವಾಂಗೀಣ ಬೆಳವಣಿಗೆ ಆಗಬೇಕು.
ಹಾಗಾಗಬೇಕಾದರೆ ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆ ಮೊದಲು ಸುಧಾರಣೆಗೊಳ್ಳಬೇಕಿದೆ. ಯಾವ ಮಾಧ್ಯಮದಲ್ಲಿ ವ್ಯಕ್ತಿ ತನ್ನ ಶಿಕ್ಷಣವನ್ನು ಪಡೆಯುತ್ತಾನೆ ಅನ್ನೋದು ಮುಖ್ಯ ಅನ್ನಿಸಿದರೂ ಅದನ್ನೇ ಒತ್ತಾಯ ಮಾಡಲಾಗದು. ಶಿಕ್ಷಣ ಮತ್ತು ಜ್ಞಾನದ ವಿಷಯ ಬಂದಾಗ ಪ್ರತಿಯೊಬ್ಬ ವ್ಯಕ್ತಿಗೂ ಆಯ್ಕೆಯ ಸ್ವಾತಂತ್ರ್ಯ ಇದೆ ಮತ್ತು ನಾವು ಅದನ್ನು ಕಸಿದುಕೊಳ್ಳಲಾಗುವುದಿಲ್ಲ. ಜಿ.ವೆಂಕಟಸುಬ್ಬಯ್ಯನವರು ಹೇಳಿದಂತೆ “ಕನ್ನಡ ಮಾಧ್ಯಮ ಬೇರೆ, ಭಾಷೆಯ ಅಭ್ಯಾಸವೇ ಬೇರೆ’ ಎನ್ನುವುದನ್ನ ನಾವು ಮೊದಲು ಅರ್ಥ ಮಾಡಿಕೊ ಳ್ಳಬೇಕಿದೆ.
ಹಾಗಾಗಿ ಕೊನೇಪಕ್ಷ ಮಾಧ್ಯಮ ಯಾವುದೇ ಇರಲಿ ಕರ್ನಾಟಕದಲ್ಲಿ ಕನ್ನಡವನ್ನು ಒಂದು ಭಾಷೆ ಯಾಗಿ ಕಲಿಸುವ ವ್ಯವಸ್ಥೆ ಮತ್ತು ಅದನ್ನು ಕಡ್ಡಾಯ ಮಾಡ ುವಂತಹ ಒಂದು ಕಾನೂನು ಇಂದಿನ ಅಗತ್ಯ. ಅದು ತುಂಬಾ ಪರಿಣಾಮಕಾರಿ ಆಗದಿರ ಬಹುದು ಆದರೆ ಸ್ವಲ್ಪಮಟ್ಟಿಗಾದರೂ ಪ್ರಯೋಜನ ವಾದೀತು. ನೆಲ್ಸನ್ ಮಂಡೇಲಾ ಒಂದು ಮಾತು ಹೇಳುತ್ತಾರೆ.
ಒಬ್ಬ ವ್ಯಕ್ತಿಗೆ ಒಂದು ವಿಚಾರವನ್ನು ಅರ್ಥವಾಗುವ ಭಾಷೆಯಲ್ಲಿ ಹೇಳು. ಅದು ಅವನ ತಲೆಯೊಳಕ್ಕೆ ಹೋಗುತ್ತದೆ. ಅದೇ ವಿಚಾರವನ್ನು ಅವನ ಮಾತೃ ಭಾಷೆಯಲ್ಲಿ ಹೇಳು. ಅದು ಅವನ ಹೃದಯದೊಳಕ್ಕೆ ಇಳಿಯುತ್ತದೆ ಎಂದು. ಈ ವಿಚಾರ ಎಲ್ಲರಿಗೂ ಅರ್ಥ ವಾದರೆ ಕನ್ನಡದ ಅಭಿವೃದ್ಧಿಗಾಗಿ ನಾವೇನು ಮಾಡ ಬಹುದು ಎನ್ನುವುದು ಕೂಡ ಅರ್ಥವಾಗಬಲ್ಲದು.
ಶಿಕ್ಷಣ ಕೇವಲ ಪಠ್ಯಪುಸ್ತಕದ ಕಲಿಕೆ, ಅಂಕಗಳಿಗೆ ಸೀಮಿತವಾಗಿಬಿಟ್ಟರೆ ಅದರಿಂದ ಯಾವ ಪ್ರಯೋಜ ನವೂ ಇಲ್ಲ. ಶಿಕ್ಷಣ ಬದುಕನ್ನು ಕಲಿಸಬೇಕು. ಕನ್ನಡದ ಪ್ರೀತಿಯನ್ನು ತುಂಬಬೇಕು. ನಮ್ಮತನವನ್ನು ಉಳಿಸಿ ಕೊಂಡೇ ಬೇರೆ ಭಾಷೆಗಳನ್ನು ಕಲಿಯಬೇಕು. ಅದು ಈ ಹೊತ್ತಿನ ಅಗತ್ಯ. ನಮಗೆ ಚಿಂತಿಸಲು ಹಲವಾರು ವಿಚಾರಗಳಿವೆ.
ಕನ್ನಡದ ಉಳಿವಿಗಾಗಿ ನಾವು ನಿಜಕ್ಕೂ ಎಷ್ಟು ಕ್ರಿಯಾಶೀಲರಾಗಿ ಕೆಲಸವನ್ನು ಮಾಡುತ್ತಿದ್ದೇವೆ? ನಮ್ಮ ದೈನಂದಿನ ಬಳಕೆಯಲ್ಲಿ ಎಷ್ಟು ಕನ್ನಡವನ್ನು ಬಳಸುತ್ತಿದ್ದೇವೆ? ನಮ್ಮ ಮನೆ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುತ್ತಿರುವ(?) ನಮಗೆ ಪಕ್ಕದ ಮನೆ ಮಕ್ಕಳು ಆಂಗ್ಲಭಾಷಾ ಶಾಲೆಗಳಿಗೆ ಹೋಗಿ ಬಂದರೆ ಏಕೆ ಕೀಳರಿಮೆ ಕಾಡಲಾರಂಭಿಸುತ್ತದೆ? ಕನ್ನಡವನ್ನು ಆಡಳಿತ ಭಾಷೆಯಾಗಿ ಪೂರ್ಣ ಪ್ರಮಾಣದಲ್ಲಿ ನಾವೇಕೆ ಬಳಸಲು ವಿಫಲರಾ ಗುತ್ತಿದ್ದೇವೆ? ನಮ್ಮ ಸರಕಾರಗಳು, ಪ್ರತಿನಿಧಿಗಳು ಕನ್ನಡದ ಉಳಿವಿಗಾಗಿ ಏನು ಮಾಡಿದ್ದಾರೆ? ಶ್ರೀಮಂತರ ಮಕ್ಕಳೆಲ್ಲಾ ಏಕೆ ಆಂಗ್ಲ ಮಾಧ್ಯಮ ಶಾಲೆಗಳಿಗೆ ಹೋಗುತ್ತಾರೆ? ಕನ್ನಡದ ಶಾಲೆಗಳೆಂದರೆ ಅದು ಬಡ ಮಕ್ಕಳಿಗಷ್ಟೆ ಅಥವಾ ಅನಿವಾರ್ಯತೆಗೆ ಮಾತ್ರ ಎನ್ನುವಂತಹ ಸ್ಥಿತಿ ನಿರ್ಮಾಣವಾಗಲು ಕಾರಣರಾಗಿದ್ದು ಯಾರು? ಕನ್ನಡ ಮಾಧ್ಯಮ ಅಥವಾ ಸರಕಾರಿ ಶಾಲೆಗಳನ್ನು ನಾವೆಷ್ಟು ಕಳಕಳಿಯಿಂದ ಬೆಳೆಸುತ್ತಿದ್ದೇವೆ? ಅವುಗಳ ಮೂಲಭೂತ ಸೌಕರ್ಯಗಳನ್ನು ಅಗತ್ಯಗಳನ್ನು ಉನ್ನತ ಮಟ್ಟಕ್ಕೇರಿಸಲು ಸರಕಾರ ಏಕೆ ಮನಸ್ಸು ಮಾಡುತ್ತಿಲ್ಲ? ಕೊರತೆಯಿರುವ ಸಹಸ್ರಾರು ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಲು ಸರಕಾರ ಮೀನ ಮೇಷ ಎಣಿಸುತ್ತಿರುವುದು ಏಕೆ?
ಕನ್ನಡದ ಸಾಹಿತ್ಯ ವನ್ನು, ಪತ್ರಿಕೆಗಳನ್ನು ನಾವೆಷ್ಟು ಓದುತ್ತೇವೆ? ಎಷ್ಟು ಕನ್ನಡದ ಹಾಡುಗಳಿಗೆ ದನಿಯಾಗುತ್ತೇವೆ ಅಥವಾ ಕಿವಿಗೊಡುತ್ತೇವೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಗಳನ್ನು ಪರಿಹಾರಗಳನ್ನು ಶೀಘ್ರ ಕಂಡುಕೊಳ್ಳಬೇಕಾದ ಅವಶ್ಯಕತೆಯಿದೆ.
ಬೇರೆಯವರ ಕನ್ನಡಾಭಿಮಾನವನ್ನು ಪ್ರಶ್ನಿಸುವ ಮೊದಲು ನನ್ನ ಅಭಿಮಾನ ಯಾವ ಮಟ್ಟದ್ದು ಎಂದು ಪ್ರತಿಯೊಬ್ಬ ಕನ್ನಡಿಗನೂ ಕೇಳಿಕೊಳ್ಳಬೇಕಿದೆ. ಬದಲಾಗು ತ್ತಿರುವ ಕಾಲಘಟ್ಟದಲ್ಲಿ ಕನ್ನಡಕ್ಕೆ ಖಂಡಿತಾ ಸವಾಲುಗಳಿವೆ.
ಆದರೆ ಅದನ್ನು ಮೆಟ್ಟಿ ನಿಲ್ಲಬಲ್ಲ ಎಲ್ಲಾ ಸಾಮರ್ಥ್ಯವು ನಮ್ಮ ಭಾಷೆಗೆ ಇದೆ. ಅದಕ್ಕೆ ಪೂರಕವಾಗಿ ಕನ್ನಡದ ನಿರ್ಮಲ ಮನಸ್ಸುಗಳು ನಮ್ಮದಾಗಬೇಕಿವೆ.
ಕೊನೇಪಕ್ಷ ಎಲ್ಲಾ ಸರಕಾರಿ ನೌಕರರ ಮತ್ತು ರಾಜಕಾರಣಿಗಳ ಮಕ್ಕಳು ಕಡ್ಡಾಯವಾಗಿ ಸರಕಾರಿ ಶಾಲೆಗಳಲ್ಲೇ ವಿದ್ಯಾಭ್ಯಾಸವನ್ನು ಮಾಡಬೇಕು ಎನ್ನುವ ಕಾನೂನನ್ನು ಜಾರಿಗೆ ತಂದರೆ ಸರಕಾರಿ ಶಾಲೆಗಳ ಮತ್ತು ಕನ್ನಡದ ಒಂದು ಹಂತದ ಬೆಳವಣಿಗೆ ಸಾಧ್ಯವಿಲ್ಲ ಅನ್ನುತ್ತೀರಾ?
– ನರೇಂದ್ರ ಎಸ್. ಗಂಗೊಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Kadalekai Parishe: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.