ನಮ್ಮ ಶಾಲೆ ನಮ್ಮ ಹೆಮ್ಮೆ : ಪ್ರಗತಿಪರ ಸಾಹಿತಿ ನಿರಂಜನರು ಕಲಿತ ಶಾಲೆ
Team Udayavani, Nov 2, 2019, 12:39 AM IST
ಸುಳ್ಯ ನಗರದ ಮೊದಲ ಹೈಯರ್ ಎಲಿಮೆಂಟರಿ ಸ್ಕೂಲ್ ; ಶಾಲೆಗೆ ಈಗ 107 ವರ್ಷ
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಶ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
— ಕಿರಣ್ ಪ್ರಸಾದ್ ಕುಂಡಡ್ಕ
ಸುಳ್ಯ: ತಾಲೂಕಿನ ಬಹುತೇಕ ಕಾರ್ಯಕ್ರಮಗಳಿಗೆ ಕೇಂದ್ರ ಸ್ಥಾನವಾಗಿತ್ತು ಈ ಶಾಲೆ. ಬೋರ್ಡ್ ಹೈಯರ್ ಎಲಿಮೆಂಟರಿ ಸ್ಕೂಲ್ ಎಂದೇ ಜನಜನಿತವಾಗಿದ್ದ ಸುಳ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ 107ರ ಹರೆಯ!
ನಗರದ ಜ್ಯೋತಿ ಸರ್ಕಲ್ ಬಳಿಯಿರುವ ಈ ಶಾಲೆ ನಗರದ ಮೊದಲ ಪ್ರಾಥಮಿಕ ಮತ್ತು ಹೈಯರ್ ಎಲಿಮೆಂಟರಿ ಶಾಲೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಶಾಲೆಗೆ ಸಂಬಂಧಿಸಿದ ಕಟ್ಟಡಗಳಿವೆ. ಈಗ ಒಂದು ಪಾರ್ಶ್ವದ ಕಟ್ಟಡದಲ್ಲಿ ಮಾತ್ರ ತರಗತಿ ನಡೆಯುತ್ತಿದೆ. ಇನ್ನೊಂದು ಪಾರ್ಶ್ವದಲ್ಲಿ ಹಳೆ ಕಟ್ಟಡವಿದೆ. ಪಕ್ಕದಲ್ಲಿ ಅಮೃತಭವನ ಇದೆ.
1912ರ ಅ.10ರಂದು 4ನೇ ತರಗತಿಯನ್ನು ಒಳಗೊಂಡ ಕಿ.ಪ್ರಾ. ಶಾಲೆ ಆಗಿ ಸ್ಥಾಪನೆಗೊಂಡಿತ್ತು. ದಾಖಲೆಗಳ ಪ್ರಕಾರ 1918-19ರಲ್ಲಿ ಹೈಯರ್ ಎಲಿಮೆಂಟರಿ ಆಯಿತು. ಮೊದಲಿಗೆ 5ನೇ ತರಗತಿ, ಅನಂತರ 6, 7, 8ನೇ ತರಗತಿಗಳು ಪ್ರಾರಂಭಗೊಂಡವು. 1923-24ರಲ್ಲಿ ಎಂಟನೇ ತರಗತಿಯ ಪ್ರಥಮ ಬ್ಯಾಚ್ ತೇರ್ಗಡೆ ಹೊಂದಿತ್ತು.
ಸುಳ್ಯವು ಆ ಕಾಲದಲ್ಲಿ ಪುತ್ತೂರು ತಾಲೂಕಿಗೆ ಸೇರಿತ್ತು. ಆ ಕಾಲದಲ್ಲಿ ತಾಲೂಕಿನಲ್ಲಿ ಎಂಟನೇ ತರಗತಿಯವರೆಗೆ ವಿದ್ಯಾಭ್ಯಾಸ ನೀಡುವ ನಾಲ್ಕು ಶಾಲೆಗಳಿದ್ದವಷ್ಟೆ. ಅದರಲ್ಲಿ ಸುಳ್ಯವೂ ಒಂದು. ಸುಳ್ಯ ಆಸುಪಾಸಿನ ಪ್ರದೇಶದವರಿಗೆ ಹೈಯರ್ ಎಲಿಮೆಂಟರಿ ವಿದ್ಯಾಭ್ಯಾಸಕ್ಕೆ ಈ ಶಾಲೆಯೇ ಆಧಾರವಾಗಿತ್ತು.
ಮೊದಲ ಹೆಡ್‌ಮಾಸ್ಟರ್
ಶಾಲೆಯ ಫಲಕಪತ್ರದಲ್ಲಿ ರಾಮಪ್ಪಯ್ಯ ಅವರಿಂದ ಅನಂತರದ ಮುಖ್ಯಗುರುಗಳ ಹೆಸರುಗಳು ಇವೆ. ಅದರ ಹಿಂದೆಯೂ ಅನೇಕ ಮುಖ್ಯಗುರು ಇದ್ದಿರಬಹುದು ಎನ್ನುತ್ತಾರೆ ಶಾಲೆಯ ಈಗಿನ ಮುಖ್ಯ ಶಿಕ್ಷಕರು. ಆ ಮಾಹಿತಿ ಕಡತದಲ್ಲಿ ಲಭ್ಯವಿಲ್ಲ. ಹಿಂದೆ ಇದ್ದವರಲ್ಲಿ ಕತ್ತಲೆಕಾನ ಅಪ್ಪಯ್ಯ ಬೋರ್ಕರ್ ಪ್ರಮುಖರು. ಶಾಲೆ ಆರಂಭದ ಸಂದರ್ಭದಲ್ಲಿ 1ರಿಂದ 4ನೇ ತರಗತಿ ತನಕ ಇತ್ತು. ವಿದ್ಯಾರ್ಥಿಗಳ ಸಂಖ್ಯೆ ದಾಖಲೆಗಳಲ್ಲಿ ಸ್ಪಷ್ಟವಾಗಿ ನಮೂದು ಆಗಿಲ್ಲ.
ಮೂಲ ಸೌಕರ್ಯ ಇರುವ ಶಾಲೆ
4.12 ಎಕರೆ ಸ್ಥಳ ಶಾಲೆಗಿದೆ. ಮೈದಾನ, ಕುಡಿಯುವ ನೀರಿನ ವ್ಯವಸ್ಥೆ ಇದೆ. 1998ರಲ್ಲಿ ನಿರ್ಮಿಸಿದ ಅಮೃತ ಮಹೋತ್ಸವ ನೆನಪಿನಲ್ಲಿ ಕಟ್ಟಿಸಿದ ಅಮೃತಭವನ, 4 ಕೊಠಡಿಗಳು ಆರ್‌ಸಿಸಿ ಕಟ್ಟಡ, ರೋಟರಿ ಸಂಸ್ಥೆ ನಿರ್ಮಿಸಿದ ಸಭಾಭವನ ಇದೆ. ಕೆಲವು ದಾನಿಗಳು ಪ್ರತಿವರ್ಷ ಕೊಡುಗೆ ರೂಪದಲ್ಲಿ ಲೇಖನ ಸಾಮಗ್ರಿ ನೀಡುತ್ತಾರೆ.
ವಿಶೇಷ ಸಾಧಕ ಹಳೆ ವಿದ್ಯಾರ್ಥಿಗಳು
ಸಾಹಿತಿ ನಿರಂಜನ, ಆಧುನಿಕ ಸುಳ್ಯ ನಿರ್ಮಾತೃ ಕುರುಂಜಿ ವೆಂಕಟರಮಣ ಗೌಡ, ಡಾ|ಕೋಡಿ ಕುಶಾಲಪ್ಪ ಗೌಡ, ಡಾ| ಕೊಳಂಬೆ ಚಿದಾನಂದ ಗೌಡ, ಡಾ| ಕೆ.ವಿ. ಚಿದಾನಂದ, ಜಾಕೆ ಪರಮೇಶ್ವರ ಗೌಡ ಹೀಗೆ ನೂರಾರು ಸಾಧಕರು ಈ ಶಾಲೆಯ ಹಳೆ ವಿದ್ಯಾರ್ಥಿಗಳು.
ಆರಂಭದ ವ್ಯಾಪ್ತಿ
ಸುಬ್ರಹ್ಮಣ್ಯ, ಸಂಪಾಜೆ, ಅರಂತೋಡು, ತೊಡಿಕಾನ, ಪೆರಾಜೆ, ಮರ್ಕಂಜ, ಮಡಪ್ಪಾಡಿ, ಆಲೆಟ್ಟಿ, ಅಜ್ಜಾವರ, ಜಾಲ್ಸೂರು, ಕನಕಮಜಲು, ಮಂಡೆಕೋಲು, ಕುಕ್ಕುಜಡ್ಕ, ಕೇರಳದ ಬಂದ್ಯಡ್ಕ, ದೇಲಂಪಾಡಿ, ಪಂಜಿಕಲ್ಲುವರೆಗೆ ಶಾಲೆ ವ್ಯಾಪ್ತಿ ಇದೆ.
ಶಾಲೆಗೆ ಭೇಟಿ ನೀಡಿದ ಸಾಧಕರು
ಕರ್ನಾಟಕ ಏಕೀಕರಣ ಹೋರಾಟ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯ, ಭೂದಾನ ಚಳವಳಿಯ ಸಮಯದಲ್ಲಿ ಆಚಾರ್ಯ ವಿನೋಬಾ ಭಾವೆ, ಬೆನಗಲ್ ಶಿವರಾಯ, ಕೆ.ಆರ್. ಕಾರಂತ ಮೊದಲಾದ ಗಣ್ಯರು ಇಲ್ಲಿಗೆ ಭೇಟಿ ನೀಡಿ ಈ ಶಾಲಾ ವಠಾರದಲ್ಲಿ ಭಾಷಣ ಮಾಡಿದ್ದಾರೆ. ಡಾ| ಶಿವರಾಮ ಕಾರಂತರು ‘ಮಕ್ಕಳ ಕೂಟ’ದಲ್ಲಿ ಭಾಗಿಯಾಗಿ ಇಲ್ಲಿ ನಾಟಕದಲ್ಲಿ ಅಭಿನಯಿಸಿದ್ದರು ಎನ್ನುತ್ತಿವೆ ದಾಖಲೆಗಳು.
ಈಗ ಹಲವು ಶಾಲೆಗಳು
ಸುಳ್ಯ ನಗರದಲ್ಲಿ ಆಗ ಇದ್ದ ಏಕೈಕ ಶಾಲೆ ಇದಾಗಿತ್ತು. ಪ್ರಸ್ತುತ ಸುಳ್ಯ, ಶಾಂತಿನಗರ, ಜಯನಗರ, ಕೇರ್ಪಳ, ಗಾಂಧಿನಗರ, ಜಟ್ಟಿಪಳ್ಳಗಳಲ್ಲಿ ಬೇರೆ ಶಾಲೆಗಳಿವೆ; ಶಾರದಾ, ಸೈಂಟ್ ಜೋಸೆಫ್, ಕೆವಿಜಿ ವಿದ್ಯಾಸಂಸ್ಥೆ, ಸ್ನೇಹ ಶಾಲೆ, ಗ್ರೀನ್‌ವ್ಯೂ, ಎಂಜಿಎಂ ಕೊಡಿಯಾಲಬೈಲು ಹೀಗೆ ಪ್ರಾಥಮಿಕದಿಂದ ತೊಡಗಿ ವೈದ್ಯಕೀಯ ಶಿಕ್ಷಣ ತನಕ ಶಾಲಾಕಾಲೇಜುಗಳಿದ್ದು, ಸುಳ್ಯ ಶೈಕ್ಷಣಿಕ ನಗರಿಯಾಗಿದೆ. ಪ್ರಸ್ತುತ ನಾಲ್ವರು ಶಿಕ್ಷಕರು ಇಲ್ಲಿದ್ದಾರೆ, 118 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಈಗ ಹಲವು ಊರುಗಳ ಮಕ್ಕಳು
ಅಂದು ತಾಲೂಕಿನ ವಿವಿಧ ಗ್ರಾಮಗಳ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದ ಈ ಶಾಲೆ ಈಗ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳ ವಿದ್ಯಾರ್ಜನೆಯ ಕೇಂದ್ರವೆನಿಸಿದೆ. ಗದಗ, ಹುಬ್ಬಳ್ಳಿ, ಬಿಜಾಪುರ ಹೀಗೆ ನಾನಾ ಭಾಗಗಳ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದು ಇಲ್ಲಿ ಕಲಿಯುತ್ತಿದ್ದಾರೆ. ಜತೆಗೆ ಸುಳ್ಯಕ್ಕೆ ಕೂಲಿ ಕೆಲಸಕ್ಕೆಂದು ಹೊರ ಜಿಲ್ಲೆಗಳಿಂದ ಬಂದ ಕಾರ್ಮಿಕರ ಮಕ್ಕಳೂ ಇಲ್ಲಿದ್ದಾರೆ. 118 ಮಕ್ಕಳ ಪೈಕಿ 50ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಹೊರ ಜಿಲ್ಲೆಯವರು.
ಮೈದಾನ, ಬೆಳಕು ಬೇಕಿದೆ
ಶಾಲೆಗೆ ಸುಸಜ್ಜಿತ ಮೈದಾನದ ಅಗತ್ಯ ಇದೆ. ವಿದ್ಯುತ್ ಕೈ ಕೊಟ್ಟರೆ ಕತ್ತಲೇ ಗತಿ. ಹಾಗಾಗಿ ಬೆಳಕಿಗೆ ಪರ್ಯಾಯ ವ್ಯವಸ್ಥೆ ಆಗಬೇಕಿದೆ.
ನಾನು ಈ ಶಾಲೆಯಲ್ಲೇ ಕಲಿತು, ಇಲ್ಲೇ 31 ವರ್ಷಗಳ ಕಾಲ ಶಿಕ್ಷಕಿಯಾಗಿ, ಮುಖ್ಯ ಗುರುವಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಅವಧಿಯಲ್ಲಿ ಅಮೃತ ಮಹೋತ್ಸವದ ನೆನಪಿನಲ್ಲಿ ಊರ-ಪರವೂರ ದಾನಿಗಳ ಸಹಕಾರದಿಂದ ಅಮೃತಭವನ ಕಟ್ಟಲಾಯಿತು. ಇಲ್ಲಿ ಕಲಿತು, ಇಲ್ಲೇ ಶಿಕ್ಷಕಿ ಆಗುವುದು ಸೌಭಾಗ್ಯವಲ್ಲವೇ!
– ಕಮಲಾಕ್ಷಿ ಕೆ., ನಿವೃತ್ತ ಮುಖ್ಯ ಗುರು ಮತ್ತು ಹಳೆ ವಿದ್ಯಾರ್ಥಿ
ಶಾಲೆಗೆ ಹೊಸ ಕಟ್ಟಡದ ಅಗತ್ಯವಿದೆ. ನಗರದ ವಿವಿಧ ಭಾಗದ ಮತ್ತು ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
– ಸೀತಾ ಎಚ್., ಮುಖ್ಯೋಪಾಧ್ಯಾಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.