ಪೊಲೀಸ್ ಸರ್ಪಗಾವಲು; ಜನ -ವಾಹನ ಸಂಚಾರ ವಿರಳ
ಅಯೋಧ್ಯೆ ವಿವಾದ ಅಂತಿಮ ತೀರ್ಪು ಹಿನ್ನೆಲೆ
Team Udayavani, Nov 10, 2019, 2:46 AM IST
ಮಹಾನಗರ: ಅಯೋಧ್ಯೆ ವಿವಾದದ ಅಂತಿಮ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಶನಿವಾರ ಮಂಗಳೂರಿನಾದ್ಯಂತ ಸಿರ್‌ಪಿಸಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದ್ದು, ಬಿಗಿ ಹಾಗೂ ವ್ಯಾಪಕ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು. ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು.
ಅಯೋಧ್ಯೆ ತೀರ್ಪು ಪ್ರಕಟವಾಗುತ್ತದೆ ಎಂದು ಶುಕ್ರವಾರ ರಾತ್ರಿ ಸುದ್ದಿ ಹೊರ ಬಿದ್ದ ಕೂಡಲೇ ರಾಜ್ಯ ಸರಕಾರವು ಶಾಲಾ ಕಾಲೇಜುಗಳಿಗೆ (ಪಿಯುಸಿ ತನಕ) ಶನಿವಾರ ರಜೆ ಘೋಷಿಸಿತ್ತು. ಬಂದೋಬಸ್ತು ಕಾರ್ಯಗಳಿಗಾಗಿ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲು ರಾತ್ರೋ ರಾತ್ರಿ ವ್ಯವಸ್ಥೆ ಮಾಡಲಾಗಿತ್ತು.
ಅಂತಾರಾಜ್ಯ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಪೊಲೀಸ್ ಕಾವಲು ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಪೊಲೀಸ್ ಕಾವಲು ನಿಯೋಜಿಸಲಾಗಿತ್ತು.
ನಿಷೇಧಾಜ್ಞೆ
ಶನಿವಾರ ಬೆಳಗ್ಗೆ 10ರಿಂದ ರವಿವಾರ ಬೆಳಗ್ಗಿನ 6 ಗಂಟೆ ತನಕ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ವಿಧಿಸಿ ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ಅವರು ಆದೇಶ ಹೊರಡಿಸಿದರು.
1,000 ಪೊಲೀಸ್ ಸಿಬಂದಿ, 15 ಪೊಲೀಸ್ ಇನ್‌ಸ್ಪೆಕ್ಟರ್, 49 ಸಬ್ ಇನ್‌ಸ್ಪೆಕ್ಟರ್, 100 ಎಎಸ್‌ಐ, 5 ಕೆಎಸ್‌ಆರ್‌ಪಿ ತುಕಡಿ, 1 ಕೇಂದ್ರೀಯ ಅರೆ ಸೇನಾ ಪಡೆ, 1 ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್), ನಗರ ಸಶಸ್ತ್ರ ಮೀಸಲು ಪಡೆಯ ತುಕಡಿ, ಇಬ್ಬರು ಡಿಸಿಪಿಗಳನ್ನು ನಿಯೋಜನೆ ಮಾಡಲಾಗಿತ್ತು.
ಕಳವಳ ಬೇಡ
ವಾರದಿಂದ ನಾನಾ ಹಂತಗಳಲ್ಲಿ ಎಲ್ಲ ಸಮುದಾಯಗಳ ನಾಯಕರನ್ನು ಕರೆದು ಸಭೆ ನಡೆಸಿ ಅವರಿಗೆ ಸೂಕ್ತ ತಿಳುವಳಿಕೆಯನ್ನು ನೀಡಲಾಗಿದ್ದು ವಿಜಯೋತ್ಸವ ಅವಕಾಶ ಇಲ್ಲ ಎಂಬುದಾಗಿ ತಿಳಿಸಿ, ಶಾಂತಿ ಸುವ್ಯವಸ್ಥೆೆ ಕಾಪಾಡಲು ವಿನಂತಿ ಸಲಾಗಿತ್ತು. ಶನಿವಾರ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ಮದ್ಯದಂಗಡಿ ಬಂದ್‌ಗೆ ಡಿಸಿ ಆದೇಶಿದ್ದರು. ವ್ಯಾಪಕ ಪೊಲೀಸ್ ನಿಯೋಜಿಸಲಾಗಿದೆ.
– ಡಾ| ಹರ್ಷ ಪಿ.ಎಸ್. , ಪೊಲೀಸ್ ಆಯುಕ್ತರು