ಆದೇವು ನಾವು ವಿಷ ಮುಕ್ತ ಮುಕ್ತ…
Team Udayavani, Nov 4, 2019, 4:03 AM IST
ಪ್ರತಿ ವರ್ಷ ಎಣ್ಣೆ ತೆಗೆಯಲು ಬೇಕಾಗುವಷ್ಟು ಶೇಂಗಾ, ಸೂರ್ಯಕಾಂತಿ ತಮ್ಮಲ್ಲಿಯೇ ಬೆಳೆಯುತ್ತಾರೆ. ಪ್ರತಿ ಬೆಳೆಯ ಬೀಜಗಳನ್ನೂ ಬೀಜಾಮೃತದಿಂದ ಉಪಚರಿಸಿ ಬಿತ್ತನೆ, ಬೆಳವಣಿಗೆಯ ಹಂತದಲ್ಲಿ ಜೀವಸಾರ, ಜೀವಾಮೃತಗಳನ್ನು ಪೂರೈಸಿದ್ದಾರೆ. ಮಿಶ್ರಬೆಳೆ ಇಡುವುದರಿಂದ ಕೀಟ/ ರೋಗ ಕಡಿಮೆ.
“ಹೋದ ವಾರ ಕನ್ನೇರಿ ಕಾಡಸಿದ್ದೇಶ್ವರ ಮಠದಾಗ ಶೇತ್ಕಿ ಜಾತ್ರಿ ಇತ್ತರೀ. ಅಲ್ಲಿ ಒಯ್ನಾಕಂತ ಘನ ಜೀವಾಮೃತ, ದ್ರವ ಜೀವಾಮೃತ. ಎರೆಗೊಬ್ಬರ, ಗೋ ಅರ್ಕ, ಶೇಂಗಾ ಎಣ್ಣಿ, ಕೊಬ್ರಿ ಎಣ್ಣಿಗೊಳ ಮಾದರಿ ಮತ್ತ ಹೆಸರು, ಉದ್ದು, ಕಡಲೆ ಬೇಳೆ ನವಣೆ, ಸಾಮೆ ಅಕ್ಕಿ ಪಾಕೇಟ್ ಮಾಡಿಕೊಂಡ ಹೋಗಿದ್ದೆ. ಇಲ್ಲಿ ಆವ ನೋಡ್ರಿ…’ ಎನ್ನುತ್ತಾ ಸೀಲ್ ಮಾಡಿದ ಮಾದರಿಗಳನ್ನು ತೋರಿಸುತ್ತಾ ವಿವರಣೆ ನೀಡುತ್ತಿದ್ದರು ಆ ಉತ್ಸಾಹಿ ಯುವ ಕೃಷಿಕ.
ಅವರೇ ಹುಕ್ಕೇರಿ ತಾಲೂಕಿನ ಗಡಿಯಂಚಿನ ಕಣಗಲಾ ಗ್ರಾಮದ ಭೀಮಸೇನ ತುಕಾರಾಮ ನಾಯಕ. ಕಳೆದ 18 ವರ್ಷಗಳಿಂದ ಸಂಪೂರ್ಣ ವಿಷಮುಕ್ತ ಕೃಷಿ ಪದ್ಧತಿ ಪಾಲಿಸುತ್ತಾ ಬಂದ ತಂದೆ ತುಕಾರಾಮ್ ಅವರಿಗೆ ಹೆಗಲು ನೀಡಿ 10 ವರ್ಷಗಳಿಂದ ಕೃಷಿ ಹೊಣೆ ನಿಭಾಯಿಸುತ್ತಿದ್ದಾರೆ ಭೀಮಸೇನ. ಐಟಿಐ ಓದಿರುವ ಇವರದು 8 ಎಕರೆ ಜಮೀನು. ನೀರಿನ ಮೂಲ, ಎರಡೂವರೆ ಇಂಚು ನೀರು ಹರಿಸುವ ಕೊಳವೆ ಬಾವಿ. ಬೆಳೆಗಳಿಗೆ ಹನಿ ನೀರು ಉಣಿಸುವ ಸೌಲಭ್ಯ ಮಾಡಿಕೊಂಡಿದ್ದಾರೆ. ಶೇಂಗಾ, ಸೋಯಾ ಅವರೆ, ಗೋವಿನ ಜೋಳ, ಜೋಳ, ಕಡಲೆ, ಹೆಸರು, ಉದ್ದು ಜವೆಗೋದಿ ಹಾಗೂ ಕಬ್ಬು ಮುಖ್ಯ ಬೆಳೆಗಳು.
ಮಿಶ್ರಬೆಳೆಗೆ ಆದ್ಯತೆ: ಎರಡು ಎಕರೆ ಜಮೀನಿನಲ್ಲಿ ಸೋಯಾ ಅವರೆ ಬೆಳೆಯುತ್ತಿದ್ದಾರೆ. ಅಲ್ಲಿ, 2:2 ಅನುಪಾತದಲ್ಲಿ ಹೆಸರು, ಉದ್ದು, ಶೇಂಗಾ ಬಿತ್ತನೆ ಮಾಡಿದ್ದಾರೆ. ಬದುವಿನಂಚಿನಲ್ಲಿ ಒಂದೆಡೆ ನವಣೆ, ಇನ್ನೊಂದೆಡೆ ಮೇವಿನ ಜೋಳ ಬೆಳೆದಿದ್ದಾರೆ. ಇನ್ನೊಂದು ಎಕರೆಯಲ್ಲಿ ಸೋಯಾ ಅವರೆಯಲ್ಲಿ 2:2 ಅನುಪಾತದಲ್ಲಿ ಸಾವೆ, ನವಣೆ, ಬರಗು, ಊದಲು ಹಾಗೂ ಹಾರಕ ಬೆಳೆದಿದ್ದಾರೆ. ಶೇಂಗಾದಲ್ಲಿ ಉದ್ದು, ಹೆಸರು ಹಾಗೂ ಗೋವಿನ ಜೋಳದಲ್ಲಿ ನವಣೆ ಬೆಳೆ ತೆಗೆದಿದ್ದಾರೆ. ಪ್ರತಿ ವರ್ಷ ಎಣ್ಣೆ ತೆಗೆಯಲು ಬೇಕಾಗುವಷ್ಟು ಶೇಂಗಾ, ಸೂರ್ಯಕಾಂತಿ ತಮ್ಮಲ್ಲಿಯೇ ಬೆಳೆಯುತ್ತಾರೆ.
ಪ್ರತಿ ಬೆಳೆಯ ಬೀಜಗಳನ್ನೂ ಬೀಜಾಮೃತದಿಂದ ಉಪಚರಿಸಿ ಬಿತ್ತನೆ, ಬೆಳವಣಿಗೆಯ ಹಂತದಲ್ಲಿ ಜೀವಸಾರ, ಜೀವಾಮೃತಗಳನ್ನು ಪೂರೈಸಿದ್ದಾರೆ. ಮಿಶ್ರಬೆಳೆ ಇಡುವುದರಿಂದ ಕೀಟ/ ರೋಗ ಕಡಿಮೆ. ಉದುರುವ ತಪ್ಪಲು ಮಣ್ಣಿಗೆ ಉತ್ತಮ ಗೊಬ್ಬರ, ಬೆಳೆಯೂ ಚೆನ್ನಾಗಿ ಬರುತ್ತದೆ ಎನ್ನುವುದು ಭೀಮಸೇನ ಅವರ ಅಭಿಪ್ರಾಯ. ಮನೆಯ ಪಕ್ಕ ಇರುವ 10 ಗುಂಟೆ ಜಮೀನಿನಲ್ಲಿ ಬದನೆ, ಟೊಮೆಟೊ, ಹಸಿಮೆಣಸಿನಕಾಯಿ, ಮೆಂತ್ಯೆ, ಪಾಲಕ್, ಕೊತ್ತಂಬರಿ ಬೆಳೆದು ಸ್ಥಳೀಯ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಬೆಲ್ಲ ತಯಾರಿಕೆಗೆಂದೇ ಅರ್ಧ ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ.
ನೇರ ಮಾರಾಟದಿಂದ ಲಾಭ: ತಾವು ಬೆಳೆದ ಎಣ್ಣೆಕಾಳು, ದ್ವಿದಳ ಧಾನ್ಯ, ಕಿರುಧಾನ್ಯ ಸಂಸ್ಕರಿಸಲು, ವಿವಿಧ ಮಾದರಿ ಹಾಗೂ ಸಾಮರ್ಥ್ಯದ ಗಿರಣಿ ಸ್ಥಾಪಿಸಿದ್ದಾರೆ. ಸಂಸ್ಕರಿಸಿದ ರವೆ, ಹಿಟ್ಟು, ಎಣ್ಣೆ, ಬೇಳೆ, ಸಾಮೆ, ನವಣೆ, ಬರಗು ಬೆಲ್ಲ, ಕಾಕಂಬಿಯನ್ನು ಮಾರಾಟ ಮಾಡುತ್ತಾರೆ. ಮೌಲ್ಯವರ್ಧನೆಯಿಂದ ವಾರ್ಷಿಕ ಎರಡು ಲಕ್ಷ ಆದಾಯ ದೊರೆಯುತ್ತದೆ. ದಿನದ ಖರ್ಚಿಗೆ ತರಕಾರಿ, ವಾರದ ಸಂತೆಗೆ ಹೈನು, ತ್ರೆçಮಾಸಿಕ, ವಾರ್ಷಿಕ ಆದಾಯಕ್ಕೆ ಕೃಷಿ ಬೆಳೆಗಳು ಸಹಕಾರಿ ಎನ್ನುತ್ತಾರೆ ತಂದೆ ತುಕಾರಾಮ್ ನಾಯಕ.
“ಶೇತ್ಕಿ ಮೊದಲಿನಾಂಗ ಇಲ್ಲ. ಭಾಳ ಲಾಗ್ವಾಡ ಹಾಕಿ, ಔಷಧ ಹೊಡದ ಬೆಳಿ ತಗಿತೇನಿ ಅನ್ನೂದು ಕನಸಿನ ಮಾತ. ಶೇತ್ಕಿಗೆ ಮಾಡೋ ಖರ್ಚ ಕಡಿಮಿ. ಆದರ ಅದ ನಮಗ ಲಾಭ. ಬೆಳೆದ ಮಾಲಿನಿಂದ ಬಳಕೆಗೆ ಸಿಗೋವಂಥ ಪದಾರ್ಥ ತಯಾರಿಸಿ, ಮಾರಿದರ ಮೂರ ಪಟ್ಟು ದರ ಸಿಗತೇತಿ. ನಾವ ಬೆಳೆದಿದ್ದಕ್ಕ ನಾವ ದರ ಕಟ್ಟಾಕ ಸಾಧ್ಯ’ ತಾವು ಮಾಡುತ್ತಿರುವ ಮೌಲ್ಯವರ್ಧನೆ, ನೇರ ಮಾರಾಟ ಕುರಿತು ಹೀಗೆ ಅನಿಸಿಕೆ ವ್ಯಕ್ತಪಡಿಸುವ ಭೀಮಸೇನ, “ಸಮೀಪದ ಕೊಲ್ಲಾಪುರ, ನಮಗೆ ಉತ್ತಮ ಮಾರುಕಟ್ಟೆ’ ಎನ್ನುತ್ತಾರೆ.
ಸಾವಯವ ಒಳಸುರಿಗಳ ಬಳಕೆ: ಮೂರು ದೇಸಿ ಆಕಳು, 2 ಕರುಗಳಿದ್ದು ಪ್ರತಿ ದಿನ 2 ಲೀಟರ್‌ನಂತೆ ಗಂಜಲ ಸಂಗ್ರಹಿಸಿ ವಾರಕ್ಕೊಮ್ಮೆ ಅರ್ಕ ತಯಾರಿಸುತ್ತಾರೆ. ಇದಕ್ಕಾಗಿಯೇ ವಿಶೇಷವಾದ ಪುಟ್ಟ ಕಂಡೆನ್ಸರ್ ಹೊಂದಿರುವ ಬಾಯ್ಲರ್ ಘಟಕವಿದ್ದು, 12 ಲೀಟರ್ ಗಂಜಲದಿಂದ 3 ಲೀಟರ್ ಶುದ್ಧ ಅರ್ಕ ಸಿಗುತ್ತದೆ ಎನ್ನುತ್ತಾರೆ ಭೀಮಸೇನ. ಅರ್ಧ ಲೀಟರ್‌ಗೆ ರೂ. 80ನಂತೆ ಮಾರಾಟ ಮಾಡುತ್ತಾರೆ.
2 ಎಮ್ಮೆ, 2 ಕರು, 6 ಆಡುಗಳು ಮನೆಗೆ ಹೈನು ಒದಗಿಸುವುದರೊಂದಿಗೆ ಕುಟುಂಬದ ಆರ್ಥಿಕ ನಿರ್ವಹಣೆಗೆ ಸಹಕಾರಿಯಾಗಿವೆ. ಸಗಣಿ, ಗಂಜಲು ಬಳಸಿ ನೀಮಾಸ್ತ್ರ, ಅಗ್ನಿಅಸ್ತ್ರ, ದಶಪರ್ಣಿ, ಘನ ಹಾಗೂ ದ್ರವ ಜೀವಾಮೃತ, ಬೀಜಾಮೃತ, ಪಂಚಗವ್ಯದಂಥ ಒಳಸುರಿಗಳನ್ನು ತಯಾರಿಸಿ ಬೆಳೆಯ ಆರೋಗ್ಯ ಕಾಯ್ದುಕೊಳ್ಳುತ್ತಿದ್ದಾರೆ. ಜೀವಸಾರ ಘಟಕ ಇದ್ದು, ಹನಿ ನೀರಿನ ಮೂಲಕ ಬೆಳೆಗೆ ಲಭ್ಯವಾಗುವಂತೆ ಅನುಕೂಲ ಮಾಡಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗೆ: 9741780580
* ಚಿತ್ರ- ಲೇಖನ: ಶೈಲಜಾ ಬೆಳ್ಳಂಕಿಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.