ಮಾತೃ ಹೃದಯ; ನಮ್ಮ ಜಾಲದಿಂದ ನಿಮ್ಮ ಸೇವೆ
Team Udayavani, Nov 12, 2019, 5:00 AM IST
ಸೋಷಿಯಲ್ ಮೀಡಿಯಾ ಅಂದರೆ ಕೇವಲ ಸುದ್ದಿ ಹೆಕ್ಕುವುದು, ಮನರಂಜನೆ ಪಡೆಯುವುದು, ಲೈಕ್, ಕಾಮೆಂಟ್‌ಗಳನ್ನು ಹಾಕುವುದು ಇವಿಷ್ಟೇ ಅಂದುಕೊಂಡು ಬಿಟ್ಟಿದ್ದೇವೆ. ಇಲ್ಲ, ಸೋಷಿಯಲ್ ಮೀಡಿಯಾ, ಅದರಲ್ಲಿನ ಗೆಳೆಯರನ್ನು ಬಳಸಿಕೊಂಡೇ ಸಮಾಜ ಸೇವೆ ಮಾಡಬಹುದು ಅನ್ನೋದನ್ನು ಚನ್ನಪಟ್ಟಣದ ಮಹೇಶ್ ತೋರಿಸಿಕೊಟ್ಟಿದ್ದಾರೆ. ಅದು ಹೇಗೆ? ನೋಡೋಣ ಬನ್ನಿ.
ನಾವೆಲ್ಲ ಫೇಸ್‌ಬುಕ್, ಟ್ವೀಟರ್, ವ್ಯಾಟ್ಸ್‌ಆ್ಯಪ್‌ಗ್ಳನ್ನು ನಮ್ಮ ಪ್ರಚಾರಕ್ಕೋ, ಸಾಧನೆಗೋ ಅಥವಾ ಬೇರೆಯವರ ವಿಚಾರಕ್ಕೆ ಲೈಕ್ ಒತ್ತಿ, ಶೇರ್ ಮಾಡಿ ಕಾಮೆಂಟ್ ಮಾಡುವುದಕ್ಕೋ ಬಳಸುತ್ತೇವೆ.
ಇದನ್ನು ಬಿಟ್ಟು ಬೇರೇನು ಮಾಡಿದ್ದೇವೆ? ಉತ್ತರ ಶೂನ್ಯ. ಆದರೆ, ಚನ್ನ ಪಟ್ಟಣದ ಮಹೇಶ್ ಅಂಡ್ ಟೀಂ , ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು, ಆರೋಗ್ಯ, ಸಾಮಾಜಿಕ, ಶೈಕ್ಷಣಿಕ, ಪರಿಸರ ಹೀಗೆ ಹಲವು ಸೇವೆಗಳಿಗೆ ಮುಂದಾಗಿದೆ. ಸೋಶಿಯಲ್ ಮೀಡಿಯಾ ಅನ್ನೋ ಅಸ್ತ್ರವನ್ನು ಹೀಗೂ ಬಳಸಿಕೊಳ್ಳಬಹುದೇ ಅನ್ನೋದಕ್ಕೆ ಇವರ ಮಾತೃಭೂಮಿ ಫೌಂಡೇಷನ್ನೇ ಉದಾಹರಣೆ.
ಇದರ ಬೆನ್ನೆಲುಬು ಗೆಳೆಯರು.ಸಾಮಾಜಿಕ ಜಾಲತಾಣದ ಸ್ನೇಹಿತರೂ ಇದರಲ್ಲಿ ಸೇರಿದ್ದಾರೆ.
“ನಮ್ಮ ನಡಿಗೆ ಜೋಪಡಿಗಳ ಕಡೆಗೆ’ ಅನ್ನೋ ಸ್ಲೋಗನ್ ಇಟ್ಟುಕೊಂಡು ಮಹೇಶ್ ಮತ್ತು ಸಂಗಡಿಗರು ಮೊದಲು ಸಮಾಜ ಸೇವೆ ಆರಂಭಿಸಿದ್ದು. ಬೇರೆ ಬೇರೆ ಊರುಗಳಿಂದ ಕೂಲಿ ಕೆಲಸವನ್ನು ಅರಸಿ ನಗರ ಪ್ರದೇಶಕ್ಕೆ ಬಂದು, ಸಣ್ಣಸಣ್ಣ ಟೆಂಟ್‌ಗಳಲ್ಲಿ ವಾಸ ಮಾಡುವವರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಇದರ ಉದ್ದೇಶ. ಈ ನಿಟ್ಟಿನಲ್ಲಿ ಮಕ್ಕಳಿಗೆ ಆಟಿಕೆಗಳು, ತಿಂಡಿಗಳನ್ನು ನೀಡಿ ಪೋ›ತ್ಸಾಹಿಸಿ ಶಿಕ್ಷಣದ ಕಡೆಗೆ ಆಸಕ್ತಿ ಬರುವಂತೆ ಮಾಡಿದ್ದು ಮಹೇಶ್ ಅಂಡ್ ಟೀಂ. ಇದರ ಫಲವಾಗಿ 13ಕ್ಕೂ ಹೆಚ್ಚು ಮಕ್ಕಳು ಬೆಂಗಳೂರಿನ ಲಗ್ಗೆರೆಯಲ್ಲಿರುವ ಸೆಲೆ ಆಶ್ರಮದಲ್ಲಿ ಇಂದು ಶಿಕ್ಷಣ ಪಡೆಯುತ್ತಿದ್ದಾರೆ.
ಆನಂತರ ಎಲ್ಲ ಸಮಾಜ ಸೇವೆಗಳು ಒಂದು ದಾರಿಯಲ್ಲಿ ಸಾಗಲು ಮಾತೃಭೂಮಿ ಸೇವಾಟ್ರಸ್ಟ್ ಆರಂಭವಾಯಿತು. ಅದಕ್ಕೆ ಒಂದಷ್ಟು ಜನ ಗೆಳೆಯರೂ ಸೇರಿಕೊಂಡರು. ಆನಂತರ ಸೇವೆ ಸಮಾಜದ ನಾನಾ ಮಗ್ಗಲುಗಳಿಗೆ ಹೊರಳಿಕೊಂಡಿತು. ಹೆಚ್ಚು ಕಮ್ಮಿ 6 ವರ್ಷಗಳಿಂದ ಅವಿರತವಾಗಿ ಸೇವೆ ನಡೆಯುತ್ತಿದೆ.
ರಸ್ತೆಗೊಬ್ಬ ರಾಯಬಾರಿ
ಈ ಸಂಸ್ಥೆಯ ಕಾರ್ಯಕರ್ತರೊಬ್ಬರು ಬೆಂಗಳೂರಿನ ರಸ್ತೆಯಲ್ಲಿನ ಗುಂಡಿಯಿಂದಾದ ಅಪಘಾತದಿಂದ ಸಾವನ್ನಪ್ಪಿದರು. ಆಗ ಪೌಂಡೇಷನ್, ತನ್ನ ಕಾರ್ಯಕರ್ತರೊಂದಿಗೆ ಬೆಂಗಳೂರಿನಲ್ಲಿ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಕೈಹಾಕಿತು. ಸುಮಾರು 150ಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಿದ್ದಾರೆ. ಜೊತೆಗೆ ರಸ್ತೆಯಲ್ಲಿ ಜಾನುವಾರುಗಳ ಓಡಾಟ ಹೆಚ್ಚಾಗಿದ್ದು, ಇದರಿಂದ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿರುವುದನ್ನು ಗಮನಿಸಿ, ಜಾನುವಾರುಗಳ ಕೊಂಬಿಗೆ ರೇಡಿಯಂ ಅಂಟಿಸುವ ಮೂಲಕ ರಸ್ತೆಗೊಬ್ಬ ರಾಜಬಾರಿ ಎಂಬ ಸೇವಾಯೋಜನೆಯನ್ನು ಸಹ ಮಾಡುತ್ತಿದ್ದಾರೆ.
ಉದ್ಯೋಗ ಮೇಳ
ಮಾತೃಭೂಮಿ ಪೌಂಡೇಷನ್‌ನ ಮಹೇಶ್ ಅವರು ಚನ್ನಪಟ್ಟಣದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ, ನ್ಪೋಕನ್ ಇಂಗ್ಲಿಷ್ ಶಿಬಿರವನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ಬೆಂಗಳೂರಿನಲ್ಲಿನ ಹಲವು ಖಾಸಗಿ ಕಂಪನಿಗಳ ಜೊತೆ ಸಮಾಲೋಚನೆ ಮಾಡಿ ಪಟ್ಟಣದಲ್ಲಿ ಉದ್ಯೋಗ ಮೇಳವನ್ನು ಸಹ ಆಯೋಜಿಸುತ್ತಾರೆ.
ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ 1,200 ನಿರುದ್ಯೋಗಿಗಳಲ್ಲಿ 450ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಕ್ಕಿದ್ದು, ಇಂದು ಅವರು ಸಹ ಮಾತೃಭೂಮಿ ಸೇವಾ ಪೌಂಡೇಷನ್‌ನ ಸೇವಾ ಕಾರ್ಯಕ್ರಮಗಳಲ್ಲಿ ಕೈ ಜೋಡಿಸಿದ್ದಾರೆ.
ಪ್ರಸ್ತುತ ಪೌಂಡೇಷನ್‌ವತಿಯಿಂದ ರಾಜ್ಯದ 11 ಜಿಲ್ಲೆಗಳಲ್ಲಿ ಕಡುಬಡ ಮಕ್ಕಳಿಗೆ ಶಿಕ್ಷಣ, ಅಸಾಯಕರಿಗೆ ಆರೋಗ್ಯ ಚಿಕಿತ್ಸೆ, ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳ, ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವುದು, ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು, ಕೆರೆ-ಕಲ್ಯಾಣಿಗಳ ಸ್ವತ್ಛತೆ, ನೆರೆ ಸಂತ್ರಸ್ಥರಿಗೆ ಸಹಾಯಹಸ್ತ ಮತ್ತು ರಕ್ಷಣೆ ಕಾರ್ಯ, ಪ್ರಾಣಿಪಕ್ಷಿಗಳ ಸಂರಕ್ಷಣೆ ಹೀಗೆ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ ಮಾಡಿಕೊಂಡು ಬರುತ್ತಿದೆ. ಇದರ ಮೂಲ ಉದ್ದೇಶ ನಾವು ಒಳ್ಳೆಯ ಆಲೋಚನೆಯಲ್ಲಿ ಮುಂದೆ ನಡೆದರೆ ನಮ್ಮ ಹಿಂದೆ ಹಲವರು ಬರುತ್ತಾರೆ ಎಂಬುದು.
ಮಡಿಲು
ರಾಜ್ಯದಲ್ಲಿನ 11 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಇತ್ತೀಚೆಗೆ ಚನ್ನಪಟ್ಟಣದಲ್ಲಿ ಮಾತೃಭೂಮಿ ಮಡಿಲು ಎಂಬ ಆಶ್ರಮವನ್ನು ಆರಂಭಿಸಿ, ಇಲ್ಲಿ 14 ಬಡ ಮಕ್ಕಳನ್ನು ಪೋಷಿಸುತ್ತಿದ್ದಾರೆ. ತಾಲೂಕಿನಲ್ಲಿನ ಗೆಳೆಯರ ಬಳಗ ತಮ್ಮ ಕುಟುಂಬದವರ ಹುಟ್ಟುಹಬ್ಬವನ್ನು ಈ ಆಶ್ರಮದಲ್ಲಿ ಸರಳವಾಗಿ ಆಚರಿಸಿಕೊಂಡು ಮಕ್ಕಳ ಒಂದು ದಿನದ ಊಟದ ವೆಚ್ಚವನ್ನು ಸಂಸ್ಥೆಗೆ ನೀಡಿ ಸಹಕಾರ ನೀಡುತ್ತಾ ಬಂದಿದೆ. ಇಷ್ಟೆಲ್ಲ ಮಾಡುವವರಿಗೆ ಆದಾಯ ಎಲ್ಲಿಂದ? ಈ ಅನುಮಾನ ಸಹಜ. ಆದರೆ, ಮಾತೃಭೂಮಿಗೆ ಗೆಳೆಯರ ಸಹಕಾರವೇ ಹೆಚ್ಚು. ಜೊತೆಗೆ ಕೆಲ ಸರ್ಕಾರಿ ಮತ್ತು ಖಾಸಗಿ ಸಂಸ್ಥೆ ಅಧಿಕಾರಿಗಳು ನೆರವಿಗೆ ನಿಂತಿದ್ದಾರೆ. ಇದಲ್ಲದೇ ಫೇಸ್‌ಬುಕ್ ಸ್ನೇಹಿತರು ಬೆನ್ನಿಗೆ ನಿಂತಿದ್ದಾರೆ ಎನ್ನುತ್ತಾರೆ ಸಂಸ್ಥೆಯ ಮಹೇಶ್.
ಚಳಿಗಾಲಕ್ಕೆ ಬೆಡ್‌ಶಿಟ್
ಚಳಿಗಾಲ ಶುರುವಾದರೆ ಸಾಕು, ಬೆಂಗಳೂರಿನ ಪುಟ್‌ಪಾತ್‌ಗಳಲ್ಲಿ ಮಲಗುವ ನಿರಾಶ್ರಿತರಿಗೆ ಬೆಡ್‌ಶೀಟ್ ಹೊದಿಸಿ ಬರುವುದು ಇದೇ ಮಹೇಶ್ ಅಂಡ್ ಟೀಂ. ಜೊತೆಗೆ ಸರ್ಕಾರಿ ಶಾಲಾಮಕ್ಕಳಿಗೆ ಸ್ವೆಟರ್‌ಗಳನ್ನೂ ಕೊಟ್ಟು ಬರುತ್ತಾರೆ. ಇವರ ಸೇವಾಜಾಲದ ಹಿಂದೆ ಗೆಳೆಯರಾದ ಹರೀಶ್, ಅಭಿ, ಜಿಮ್‌ಹರೀಶ್, ಗಗನ್, ಶಿವು, ಸೇರಿದಂತೆ ಹಲವರಿದ್ದಾರೆ.
-ಸಿ.ಎನ್. ವೆಂಕಟೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.