ಗುರುದ್ವಾರಕ್ಕೆ ಸ್ವರ್ಣ ಮಂದಿರ ರೂಪ
250 ಕೋಟಿ ವೆಚ್ಚದಲ್ಲಾಗಿದೆ ಜೀರ್ಣೋದ್ಧಾರ ಇಂದಿನಿಂದ ಗುರು ನಾನಕರ 550ನೇ ಜಯಂತಿ ಕಾರ್ಯಕ್ರಮ
Team Udayavani, Nov 10, 2019, 11:53 AM IST
ಶಶಿಕಾಂತ ಬಂಬುಳಗೆ
ಬೀದರ: ಗುರುದ್ವಾರದ ಒಳಗೆ ಕಾಲಿಡುತ್ತಿದ್ದಂತೆ ಚಿನ್ನದಿಂದ ಕಂಗೊಳಿಸುವ ಮಂಟಪ, ಪವಿತ್ರ ಗುರು ಗ್ರಂಥಗಳ ಸನ್ನಿ ಧಿ, ನಿಶಬ್ದದ ನಡುವೆ ನಾನಕರ ಗುರುವಾಣಿಯ ಪಠಣ… ಇದು ಸಿಖ್ ಧರ್ಮಿಯರ ಆರಾಧ್ಯದೇವ ಬೀದರನ ಗುರುನಾನಕ ಮಂದಿರದ ನಿತ್ಯದ ದೃಶ್ಯ. ತನ್ನ ಕಲಾತ್ಮಕತೆಯಿಂದ ಮೆರಗು ಪಡೆದಿರುವ ಗುರುದ್ವಾರ ಈಗ ಅಮೃತಸರ ಸ್ವರ್ಣ ಮಂದಿರ ರೂಪ ಪಡೆದಿದೆ.
ಸುಮಾರು 250 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ದೇವಸ್ಥಾನದ ಒಳಾಂಗಣಕ್ಕೆ ಚಿನ್ನದ ಮೆರಗು ನೀಡಲಾಗಿದ್ದು, ಅಪರೂಪದ ಬಣ್ಣ- ವಿನ್ಯಾಸಗಳಿಂದ ಕಂಗೊಳಿಸುತ್ತಿದೆ. ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕರು ಕಿರಿ ವಯಸ್ಸಿನಲ್ಲಿಯೇ ಪ್ರಪಂಚ ಪರ್ಯಟನೆ ಮೂಲಕ ದೇವರ ಸಂದೇಶ ಸಾರುತ್ತ ಐತಿಹಾಸಿಕ ನಗರಿ ಬೀದರಕ್ಕೆ ಭೇಟಿ ನೀಡಿದ್ದರು. ಪವಾಡಗಳಿಂದ ಮಹಾನ್ ಸಂತರೆನಿಸಿಕೊಂಡಿದ್ದ ಅವರ ಭೇಟಿಯ 550 ವರ್ಷಗಳ ಸುಸಂದರ್ಭದಲ್ಲಿ ಆಡಳಿತ ಮಂಡಳಿಯು ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಕೈಗೊಂಡಿದೆ. ಗುರುನಾನಕರ 550ನೆ ಜನ್ಮ ಶತಾಬ್ದಿ ಹಿನ್ನೆಲೆಯಲ್ಲಿ ನ.10ರಿಂದ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇಶ- ವಿದೇಶದಿಂದ ಲಕ್ಷಾಂತರ ಭಕ್ತ ಸಮೂಹ ಭೇಟಿ ನೀಡಲಿದೆ.
ಕಲೋನಿಯನ್, ಸಾರ್ಸೆನಿಕ್ ಶೈಲಿ: ಉತ್ತರ ಭಾರತದಲ್ಲಿ ಧಾರ್ಮಿಕ ಸಂತರಾಗಿ ಖ್ಯಾತಿ ಪಡೆದಿದ್ದ ಗುರುನಾನಕ ಸಿಖ್ ಧರ್ಮಿಯರ ಹತ್ತು ಗುರುಗಳಲ್ಲಿ ಮೊದಲಿಗರಾದರೆ, ಗುರು ಗೋವಿಂದ ಕೊನೆಯವರು. ಹೊಸ ಧರ್ಮವನ್ನು ಕಂಡುಕೊಂಡು ತಮ್ಮ ಎರಡನೇ ಸುತ್ತಿನ ದಕ್ಷಿಣ ಭಾರತದ ಪ್ರವಾಸ ಕೈಗೊಂಡಾಗ 1512ರಲ್ಲಿ ಬೀದರಗೆ ಭೇಟಿ ನೀಡಿದ್ದರು.
ಪ್ರವಾಸಿಗರನ್ನು ಆಕರ್ಷಿಸುವ ಸುಂದರ ಮತ್ತು ಪಾರಂಪರಿಕ ಕಟ್ಟಡಗಳಲ್ಲಿ ಗುರುನಾನಕ ಅವರು ಪವಾಡ ನಡೆಸಿದ ಸದೃಶ್ಯಕ್ಕೆ ಸಾಕ್ಷಿ ಎಂಬಂತೆ “ನಾನಕ್ ಝರಿ’ ಇಂದಿಗೂ ಹರಿಯುತ್ತಿದೆ. ಈ ಪವಿತ್ರ ಸ್ಥಳದಲ್ಲಿಯೇ 1950ರಲ್ಲಿ ಕಣ್ಮನ ಸೆಳೆಯುವ ಗುರುನಾನಕ ದೇವಸ್ಥಾನ ನಿರ್ಮಾಣಗೊಂಡಿದ್ದು, ಕಲೋನಿಯನ್ ಮತ್ತು ಸಾರ್ಸೆನಿಕ್ (ಮುಸ್ಲಿಂ) ಶೈಲಿಗೆ ಈ ಕಟ್ಟಡ ಸೇರಿದೆ.
ಕೈಪಿಡಿಯ ಗೋಡೆಗಳ ಮೇಲೆ ಸಣ್ಣ ಪ್ರಮಾಣದ ಗುಮ್ಮಟ, ಎಡಭಾಗದಲ್ಲಿ ಆಂಗ್ಲ ಶೈಲಿಗೆ ಸೇರಿದ ಎರಡು ಗುಮ್ಮಟಗಳಿವೆ. ನೀರಿನ ಬುಗ್ಗೆ ಉದ್ಭವಿಸಿದ ಸ್ಥಳದಲ್ಲಿ ಕುಂಡವನ್ನು ನಿರ್ಮಾಣ ಮಾಡಲಾಗಿದ್ದು, ಈ ನೀರು ಸೇವನೆಯಿಂದ ಆರೋಗ್ಯವಂತರಾಗಿ ಬದುಕುತ್ತಾರೆ ಎಂಬ ನಂಬಿಕೆಯೂ ಇಲ್ಲಿನ ಜನರಲ್ಲಿದೆ.
ಸ್ವರ್ಣ ಲೇಪ-ವಿಶಿಷ್ಟ ವಿನ್ಯಾಸ: ಸುಮಾರು 60 ಎಕರೆ ಪ್ರದೇಶದಲ್ಲಿರುವ ಗುರುದ್ವಾರವನ್ನು ಮೊಗೆದಷ್ಟು ಆಕರ್ಷಿಸಲು ಆಧುನಿಕ ಸ್ಪರ್ಷ ನೀಡಲಾಗಿದೆ. ಮೂಲ ದೇವಸ್ಥಾನದ ಕಟ್ಟಡದ ಒಳಗೆ ಮತ್ತು ಹೊರಗೆ ವಿಶೇಷ ವಿನ್ಯಾಸ, ಮನಸೆಳೆಯುವ ಸೀಲಿಂಗ್ ವ್ಯವಸ್ಥೆ, ಅದಕ್ಕೆ ಸ್ವರ್ಣ ಲೇಪನ, ಮುಖ್ಯವಾಗಿ ಪ್ರತಿನಿತ್ಯ ಪೂಜಿಸುವ ಪವಿತ್ರ ಗ್ರಂಥಗಳನ್ನು ಇಡುವ ಮಂಟಪ (ಪಾಲಕಿ)ವನ್ನು ಕೋಟ್ಯಂತರ ವೆಚ್ಚದ ಬಂಗಾರದಿಂದ ತಯಾರಿಸಲಾಗಿದೆ.
ಜೊತೆಗೆ ವಿಶೇಷ ವಿದ್ಯುತ್ ಅಲಂಕಾರದ ಮೆರಗು ಹೆಚ್ಚಿಸಿದೆ. ಮುಖ್ಯವಾಗಿ ಗುರುದ್ವಾರಕ್ಕೆ ಬರುವ ಭಕ್ತರ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ವಸತಿ ಮತ್ತು ಊಟದ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ. ಈ ಹಿಂದೆ 200 ಕೋಣೆಗಳಿದ್ದು, ಅದನ್ನು ಸುಮಾರು 2,500 ಜನರಿಗೆ ತಂಗಲು ಅನುಕೂಲವಾಗುವಂತೆ 400 ಕೋಣೆಗಳಾಗಿ ಹಾಗೂ 500 ಜನ ಸಾಮರ್ಥ್ಯದಿಂದ 1 ಸಾವಿರ ಸಾಮರ್ಥ್ಯಕ್ಕೆ ಲಂಗರ್ (ಊಟದ) ಭವನವನ್ನು ಹೆಚ್ಚಿಸಲಾಗಿದೆ. ಪಂಜಾಬ್ ಮತ್ತು ನಾಂದೇಡ್‌ನ ಕರ ಸೇವಕರು ಕಟ್ಟಡ ನಿರ್ಮಾಣ ಮಾಡಿದ್ದಾರೆ.
ಗುರುದ್ವಾರದ ಜೀರ್ಣೋದ್ಧಾರದ ಖರ್ಚು ಮತ್ತು ನಿರ್ಮಾಣದ ಉಸ್ತುವಾರಿಯನ್ನು ನಾಂದೇಡ್ ಗುರುದ್ವಾರದ ಕಮಿಟಿ ನಿರ್ವಹಿಸಿದ್ದು, ಭಕ್ತರ ದೇಣಿಗೆ ಮತ್ತು ಕಾಣಿಕೆಯಿಂದಲೇ ಆರ್ಥಿಕ ಕ್ರೂಢೀಕರಣ ಮಾಡಲಾಗಿದೆ ಎನ್ನುತ್ತಾರೆ ಗುರುದ್ವಾರದ ವ್ಯವಸ್ಥಾಪಕ ಜ್ಞಾನಿ ದರ್ಬಾರ್‌ಸಿಂಗ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.