ಹಸ್ತಾಂತರವಾಗದೆ ರಸ್ತೆ ಅಭಿವೃದ್ಧಿಗೊಳಿಸಿದ ಪುತ್ತೂರು ನಗರಸಭೆ
ಲೋಕೋಪಯೋಗಿ ಇಲಾಖೆ ನೋಟಿಸ್ ಜಾರಿಗೊಳಿಸಿದರೂ ಈವರೆಗೆ ಪ್ರತಿಕ್ರಿಯೆ ಇಲ್ಲ
Team Udayavani, Oct 27, 2019, 4:46 AM IST
ಅಭಿವೃದ್ಧಿಪಡಿಸಲಾದ ಪುತ್ತೂರಿನ ಚತುಷ್ಪಥ ರಸ್ತೆ.
ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಲೋಕೋಪಯೋಗಿ ರಸ್ತೆ ಭಾಗವನ್ನು ನಗರಸಭೆ ಆಡಳಿತವು ಚತುಷ್ಪಥಗೊಳಿಸಿದ್ದು, ಆ ರಸ್ತೆಯನ್ನು ಹಸ್ತಾಂತರ ಪಡೆದುಕೊಳ್ಳುವಂತೆ ಲೋಕೋ ಪಯೋಗಿ ಇಲಾಖೆ ನೋಟಿಸ್ ನೀಡಿದೆ. ಆದರೆ ಈ ನೋಟಿಸ್‌ಗೆ ನಗರಸಭೆ ಈವರೆಗೆ ಪ್ರತಿಕ್ರಿಯಿಸಿಲ್ಲ.
ಸುಬ್ರಹ್ಮಣ್ಯ-ಮಂಜೇಶ್ವರ ಅಂತಾರಾಜ್ಯ ಹೆದ್ದಾರಿ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಹಾದು ಹೋಗುತ್ತದೆ. ನಗರಸಭಾ ವ್ಯಾಪ್ತಿಯ ಮರೀಲ್‌ನಿಂದ ದರ್ಬೆ ಜಂಕ್ಷನ್‌ವರೆಗೆ 1 ಕಿ.ಮೀ. ಉದ್ದಕ್ಕೆ 3 ಕೋಟಿ ರೂ. ವೆಚ್ಚದಲ್ಲಿ 14ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದ ರಸ್ತೆಯನ್ನು ನಗರಸಭೆ ಚತುಷ್ಪಥಗೊಳಿಸಿದೆ.
ಕಳೆದ ನಗರಸಭಾ ಆಡಳಿತವು ಅಭಿವೃದ್ಧಿಪಡಿಸಿದ ಈ ರಸ್ತೆ ಭಾಗವು ಲೋಕೋಪಯೋಗಿ ಇಲಾಖೆಯ ಉದ್ದೇಶಿತ ಅಂತಾರಾಜ್ಯ ರಸ್ತೆಯ ಭಾಗವಾಗಿದೆ. ಅಂತಾರಾಜ್ಯ ರಸ್ತೆ ಅಲ್ಲದಿದ್ದರೂ ಈ ರಸ್ತೆ ಲೋಕೋಪಯೋಗಿ ಇಲಾಖೆಯ ದರ್ಬೆ – ಸುಬ್ರಹ್ಮಣ್ಯ ರಸ್ತೆಯಾಗಿದೆ. ಹೀಗಿದ್ದರೂ ರಸ್ತೆಯನ್ನು ನಗರಸಭೆಗೆ ಹಸ್ತಾಂತರ ಪಡೆಯದೆ ಕಾಮಗಾರಿಯನ್ನು ನಡೆಸಲಾಗಿದೆ.
ನಿಯಮ ಉಲ್ಲಂಘನೆ?
ನಗರದ ಮುಖ್ಯ ರಸ್ತೆಯನ್ನು 25 ವರ್ಷಗಳಿಂದ ಬೊಳುವಾರಿನಿಂದ ದರ್ಬೆಯ ವರೆಗೆ ಪುರಸಭೆ ಮತ್ತು ನಗರಸಭೆಯ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಮೊದಲು ಇದು ಲೋಕೋಪಯೋಗಿ ಇಲಾಖೆಯ ರಸ್ತೆಯಾಗಿತ್ತು. ಬೈಪಾಸ್ ನಿರ್ಮಾಣವಾದ ಬಳಿಕ ಬೊಳುವಾರು-ದರ್ಬೆ ನಡುವಣ ರಸ್ತೆ ನಗರಸಭಾ ವ್ಯಾಪ್ತಿಯ ನಿರ್ವಹಣ ರಸ್ತೆಯಾಗಿದೆ. ಆದರೆ ದರ್ಬೆ-ಮರೀಲ್ ನಡುವಣ ಲೋಕೋಪಯೋಗಿ ಇಲಾಖೆಯ ಅಂತಾರಾಜ್ಯ ರಸ್ತೆಯನ್ನು ನಗರಸಭೆ ಹಸ್ತಾಂತರ ಪಡೆದುಕೊಳ್ಳದೆ ಚತುಷ್ಪಥವಾಗಿ ಅಭಿವೃದ್ಧಿಪಡಿಸುತ್ತಿದೆ. ಇದು ಸ್ಥಳೀಯಾಡಳಿತ ಸಂಸ್ಥೆಯ ನಿಯಮಾವಳಿಯ ಉಲ್ಲಂಘನೆಯಾಗಿದೆ.
ವೈರುಧ್ಯ ನಿಲುವು
ನಗರದ ಮುಖ್ಯರಸ್ತೆಯಿಂದ ಎಪಿಎಂಸಿ ಪ್ರಾಂಗಣಕ್ಕೆ ತೆರಳುವ ಎಪಿಎಂಸಿ ಸಂಪರ್ಕ ರಸ್ತೆ ಡಾಮರು ಕಾಮಗಾರಿಯ ಕುರಿತಂತೆ ನಗರಸಭೆಯ ಹಿಂದಿನ ಆಡಳಿತ ಮಂಡಳಿ ಎಪಿಎಂಸಿ ಜತೆ ತಕರಾರು ತೆಗೆದಿತ್ತು. ಇದು ಎಪಿಎಂಸಿ ಸಂಪರ್ಕ ರಸ್ತೆಯಾದ ಕಾರಣ ಎಪಿಎಂಸಿಯವರೇ ಡಾಮರು ಕಾಮಗಾರಿ ನಡೆಸಬೇಕೆಂದು ನಗರಸಭೆ ವಾದಿಸಿತ್ತು. ಈ ರಸ್ತೆಯ ಪರಿಸರದ ಕಟ್ಟಡ ತೆರಿಗೆಗಳನ್ನು ನಗರಸಭೆ ಸಂಗ್ರಹಿಸುವ ಕಾರಣ ಎಪಿಎಂಸಿ ಈ ರಸ್ತೆಗೆ ಮರು ಡಾಮರು ಹಾಕಲು ಅಥವಾ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನಿರ್ಧಾರವನ್ನು ತಿಳಿಸಿತ್ತು. ಎಪಿಎಂಸಿ ರಸ್ತೆಯ ಡಾಮರು ಕಾಮಗಾರಿಯ ಕುರಿತು ಒಂದು ನಿಯಮ. ದರ್ಬೆ-ಮರೀಲ್ ರಸ್ತೆಯ ಚತುಷ್ಪಥ ಕಾಮಗಾರಿಗೆ ಒಂದು ನಿಯಮವನ್ನು ನಗರಸಭಾ ಆಡಳಿತ ಅನುಸರಿಸಿದೆ.
ನಗರಸಭಾ ವ್ಯಾಪ್ತಿಯಲ್ಲಿ ವಿಸ್ತರಿತ ಪ್ರದೇಶದಲ್ಲಿ ಅಭಿವೃದ್ಧಿಗೊಳ್ಳಲು ಬಹಳಷ್ಟು ರಸ್ತೆಗಳು ಬಾಕಿ ಇವೆ. ಲೋಕೋಪಯೋಗಿ ರಸ್ತೆಯ ಭಾಗವನ್ನು ಚತುಷ್ಪಥಗೊಳಿಸಲು ವಿನಿಯೋಗಿಸಿದ ನಗರೋತ್ಥಾನ ಯೋಜನೆ ಅಥವಾ 14ನೇ ಹಣಕಾಸು ಯೋಜನೆಯ ಅನುದಾನದ ಮೊತ್ತವನ್ನು ವಿಸ್ತರಿತ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದರೆ ನಗರಸಭಾ ಆಡಳಿತ ಸಾರ್ಥಕ ಕೆಲಸವನ್ನು ಮಾಡಿದಂತಾಗುತ್ತಿತ್ತು.
ನೋಟಿಸ್ ಬಂದಿದೆ
ದರ್ಬೆ-ಮರೀಲ್ ರಸ್ತೆಯನ್ನು ನಗರಸಭೆಯಿಂದ ಚತುಷ್ಪಥವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಈ ರಸ್ತೆಯನ್ನು ನಗರಸಭೆಗೆ ಹಸ್ತಾಂತರ ಪಡೆದುಕೊಳ್ಳುವಂತೆ ಹಾಗೂ ಹಸ್ತಾಂತರ ಪಡೆದುಕೊಳ್ಳದೆ ಕಾಮಗಾರಿ ನಡೆಸುವ ಕುರಿತು ಪುತ್ತೂರು ಲೋಕೋಪಯೋಗಿ ಇಲಾಖಾ ಕಚೇರಿಯಿಂದ ನಗರಸಭಾ ಕಚೇರಿಗೆ ನೋಟಿಸ್ ಬಂದಿದೆ.
– ರೂಪಾ ಟಿ. ಶೆಟ್ಟಿ, ಪೌರಾಯುಕ್ತೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.