ಸಂತುಲಿತ ತೀರ್ಪು
Team Udayavani, Nov 10, 2019, 5:55 AM IST
ಶತಮಾನಗಳಿಂದ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದ ಅಯೋಧ್ಯೆ ವಿವಾದವನ್ನು ಸುಪ್ರೀಂ ಕೋರ್ಟ್ ಕೊನೆಗೂ ಬಗೆಹರಿಸಿದೆ. ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಸಾಧ್ಯವಾದಷ್ಟು ಸೌಹಾರ್ದಯುತವಾಗಿ ವಿವಾದವನ್ನು ಮುಕ್ತಾಯಗೊಳಿಸಲು ನ್ಯಾಯಾಲಯ ಶ್ರಮಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕಿಂತ ಉತ್ತಮ ತೀರ್ಪನ್ನು ನೀಡುವುದು ಸಾಧ್ಯವಿರಲಿಲ್ಲ. ತೀರ್ಪಿನಿಂದ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಎಲ್ಲ ಪಕ್ಷಗಳು ತೀರ್ಪನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿವೆ. ಇಂದಿನ ದಿನ ದೇಶದ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿ ದಾಖಲಾಗಿದೆ. ಯಾವುದೇ ಅತಿರೇಕಗಳಿಗೆ ಅವಕಾಶ ಇಲ್ಲದಂತೆ ಸಮಚಿತ್ತದ ಮತ್ತು ಸಂತುಲಿತವಾದ ತೀರ್ಪನ್ನು ನೀಡಿದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಪೀಠವನ್ನು ಈ ದೇಶ ಅಭಿನಂದಿಸಬೇಕು.
ಹಾಗೆ ನೋಡಿದರೆ ತೀರ್ಪಿನಲ್ಲಿ ಜಟಿಲ ಅಥವಾ ಕ್ಲಿಷ್ಟ ಎನ್ನುವಂಥ ಅಂಶಗಳು ಇಲ್ಲ. ಬಹಳ ಸರಳ ಮತ್ತು ನೇರವಾಗಿರುವ ತೀರ್ಪು ಇದು. ರಾಮ ಜನಿಸಿದ ಸ್ಥಳ ಎಂದು ಹಿಂದುಗಳು ನಂಬುತ್ತಿರುವ ಸ್ಥಳದಲ್ಲಿ ಮಂದಿರ ನಿರ್ಮಿಸುವುದು, ಮುಸ್ಲಿಮರಿಗೆ ಮಸೀದಿ ನಿರ್ಮಿಸಲು ಅಯೋಧ್ಯೆಯಲ್ಲೇ ಪ್ರಮುಖವಾದ ಪ್ರದೇಶವೊಂದರಲ್ಲಿ ಐದು ಎಕರೆ ನಿವೇಶನ ನೀಡುವುದು. ಇಷ್ಟೇ ತೀರ್ಪಿನಲ್ಲಿರುವ ಮುಖ್ಯ ಅಂಶ. ಇಷ್ಟು ಸರಳವಾಗಿ ಮುಗಿದು ಹೋದ ಒಂದು ವಿವಾದಕ್ಕಾಗಿ ನಾವು ಕಾಲು ಶತಮಾನದಷ್ಟು ಕಾಲ ನ್ಯಾಯಾಲಯದಲ್ಲಿ ಹೋರಾಡಿ ವ್ಯರ್ಥಗೊಳಿಸಿದ್ದೇವಲ್ಲ! ಇದಕ್ಕಾಗಿ ವ್ಯಯವಾದ ಸಂಪನ್ಮೂಲವೆಷ್ಟು?ಕಳೆದು ಹೋದ ನ್ಯಾಯಾಲಯದ ಅಮೂಲ್ಯ ಸಮಯವೆಷ್ಟು? ಎಷ್ಟು ಜನ ಪ್ರಾಣ ಕಳೆದುಕೊಳ್ಳಬೇಕಾಯಿತು? ಏನೇ ಆದರೂ ಕೊನೆಗೂ ವಿವಾದ ಸೌಹಾರ್ದಯುತವಾಗಿ ಮುಗಿದು ಹೋಯಿತಲ್ಲ ಎನ್ನುವ ಸಮಾಧಾನ ಮಾತ್ರ ಈಗ ಇದೆ.
ಬರೀ 40 ದಿನಗಳಲ್ಲಿ ನ್ಯಾಯಾಲಯ ವಿಚಾರಣೆ ಮುಗಿಸಿ ತೀರ್ಪು ನೀಡಿರುವುದು ಕೂಡಾ ಒಂದು ಗಮನಾರ್ಹ ವಿಚಾರವೇ. ನಮ್ಮ ವ್ಯವಸ್ಥೆ ಸಂಕಲ್ಪ ಮಾಡಿದರೆ ಯಾವ ಕೆಲಸವೂ ಅಸಾಧ್ಯವಲ್ಲ ಎನ್ನುವುದು ಇದರಿಂದ ಸಾಬೀತಾಗುತ್ತದೆ. ದೇಶದಲ್ಲಿ ಈಗ ಇರುವ ರಾಜಕೀಯ ಸ್ಥಿರತೆ ಮತ್ತು ಆಳುವವರ ಇಚ್ಚಾಶಕ್ತಿಯೂ ಹೀಗೊಂದು ದೃಢವಾದ ತೀರ್ಪು ಹೊರಬರುವಲ್ಲಿ ಪೂರಕ ಪಾತ್ರ ನಿಭಾಯಿಸಿದೆ ಎನ್ನುವುದನ್ನು ಅಲ್ಲಗಳೆಯಲಾಗದು.
ಪ್ರಧಾನಿ ಮೋದಿಯವರು ಹೇಳಿರುವಂತೆ ನ್ಯಾಯಾಂಗ ಹೋರಾಟದಲ್ಲಿ ಯಾರೂ ಗೆದ್ದೂ ಇಲ್ಲ, ಯಾರು ಸೋತೂ ಇಲ್ಲ. ಅಂತಿಮವಾಗಿ ನ್ಯಾಯ ಗೆದ್ದಿದೆ. ಈ ಭಾವದಿಂದಲೇ ಎಲ್ಲರೂ ತೀರ್ಪನ್ನು ಸ್ವೀಕರಿಸಬೇಕು. ಆರ್ಥಿಕ ಅಭಿವೃದ್ಧಿಯ ನಾಗಾಲೋಟದಲ್ಲಿರುವ ದೇಶವೊಂದು ಪುರಾತನವಾದ ಧಾರ್ಮಿಕ ವಿವಾದವೊಂದನ್ನು ಹಿಡಿದು ಇನ್ನೂ ನ್ಯಾಯಾಲಯದಲ್ಲಿ ಜಗ್ಗಾಡುವುದು ಯಾವ ರೀತಿಯಲ್ಲೂ ಆರೋಗ್ಯಕಾರಿ ವಿಚಾರವಲ್ಲ.
ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ತ್ಯಾಗ ಮಾಡಬೇಕು ಎನ್ನುವುದೇ ಎಲ್ಲ ಧರ್ಮಗಳ ತತ್ವ. ಅಯೋಧ್ಯೆ ವಿಚಾರದಲ್ಲಿ ಈ ತತ್ವ ಹೆಚ್ಚು ಪ್ರಸ್ತುತವಾಗುತ್ತದೆ. ದೇಶದ ಅಭಿವೃದ್ಧಿ, ಸಾಮಾಜಿಕ ಭಾವೈಕ್ಯ, ಧಾರ್ಮಿಕ ಸಹಿಷ್ಣುತೆ ಇತ್ಯಾದಿ ಉದಾತ್ತ ವಿಚಾರಗಳು ಪ್ರಚಲಿತದಲ್ಲಿ ಇರಬೇಕಾದರೆ ಈ ತತ್ವದ ತಳಹದಿ ಗಟ್ಟಿಯಾಗಿರಬೇಕು.
ವಿವಾದ ನಮ್ಮ ಕಾಲದಲ್ಲಿ ಇತ್ಯರ್ಥವಾಗಿರುವುದು ಭವಿಷ್ಯದ ತಲೆಮಾರಿಗೆ ನಾವು ಕೊಟ್ಟ ದೊಡ್ಡದೊಂದು ಕೊಡುಗೆ. ಯಾವುದೋ ಕಾಲದಲ್ಲಿ ನಡೆದು ಹೋದ ಧಾರ್ಮಿಕ ಪ್ರಮಾದವೊಂದು ಎಷ್ಟು ಪೀಳಿಗೆಯ ತನಕ ಮುಂದುವರಿದುಕೊಂಡು ಹೋಗಬಹುದು? ಈಗಾಗಲೇ ಅಯೋಧ್ಯೆಗಾಗಿ ಸಾಕಷ್ಟು ನೆತ್ತರು ಹರಿದಿದೆ. ಭಿನ್ನ ಸಮುದಾಯಗಳ ನಡುವೆ ಎದ್ದಿದ್ದ ಅಪನಂಬಿಕೆಯ ಗೋಡೆಯೊಂದನ್ನು ಕೆಡವಿ ಹಾಕಲೇಬೇಕಿತ್ತು. ಆ ಮೂಲಕ ಸರ್ವರಿಗೂ ನೆಮ್ಮದಿಯ ಸಾಮಾಜಿಕ ವ್ಯವಸ್ಥೆಯೊಂದನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿತ್ತು. ಅದು ಇಂದು ಸಾಕಾರಗೊಂಡಿದೆ.
ನ್ಯಾಯಾಲಯದ ವ್ಯಾಜ್ಯ ಎಂದರೇ ಹಾಗೆಯೇ. ಇಲ್ಲಿ ಯಾರಾದರೊಬ್ಬರಿಗೆ ಹಿನ್ನಡೆಯಾಗಲೇ ಬೇಕು. ಅದಾಗ್ಯೂ ನ್ಯಾಯಾಲಯ ಎರಡೂ ಸಮುದಾಯಗಳ ನಂಬಿಕೆಗಳಿಗೆ ಹೆಚ್ಚು ಹಾನಿಯಾಗದ ರೀತಿಯಲ್ಲಿ ಸಮಚಿತ್ತದ ತೀರ್ಪೋಂದನ್ನು ನೀಡಿದೆ. ಆದರೆ ಗೆಲುವು ಅಥವಾ ಸೋಲನ್ನು ವೈಯಕ್ತಿಕ ನೆಲೆಯಲ್ಲಾಗಿರುವ ಲಾಭ -ನಷ್ಟ ಎಂದು ಪರಿಭಾವಿಸದೆ ಒಟ್ಟಾರೆ ದೇಶದ ಹಿಂತಚಿಂತನೆಯ ವಿಶಾಲ ದೃಷ್ಟಿಕೋನದಿಂದ ಸ್ವೀಕರಿಸಬೇಕು. ಎಲ್ಲರನ್ನೂ ಒಳಗೊಂಡ ನವ ಭಾರತದ ನಿರ್ಮಾಣಕ್ಕೆ ಈ ತೀರ್ಪು ವೇದಿಕೆಯಾಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ
Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.