ಅಮೆರಿಕದಲ್ಲಿ ಅ ಆ ಇ ಈ


Team Udayavani, Nov 3, 2019, 5:30 AM IST

nn-15

ನವೆಂಬರ್‌ 1 ಕಳೆದು ಎರಡು ದಿನಗಳಾದವು. ಮತ್ತೂಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ದಾಟಿ ಹೋಗಿದೆ. ಆದರೆ, ಅಮೆರಿಕದ ಕೆಲವೆಡೆ ಪ್ರತಿದಿನವೂ ಕನ್ನಡೋತ್ಸವ! ಕರ್ನಾಟಕದಿಂದ 13 ಸಾವಿರ ಕಿ. ಮೀ. ದೂರದಲ್ಲಿರುವ ಆ ದೇಶದಲ್ಲಿ ಕನ್ನಡ ಕಲಿಕೆಯ ಮೂಲಕ ಹೊಸ ಪೀಳಿಗೆಗೆ ಭಾಷೆಯನ್ನು ದಾಟಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಕನ್ನಡ ಕಲಿ’ ಲಾಂಛನವಿರುವ ಚೀಲವನ್ನು ಹೆಗಲಿಗೇರಿಸಿ ಉತ್ಸಾಹದಿಂದ ಕುಣಿದುಕೊಂಡು ಬರುವ ಮಕ್ಕಳು. ಹತ್ತಿಪ್ಪತ್ತು ಐವತ್ತು ನೂರೆಲ್ಲ ಅಲ್ಲ, ಸುಮಾರು 350ಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳು! “ನಮ್ಮ ಮಗು ಕನ್ನಡ ಕಲಿಯಬೇಕು’- ಎಂಬ ಆಸೆಹೊತ್ತು ಮಕ್ಕಳ ಕೈ ಹಿಡಿದುಕೊಂಡು ಹೆಮ್ಮೆಯಿಂದ ಕರೆತರುವ ತಂದೆತಾಯಂದಿರು. “ಈವತ್ತು ಮಕ್ಕಳಿಗೆ ಹೊಸದಾಗಿ ಏನು ಕಲಿಸಲಿ? ಅವು ಖುಷಿಯಿಂದ ಕನ್ನಡ ಕಲಿಯುವ ಹಾಗೆ ಯಾವ ಚಟುವಟಿಕೆ ಮಾಡಿಸಲಿ?’- ಎಂದು ತಲೆತುಂಬ ಯೋಜನೆ ಹಾಕಿಕೊಂಡು ಬರುವ ಶಿಕ್ಷಕ-ಶಿಕ್ಷಕಿಯರು. ಅವರ ಸಹಾಯಕರಾಗಿ ಮತ್ತೂಂದಿಷ್ಟು ಸ್ವಯಂಸೇವಕರು. ನೋಡನೋಡುತ್ತಿದ್ದಂತೆಯೇ ಅಲ್ಲೊಂದು ಕನ್ನಡದ ದೊಡ್ಡ ಮೇಳವೇ ನಡೆದಿರುತ್ತದೆ. ಬೇರೆ ಸಮಯದಲ್ಲಿ ಅನಿವಾರ್ಯವಾಗಿ ಇಂಗ್ಲಿಷ್‌ನಲ್ಲೇ ಮಾತು-ಕತೆ-ಆಟ-ಪಾಠ ಮಾಡಬೇಕಾದ ಮಕ್ಕಳಿಂದ ಅಲ್ಲಿ ಒಂದೆರಡು ಗಂಟೆ ಕಾಲ ಕನ್ನಡದಲ್ಲಿ ಚಿಲಿಪಿಲಿ. ಕಿವಿತುಂಬ ಕನ್ನಡ ಕಲರವ. ಇದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ, ಸಿಲಿಕಾನ್‌ ವ್ಯಾಲಿ ಅಥವಾ ಬೇ ಏರಿಯಾ ಎಂದು ಗುರುತಿಸಲ್ಪಡುವ ಉತ್ತರ ಕ್ಯಾಲಿಫೋರ್ನಿಯಾ ಪ್ರದೇಶದ ಮಿಲ್ಟಿಟಾಸ್‌ ನಗರದಲ್ಲಿ, ಅಲ್ಲಿನ ಶ್ರೀ ವೈಷ್ಣವ ಪರಿವಾರ ದೇವಸ್ಥಾನದ ಆವರಣದಲ್ಲಿ, ಪ್ರತಿ ಶನಿವಾರ ಸಂಜೆ ನಾಲ್ಕು ಗಂಟೆಗೆ ಕಂಡುಬರುವ ದೃಶ್ಯ. ಅಮೆರಿಕದಲ್ಲಿ ಕನ್ನಡ ಕಲಿಕೆ ಪ್ರಯತ್ನಗಳ ಆಳ-ಅಗಲ-ಎತ್ತರಗಳ ಅಂದಾಜು ಸರಿಯಾಗಿ ಸಿಗುವುದು ಬಹುಶಃ ಇಲ್ಲೇ. 6 ಬೇರೆ ಬೇರೆ ತರಗತಿಗಳು, ತಲಾ ಎರಡರಂತೆ 12 ವಿಭಾಗಗಳು, ಅವುಗಳಿಗೆ 12 ಪ್ರತ್ಯೇಕ ಕ್ಲಾಸ್‌ರೂಮುಗಳು. ಒಂದು ದೊಡ್ಡ ಹೈಸ್ಕೂಲ್‌ ಅಥವಾ ಕಾಲೇಜು ಇದ್ದಂತೆಯೇ.

2006ರಲ್ಲಿ ಸುಮಾರು 50 ಮಕ್ಕಳೊಂದಿಗೆ ಆರಂಭವಾದ “ಕನ್ನಡ ಕಲಿ’ ಸಂಸ್ಥೆ ಈಗ ಈ ಹಂತಕ್ಕೆ ಬೆಳೆದಿದೆ. ವಿದ್ಯಾರ್ಥಿಗಳ ಸಂಖ್ಯೆ ವರ್ಷವರ್ಷವೂ ಹೆಚ್ಚುತ್ತಿದೆ. ಸ್ಥಳ ಸಾಲದೆಂದು ಇನ್ನೂ ಎರಡು ಕೇಂದ್ರಗಳನ್ನು ಆರಂಭಿಸಿದ್ದಾರೆ. ಅಲ್ಲೂ ಹತ್ತಿರಹತ್ತಿರ ನೂರರಷ್ಟು ಮಕ್ಕಳು. ಅ, ಆ, ಇ, ಈ… ಸ್ವರ-ವ್ಯಂಜನ, ಕಾಗುಣಿತ, ಒತ್ತಕ್ಷರ ಓದಲು ಬರೆಯಲು ಪಠ್ಯಕ್ರಮಗಳ ಮೂಲಕ ಸರಳವಾದ ರೀತಿಯಲ್ಲಿ ಕಲಿಕೆ. ಜೊತೆಗೆ ಕನ್ನಡ ಹಾಡು, ಒಗಟು, ಗಾದೆ, ಕಥೆ, ರಸಪ್ರಶ್ನೆ, ಪ್ರಹಸನ, ಕಿರುನಾಟಕ ಮುಂತಾಗಿ ವಿವಿಧ ಚಟುವಟಿಕೆಗಳ ಮೂಲಕ ಕನ್ನಡ ನಾಡು-ನುಡಿ ಸಂಸ್ಕೃತಿ ಆಚಾರ-ವಿಚಾರಗಳ ಪರಿಚಯ. ಶೈಕ್ಷಣಿಕ ವರ್ಷದ ಕೊನೆಯಲ್ಲಿ “ಕನ್ನಡ ಕಲಿ’ ಹಬ್ಬ. ಮಕ್ಕಳಿಂದ ಪ್ರತಿಭಾಪ್ರದರ್ಶನ. ಎಲ್ಲ ಮಕ್ಕಳೂ ಸೇರಿ ವೃಂದಗಾನದಲ್ಲಿ ಕನ್ನಡ ಗೀತೆಗಳನ್ನು ಹಾಡುವ “ಗುಂಜನ’ ಎಂಬ ಅತ್ಯಂತ ಜನಪ್ರಿಯ ಕಾರ್ಯಕ್ರಮ. 13 ವರ್ಷಗಳ ಹಿಂದೆ “ಕನ್ನಡ ಕಲಿ’ ಸ್ಥಾಪನೆಯಾದಾಗ ಪ್ರಾಂಶುಪಾಲೆಯಾಗಿದ್ದ ಸಂಧ್ಯಾ ರವೀಂದ್ರನಾಥ್‌, ಅವರೊಂದಿಗೆ ಹೆಗಲುಕೊಟ್ಟು ದುಡಿದಿರುವ ಜ್ಯೋತಿ ಶೇಖರ್‌, ಈಗ ಪ್ರಾಂಶುಪಾಲೆಯಾಗಿರುವ ಜ್ಯೋತಿ ಗಿರಿಧರ ಮತ್ತು ಅಸಂಖ್ಯಾತ ಶಿಕ್ಷಕ-ಶಿಕ್ಷಕಿಯರ ಬಳಗ- ಇವರೆಲ್ಲರ ಸ್ವಾರ್ಥರಹಿತ ಸೇವಾಮನೋಭಾವ, ಸಮಯ, ಶ್ರಮಗಳ ಪ್ರತಿಫ‌ಲವೇ “ಕನ್ನಡ ಕಲಿ’ಯ ಅರ್ಥಪೂರ್ಣ ಯಶಸ್ಸು.

ಕ್ಯಾಲಿಫೋರ್ನಿಯಾದ ದಕ್ಷಿಣಭಾಗದಲ್ಲಿರುವ ಲಾಸ್‌ ಏಂಜಲೀಸ್‌ ಪ್ರದೇಶದಲ್ಲಿ ಕನ್ನಡ ಕಲಿಕೆ ತರಗತಿಗಳು ಸುಮಾರು 1996ರಿಂದಲೇ ನಡೆಯುತ್ತಿವೆ. ಐದು ಬೇರೆ ಬೇರೆ ಶಾಖೆಗಳಲ್ಲಿ ಒಟ್ಟು ಸುಮಾರು 300 ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಗೋಪಾಲಕೃಷ್ಣ ಸುಬ್ರಮಣಿ, ಶಂಕರ ಜಗನ್ನಾಥ್‌, ಬಸವರಾಜ ಮನ್ನಂಗಿ, ಶ್ರೀನಿವಾಸ್‌ ನಂದಕುಮಾರ್‌ ಮುಂತಾದವರ ಅದಮ್ಯ ಉತ್ಸಾಹ, ಕ್ರಿಯಾಶೀಲತೆ ಅಲ್ಲಿದೆ. ಅಮೆರಿಕದಲ್ಲಿ ಕನ್ನಡ ಕಲಿಕೆಯ ಪಠ್ಯಪುಸ್ತಕಗಳ ರಚನೆಯ ವಿಷಯದಲ್ಲಿ “ಏಕವ್ಯಕ್ತಿ ವಿಶ್ವವಿದ್ಯಾಲಯ’ ಎಂದು ಕರೆಯಬಹುದಾದ ಶಿವು ಗೌಡರ್‌ ಸಹ ಲಾಸ್‌ ಏಂಜಲೀಸ್‌ ಪ್ರದೇಶದಲ್ಲಿ ನೆಲೆಸಿರುವ ಸಂಪನ್ಮೂಲ ವ್ಯಕ್ತಿ. “ಸ್ವರ-ಬಲ್ಲ’ 1 ಮತ್ತು 2, “ಅಕ್ಷರ-ಬಲ್ಲ’ 1 ಮತ್ತು 2, “ಪದ-ಬಲ್ಲ’ 1 ಮತ್ತು 2, “ಜಾಣ’ 1 ಮತ್ತು 2- ಹೀಗೆ ಒಟ್ಟು ಎಂಟು ಹಂತ (ತರಗತಿ)ಗಳಿಗೆಂದು ಅವರು ರಚಿಸಿರುವ ಪಠ್ಯಪುಸ್ತಕಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅನುಮೋದಿಸಿ ವಿದೇಶದಲ್ಲಿ ಕನ್ನಡ ಕಲಿಕೆಗೆ ಅಧಿಕೃತ ಪಠ್ಯಪುಸ್ತಕಗಳೆಂದು ಘೋಷಿಸಿದೆ. ಚಿಕ್ಕಪುಟ್ಟ ಮಕ್ಕಳಿಗೆ, ನದಿ-ದಡ, ಕಣ್ಣಾಮುಚ್ಚಾಲೆ ಇತ್ಯಾದಿ ಆಟಗಳ ಮುಖಾಂತರ, ಕಥೆ, ಪದ್ಯಗಳ ಮೂಲಕ ಕನ್ನಡ ಕಲಿಸುವುದು ಖುಷಿ ಮತ್ತು ಗರ್ವದ ಅನುಭವ. ದೊಡ್ಡ ಮಕ್ಕಳಿಗೆ ಕರ್ನಾಟಕ ರಾಜ್ಯದ ಆಗುಹೋಗುಗಳು, ಚರಿತ್ರೆ, ಇತಿಹಾಸದ ಬಗ್ಗೆ ಅರಿವು ಮೂಡಿಸಲು, ದೃಷ್ಟಾಂತಗಳ ಮೂಲಕ ಕಲಿಕೆ. ಕಲಿತದ್ದನ್ನು ಅಳೆದು ನೋಡಲು ಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಪರೀಕ್ಷೆಗಳು. ಯುಗಾದಿ, ಗಣೇಶಚತುರ್ಥಿ, ದೀಪಾವಳಿ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಕನ್ನಡ ಕೂಟ ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ನಮ್ಮ ಮಕ್ಕಳು ಅಚ್ಚಕನ್ನಡದಲ್ಲಿ ರಾಮಾಯಣ, ಮಹಾಭಾರತದ ನಾಟಕಗಳನ್ನು ಅಭಿನಯಿಸಿದ್ದಾರೆ. ಅಷ್ಟೇ ಅಲ್ಲ, ಈ ವರ್ಷ ಜುಲೈ 4ರಂದು ಅಮೆರಿಕದ ಸ್ವಾತಂತ್ರ್ಯ ದಿನಾಚರಣೆ ಪರೇಡ್‌ನ‌ಲ್ಲಿ ನಮ್ಮ ಕನ್ನಡ ಮಕ್ಕಳು ಭಾಗವಹಿಸಿ “ಬೆಸ್ಟ್ ನಾವೆಲ್ಟಿ ಗ್ರೂಪ್‌ ಪಾರಿತೋಷಕವನ್ನೂ ಪಡೆದಿದ್ದಾರೆ’ ಎನ್ನುತ್ತಾರೆ ಅಲ್ಲಿನ ಶಿಕ್ಷಕರು.

ಸಿರಿಗನ್ನಡ ಶಾಲೆ
ಶಿಕಾಗೊ ಪ್ರದೇಶದಲ್ಲಿ ಸಿರಿಗನ್ನಡ ಶಾಲೆ ನಡೆಸುತ್ತಿರುವ ಅನುಪಮಾ ಮಂಗಳವೇಢೆ ಮುಂದಾಳುತ್ವದ ಶಿಕ್ಷಕ/ಕಿಯರು ಈ ವರ್ಷ ಏಪ್ರಿಲ್‌ನಲ್ಲಿ ಮಕ್ಕಳಿಗೆ ಕನ್ನಡ ಕಲಿಕೆಯ ರೂಪದಲ್ಲಿ ಎಳೆಯರ ರಾಮಾಯಣದಿಂದ ಬಾಲಕಾಂಡ ಮತ್ತು ಅಯೋಧ್ಯಾಕಾಂಡಗಳನ್ನು ಕಲಿಸಿದ ವಿಶಿಷ್ಟ ಪ್ರಯೋಗ ನಡೆಸಿದ್ದಾರೆ. ಮಕ್ಕಳಿಂದ ಮುದ್ದಾದ ಕನ್ನಡ ಕೈಬರಹದಲ್ಲಿ ಚಿಕ್ಕಚಿಕ್ಕ ಟಿಪ್ಪಣಿಗಳನ್ನು ಬರೆಸಿ ಅವುಗಳನ್ನು ಅಲ್ಲಿನ ವಿದ್ಯಾರಣ್ಯ ಕನ್ನಡಕೂಟದ ಸಂಗಮ ಪತ್ರಿಕೆಯಲ್ಲಿ ಯಥಾವತ್ತಾಗಿ ಅಚ್ಚುಮಾಡಿಸಿದ್ದಾರೆ. ನ್ಯೂಜೆರ್ಸಿಯ ಬೃಂದಾವನ ಕನ್ನಡಕೂಟದ ಆಶ್ರಯದಲ್ಲಿ ಕನ್ನಡ ತರಗತಿಗಳನ್ನು ನಡೆಸುತ್ತಿರುವ ಉಮಾಮೂರ್ತಿ ಮತ್ತು ಬಳಗದವರು ಮಕ್ಕಳಿಗೆ ವ್ಯಾಕರಣ ರಚನೆ, ಶಬ್ದಕೋಶ ವಿಸ್ತರಣೆ, ಕಾಗುಣಿತ ಕಾರ್ಯಾಗಾರ ಮುಂತಾದುವುಗಳ ಜೊತೆಜೊತೆಗೇ ದಾಸಸಾಹಿತ್ಯ, ಸಂತ ಶಿಶುನಾಳರ ಕೃತಿಗಳನ್ನೂ ಪರಿಚಯಿಸಿರುವುದಷ್ಟೇ ಅಲ್ಲದೆ ಕುವೆಂಪುರವರ ಜಲಗಾರ ನಾಟಕವನ್ನೂ ಮಕ್ಕಳಿಂದ ಆಡಿಸಿ ಯಶಸ್ವಿಯಾಗಿದ್ದಾರೆ. “ಒಂದೆರಡು ವರ್ಷಗಳ ಹಿಂದೆ ಕನ್ನಡ ಲಿಪಿಯ ಗಂಧವೇ ಇಲ್ಲದಿದ್ದ ಮಕ್ಕಳು, ಈಗ ಸರಾಗವಾಗಿ ಕನ್ನಡದಲ್ಲಿ ಪ್ರಬಂಧಗಳು, ಸಣ್ಣಕಥೆಗಳನ್ನು ಬರೆಯುವುದು ನೋಡಿದರೆ, ಅವರ ಅಜ್ಜ-ಅಜ್ಜಿ ಹಾಗೂ ಕುಟುಂಬದವರೊಂದಿಗೆ ಕನ್ನಡದಲ್ಲಿಯೇ ಮಾತನಾಡುವುದನ್ನು ಕೇಳಿದರೆ, ಮಕ್ಕಳ ಕನ್ನಡ ಕಲಿಕೆಯ ಆಸಕ್ತಿ ಬಗ್ಗೆ ಹೆಮ್ಮೆ ಆಗುತ್ತದೆ’ ಎನ್ನುತ್ತಾರೆ ಉಮಾ.

ನಾರ್ತ್‌ ಕೆರೊಲಿನಾದ ರ್ಯಾಲೆ ಪ್ರದೇಶದಲ್ಲಿ ಕನ್ನಡ ತರಗತಿಗಳನ್ನು ನಡೆಸುತ್ತಿರುವ ಸವಿತಾ ರವಿಶಂಕರ್‌ ತಂಡದವರದು ಸ್ವಲ್ಪ ವಿಭಿನ್ನ ಶೈಲಿ. ಅವರು ಅಗಸ ಆಟ ಈಶ ಉದಯದಂತಹ ಸಾಂಪ್ರದಾಯಿಕ ಪಠ್ಯಕ್ಕಿಂತ ಇಲ್ಲಿ ಅಮೆರಿಕದಲ್ಲಿ ಹುಟ್ಟಿ ಬೆಳೆದ ಮಕ್ಕಳು ಸುಲಭವಾಗಿ ರಿಲೇಟ್‌ ಮಾಡಬಲ್ಲಂಥ ವಸ್ತು-ವಿಷಯಗಳನ್ನೇ ಕನ್ನಡ ಕಲಿಕೆಗೆ ಆಯ್ದುಕೊಳ್ಳುತ್ತಾರೆ. ರೊಟ್ಟಿಯಂಗಡಿ ಕಿಟ್ಟಪ್ಪ ಇಲ್ಲಿ ಪಿಜ್ಜಾ ಅಂಗಡಿ ಪಾಪಣ್ಣ… ಆಗುತ್ತಾನೆ (ಪಾಪಾ ಜಾನ್ಸ್ ಎಂಬ ಪ್ರಖ್ಯಾತ ಪಿಜ್ಜಾ ಕಂಪೆನಿ ಮಕ್ಕಳಿಗೆ ಚಿರಪರಿಚಿತ). ಮೊನ್ನೆ ಅಕ್ಟೋಬರ್‌ 31ರಂದು ಹ್ಯಾಲೋವಿನ್‌ ಆಚರಣೆಯನ್ನೂ ಕನ್ನಡಮಯವಾಗಿಸಿದ ಕ್ರಿಯೇಟಿವಿಟಿ ಅವರದು. ಹ್ಯಾಲೋವಿನ್‌ ಅಂದರೆ ಮಕ್ಕಳು ಮತ್ತು ಅವರೊಂದಿಗೆ ದೊಡ್ಡವರೂ ಭಯಾನಕ ವೇಷಭೂಷಣ ತೊಟ್ಟು ಮುಸ್ಸಂಜೆ ಮನೆಮನೆಗೆ ಹೋಗಿ ಟ್ರಿಕ್‌ ಆರ್‌ ಟ್ರೀಟ… ಮಾಡುವ (ಹೆದರಿಸಲೋ ಅಥವಾ ಕ್ಯಾಂಡಿ ಕೊಡ್ತೀರೋ ಎಂದು ದಬಾಯಿಸುವ) ಕ್ರಮ. ಕನ್ನಡ ತರಗತಿಯಲ್ಲಿ ಪುಟ್ಟ ಮಕ್ಕಳಿಗೆ ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ- ಸ್ವರಾಕ್ಷರಗಳನ್ನು ಬಳಸಿ ಹೆದರಿಸುವ ಸದ್ದು ಹೊರಡಿಸುವ ಸ್ಪರ್ಧೆ, ಕಾಸ್ಟೂಮ್‌ ಅಥವಾ ವೇಷದ ಬಗ್ಗೆ ಮೂರು ಸುಲಭ ವಾಕ್ಯಗಳನ್ನು ಕನ್ನಡದಲ್ಲಿ ಹೇಳುವ ಸ್ಪರ್ಧೆಗಳನ್ನೆಲ್ಲ ಏರ್ಪಡಿಸಿದ್ದರು ಸವಿತಾ! ಈಗ ಇಲ್ಲಿ ಮರಗಳ ಎಲೆ ಉದುರುವ ಕಾಲ (ಫಾಲ್‌ ಸೀಸನ್‌) ಕೂಡ ಆದ್ದರಿಂದ ಎಲೆ ಉದುರುವ ಕಾಲ ಅಂತೊಂದು ಪದ್ಯ ಬರೆದು ಮಕ್ಕಳಿಂದ ಹಾಡಿಸಿದ್ದರು.

ಜಾರ್ಜಿಯಾ ರಾಜ್ಯದ ಮೇರಿಯೇಟಾ ನಗರದಲ್ಲಿ ಕನ್ನಡ ತರಗತಿಗಳನ್ನು ನಡೆಸುತ್ತಿರುವ ಮಂಗಲಾ ಉಡುಪ, ವಾಣಿಶ್ರೀ ರಾವ್‌, ನಾಗಲಕ್ಷ್ಮೀ ಇನಾಂದಾರ್‌, ದೀಪಾ ದೇಸಾಯಿ ಮುಂತಾದವರದೂ ಮಕ್ಕಳಿಗೆ ಕನ್ನಡ ಕಲಿಕೆ ಒಂದು ಹೊರೆ ಅಥವಾ ಶಿಕ್ಷೆ ಅನಿಸದಂತೆ ವಿಶೇಷ ಕಾಳಜಿ ವಹಿಸಿದ್ದಾರೆ. ಟೋಪಿ ಬೇಕಾ ಟೋಪಿ, ಕೆರೆ-ದಡ, ರತ್ತೋ ರತ್ತೋ ರಾಯನ ಮಗಳೆ, ಲಗೋರಿ… ಮುಂತಾದ ಕನ್ನಡ ಸೊಗಡಿನ ಆಟಗಳನ್ನು ಆಡಿಸುತ್ತಾರೆ. ಕೋಡುಬಳೆ, ಧಾರವಾಡಪೇಢಾ, ಪತ್ರೊಡೆ, ಜೋಳದ ರೊಟ್ಟಿ ಇತ್ಯಾದಿಯನ್ನೂ ಕನ್ನಡ/ಕರ್ನಾಟಕದ ಬಗ್ಗೆ ಮಕ್ಕಳಿಗೆ ತಿಳಿಹೇಳಲು ಬಳಸುತ್ತಾರೆ. “ವಾಣಿ ಆಂಟಿ ಮಾಡಿದ ಮೈಸೂರುಪಾಕ್‌ ಕನ್ನಡ ಕ್ಲಾಸ್‌ನಲ್ಲಿ ಎಲ್ಲರೂ ತಿಂದೆವು’, “ಮಂಗಳಾ ಆಂಟಿ ನೀರುದೋಸೆ ಮತ್ತು ಕಾಯಿಚಟ್ನಿ ಮಾಡಿ ನಮಗೆಲ್ಲರಿಗೂ ಕೊಟ್ಟರು ತುಂಬ ಚೆನ್ನಾಗಿತ್ತು’, “ನಮ್ಮ ಅಮ್ಮ ರಾಗಿಮುದ್ದೆ ಜೊತೆ ಬಸ್ಸಾರು ಮಾಡುತ್ತಾರೆ’, “ನಾಗು ಆಂಟಿ ಮಾಡಿದ ಮದ್ದೂರುವಡೆ ಚೆನ್ನಾಗಿತ್ತು’- ಅಂತೆಲ್ಲ ಮಕ್ಕಳಿಂದ ಕನ್ನಡದಲ್ಲೇ ಚಿಕ್ಕಚಿಕ್ಕ ಆಹಾರವಿಮರ್ಶೆಗಳನ್ನೂ ಬರೆಸುತ್ತಾರೆ. ಇದು ಮೇಲ್ನೋಟಕ್ಕೆ ತಮಾಷೆ

ಅಥವಾ ಸಿಲ್ಲಿ ಅನಿಸಬಹುದು, ಆದರೆ ಆಶಯ, ಉದ್ದೇಶ ಗಾಢವೇ. ಅಮೆರಿಕನ್ನಡಿಗ ಮಕ್ಕಳು ಕನ್ನಡ ಕಲಿಯಬೇಕಾದ್ದು ಅಕ್ಷರಜ್ಞಾನ ಗಳಿಸಲಿಕ್ಕಷ್ಟೇ ಅಲ್ಲ, ಅಜ್ಜ-ಅಜ್ಜಿಯೊಡನೆ ಮಾತನಾಡಲಿಕ್ಕಾಗುತ್ತದೆಯೆಂದಷ್ಟೇ ಅಲ್ಲ, ಇಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ “ಕನ್ನಡತನ’ದ ಅಸ್ಮಿತೆ (ಐಡೆಂಟಿಟಿ)ಯನ್ನು ಒದಗಿಸುವ ಜವಾಬ್ದಾರಿಯೂ ಕಲಿಕೆಯ ಹಿಂದಿದೆ.

ಅದಕ್ಕೆಂದೇ “ಕನ್ನಡ ಭಾಷೆಯನ್ನು ಕಲಿಸುವುದರ ಮೂಲಕ ನಮ್ಮ ನಾಡು-ನುಡಿ-ಜಲ-ಸಂಸ್ಕೃತಿಯ ಬಗ್ಗೆ ಚಿಣ್ಣರ ಮನದಲ್ಲಿ ಅಭಿಮಾನ ಮತ್ತು ಆಸಕ್ತಿ ಬೆಳೆಸುವುದು ನಮ್ಮ ಧ್ಯೇಯೋದ್ದೇಶಗಳಲ್ಲೊಂದು’ ಎನ್ನುತ್ತಾರೆ ಉತ್ತರ ಕ್ಯಾರೋಲಿನ ರಾಜ್ಯದ ಷಾರ್ಲೆಟ್‌ನಲ್ಲಿ ನಾಲ್ಕೈದು ವರ್ಷಗಳ ಹಿಂದೆಯಷ್ಟೇ ಆರಂಭವಾಗಿರುವ, ಈಗಿನ್ನೂ 30 ವಿದ್ಯಾರ್ಥಿಗಳಷ್ಟೇ ಇರುವ ಆಟ-ಪಾಠ ಕನ್ನಡಶಾಲೆಯ ಶಿಕ್ಷಕರು. ಷಾರ್ಲೆಟ್‌ ನಗರದ ಇನ್ನೊಂದು ಭಾಗದಲ್ಲಿ ಚಿಗುರು ಕನ್ನಡಶಾಲೆ ನಡೆಸುವ ರಜನೀ ಮಹೇಶ್‌ ಅವರದೂ ಅದೇ ಅಂಬೋಣ. ಅವರು ಕರ್ನಾಟಕದ ಪ್ರಸಿದ್ಧ ಸ್ಥಳ ಮತ್ತು ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಮಕ್ಕಳಿಂದ ಪ್ರಾಜೆಕ್ಟ್ಗಳ ನ್ನು ಮಾಡಿಸುತ್ತಾರೆ. ಯುಗಾದಿ ಮತ್ತು ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳಿಂದ ಕನ್ನಡದಲ್ಲಿ ಹಾಡು, ನಾಟಕಗಳನ್ನು ಮಾಡಿಸುತ್ತಾರೆ. ಕನ್ನಡ ತರಗತಿಯ ಮಕ್ಕಳಿಂದಲೇ ಚಿಗುರು ಚಿಲಿಪಿಲಿ ಎಂಬ ಮಾಸಪತ್ರಿಕೆಯನ್ನೂ ಪ್ರಕಟಿಸುತ್ತಾರೆ. ನ್ಯೂಯಾರ್ಕ್‌ನ ಆಲ್ಬನಿಯಲ್ಲಿ ಕನ್ನಡ ಹೇಳಿಕೊಡುವ ಲತಾ ಕಲಿಯಾತ್‌ ಅವರ ಉತ್ಸಾಹವಂತೂ ವಿಶೇಷವಾಗಿ ಮೆಚ್ಚಬೇಕಾದ್ದು. ಅವರಿಗೀಗ 71 ವರ್ಷ. ಕ್ಯಾನ್ಸರ್‌ ರೋಗವನ್ನು ಗೆದ್ದ ಧೀರೆ. ಪ್ರತಿ ಶುಕ್ರವಾರ ಸಂಜೆ 50 ಮೈಲು ದೂರ ಡ್ರೈವ್‌ ಮಾಡಿಕೊಂಡು ಬಂದು ಮಕ್ಕಳಿಗೆ ಕನ್ನಡ ಪಾಠ ಹೇಳಿಕೊಡುತ್ತಾರೆ.

ಅರಿಜೋನಾ ರಾಜ್ಯದ ಫೀನಿಕ್ಸ್‌ನಲ್ಲಿ ಪ್ರತಿ ವಾರವೂ ಸರದಿಯ ಪ್ರಕಾರ ಒಬ್ಬೊಬ್ಬರ ಮನೆಯಲ್ಲಿ ತರಗತಿಗಳು ನಡೆದರೆ ಪೋರ್ಟ್‌ಲ್ಯಾಂಡ್‌ ರಾಜ್ಯದ ಓರೆಗಾನ್ನಲ್ಲಿ ಬಾಲಾಜಿ ದೇವಸ್ಥಾನದ ಆಶ್ರಯದಲ್ಲಿ ಕನ್ನಡ ತರಗತಿಗಳು. ಅಟ್ಲಾಂಟಾದಲ್ಲಿ ಅರುಣ್‌ ಸಂಪತ್‌ ಅವರ ನೇತೃತ್ವದಲ್ಲಿ ಕಸ್ತೂರಿ ಕನ್ನಡಶಾಲೆ ಆರಂಭಿಸಿದಾಗ ಹತ್ತಿಪ್ಪತ್ತು ಮಕ್ಕಳಷ್ಟೇ ಬರಬಹುದು ಎಂದುಕೊಂಡಿದ್ದರೆ 50ಕ್ಕೂ ಹೆಚ್ಚು ನೋಂದಣಿಗಳಾದುವಂತೆ. ಇನ್ನಷ್ಟು ಪೋಷಕರಿಂದ ನಮ್ಮ ಮಕ್ಕಳನ್ನೂ ಸೇರಿಸಿಕೊಳ್ಳಿ ಎಂಬ ಒತ್ತಾಯ. ವಾಷಿಂಗ್ಟನ್‌ ಡಿಸಿ, ಫ್ಲೋರಿಡಾ, ಟೆಕ್ಸಸ್‌, ಪೆನ್ಸಿಲ್ವೇನಿಯಾ, ಬಾಸ್ಟನ್‌… ಮುಂತಾದ ಪ್ರದೇಶಗಳಲ್ಲೂ ಇಷ್ಟೇ ಬಿರುಸಿನಿಂದ ಕನ್ನಡ ಕಲಿಕೆ ನಡೆಯುತ್ತಿದೆ. ಅಮೆರಿಕದ ಶಿಕ್ಷಣಪದ್ಧತಿಯೊಳಗೆ ಹೈಸ್ಕೂಲ್‌ ಮಟ್ಟದಲ್ಲಿ ಕನ್ನಡವನ್ನು ದ್ವಿತೀಯ ಭಾಷಾವಿಷಯವಾಗಿ ಕಲಿಯುವ ಅವಕಾಶ ಕಲ್ಪಿಸಲು ಸ್ಥಳೀಯ ಕೌಂಟಿಗಳ ಆಡಳಿತ ಮಂಡಳಿಯೊಂದಿಗೆ ಮಾತುಕತೆ ಕೂಡ.

ಅಂತೂ ಅಲ್ಲಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ಶಾಲೆಗಳ ದೈನೇಸಿ ಸ್ಥಿತಿಗತಿಗಳು, ಕನ್ನಡ ಕಲಿಕೆ ಕಡ್ಡಾಯ ಪರ-ವಿರೋಧ, ಕನ್ನಡಕ್ಕೆ ಇನ್ನೂ ಐವತ್ತೇ ವರ್ಷ ಆಯುಷ್ಯ ಅಂತೆಲ್ಲ ಚರ್ಚೆಗಳು ಆಗುತ್ತಿರುವಾಗಲೇ ಇಲ್ಲಿ ಅಮೆರಿಕದಲ್ಲಿ ಕನ್ನಡ ಕಲಿಕೆಯ ಕ್ರಾಂತಿಯೊಂದು ತಣ್ಣಗೆ ಸದ್ದಿಲ್ಲದೇ ನಡೆಯುತ್ತಿದೆ !

ಶ್ರೀವತ್ಸ ಜೋಶಿ, ವಾಷಿಂಗ್ಟನ್‌ ಡಿಸಿ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.