ಪರಿಹಾರ ಕೇಳಿದ್ದು 200 ಕೋಟಿ, ಕೊಟ್ಟಿದ್ದು 50 ಕೋಟಿ!
Team Udayavani, Nov 4, 2019, 3:09 PM IST
ಕೊಪ್ಪಳ: ಮಳೆಯಿಲ್ಲದೇ ಬರದಿಂದ ಬೆಂದು ನೊಂದು, ನಷ್ಟ ಅನುಭವಿಸಿ ಸರ್ಕಾರದ ಮುಂದೆ ಬರ ಪರಿಹಾರಕ್ಕೆ ಕೈ ಚಾಚಿ ನಿಂತ ರೈತ ಸಮೂಹಕ್ಕೆ ರಾಜ್ಯ ಸರ್ಕಾರ ಪುಡಿಗಾಸು ಹಣ ನೀಡಿ ಕೈತೊಳೆದುಕೊಂಡಿದೆ. ಜಿಲ್ಲಾಡಳಿತ 2018-19ನೇ ಸಾಲಿನ ಬರ ಪರಿಹಾರ 200 ಕೋಟಿ ರೂ. ಕೇಳಿದ್ದರೆ, ಸರ್ಕಾರ ಈವರೆಗೂ ಬರಿ 50 ಕೋಟಿ ಕೊಟ್ಟಿದೆ.
ಜಿಲ್ಲೆಯು ಪದೇ ಪದೆ ಬರಕ್ಕೆ ತುತ್ತಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದ್ದು, ಕೃಷಿ ವಲಯವು ದೊಡ್ಡ ಗಂಡಾಂತರ ಎದುರಿಸುತ್ತಿದೆ. ಅಂತರ್ಜಲ ಮಟ್ಟ ಕುಸಿತ ಕಾಣುತ್ತಿದ್ದು, ರೈತ ಸಮೂಹಕ್ಕೆ ದಿಕ್ಕು ತಿಳಿಯದಂತಾಗುತ್ತಿದೆ.
ಕಳೆದ 18 ವರ್ಷದ ಲೆಕ್ಕಾಚಾರದಲ್ಲಿ ಜಿಲ್ಲೆ 12 ವರ್ಷ ಬರವನ್ನೇ ಕಂಡಿದೆ ಎಂಬುದನ್ನು ಇಲಾಖೆ ಅಂಕಿ ಅಂಶವೇ ಹೇಳುತ್ತಿದೆ. ಬರದ ಸ್ಥಿತಿಯಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪುಡಿಗಾಸು ನೀಡಿ ಕೈತೊಳೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ 2018-19ನೇ ಸಾಲಿನಲ್ಲಿ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಎದುರಾಯಿತು. 2.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆ ಸಂಪೂರ್ಣ ಹಾನಿಯಾಗಿ ಬಿತ್ತನೆ ಮಾಡಿದ ಖರ್ಚು ಸಹಿತ ರೈತರಿಗೆ ಸಿಗದಂತಹ ಸ್ಥಿತಿ ಎದುರಾಗಿ ಅನ್ನದಾತ ಕಣ್ಣೀರಿಡುವಂತಾಯಿತು.
ತುತ್ತಿನ ದುಡಿಮೆಗೆ ದೂರದ ಊರಿಗೆ ಗುಳೆ ಹೋಗಿ ಹೊಟ್ಟೆ ಜೀವನ ತುಂಬಿಸಕೊಳ್ಳುವಂತಹ ಪರಿಸ್ಥಿತಿ ಎದುರಾಯಿತು. ಜಿಲ್ಲಾಡಳಿತ ಸರ್ವೇ ಮಾಡಿ ಆಗ ಜಿಲ್ಲೆಯಲ್ಲಿನ ಬೆಳೆ ಹಾನಿ ಲೆಕ್ಕಾಚಾರ ಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಸರ್ಕಾರ ಕೇಂದ್ರದ ಗಮನ ಸೆಳೆದಾಗ ಕೇಂದ್ರ ಬರ ಅಧ್ಯಯನ ತಂಡವು ಜಿಲ್ಲೆಗೆ ಆಗಮಿಸಿ ಜಿಲ್ಲೆಯಲ್ಲಿನ ವಾಸ್ತವ ಸ್ಥಿತಿ ಅರಿತು ಕೇಂದ್ರಕ್ಕೂ ವರದಿ ನೀಡಿತು.
ಜಿಲ್ಲಾಡಳಿತ ಮುಂಗಾರಿನ 1,92,542 ಹೆಕ್ಟೇರ್ ಬೆಳೆ ಹಾನಿಗೆ 120 ಕೋಟಿ ರೂ. ಪರಿಹಾರ, ಹಿಂಗಾರಿನಲ್ಲಿ 1,21,608 ಹೆಕ್ಟೇರ್ ಬೆಳೆ ಹಾನಿಗೆ 80 ಕೋಟಿ ರೂ. ಪರಿಹಾರ ಬಿಡುಗಡೆಗೆ ಸರ್ಕಾರಕ್ಕೆ ವರದಿ ಮಾಡಿತ್ತು. ಅಂದರೆ ಹಿಂಗಾರು-ಮುಂಗಾರು ಸೇರಿ ಜಿಲ್ಲೆಗೆ 200 ಕೋಟಿ ರೂ. ಪರಿಹಾರ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿತ್ತು. ಆದರೆ ಸರ್ಕಾರ ಕೇಳಿದ್ದರಲ್ಲಿ ಶೇ.25 ಮಾತ್ರ ಪರಿಹಾರ ನೀಡಿದೆ. ಜಿಲ್ಲಾಡಳಿತ ಕೇಳಿದ್ದ 200 ಕೋಟಿ ಪರಿಹಾರಕ್ಕೆ ಸರ್ಕಾರ 50 ಕೋಟಿಯಷ್ಟು ಪರಿಹಾರ ಮಾತ್ರ ಈವರೆಗೂ ರೈತರ ಖಾತೆಗೆ ಜಮೆ ಮಾಡಲಾಗಿದೆ. ಉಳಿದಂತೆ 150 ಕೋಟಿಯಷ್ಟು ಪರಿಹಾರ ಬರುತ್ತದೆ ಎನ್ನುವ ಮಾತು ಕೇಳಲಾಗಿದೆ ವಿನಃ ಇನ್ನೂ ಪರಿಪೂರ್ಣ ಪರಿಹಾರ ರೈತರ ಖಾತೆಗೆ ಬಂದಿಲ್ಲ.
ಮುಂಗಾರಿನಲ್ಲಿ 27,890 ರೈತರಿಗೆ 24.34 ಕೋಟಿ ಬಿಡುಗಡೆ ಮಾಡಿದ್ದರೆ, ಹಿಂಗಾರಿನಲ್ಲಿ 43,865 ರೈತರಿಗೆ 29.70 ಕೋಟಿ ರೂ. ಪರಿಹಾರ ಬಂದಿದೆ. ಸರ್ಕಾರವು ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ, ಪ್ರತಿ ಹೆಕ್ಟೇರ್‌ಗೆ 10,800 ನಂತೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ.
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.