ಸುಂದರ ಸರೋವರಗಳು ನಿನ್ನ ಎರಡು ಕಣ್ಣು…
Team Udayavani, Nov 5, 2019, 4:27 AM IST
ಹಿಂದಿನ ಸೀಟಿನಲ್ಲಿ ಐದಾರು ವರ್ಷದ ಮಗು, ಹಸಿವೆಗೆ ಅಳಲು ಮೊದಲಿಟ್ಟಿತು, ಬ್ಯಾಗಿನಲ್ಲಿದ್ದ ಬಿಸ್ಕೆಟ್ ಬಾಯಲ್ಲಿಡುವ ತಾಯಿಯ ಪ್ರಯತ್ನ ಉಪಯೋಗವಾಗಲಿಲ್ಲ. ಹೆಚ್ಚು ಓದಿಕೊಂಡವಳಲ್ಲದ ಆಕೆ, ಸುತ್ತಾ ಕಣ್ಣು ಹಾಯಿಸಿದರೆ ಗೋಚರಿಸಿದವ ಕಡುಗತ್ತಲ ಮಧ್ಯ ತಿಳಿ ಬಿಳುಪಿನ ಚಂದ್ರಮ. ಅವನನ್ನೇ ತನಗೆ ತಿಳಿದಂತೆ ತೋರಿಸಿದ್ದಕ್ಕೆ, ಒಂದೆರಡು ಬಿಸ್ಕೆಟ್ ಆ ಮಗುವಿನ ಹೊಟ್ಟೆಗಳಿದವು.
ಬಸ್ಸಿನ ಗಾಲಿ ಒಂದು ಸುತ್ತು ಉರುಳುವಷ್ಟರಲ್ಲೇ ಮತ್ತೂಂದು ಬ್ರೇಕ್. ಬಿಟ್ಟು ಬಿಡದ ಮಳೆ- ಟ್ರಾಫಿಕ್- ರಾತ್ರಿ ಲೇಟ್- ಹಸಿವು- ಆಫೀಸ್ ಜಗಳ= ಇವೆಲ್ಲಾ ಸೇರಿ ಜರ್ಜರಿತವೆನಿಸಿತ್ತು. ಬಸ್ ಮುಂದಕ್ಕೆ ಕದಲುತ್ತಿಲ್ಲ, ಬರಿ ಚಡಪಡಿಕೆ- ಒಂದೇ ಏಟಿಗೆ ಮುಖ ತೊಳೆದು ಒಂದಷ್ಟು ಹೊಟ್ಟೆಗೆ ತುಂಬಿಕೊಂಡು ಹಾಸಿಗೆ ಮೇಲೆ ಬಿದ್ದರೆ ಸಾಕು ಎಂಬುದೊಂದೇ ಆ ಗಳಿಗೆಗೆ ಪದೇ ಪದೆ
ಸುಳಿಯುತ್ತಿದ್ದ ಕನವರಿಕೆ. ಇದನ್ನು ಇನ್ನಷ್ಟು ತೀವ್ರಗೊಳಿಸಲೆಂದೇ ಹಠತೊಟ್ಟಂತಿದ್ದ ಬಸ್ ಇನ್ನಷ್ಟು ನಿಧಾನವಾಯ್ತು..
ಸುತ್ತಲೊಮ್ಮೆ ಕಣ್ಣಾಯಿಸಿದರೆ, ಬಸ್‌ನಲ್ಲಿದ್ದ ಸುಮಾರು ಶೇ. 60 ರಷ್ಟು ಜನ ಮೊಬೈಲ್ ಲೋಕದ ಆಶ್ರಿತರು, ಇನ್ನೂ ಶೇ 20 ಇದೇ ಹಾಸಿಗೆ ಎಂಬಂತೆ ನಿದ್ರಾ ಲೋಕದಲ್ಲಿದ್ದಾರೆ. ಗಾಢಮೌನ ಆವರಿಸಿದ ಬಸ್ಸು, ದಿಕ್ಕು ತೋಚದೆ ಕಿಟಕಿಯತ್ತ ಕಣ್ಣಾಯಿಸಿದೆ. ಅದೇ ಕತ್ತಲ ಮಳೆ -ಕೆಸರು , ಕಾರ್ಗತ್ತಲ ಕಪ್ಪು ಮೋಡದ ಮಧ್ಯೆ ತುಸು ತುಸುವೇ ಕಾಣುತ್ತಾ ತೇಲುತ್ತಿದ್ದ ಚಂದ್ರ.. ಆ ಗಳಿಗೆ ಸುಳಿದ ಗಾಢಭಾವನೆಗೆ ಶಬ್ದದ ರೂಪ ಹೊಳೆಯಲಿಲ್ಲ. ತೆಂಕಣದ ಗಾಳಿಯಲ್ಲಿ ಪರಿಚಿತ ಅನೂಹ್ಯತೆ ಭಾಸವಾದಂತೆ.. ತಂಪೆನೆಸಿತು
ಸುತ್ತಲಿರುವ ಕಲ್ಲು -ಮಣ್ಣು, ಬೆಟ್ಟ, ಗುಡ್ಡ, ಸೂರ್ಯ-ಚಂದ್ರರಲ್ಲಿ ಮನುಷ್ಯ, ತನ್ನ ಮನಃಸ್ಥಿತಿಯನ್ನೇ ಕಾಣುತ್ತಾನೆ..
ಸೂರ್ಯನ ಚಿನ್ನದ ಕಿರಣ ನಿನ್ನ ಮೈಯ ಬಣ್ಣ
ಮಿಂಚಿದೆ ಮಿಂಚುತ ಮಿನುಗಿದೆ
ಸುಂದರ ಸರೋವರಗಳು ನಿನ್ನ ಎರಡು ಕಣ್ಣು
ಕಣ್ಣಲಿ ವಿರಹವೇ ತುಂಬಿದೆ
ಹೀಗೆ, ನಮ್ಮ ಮನಃಸ್ಥಿತಿಯಂತೆ ಗೋಚರಿಸುವ ಪ್ರಕೃತಿಯಲ್ಲಿ ತುಂಬಾ ಕಥೆ, ಕಾದಂಬರಿ- ಕಾವ್ಯಧಾರೆಯ ತುಂಬೆಲ್ಲಾ ಅತೀ ಹೆಚ್ಚು ಆಧಾರವಾದವನು ಈ ಚಂದ್ರಮನೇ. ಮನಸು ಅರಳಿದಾಗ ತಂಪೆನಿಸಿದರೆ, ಜರ್ಜರಿತಗೊಂಡಾಗ ಏಕಾಂಗಿಯಾಗಿ ಕಾಣುತ್ತಾನೆ. ಅವನು ಕೂಸಾಗಿ¨ªಾಗ ಅವನನ್ನೇ ನೋಡಿ ತುತ್ತುಗಳ ಮೆಲ್ಲುವ ಅದೇ ಬಾಲ್ಯದಲ್ಲಿ, ಚಂದಾಮಾಮನ ಕತೆಯಾಗಿ ಜೊತೆಯಾಗುವ ಚಂದ್ರ, ಪ್ರೌಢಾವಸ್ಥೆಯಲ್ಲಿ ಮನಸು ತುಂಬಿಕೊಂಡವರ ಪ್ರತಿಬಿಂಬವಾಗಿ ಉತ್ತರಿಸುತ್ತಾನೆ. ಇವನೆ, ದೊಡ್ಡ ಪೆಟ್ಟು ತಿಂದಾಗ ಇಡೀ ಇಡಿ ಆಗಸದಲ್ಲಿ ಏಕಾಂಗಿಯಾಗಿ ಅಲೆಯುವಂತೆ ಕಾಣಿಸಿಕೊಳ್ಳುತ್ತಾನೆ.
ಅಮ್ಮಬಟ್ಟಲಲ್ಲಿ ಊಟ ತುಂಬಿಕೊಂಡು ನಾವು ಮೂರ್ನಾಲ್ಕು ಜನ ಕಾಪೌಂಡ್ ಒಳಗೆ ಹೊಂವರ್ಕ್ ಮುಗಿಸಿ ಆಡುತ್ತಿದ್ದರೆ, ಚಂದ್ರಮನನ್ನು ತೋರಿಸಿ ಕತೆಗಳೊಂದಿಗೆ ತುತ್ತಿಡುತ್ತಿದ್ದರೆ, ಎರಡು ಮೂರು ಬಟ್ಟಲು ಖಾಲಿಯಾಗುತ್ತಿದ್ದವು, ತಿಂದೆವು ಅಂತಲೇ ಗೊತ್ತಾಗುತ್ತಿರಲಿಲ್ಲ. ನಮ್ಮ ತಲೆಮಾರಿನ ಅದೆಷ್ಟೋ ಮಕ್ಕಳ ಆರೋಗ್ಯದ ಹಿಂದಿನ ರಹಸ್ಯ-ಈ ಚಂದ್ರಮ!!
ಚಂದಮಾಮ ಚಕ್ಕುಲಿ ಮಾಮ ನನ್ನನೆ ನೋಡಿ ನಗುತಿರುವ..
ಓ ಡಿಡಲ್ ಓ ಡಿಡಲ್,
ದ ಕ್ಯಾಟ್ ಇನ್ ದ ಫಿಡಲ್,
ದ ಕೌ ಜಂಪ್ಡ್ ಓವರ್ ದ ಮೂನ್..
ಇಂಥ ಚಂದ್ರನ ಹಾಡುಗಳನ್ನ ಹೇಳುತ್ತಲೇ ಬೆಳೆದಿದ್ದೇವೆ.
ಎರಡು-ಮೂರನೇ ತರಗತಿಯಿಂದಲೇ ಚಂದಮಾಮ ಕತೆಗಳ ಓದದೇ ಬೆಳೆದ ಮಕ್ಕಳೇ ಇರಲಾರರೇನೋ. ಆ ವಯಸ್ಸಿನ ಮಕ್ಕಳ ಕಲ್ಪನೆಗೆ ಎರಕ ಹೊಯ್ಯುವಂತೆ ಬರುವ ಪಾತ್ರಗಳನ್ನು ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತಲೇ ಬೆಳೆದಿದ್ದೇವೆ.
ನಮ್ಮಲ್ಲಿ ಉಕ್ಕುವ ಎಲ್ಲಾ ಭಾವನೆಗಳ ಸ್ಫೋಟದ ಹೆಸರಾಗಿ, ಎಲುಬಿನ ಹಂದರವೊಂದಕ್ಕೆ ಏಕಾಏಕಿ ಜೀವ-ಪ್ರಾಣವಾಯು ತುಂಬಿದಂತೆನಿಸುವ ಇಂಥದ್ದೊಂದು ಭಾವದ ಅಭಿವ್ಯಕ್ತಿಗೆ ಪದಗಳ ಅಭಾವವೆಸುವುದು. ಇಂಥ ಸಂದರ್ಭದಲ್ಲೂ ಚಂದ್ರನೇ ಆಸರೆ..
ಚಾಂದ್ ಛುಪಾ ಬಾದಲ್ ಮೇ..ಶರ್ಮಾ ಕೇ ಮೇರಿ ಜಾನಾ..
ಕೋಯಾ ಕೋಯಾ ಚಾಂದ್ ಕುಲಾ ಆಸಮಾ
ಆಂಖೊಮೆ ಕೈಸಿ ನೀ..ದ್ ಆಯೆಗೀ
ಇಂತ ವರ್ಣನೆಗಳಲ್ಲಿ ಯಾರದೋ ಭಾವನೆಗಳಲ್ಲಿ ಕಳೆದು ಹೋದ ಅಪರಿಮಿತತೆಯನ್ನು ಬಿಂಬಿಸುತ್ತದೆ. ಒಡೆದ ಪ್ರೇಮಗಳ ಹೊಣೆಯೂ ಈ ಚಂದಿರನದ್ದೇ. ಆತನೇ ಕಾರಣ ಎನ್ನುವಂಥ ಹಾಡುಗಳು..
ಬಾಳ ದಾರಿಯಲಿ ಬೇರೆಯಾದರೂ
ಚಂದಿರ ಬರುವನು ನಮ್ಮ ಜೊತೆ
ಕಾಣುವೆನು ಅವನಲೇ ನಿನ್ನನು …
ಸುತ್ತಲೂ ಎಲ್ಲಾ ಇದ್ದು ಯಾರೂ ಇಲ್ಲ ಅನ್ನಿಸಿಬಿಡುವ, ಇಡೀ ಜಗವೇ ನೀನು ಅಂದುಕೊಂಡಂಥವರು ನಂಬಲಸಾಧ್ಯ ರೀತಿಯಲ್ಲಿ ಕೈಬಿಟ್ಟಾಗ, ಸುಪ್ತ ಮನಸಿಗೆ ಬೀಭತ್ಸ ಮೆತ್ತಿಕೊಂಡಾಗ, ಬೆಳದಿಂಗಳು ಪ್ರಪಂಚದ ದುಃಖ-ದುಗುಡಗಳನ್ನು ಅದ್ದಿ ನೆನೆಸಿದ ಬೆಳಕು. ಭಾರಗತಿಯಲ್ಲಿ ಚಂದ್ರ ಚಲಿಸುತ್ತಿದ್ದಾನೆ ಅನ್ನಿಸದಿರದು.
ಮನುಷ್ಯ ಇಡೀ ಬದುಕಿನಲ್ಲಿ
ಭರಿಸಬಹುದಾದ ದುಃಖವನ್ನು
ಚಂದ್ರ ತನ್ನ ಒಂದು ಬೆಳದಿಂಗಳಲ್ಲಿ ಹರಿಸುತ್ತಾನಾ..
ಅನ್ನುವ ಸಾಲುಗಳು ಚಂದಿರನ ಚಲನೆಯೊಂದಿಗಿನ ಅಖಂಡ ದುಃಖದ ತಪ್ಪಲುಗಳನ್ನು ನೇಯ್ದುಕೊಂಡಿವೆ..
ಭಾದ್ರಪದ ಶುಕ್ಲದ ಚೌತಿಯ ದಿನ ಚಂದ್ರನ ದರ್ಶನ ನಿಷಿದ್ದ ಎನ್ನುವ ಶಾಸ್ತ್ರವಿದ್ದರೆ, ಅದೇ ಸಂಕಷ್ಟ ಚತುರ್ಥಿಯ ದಿನ ಇದೇ ಚಂದ್ರನ ದರ್ಶನದಿಂದ ಬಾಧೆಗಳ ನಿವಾರಣೆಗೆ ದಾರಿ ಎಂದು ವ್ರತವೂ ಇದೆ.
ನಮ್ಮಲ್ಲಿ ಮೊದಲನೇ ಪ್ರಯತ್ನವಾದ ಚಂದ್ರಯಾನ‰ 1ಹೆಸರಲ್ಲಿ ಮಾನವ ರಹಿತ ಚಂದ್ರ ಶೋಧಕವನ್ನು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಅಳವಡಿಸಲಾಯಿತು. ಇಡೀ ದೇಶ ಒಂದಾಗಿ ಎದುರು ನೋಡುತ್ತಿದ್ದ ಚಂದ್ರಯಾನ -2, ಇತ್ತೀಚೆಗಷ್ಟೇ ವಿಕ್ರಮ ಚಂದ್ರನ ಕಕ್ಷೆ ಸೇರುವಲ್ಲಿ ಕೊಂಚ ಅಂತರದಲ್ಲಿ ಸಾಧ್ಯವಾಗದಿದ್ದರೂ ನಮ್ಮ ವಿಜ್ಞಾನಿಗಳ ಪರಿಶ್ರಮ ಶ್ಲಾಘನೀಯವಾಗಿ ನಿಂತಿತು. ಹೆಮ್ಮೆಗೆ ಕಾರಣ ಚಂದ್ರ.
ಕಂಡಕ್ಟರ್ ಸ್ಟಾಪ್ ಹೆಸರು ಅರಚಿದ..ದಿಗ್ಗನೇ ಮೇಲೆದ್ದೆ..
ಒಂಭತ್ತು ಮುಕ್ಕಾಲು, ಕೊನೆಗೂ ಕಟ್ಟ ಕಡೆಯ ಸ್ಟಾಪ್ ಬಂತು. ಇಳಿಯಲು ಮೇಲೆದ್ದರೆ, ಚಂದ್ರ ತಾನೂ ಇಳಿಯಲು ರೆಡಿಯಾದವನಂತೆ ಕಂಡ.
ಹಿಂದಿನ ಸೀಟಿನಲ್ಲಿ ಐದಾರು ವರ್ಷದ ಮಗು, ಹಸಿವೆಗೆ ಅಳಲು ಮೊದಲಿಟ್ಟಿತು, ಬ್ಯಾಗಿನಲ್ಲಿದ್ದ ಬಿಸ್ಕೆಟ್ ಬಾಯಲ್ಲಿಡುವ ತಾಯಿಯ ಪ್ರಯತ್ನ ಉಪಯೋಗವಾಗಲಿಲ್ಲ. ಹೆಚ್ಚು ಓದಿಕೊಂಡವಳಲ್ಲದ ಆಕೆ, ಸುತ್ತಾ ಕಣ್ಣು ಹಾಯಿಸಿದರೆ ಗೋಚರಿಸಿದವ ಕಡುಗತ್ತಲ ಮಧ್ಯ ತಿಳಿ ಬಿಳುಪಿನ ಚಂದ್ರಮ. ಅವನನ್ನೇ ತನಗೆ ತಿಳಿದಂತೆ ತೋರಿಸಿದ್ದಕ್ಕೆ, ಒಂದೆರಡು ಬಿಸ್ಕೆಟ್ ಆ ಮಗುವಿನ ಹೊಟ್ಟೆಗಳಿದವು. ಅಮ್ಮ ಯಾರಾದರೂ ತುತ್ತಿಡಲು ಬಂದರೆ ಬೇಡ ಅನ್ನಬಾರದು ಅಂತ ಪದೇ, ಪದೆ ಹೇಳುತ್ತಿದ್ದ ಮಾತು ನೆನಪಾಗಿ ಮನತುಂಬಿ ಬಂತು. ಅದಕ್ಕೆ ಸಾಥ್ ಕೊಡುವವನಂತೆ ಚಂದ್ರಮ ಮುಗುಳ್ನಕ್ಕ.
ಮಂಜುಳಾ ಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.