ಮಕ್ಕಳ ಕಮರ್ಷಿಯಲ್ ಸಿನ್ಮಾ
ಆರು ಭಾಷೆಗಳಲ್ಲಿ ಗಿರ್ಮಿಟ್
Team Udayavani, Nov 1, 2019, 5:21 AM IST
ಮಕ್ಕಳ ಸಿನಿಮಾ ಎಂದರೆ ಅನೇಕರಲ್ಲಿ ಒಂದು ಭಾವನೆ ಇದೆ. ಅದೇನೆಂದರೆ ಸಮಸ್ಯೆಯಲ್ಲಿ ಸಿಲುಕಿರುವ ಮಗುವೊಂದರ ಮನಕಲುಕುವ ಕಥಾನಕ ಎಂದು. ಅದಕ್ಕೆ ಪೂರಕವಾಗಿ ಒಂದಷ್ಟು ಅದೇ ಮಾದರಿಯ ಸಿನಿಮಾಗಳು ಕೂಡಾ ಬಂದಿವೆ. ಆದರೆ, ಈಗ ಬಿಡುಗಡೆಗೆ ಸಿದ್ಧವಾಗಿರುವ ಮಕ್ಕಳ ಸಿನಿಮಾ ಪಕ್ಕಾ ಕಮರ್ಷಿಯಲ್. ಸ್ಟಾರ್ ನಟರ ಕಮರ್ಷಿಯಲ್ ಸಿನಿಮಾಗಳು ಯಾವ ಮಟ್ಟಕ್ಕೆ ನಿಮಗೆ ಖುಷಿ, ಮನರಂಜನೆ ಕೊಡುತ್ತವೋ, ಆ ಮಟ್ಟಕ್ಕೆ ಈ ಚಿತ್ರ ಮನರಂಜನೆ ನೀಡಲಿದೆ. ಅಂದಹಾಗೆ, ಆ ಚಿತ್ರ “ಗಿರ್ಮಿಟ್’. ಸದ್ಯ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗದ ಮೂಲಕ ಸದ್ದು ಮಾಡುತ್ತಿರುವ ಚಿತ್ರವಿದು. ರವಿ ಬಸ್ರೂರು ಈ ಚಿತ್ರದ ನಿರ್ದೇಶಕರು. ಎನ್.ಎಸ್.ರಾಜ್‌ಕುಮಾರ್ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರ ನವೆಂಬರ್ 8 ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ಹಿರಿಯ ಪತ್ರಕರ್ತ ಎಚ್.ಆರ್.ರಂಗನಾಥ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭಕೋರಿದರು.
ನಿರ್ದೇಶಕ ರವಿಬಸ್ರೂರ್ ಅವರಿಗೆ ಹೊಸ ಪ್ರಯೋಗದ ಸಿನಿಮಾಗಳನ್ನು ಮಾಡುವುದರಲ್ಲಿ ಖುಷಿ ಇದೆಯಂತೆ. ಮೂಲತಃ ಸಂಗೀತ ನಿರ್ದೇಶಕರಾಗಿರುವ ರವಿ, ವರ್ಷಕ್ಕೆ ಎರಡು ತಿಂಗಳು ತಮ್ಮ ಹವ್ಯಾಸಕ್ಕಾಗಿ ಮೀಸಲಿಡುತ್ತಾರಂತೆ. ಆ ಹವ್ಯಾಸದಲ್ಲಿ ಮಾಡಿರುವ ಸಿನಿಮಾವೇ “ಗಿರ್ಮಿಟ್’. ಅಷ್ಟೊಂದು ಮಕ್ಕಳನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡೋದು ಸುಲಭವದ ಕೆಲಸವಲ್ಲ ಎನ್ನುವ ರವಿ, ಪ್ರತಿ ಮಗು ಕೂಡಾ ಚೆನ್ನಾಗಿ ನಟಿಸಿದೆ ಎನ್ನಲುಯ ಮರೆಯುವುದಿಲ್ಲ. ರವಿ ಬಸ್ರೂರು ಅವರಿಗೆ ಈ ಸಿನಿಮಾ ಮಾಡಲು “ಡ್ರಾಮಾ ಜ್ಯೂನಿಯರ್’ ಸ್ಫೂರ್ತಿಯಂತೆ. ಅಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸುವುದನ್ನ ಕಂಡ ನನಗೆ ಇಂಥದ್ದೊಂದು ಪ್ರಯತ್ನ ಯಾಕೆ ಮಾಡಬಾರದು ಎನಿಸಿದ್ದರಿಂದ ಈ ಚಿತ್ರ ಮಾಡಲು ಮುಂದಾದರಂತೆ.”ಚಿತ್ರವನ್ನು ನೋಡಿದ ಯಶ್ ಮತ್ತು ರಾಧಿಕಾ ಪಂಡಿತ್ ಅವರು ನಮ್ಮ ಚಿತ್ರದ ನಾಯಕ, ನಾಯಕಿ ಪಾತ್ರಕ್ಕೆ ವಾಯ್ಸ ನೀಡಿದ್ದಾರೆ. ಅಷ್ಟೇ ಅಲ್ಲ, ಅಚ್ಯುತ್, ತಾರಾ, ರಂಗಾಯಣ ರಘು,ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್. ಪೇಟೆ,ಸಾಧುಕೋಕಿಲ, ಜಹಾಂಗೀರ್, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಹಲವು ಕಲಾವಿದರು ಮಕ್ಕಳ ನಟನೆಗೆ ಧ್ವನಿ ನೀಡಿದ್ದಾರೆ’ಎನ್ನುತ್ತಾರೆ ರವಿಬಸ್ರೂರ್.
ನಿರ್ಮಾಪಕ ಎನ್.ಎಸ್.ರಾಜ್‌ಕುಮಾರ್ ಅವರಿಗೆ ಈ ತರಹದ ಸಿನಿಮಾ ಮಾಡೋದರಲ್ಲಿ ಖುಷಿ ಇದೆಯಂತೆ. ಅದೇ ಕಾರಣದಿಂದ ಅವರು ಪ್ರಯೋಗಾತ್ಮಕ ಸಿನಿಮಾಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ಕೊಡುತ್ತಿದ್ದಾರಂತೆ. ಸದ್ಯ ಬಿಡುಗಡೆಗೆ ರೆಡಿಯಾಗಿರುವ “ಗಿರ್ಮಿಟ್’ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದರೊಂದಿಗೆ ಇಂಗ್ಲೀಷ್ ಭಾಷೆಯಲ್ಲೂ ಸಹ ತೆರೆಗೆ ತರಲು ತಯಾರಿ ನಡೆಸಲಾಗುತ್ತಿದೆ. ಇತ್ತೀಚೆಗೆ ಆರು ಭಾಷೆಗಳಲ್ಲೂ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಆಶ್ಲೇಷ್ ರಾಜ್, ಶ್ಲಾಘಾ ಸಾಲಿಗ್ರಾಮ,ನಾಗರಾಜ್ ಜಪ್ತಿ, ಶ್ರಾವ್ಯಾ, ತನಿಶಾ ಕೋಣೆ, ಆದಿತ್ಯ, ಸಹನ ಬಸ್ರೂರ್, ಪವಿತ್ರ, ಜಯೇಂದ್ರ, ಸಿಂಚನ, ಮನೀಶ್ ಶೆಟ್ಟಿ, ಸಾರ್ಥಕ್ ಶೆಣೈ, ಮಹೇಂದ್ರ ಮತ್ತು ಪವನ್ ಬಸ್ರೂರ್ ನಟಿಸಿದ್ದಾರೆ. ಸಚಿನ್ ಬಸ್ರೂರ್ ಛಾಯಾಗ್ರಹಣವಿದೆ. ರವಿಬಸ್ರೂರ್ ಸಂಗೀತವಿದೆ.
ರವಿ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.