ಅನನ್ಯ ಸಾಧಕರಿಗೆ ರಾಜ್ಯೋತ್ಸವದ ಗರಿ
Team Udayavani, Oct 29, 2019, 3:10 AM IST
2019ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಸೋಮವಾರ ಪ್ರಕಟಿಸಲಾಗಿದೆ. ವಿಜ್ಞಾನ ಸಾಹಿತಿ ನಾ. ಸೋಮೇಶ್ವರ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಸೇರಿ 64 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಂಗೀತ, ರಂಗಭೂಮಿ, ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಕೆಲವು ಸಾಧಕರ ಸಾಧನೆ ಹೆಜ್ಜೆ ಇಲ್ಲಿದೆ.
ತಳಿ ತಪಸ್ವಿ ಬಿ.ಕೆ. ದೇವರಾವ್
ಬೆಳ್ತಂಗಡಿ: ಭತ್ತದ 170 ತಳಿಗಳನ್ನು ಸಂಶೋಧಿಸುವ ಮೂಲಕ “ತಳಿ ತಪಸ್ವಿ’ ಎನಿಸಿಕೊಂಡವರು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಅಮೈ ನಿವಾಸಿ ಬಿ.ಕೆ. ದೇವರಾವ್. ಭತ್ತದ ತಳಿ ನಶಿಸುವ ಕಾಲಘಟ್ಟದಲ್ಲಿ ಸಂರಕ್ಷಿಸುವ ಉದ್ದೇಶದಿಂದ ಇವರು 1965ರಿಂದ ಸಾವಯವ ಭತ್ತದ ತಳಿ ಸಂರಕ್ಷಿಸುತ್ತಾ ಬಂದಿದ್ದಾರೆ. ಆರಂಭದಲ್ಲಿ 35ರಲ್ಲಿದ್ದ ತಳಿ ಸಂಖ್ಯೆ ಪ್ರಸಕ್ತ 170 ರಷ್ಟಿವೆ. ಇದಕ್ಕಾಗಿ 5.30 ಎಕರೆ ಕೃಷಿ ಭೂಮಿಯಲ್ಲಿ ಏಣೀಲು (ಮುಂಗಾರು) ಹಾಗೂ ಸುಗ್ಗಿ (ಹಿಂಗಾರು) 2 ಅವಧಿಯಲ್ಲಿ ಪ್ರತಿ ವರ್ಷ ಇಷ್ಟು ತಳಿ ಬೆಳೆಯುತ್ತಿರುವುದು ಕೃಷಿ ಪ್ರೇಮಕ್ಕೆ ಮತ್ತೂಂದು ಸಾಕ್ಷಿ. 75ರ ಹರೆಯ ದಲ್ಲೂ ಕುಂದದ ಅವರ ಕೃಷಿ ಆಸಕ್ತಿಗೆ ಪುತ್ರ ಪರಮೇಶ್ವರ್ ರಾವ್ ಎಲೆಕ್ಟ್ರಿಕಲ್ ಎಂಜಿನಿ ಯರ್ ಹುದ್ದೆಗೆ ರಾಜೀನಾಮೆ ನೀಡಿ ತಂದೆಯೊಂದಿಗೆ ಕೃಷಿಯಲ್ಲಿ ಸಾಥ್ ನೀಡುತ್ತಿದ್ದಾರೆ. 2002ರಲ್ಲಿ ಭಾರತೀಯ ಕಿಸಾನ್ ಸಂಘದಿಂದ ಪುರುಷೋತ್ತಮ ಪುರಸ್ಕಾರದ ಮೂಲಕ ಆರಂಭಗೊಂಡು, 2017ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಸೃಷ್ಟಿ ಸಮ್ಮಾನ್ ಸೇರಿ ಸಂಘ ಸಂಸ್ಥೆಗಳು ನೂರಾರು ಪ್ರಶಸ್ತಿ ನೀಡಿ ಗೌರವಿಸಿದೆ.
ದೀಪಾವಳಿ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತ್ಯಂತ ಖುಷಿಕೊಟ್ಟಿದೆ. ಇದು ಕೃಷಿಕ ವರ್ಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನೀಡಿರುವ ಪ್ರಶಸ್ತಿಯಾದ್ದರಿಂದ ಕೃಷಿಕ ವರ್ಗಕ್ಕೆ ಸಂದಿರುವ ಗೌರವ. ನಾನು ಸಂಶೋಧಿಸಿದ ಭತ್ತದ ತಳಿ ರಾಜ್ಯವ್ಯಾಪಿ ಭತ್ತದ ಕೃಷಿಕರಿಗೆ ವರದಾನವಾಗಲಿ ಎಂಬುದೇ ನನ್ನ ಆಶಯ.
-ಬಿ.ಕೆ. ದೇವರಾವ್
ಭಾರ್ಗವಿ ನಾರಾಯಣ್
ಬೆಂಗಳೂರು: ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಹಿರಿಯ ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ. 12 ವರ್ಷ ಇರುವಾಗಲೇ ರಂಗ ಭೂಮಿ ಯಲ್ಲಿ ತೊಡಗಿಸಿಕೊಂಡು, ನಾಟಕ ರಂಗದ ಹಲವು ಮಜಲುಗಳನ್ನು ಅರಿತು ಕೊಂಡರು. ಆ ನಂತರ ರಂಗನಿರ್ದೇಶಕ ಪ್ರಸನ್ನ, ನಾಣಿ (ರಂಗ ನಿರ್ದೇಶಕ ನಾರಾಯಣ್) ಕಾರಂತರು ಸೇರಿ ಹಲವು ಹಿರಿಯ ರಂಗಕಲಾವಿದರ ನಾಟಕಗಳಲ್ಲಿ ಅಭಿನಯಿಸಿದರು. ಕಿರುತೆರೆಯಲ್ಲಿ ಸಾಕಷ್ಟು ಬ್ಯುಸಿ ನಟಿಯಾಗಿರುವ ಭಾರ್ಗವಿ ನಾರಾಯಣ್ ಅವರು ಇಲ್ಲಿಯವರೆಗೆ ಸುಮಾರು 350 ನಾಟಕಗಳಲ್ಲಿ ಅಭಿಯಿಸಿದ್ದಾರೆ. ಅವರು ಖ್ಯಾತ ರಂಗತಜ್ಞ ಮೇಕಪ್ ನಾಣಿ ಎಂದೇ ಪ್ರಸಿದ್ಧರಾದ ದಿ. ಬೆಳವಾಡಿ ನಂಜುಂಡಯ್ಯ ನಾರಾಯಣ ಅವರ ಪತ್ನಿ. ಖ್ಯಾತ ರಂಗಕರ್ಮಿಗಳಾದ ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಅವರ ತಾಯಿ ಕೂಡಾ ಹೌದು. ಪ್ರಶಸ್ತಿ ಘೋಷಣೆ ನಂತರ “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು ರಂಗಭೂಮಿ ನಟನೆ ನನಗೆ ಖುಷಿ ಕೊಟ್ಟಿದೆ ಎಂದರು.
ಕಾಡ ನಡುವಿನ ರಂಗ “ಸಿದ್ದಿ’ಗೆ ಪ್ರಶಸ್ತಿ ಗರಿ
ಶಿರಸಿ/ಯಲ್ಲಾಪುರ: ಕಾಡಿನ ನಡುವೆ ಬದುಕು ಕಟ್ಟಿಕೊಳ್ಳುತ್ತ ರಂಗಭೂಮಿ ನಂಟು ಹಂಚಿಕೊಂಡು, ಅದರ ವಿಸ್ತಾರಕ್ಕೆ ತಮ್ಮದೇ ಆದ ಕಾರ್ಯ ಚಟುವಟಿಕೆ ರೂಪಿಸಿಕೊಂಡ ಯಲ್ಲಾಪುರ ತಾಲೂಕಿನ ಮಂಚಿಕೇರಿ ಸಮೀಪದ ಪರುಶುರಾಮ ಸಿದ್ದಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಹಳತು ಹೊಸತಿನ ಕೊಂಡಿಯಾಗಿ, ತಮ್ಮ ಮಕ್ಕಳಿಗೂ ರಂಗಭೂಮಿ ರುಚಿ ಹಚ್ಚಿಸಿದ ಪರಶುರಾಮ ಸಿದ್ದಿ, ಕಲೆ ಹಾಗೂ ಕಲಾ ಬದುಕಿನ ಜತೆಗೆ ಅನೇಕ ಸೃಜನಶೀಲ ಪ್ರಯೋಗಗಳಿಗೂ ಕಾರಣರಾದವರು. ಕಾಡಿನ ನಡುವೆ ಕೂಡ ಅನೇಕ ರಂಗ ಚಟುವಟಿಕೆ ನಡೆಸಿಯೂ ಗಮನ ಸೆಳೆದವರು.ಪರಶುರಾಮ ಗಿರಗೋಲಿ ಸಿದ್ದಿ, 1984ರಿಂದ ಸಿದ್ದಿ ಜನಾಂಗದ ಕಲೆ-ಸಂಸ್ಕೃತಿಯ ಏಳಿಗೆಗೆ ತಮ್ಮನ್ನು ತೊಡಗಿಸಿಕೊಂಡು ಪರಿಶ್ರಮಿಸುತ್ತಿರುವುದು ಇನ್ನೊಂದು ವಿಶೇಷ. ಮೂಲತಃ ಮಂಚಿಕೇರಿ ಸಮೀಪದ ಶಿರನಾಳ ಗ್ರಾಮದ ಹಲಗೋಡು ಊರಿನಲ್ಲಿ ಜನಿಸಿದ ಇವರು, ನೀನಾಸಂ ರಂಗ ಚಟುವಟಿಕೆ ಜೊತೆ ಗುರುತಿಸಿಕೊಂಡವರು. ಮಕ್ಕಳಾದ ಗಿರಿಜಾ ಸಿದ್ದಿ ಮತ್ತು ಗೀತಾ ಸಿದ್ದಿ ಮಾತ್ರವಲ್ಲದೇ ಸಿದ್ದಿ ಜನಾಂಗದ 7 ಮಕ್ಕಳಿಗೆ ನೀನಾಸಂ ತರಬೇತಿ ನಡೆಸಲು ಪ್ರೋತ್ಸಾಹಕರಾಗಿ, ಸ್ಫೂರ್ತಿದಾಯಕರಾಗಿದ್ದು ಇನ್ನೊಂದು ಗಮನಾರ್ಹ ಸಂಗತಿ.
ಎಲ್ಲೋ ಇದ್ದ ನನ್ನನ್ನು ಗುರುತಿಸಿ ಪ್ರಶಸ್ತಿ ಕೊಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ನಾನು ರಂಗಭೂಮಿಗೆ ಬರಲು ಕಾರಣರಾದವರಿಗೆ ಈ ಪ್ರಶಸ್ತಿ ಸಲ್ಲಬೇಕು.
-ಪರಶುರಾಮ ಸಿದ್ದಿ
ಕ್ರೀಡಾ ಸಾಧಕ ವಿಶ್ವನಾಥ ಭಾಸ್ಕರ ಗಾಣಿಗ
ಕುಂದಾಪುರ: ಕೆನಡದಲ್ಲಿ ಈಚೆಗೆ ನಡೆದ ಪವರ್ ಲಿಫ್ಟಿಂಗ್ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಡೆಡ್‌ಲಿಫ್ಟ್‌ನಲ್ಲಿ ಬರೋಬ್ಬರಿ 327.5 ಕೆಜಿ ಭಾರ ಎತ್ತಿ ಕೂಟದ ಹೊಸ ದಾಖಲೆ ನಿರ್ಮಿಸಿರುವ ಕುಂದಾಪುರ ಮೂಲದ ವಿಶ್ವನಾಥ ಭಾಸ್ಕರ ಗಾಣಿಗ ಅವರು ರಾಜ್ಯೋತ್ಸವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಅವರು ಕುಂದಾಪುರ ತಾಲೂಕು ದೇವಲ್ಕುಂದ ಗ್ರಾಮದ ಬಾಳಿಕೆರೆಯ ಭಾಸ್ಕರ ಗಾಣಿಗ ಹಾಗೂ ಪದ್ಮಾವತಿ ದಂಪತಿ ಪುತ್ರ. ಸ್ನ್ಯಾಚ್‌ನಲ್ಲಿ 295.1 ಕೆಜಿ, ಬೆಂಚ್‌ಪ್ರಸ್‌ನಲ್ಲಿ 180 ಕೆಜಿ ಭಾರವೆತ್ತಿ 2 ಬೆಳ್ಳಿ ಪದಕವನ್ನೂ ಗೆದ್ದಿದ್ದಾರೆ. ಒಟ್ಟಾರೆ 802.5 ಕೆಜಿ ಎತ್ತಿದ ಸಾಧನೆಯೊಂದಿಗೆ ಸಮಗ್ರ ಚಿನ್ನದ ಪದಕವೂ ಅವರ ಕೊರಳ ಹಾರವಾಗಿದೆ.
ವಿಶ್ವನಾಥ ಈವರೆಗೆ 5 ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗ್ಳಲ್ಲಿ ಚಿನ್ನದ ಪದಕಗಳನ್ನು ಪಡೆದಿದ್ದು, 3 ಬೆಳ್ಳಿ ಪದಕ, 3 ಕಂಚಿನ ಪದಕ, 18 ರಾಷ್ಟ್ರೀಯ ಚಿನ್ನದ ಪದಕ, 5 ಬೆಳ್ಳಿಯ ಪದಕ, 3 ಕಂಚಿನ ಪದಕ ವಿಜೇತರಾಗಿದ್ದಾರೆ. 3 ವೈಯಕ್ತಿಕ ರಾಷ್ಟ್ರೀಯ ದಾಖಲೆಯೂ ಅವರ ಹೆಸರಲ್ಲಿವೆ. ಬೆಂಗಳೂರಿನ ಜಿ.ಟಿ. ನೆಕ್ಸಸ್ ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿ, ಬಡತನದಿಂದಲೇ ಮೇಲೆ ಬಂದ ವಿಶ್ವನಾಥ ಕುಟುಂಬದ ಆಧಾರಸ್ತಂಭವೂ ಹೌದು. ಈವರೆಗಿನ ದಾಖಲೆಗಳ ಚಿನ್ನದ ಪದಕಗಳಿಗೆ ವಿಶ್ವನಾಥ್‌ಗೆ ಸುಮಾರು 65ರಿಂದ 70 ಲಕ್ಷ ರೂ. ವರೆಗೆ ರಾಜ್ಯ ಸರಕಾರದಿಂದ ನಗದು ಪುರಸ್ಕಾರ ಸಿಗಬೇಕಾಗಿದ್ದು ಬಿಡಿಗಾಸೂ ಸಿಕ್ಕಿಲ್ಲ. ಇವೆಲ್ಲದರ ಮಧ್ಯೆ ರಾಜ್ಯೋತ್ಸವ ಪುರಸ್ಕಾರದ ಸಂಭ್ರಮ.
ಧರ್ಮ ಸಮನ್ವಯ ಮಠಕ್ಕೆ ರಾಜ್ಯೋತ್ಸವ ಗರಿ
ಬೀದರ: ಬಸವಣ್ಣನ ಕಾರ್ಯಕ್ಷೇತ್ರದಲ್ಲಿ ಸರ್ವ ಧರ್ಮ ಸಮನ್ವಯ ಮಠ ಎಂದೇ ಪ್ರಖ್ಯಾತಿ ಪಡೆದಿರುವ ಹಾರಕೂಡ ಸಂಸ್ಥಾನದ ಡಾ| ಚನ್ನವೀರ ಶಿವಾಚಾರ್ಯರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಒಲಿದೆ. ಜತೆಗೆ ಬಸವಕಲ್ಯಾಣದ ಜಾನಪದ ಸಂಗೀತ ಸಾಧಕ ಭೀಮಸಿಂಗ್ ಸಕಾರಾಮ್ ರಾಠೊಡ ಅವರೂ ಸಹ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಠದ ಪೀಠಾಧ್ಯಕ್ಷರಾದವರು ಕೇವಲ ಧಾರ್ಮಿಕ ಸೇವೆಗೆ ಮಾತ್ರ ಸೀಮಿತರು ಎಂಬ ಮಾತಿಗೆ ಡಾ| ಚನ್ನವೀರ ಶಿವಾಚಾರ್ಯರು ಅಪವಾದ. ನಿನ್ನೊಡವೆ ಎಂಬುದು ಜ್ಞಾನರತ್ನ, ಜ್ಞಾನವೇ ಶಕ್ತಿ’ ಎಂಬ ವಾಕ್ಯದಂತೆ ಶ್ರೀಗಳು ಈ ಭಾಗದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಧರ್ಮ ಸಮ್ಮತದಿಂದ ಕಟ್ಟುತ್ತಿದ್ದಾರೆ.
ಪೀಠಾಧಿಪತಿಗಳಾದ ಶಿವಾಚಾರ್ಯರು ಅಪ್ರತಿಮ ಸೇವೆ ಮೂಲಕ ಸರ್ವ ಸಮಾಜಗಳಿಗೆ ನೆಲೆಬಿಡಾಗಿಸಿದ್ದು, ಅದಕ್ಕಾಗಿ ಸಂಸ್ಥಾನ ಹಿಂದಿನಿಂದಲೂ ಧರ್ಮ ಸಮನ್ವಯ ಮಠ ಎಂದು ಪ್ರಶಂಸೆಗೆ ಪಾತ್ರವಾಗಿದೆ. ಇಲ್ಲಿ ಅನ್ನ ದಾಸೋಹ ನಿತ್ಯ ನಿರಂತರವಾಗಿದೆ. ಕರ್ನಾಟಕ ವಿವಿಯಲ್ಲಿ ಎಂಎ ಶಿಕ್ಷಣ ಪಡೆದಿರುವ ಶಿವಾಚಾರ್ಯರರಿಗೆ 1969ರಲ್ಲಿ ಮಠದ ಉತ್ತರಾ ಧಿಕಾರಿ ಪಟ್ಟ ಘೋಷಿಸಲಾಗಿತ್ತು. ಆಗಿನ್ನೂ ಅವರಿಗೆ ಕೇವಲ 6 ವರ್ಷ ಮಾತ್ರ. ನಂತರ ಶಿಕ್ಷಣ ಮುಗಿದ ಬಳಿಕ 23ನೇ ವಯಸ್ಸಿಗೆ ಮಠದ ಪಟ್ಟಾ ಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ಪಟ್ಟ ಧರಿಸಿ ಮಠಕ್ಕೆ ಸೀಮಿತರಾಗದೇ ಕಳೆದ 22 ವರ್ಷಗಳಿಂದ ಬೀದರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಧಾರ್ಮಿಕ ಚಿಂತನೆಗಳನ್ನು ಜನಮನಕ್ಕೆ ಮುಟ್ಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.
ರಂಗತಜ್ಞ ಪಾಲ್ ಸುದರ್ಶನ್
ಬೆಂಗಳೂರು: ಮೂಲತಃ ಚಿಂತಾಮಣಿಯರಾದ ರಂಗತಜ್ಞ ಪಾಲ್ ಸುದರ್ಶನ ನೆಲೆ ಕಂಡುಕೊಂಡಿದ್ದು ರಾಜಧಾನಿ ಬೆಂಗಳೂರಿನಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮಾಡಿದ ಸುದರ್ಶನ್ ಅವರಿಗೆ ಎಸ್‌ಎಸ್‌ಎಲ್‌ಸಿ ನಂತರದ ಶಿಕ್ಷಣವನ್ನು ಮುಂದುವರಿಸಲು ಆಗಲಿಲ್ಲ. ಕನ್ನಡದಲ್ಲಿ ಟೈಪಿಂಗ್ ಕಲಿತಿದ್ದ ಇವರು ನಂತರ ಕೆಎಂಎಫ್ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಆಂತರ ಸಣ್ಣಕಥೆಗಳನ್ನು ಬರೆಯ ತೊಡಗಿದರು. ಸಣ್ಣಕಥೆಗಳ ಬರವಣಿಗೆ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಇವರು ರವೀಂದ್ರ ಕಲಾಕ್ಷೇತ್ರಗಳಲ್ಲಿ ನಡೆಯುತ್ತಿದ್ದ ರಂಗ ಚಟುವಟಿಕೆಗಳಿಗೆ ಮಾರು ಹೋದರು. ಈ ವೇಳೆ ಹಿರಿಯ ರಂಗಕರ್ಮಿ ಆರ್.ನಾಗೇಂದ್ರ ಅವರ ಸಂಪರ್ಕಕ್ಕೆ ಬಂದರು. ಇಲ್ಲಿಯವರೆಗೂ ಸುಮಾರು 14 ನಾಟಕಗಳನ್ನು ರಚನೆ ಮಾಡಿದ್ದಾರೆ. ಅಲ್ಲದೆ ಹಿರಿಯ ರಂಗ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ನಾಟಕ ಮತ್ತು ಸಿನಿಮಾಗಳಿಗೂ ಕೆಲಸ ಮಾಡಿದ್ದಾರೆ. ಜತೆಗೆ ಕಟ್ಟೆ ಮ್ಯಾಗಿlನ್ ಕೂಡ ಹೊರತಂದಿದ್ದಾರೆ.
ಯೋಗ ಸಾಧಕಿ ವನಿತಕ್ಕ
ಬೆಂಗಳೂರು: ಯೋಗ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಯೋಗ ಗುರು ವನಿತಕ್ಕ ಅವರು ಬೆಂಗಳೂರಿನ ಗಿರಿನಗರದ ವಿವೇಕಾನಂದ ಪಾರ್ಕ್ ಬಳಿಯಲ್ಲಿ ಯೋಗ ತರಬೇತಿ ಕೇಂದ್ರವನ್ನು ಪ್ರಾರಂಭಿಸಿ ಹಲವು ವರ್ಷಗಳಿಂದ ಯುವಕ -ಯುವತಿಯರಿಗೆ, ಮಕ್ಕಳಿಗೆ ಮತ್ತು ಹಿರಿಯ ಜೀವಿಗಳಿಗೆ ಯೋಗ ಹೇಳಿಕೊಟ್ಟಿದ್ದಾರೆ. ಈ ಹಿಂದೆ ಕೈಬೆರಳೆಣಿಕೆಯಷ್ಟು ಯೋಗಾಸಕ್ತರಿಂದ ಆರಂಭವಾದ ಯೋಗ ಕೇಂದ್ರ ಇಂದು ಹೆಮ್ಮರವಾಗಿ ನಿಂತಿದೆ. ಇದರ ಹಿಂದೆ ವನಿತಕ್ಕ ಅವರ ಅಪಾರ ಶ್ರಮವಿದೆ ಎಂಬುವುದನ್ನು ಯೋಗಾಸಕ್ತರು ಮರೆಯಲಾರರು. ಸ್ವತಃ ಯೋಗಾಭ್ಯಾಸ ಮಾಡುತ್ತಾ ಇತರರಿಗೂ ಯೋಗದ ಮಹತ್ವ ತಿಳಿಸುವುದನ್ನು ಅನೇಕ ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಅವರು ನೀಡುವ ಯೋಗ ತರಬೇತಿಯಿಂದ ಹಲವರು ಯೋಗ ಗುರುಗಳಾಗಿ ರೂಪುಗೊಂಡಿದ್ದಾರೆ.
ನಂಗೆ ಪ್ರಶಸ್ತಿ ಬಂದಿದೆಯಂತೆ ಹೌದಾ ಸಾರ್?
ದಾವಣಗೆರೆ: ಅಧಿಕಾರಿಯೊಬ್ಬರು ಎರಡು ಸಸಿ ನೀಡಲು ನಿರಾಕರಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿ ಸಸಿ ಬೆಳೆಸುವ ಮತ್ತು ಪೋಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ದಾವಣಗೆರೆ ಸುತ್ತಮುತ್ತಲ ಭಾಗದಲ್ಲಿ ಸಾಲುಮರದ ವೀರಾಚಾರ್ ಎಂದೇ ಗುರುತಿಸಲ್ಪಡುವ ವೀರಾಚಾರ್‌ಗೂ ಪ್ರಶಸ್ತಿ ಬಂದಿದ್ದು ಗೊತ್ತೇ ಇರಲಿಲ್ಲ! ಮೂಲತಃ ಚಿತ್ರದುರ್ಗ ತಾಲೂಕಿನ ನಂದಿಹಳ್ಳಿ ಗ್ರಾಮದವರಾದ ವೀರಾಚಾರ್, ಬದುಕು ಕಟ್ಟಿಕೊಳ್ಳಲು ದಾವಣಗೆರೆ ತಾಲೂಕಿನ ಮಿಟ್ಟಲಕಟ್ಟೆಗೆ ಬಂದವರು. ಸಣ್ಣ ವಯಸ್ಸಿನಿಂದಲೇ ಗಿಡ-ಮರ-ಪರಿಸರದ ಬಗ್ಗೆ ಅಪಾರ ಪ್ರೀತಿ ಹೊಂದಿರುವ ವೀರಾಚಾರ್ 2,500ಕ್ಕೂ ಹೆಚ್ಚು ಸಸಿ ನೆಟ್ಟು ಬೆಳೆದು ನಿಂತಿರುವ ಮರಗಳನ್ನು ಈ ಕ್ಷಣಕ್ಕೂ ಸ್ವಂತ ಮಕ್ಕಳಿಗೂ ಹೆಚ್ಚಾಗಿ ಆರೈಕೆ ಮಾಡುತ್ತಾರೆ.
ತಾವು ಬೆಳೆಸುವ ಸಸಿ, ಮರಗಳನ್ನು ತಮ್ಮ ಮಕ್ಕಳು ಎಂದೇ ಹೇಳಿಕೊಳ್ಳುವ ವೀರಾಚಾರ್ ನಿಮಗೆ ಮಕ್ಕಳು ಎಷ್ಟು ಎಂದು ಕೇಳಿದರೆ 2,500ಕ್ಕೂ ಹೆಚ್ಚು ಎಂದೇ ಹೇಳುವುದು ಅವರು ಪರಿಸರದ ಬಗ್ಗೆ ಹೊಂದಿರುವ ಕಾಳಜಿ ಪ್ರತೀಕ. ಪರಿಸರದ ಮೇಲಿನ ಪ್ರೀತಿಗಾಗಿ ಲೇವಡಿಗೆ ಒಳಗಾಗುತ್ತಿದ್ದ ವೀರಾಚಾರ್ ರಾಜ್ಯೋತ್ಸವ ಪ್ರಶಸ್ತಿಯನ್ನು ದೇವರು ಕೊಟ್ಟ ವರ ಎಂದೇ ವಿನಮ್ರವಾಗಿ ಹೇಳುತ್ತಾರೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆಯೇ ಮಾಹಿತಿ ಇರಲಿಲ್ಲ. ನಿಜ ಏನ್ ಸಾರ್ ನಂಗೆ ಪ್ರಶಸ್ತಿ ಬಂದಿದೆಯಂತೆ ಹೌದೇ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಅವರ ಪರಿಸರ ಕಾಳಜಿಯನ್ನು ಪದಗಳಲ್ಲಿ ವರ್ಣಿಸಲಿಕ್ಕೆ ಆಗದು.
ಸಾಹಸ ಕ್ರೀಡೆ ಪರ್ವತಾರೋಹಿ ನಂದಿತಾಗೆ ಒಲಿದ ಗೌರವ
ಹುಬ್ಬಳ್ಳಿ: ಸಾಹಸ ಕ್ರೀಡೆ ಪರ್ವತಾರೋಹಣದ ಪಟುವಾದ ನನ್ನನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿರುವುದು ಖುಷಿ ತಂದಿದೆ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡ ಪರ್ವತಾರೋಹಿ ಹುಬ್ಬಳ್ಳಿಯ ನಂದಿತಾ ನಾಗನಗೌಡರ ಸಂತಸ ಹಂಚಿಕೊಂಡರು. ಪಾಶ್ಚಾತ್ಯ ದೇಶಗಳಲ್ಲಿ ಸಾಹಸ ಕ್ರೀಡೆಗಳಿಗೆ ಹೆಚ್ಚಿನ ಮಾನ್ಯತೆ ಸಿಗುತ್ತದೆ. ನಮ್ಮ ದೇಶದಲ್ಲಿ ಸಾಹಸ ಕ್ರೀಡೆಗಳಿಗೆ ಮಾನ್ಯತೆ ಕಡಿಮೆ ಎಂಬುದು ಹೆಚ್ಚಿನ ಜನರ ನಂಬಿಕೆ. ಆದರೆ ಸಾಹಸ ಕ್ರೀಡೆಯ ಮಹಿಳಾ ಪಟುವಾದ ನನಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ವಿಶ್ವದ ಏಳು ಅತಿ ಎತ್ತರದ ಹಾಗೂ ದುರ್ಗಮ ಪರ್ವತಗಳನ್ನು ಆರೋಹಣ ಮಾಡಿ ಸಾಧನೆ ಮಾಡಲು ಪ್ರೇರಣೆ ನೀಡಿದೆ.
ಈಗಾಗಲೇ ನಾನು ವಿಶ್ವದ 4 ಎತ್ತರದ ಪರ್ವತಗಳನ್ನು ಯಶಸ್ವಿಯಾಗಿ ಏರಿದ್ದು, 2020 ಮೇ ತಿಂಗಳಿನಲ್ಲಿ 5ನೇ ಪರ್ವತ ಉತ್ತರ ಅಮೆರಿಕದ ಮೌಂಟ್ ಬೆನಾಲಿ ಏರಲು ಸಿದ್ಧತೆ ನಡೆಸಿದ್ದು, ಪ್ರಶಸ್ತಿ ನನ್ನ ಆತ್ಮವಿಶ್ವಾಸವನ್ನು ವೃದ್ಧಿಸುವುದರಲ್ಲಿ ಸಂದೇಹವಿಲ್ಲ ಎಂದರು. 2016ರಲ್ಲಿ ಮೌಂಟ್ ಎವರೆಸ್ಟ್ ಏರಿರುವ ನಂದಿತಾ, 2017ರ ಜೂನ್‌ನಲ್ಲಿ ಆಸ್ಟ್ರೇಲಿಯಾದ ಕಾರ್ ಸ್ಟೆಂಜ್ ಪಿರಾಮಿಡ್ ಪರ್ವತಾರೋಹಣ ಮಾಡಿದ್ದರು. ಅಫ್ರಿಕಾದ ಕಿಲಿಮಾಂಜಿರೊ ಪರ್ವತ, ಅಂಟಾರ್ಟಿಕಾ ವಿನ್ಸನ್ ಮ್ಯಾಸಿಪ್ ಪರ್ವತವನ್ನು ಯಶಸ್ವಿಯಾಗಿ ಏರಿದ್ದಾರೆ.
ನಾಡಿನ ಮನೆ ಮಾತಾದ ರಂಗ ಕಲಾವಿದ ಜಯಕುಮಾರ್
ಬೆಂಗಳೂರು: 70 ವರ್ಷದ ಹಿರಿಯ ರಂಗಕಲಾವಿದ ಜಯಕುಮಾರ್ ಅವರ ಹುಟ್ಟೂರು ದಾವಣಗೆರೆ ತಾಲೂಕಿನ ಕೊಡಗನೂರು. ನಾಟಕದ ಬಗ್ಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಅವರು ಹತ್ತನೇ ವಯಸ್ಸಿನಲ್ಲೇ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಆರಂಭದಲ್ಲಿ ಹಲವು ಹೆಸರಾಂತರ ರಂಗ ನಿರ್ದೇಶಕ ನಾಟಕಗಳಲ್ಲಿ ಅಭಿನಯಿಸಿದರು.ಆ ನಂತರ ಕಿರುತೆರೆಯಲ್ಲಿ ಅಭಿನಯಿಸಿದರು. ಟಿ.ಎಸ್.ನಾಗಾಭರಣ ಅವರ ಸಂಕ್ರಾಂತಿ, ಮಾಹಾಮಾಯೆ, ಅಪ್ಪ, ಕೆಳದಿ ಚೆನ್ನಮ್ಮ, ಎಸ್.ನಾರಾಯಣ ಅವರ ಭಾಗೀರಥಿ, ಪಾಪ ಪಾಂಡು.. ಹೀಗೆ ಅರವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ನಾಡಿನ ಮನೆ ಮಾತಾಗಿದ್ದಾರೆ. ಜತೆಗೆ 50ಕ್ಕೂ ಹೆಚ್ಚು ಸಿನೆಮಾಗಳಲ್ಲೂ ಅಭಿನಯಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರೊಂದಿಗೆ ಜನುಮದ ಜೋಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಜಯಕುಮಾರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರಿನ ಖುಷಿಗೆ ಪ್ರಶಸ್ತಿ
ಮೈಸೂರು: ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್‌ನ ನೋಟು ಮುದ್ರಣಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೇಮಚಂದ್ರ ಹಾಗೂ ಕುಮುದ ದಂಪತಿಯ ಹಿರಿಯ ಪುತ್ರಿ ಕು.ಖುಷಿ, ಮೈಸೂರಿನ ವಿಜಯವಿಠ್ಠಲ ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದು, ವಿದ್ಯಾಭ್ಯಾಸದ ಜೊತೆಗೆ ಐದು ವರ್ಷಗಳಿಂದ ಮೈಸೂರಿನ ವಿವೇಕಾನಂದ ಯೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಉಸಿರಾಟದ ತೊಂದರೆಯಿಂದಾಗಿ ಯೋಗಾ ಭ್ಯಾಸ ಆರಂಭಿಸಿದ ಖುಷಿ ಈಗ ದೇಶದ ಉತ್ತಮ ಯೋಗಪಟುವಾಗಿದ್ದಾರೆ. 2017 ರಲ್ಲಿ ಮೈಸೂರಿನ ನೋಟು ಮುದ್ರಣ ನಗರದಲ್ಲಿ ನಿರಾಳಂಬ ಪೂರ್ಣ ಚಕ್ರಸಾನವನ್ನು ನಿಮಿಷಕ್ಕೆ 14 ಬಾರಿ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆರು ಬಾರಿ ಭಾರತವನ್ನು ಪ್ರತಿನಿಧಿಸಿರುವ ಕು.ಖುಷಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳಿಂದ ಹಲವು ಪ್ರಶಸ್ತಿಗಳನ್ನು ಪಡೆದಿರುವ ಕು.ಖುಷಿ, ಯೋಗ ಕ್ಷೇತ್ರದಲ್ಲಿ ಸಂಶೋಧನೆಗಳನ್ನು ಮಾಡಿ ದೇಶದ ಉತ್ತಮ ಯೋಗ ಶಿಕ್ಷಕಿಯಾಗಿ ಲಕ್ಷಾಂತರ ಜನರಿಗೆ ಯೋಗ ಕಲಿಸಿಕೊಡುವ ಗುರಿ ಹೊಂದಿದ್ದಾರೆ.
ಗಾಯಕ ನಿವೃತ್ತ ಅಧಿಕಾರಿ
ಬೆಂಗಳೂರು: ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ನಿವೃತ್ತ ಅಧಿಕಾರಿ ಡಾ.ಮುದ್ದು ಮೋಹನ್, ಮಾತಾ- ಪಿತೃರಿಂದ ಬಳುವಳಿ ಯಾಗಿ ಬಂದ ಹಾಡುಗಾರಿಕೆ ಯನ್ನು ಮುಂದುವರಿಸಿದರು. ಬಾಲ್ಯದಿನ ಗಳಲ್ಲೇ ಶಾಸ್ತ್ರೀಯ ಸಂಗೀದತ್ತ ಒಲವು ತೋರಿ ಡಾ.ಬಸವರಾಜ ರಾಜಗುರು ಮತ್ತು ಡಾ.ಗಂಗೂ ಬಾಯಿ ಹಾನಗಲ್ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವನ್ನು ಕಲಿತರು. ಬಳಿಕ ದೂರದರ್ಶನ ಮತ್ತು ಆಕಾಶವಾಣಿ ಮೂಲಕ ಕಲಾ ಪ್ರಪಂಚಕ್ಕೆ ಪರಿಚಯ. ರಾಜ್ಯ ಸರ್ಕಾರ ನಡೆಸುವ ಸಂಗೀತ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರಾಂಕ್, ಕರ್ನಾಟಕ ಸಂಗೀತ ಅಕಾಡೆಮಿಯ ಕರ್ನಾಟಕ ತಿಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶಕರಾಗಿಯು ಸೇವೆ ಸಲ್ಲಿಸಿರುವ ಅವರು ತಿಂಗಳ ಸೊಬಗು ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರತಿಭೆಗೆ ಮಣೆಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.