ಗರ್ಭಿಣಿಯರಲ್ಲಿ ಖನ್ನತೆ ವೈದ್ಯರ ಸಲಹೆ ಅಗತ್ಯ
Team Udayavani, Nov 5, 2019, 5:04 AM IST
ಗರ್ಭಾವಸ್ಥೆ ಎನ್ನುವುದು ತಾಯಿ ಮತ್ತು ಭ್ರೂಣದ ಆರೋಗ್ಯದ ದೃಷ್ಟಿಯಿಂದ ಅತಿ ಜಾಗ್ರತೆಯಿಂದರಬೇಕಾದ ಸಮಯ. ಪ್ರತಿ ಭಾವೀ ತಾಯಿಗೂ ಸರಿಯಾದ ಕಾಳಜಿ, ಅನುಭೂತಿ, ಪ್ರೀತಿ ಬೇಕಾಗುತ್ತದೆ. ತಾಯ್ತನ ಎಂಬುದು ಪ್ರತಿ ಮಹಿಳೆಗೆ ಖುಷಿ ಹಾಗೂ ಅತ್ಯಂತ ಸವಾಲಿನ ವಿಷಯವೂ ಆಗಿದೆ. ಆರೋಗ್ಯ, ಮನಸ್ಸು ಸರಿಯಾಗಿದ್ದರಷ್ಟೇ ಆರೋಗ್ಯಪೂರ್ಣ ಮಗು ಪಡೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಗರ್ಭಾವಸ್ಥೆಯಲ್ಲಿ ಕಾಳಜಿಗೆ ಒತ್ತು ಕೊಡಬೇಕಾಗುತ್ತದೆ.
ಗರ್ಭಿಣಿಯು ದೈಹಿಕ ಆರೋಗ್ಯಕ್ಕೆ ನೀಡಿದಷ್ಟೇ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು. ಕೆಲವೊಮ್ಮೆ ಎಷ್ಟೇ ಸಹಜ ಸ್ಥಿತಿಯಲ್ಲಿ ಸಾಗಿದರೂ ಚಂಚಲ ಮನಸ್ಸಿನ ನಿರ್ಧಾರಗಳು ನಿಯಂತ್ರಣಕ್ಕೆ ಬಾರದೇ ಇದ್ದಾಗ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವುದೇ ಸವಾಲಿನ ಕೆಲಸವಾಗುತ್ತದೆ. ಗರ್ಭಾವಸ್ಥೆಯ ಹಂತದಲ್ಲಿ ಬಹುತೇಕ ಭಾವೀ ತಾಯಂದಿರಿಗೆ ಕಾಡುವ ಸಮಸ್ಯೆಯೆಂದರೆ ಖನ್ನತೆ. ಒಂಬತ್ತು ತಿಂಗಳ ಗರ್ಭಾವಸ್ಥೆಯಲ್ಲಿ ಜೈವಿಕ, ಮಾನಸಿಕ ಕಾರಣದಿಂದಾಗಿ ಖನ್ನತೆ, ಆತಂಕ ಗರ್ಭಿಣಿಯರಿಗೆ ಕಾಡುತ್ತಿರುತ್ತದೆ. ಸುಸ್ತಾಗುವಿಕೆ, ನಿದ್ರೆಯ ತೊಂದರೆ, ಹಸಿವು ಮುಂತಾದ ಕಾರಣಗಳಿಂದಾಗಿ ಈ ಮಾನಸಿಕ ತೊಂದರೆಗಳು ಗಮನಕ್ಕೆ ಬಾರದೇ ಹೋಗುವ ಸಾಧ್ಯತೆಯೂ ಬಹುತೇಕ ಸಂದರ್ಭದಲ್ಲಿ ಹೆಚ್ಚಿರುತ್ತದೆ.
ಖನ್ನತೆಗೇನು ಕಾರಣ?
ವೈವಾಹಿಕ ಜೀವನದ ಸಮಸ್ಯೆಗಳು, ಬೇಡವಾದ ಗರ್ಭಧಾರಣೆ, ಕೌಟುಂಬಿಕ ದೌರ್ಜನ್ಯ, ಗರ್ಭಧರಿಸುವುದಕ್ಕೂ ಮುನ್ನ ಗರ್ಭಾವಸ್ಥೆ ವೇಳೆ ನಿಲ್ಲಿಸುವುದು, ಆರ್ಥಿಕ ಕಾರಣಗಳು, ಧೂಮಪಾನ, ಮದ್ಯಪಾನ ವ್ಯಸನಗಳು, ಪ್ರೀತಿಪಾತ್ರರು ಅವಗಣಿಸುತ್ತಿರುವ ನೋವು, ಕುಟುಂಬದೊಳಗಿನ ಕಲಹವನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳುವುದು, ಅತಿಯಾದ ಕೆಲಸದೊತ್ತಡ ಮುಂತಾದವುಗಳು ಖನ್ನತೆಗೆ ಕಾರಣವಾಗುತ್ತದೆ.
ಜನಿಸಿದ ಮಕ್ಕಳಲ್ಲಿ ಸಮಸ್ಯೆ
ಮಾನಸಿಕ ಖನ್ನತೆ, ತುಮುಲಗಳು ಗರ್ಭ ಧರಿಸಿದ ಆರಂಭದ ದಿನಗಳಲ್ಲೇ ಕಂಡು ಬರುತ್ತವೆಯಾದರೂ. ಒಂದು ಮತ್ತು ಎರಡನೇ ತ್ತೈಮಾಸಿಕಕ್ಕಿಂತಲೂ ಮೂರನೇ ತ್ತೈಮಾಸಿಕದಲ್ಲಿ ತುಸು ಜಾಸ್ತಿಯೇ ಇರುತ್ತದೆ. ಖನ್ನತೆ ಹೊಂದಿರುವ ಗರ್ಭಿಣಿಯರಲ್ಲಿ ಅವರು ಮೊದಲು ಇತರ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದು ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ಇರುತ್ತದೆ. ಗರ್ಭಾವಸ್ಥೆಯಲ್ಲಿ ದುರ್ಬಲ ಮಾನಸಿಕ ಆರೋಗ್ಯ ಹೊಂದಿರುವ ಮಹಿಳೆಗೆ ಜನಿಸುವ ಮಗುವಿಗೆ ದೈಹಿಕ ನ್ಯೂನತೆ, ಕಡಿಮೆ ತೂಕದ ಸಮಸ್ಯೆ, ಭಾವನಾತ್ಮಕ ಸಮಸ್ಯೆ, ಅವಧಿಪೂರ್ವ ಶಿಶು ಜನನ, ಜನನದ ನಂತರ ಬಾಧಿಸುವ ಖನ್ನತೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಕ್ಕಳ ವರ್ತನೆ, ಭಾಷಾ ಕೌಶಲದಲ್ಲಿಯೂ ಸಮಸ್ಯೆ ಉಂಟಾಗುವ ಸಾಧ್ಯತೆಗಳಿರುತ್ತವೆ.
ಏನು ಮಾಡಬಹುದು?
ತಾಯ್ತನ ಎಂಬುದು ಪ್ರತಿ ಮಹಿಳೆಗೂ ಅವರ್ಣನೀಯ ಅನುಭವದ ಜತೆಗೆ ಕುತೂಹಲ. ಸಾಮಾಜಿಕ ಜೀವನದಲ್ಲಿ ಆಕೆಯೊಂದಿಗೆ ದಿನನಿತ್ಯ ಬೆರೆಯುವ ಪ್ರತಿಯೊಬ್ಬರ ಪಾತ್ರವೂ ಇಲ್ಲಿ ಹಿರಿದಾಗಿರುತ್ತದೆ. ಸಾಧ್ಯವಾದಷ್ಟು ಪ್ರೀತಿಯಿಂದ ನೋಡಿಕೊಳ್ಳಿ. ಅಂತರ ಕಾಯ್ದುಕೊಳ್ಳುವುದು, ಹೀಯಾಳಿಸುವುದು, ಬೇಡವೆಂದರೂ ಇತರರೊಂದಿಗೆ ಹೋಲಿಸುವುದು, ಯಾವುದೋ ಸಣ್ಣ ಕಾರಣದಿಂದ ಆಕೆಯೊಂದಿಗೆ ಮಾತು ಬಿಡುವುದು ಮಾಡಬೇಡಿ.
ಖುಷಿಯಿಂದ ಇರಿ
ಉದ್ಯೋಗದ ಬಗ್ಗೆ ಅನಾಸಕ್ತಿ, ಮಗು-ಕುಟುಂಬ ನಿರ್ವಹಣೆ ಬಗ್ಗೆ ಆಂತರಿಕ ಭಯ, ಈಗಿರುವ ಸ್ಥಳದಲ್ಲಿ ಕಾಡುವ ಒಂಟಿತನ, ದೂರದೂರಿಗೆ ಹೋಗಿ ಇದ್ದು ಬಿಡಬೇಕೆಂಬ ಹಂಬಲ, ತನ್ನನ್ನು ಯಾರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲವೆಂಬ ಹತಾಶ ಭಾವ, ಎಲ್ಲರ ಖುಷಿಯ ನಡುವೆ ತಾನು ಖುಷಿಯಾಗಿಲ್ಲವೆಂಬ ಭಾವನೆ ಅಥವಾ ಆ ಖುಷಿಯನ್ನು ಅನುಭವಿಸಲಾಗದ ಹತಾಶೆ ಇಂತಹ ಸಂದರ್ಭಗಳು ಎದುರಾದರೆ ತೀರಾ ಹತ್ತಿರವಾಗಿರವವರ ಬಳಿ ಮುಕ್ತವಾಗಿ ಹಂಚಿಕೊಳ್ಳಿ. ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಆರಂಭಿಕ ಹಂತದಲ್ಲೇ ವೈದ್ಯರ ಮಾತು ಪಾಲಿಸುವುದು ಆಶಾದಾಯಕ ಬೆಳವಣಿಗೆ
ಸಲಹೆ, ಚಿಕಿತ್ಸೆ ಅಗತ್ಯ
ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ಏರುಪೇರು ಸಹಜ. ಮೂಡ್ ಬದಲಾವಣೆ, ಕೀಳರಿಮೆಯ ಭಾವನೆ, ಯಾವುದೇ ಸಂತೋಷದ ಕ್ಷಣಗಳನ್ನು ಅನುಭವಿಸಲು ಸಾಧ್ಯವಾಗದಿರುವುದು ಮುಂತಾದವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಖನ್ನತೆಗೆ ಸಂಬಂಧಗಳಲ್ಲಿನ ಬಿರುಕು, ಸಾಮಾಜಿಕ, ಕೌಟುಂಬಿಕ ಕಾರಣಗಳೂ ಕಾರಣವಾಗುತ್ತವೆ. ಇಂತಹ ಸಂದರ್ಭದಲ್ಲಿ ಗರ್ಭಿಣಿಯರು ತಡ ಮಾಡದೆ, ಸಂಬಂಧಪಟ್ಟ ಸ್ತ್ರೀರೋಗ ತಜ್ಞರು ಅಥವಾ ಮನಃಶಾಸ್ತ್ರಜ್ಞರನ್ನು ಭೇಟಿಯಾಗಿ ಸಲಹೆ, ಚಿಕಿತ್ಸೆ, ಮಾರ್ಗದರ್ಶನ ಪಡೆದುಕೊಳ್ಳಬೇಕು.
– ಡಾ| ವಿದ್ಯಾಶ್ರೀ ಕಾಮತ್ ವೈದ್ಯರು
- ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.